29 ನಗರಸಭೆಗಳಲ್ಲಿ ಬಿಜೆಪಿ 9, ಕಾಂಗ್ರೆಸ್ 5, ಜೆಡಿಎಸ್ 2ರಲ್ಲಿ ಅಧಿಕಾರ; 12 ಅತಂತ್ರ

HR Ramesh | news18
Updated:September 3, 2018, 4:16 PM IST
29 ನಗರಸಭೆಗಳಲ್ಲಿ ಬಿಜೆಪಿ 9, ಕಾಂಗ್ರೆಸ್ 5, ಜೆಡಿಎಸ್ 2ರಲ್ಲಿ ಅಧಿಕಾರ; 12 ಅತಂತ್ರ
HR Ramesh | news18
Updated: September 3, 2018, 4:16 PM IST
ರಮೇಶ್ ಹಂಡ್ರಂಗಿ, ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.3): ಸೋಮವಾರ ಪ್ರಕಟಗೊಂಡ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶದಲ್ಲಿ ಮತದಾರರು ಯಾವೊಂದು ಪಕ್ಷಕ್ಕೂ ದೊಡ್ಡ ಗೆಲುವನ್ನು ಕರುಣಿಸಿಲ್ಲ. 105 ಸ್ಥಳೀಯ ಸಂಸ್ಥೆಗಳಲ್ಲಿ 29 ನಗರಸಭೆಗಳಲ್ಲಿ ಬಿಜೆಪಿ 9ರಲ್ಲಿ ಬಹುಮತ ಪಡೆದಿದ್ದರೆ, ಕಾಂಗ್ರೆಸ್​ 5 ಹಾಗೂ ಜೆಡಿಎಸ್​ 2 ನಗರಸಭೆಗಳಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. 1 ನಗರಸಭೆಯಲ್ಲಿ ಸಂಪೂರ್ಣ ಪಕ್ಷೇತರರೇ ಗೆಲುವ ಸಾಧಿಸಿದ್ದು, ಉಳಿದ 12 ನಗರಸಭೆಗಳು ಅತಂತ್ರವಾಗಿವೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರಸಭೆಯ 31 ವಾರ್ಡ್​ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದಾರೆ. ನಿಪ್ಪಾಣಿ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಬಿಜೆಪಿ 13, ಕಾಂಗ್ರೆಸ್ 12 ಹಾಗೂ ಪಕ್ಷೇತರರು 06 ವಾರ್ಡ್​ಗಳಲ್ಲಿ ಜಯಗಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕಮಲ ಅರಳಿದ್ದು, ಜಿಲ್ಲೆಯ ಐದು ನಗರಸಭೆಗಳಲ್ಲಿ ನಾಲ್ಕರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಬಾಗಲಕೋಟೆಯ 35 ವಾರ್ಡ್​ಗಳಲ್ಲಿ ಬಿಜೆಪಿ 29, ಮುಧೋಳದ 31 ವಾರ್ಡ್​ಗಳಲ್ಲಿ 16, ಇಳಕಲ್​ ನಗರಸಭೆಯ 31 ವಾರ್ಡ್​ಗಳಲ್ಲಿ 20ರಲ್ಲಿ ಹಾಗೂ ಆರ್​. ಬನಹಟ್ಟಿ ನಗರಸಭೆಯ 31 ವಾರ್ಡ್​ಗಳಲ್ಲಿ 24ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಜಮಖಂಡಿ ನಗರಸಭೆಯಲ್ಲಿ ಕಾಂಗ್ರೆಸ್​ 20 ವಾರ್ಡ್​ಗಳಲ್ಲಿ ಗೆಲ್ಲುವ ಮೂಲಕ ಅದೊಂದು ನಗರಸಭೆಯಲ್ಲಿ ಅಧಿಕಾರ ಹಿಡಿಯಲಿದೆ.

ಹಾವೇರಿ ಜಿಲ್ಲೆಯ ಹಾವೇರಿ ಮತ್ತು ರಾಣೆಬೆನ್ನೂರು ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಹಾವೇರಿ ನಗರಸಭೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 9, ಹಾಗೂ 7 ಪಕ್ಷೇತರ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ರಾಣೆಬೆನ್ನೂರಿನಲ್ಲಿ ಬಿಜೆಪಿ 15, ಕಾಂಗ್ರೆಸ್ 9 ಹಾಗೂ 11 ಮಂದಿ ಪಕ್ಷೇತರರು ಚುನಾಯಿತರಾಗಿದ್ದಾರೆ.

ಉತ್ತರ ಕನ್ನಡದ ಕಾರವಾರದಲ್ಲಿ ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 4 ಹಾಗೂ ಐವರು ಪಕ್ಷೇತರರು ಗೆದ್ದಿದ್ದಾರೆ. ಆದರೆ, ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಹಾಗೆಯೇ ಶಿರಸಿಯಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ನಗರಸಭೆಯ ಚುಕ್ಕಾಣಿ ಹಿಡಿಯಲಿದೆ. ದಾಂಡೇಲಿ ನಗರಸಭೆಯಲ್ಲಿಯೂ ಅತಂತ್ರ ಫಲಿತಾಂಶ ಬಂದಿದೆ.

ದಕ್ಷಿಣ ಕನ್ನಡದ ಪುತ್ತೂರು ನಗರಸಭೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ನಡೆಸಲಿದೆ. ಇಲ್ಲಿ ಕಾಂಗ್ರೆಸ್​ ಐದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಉಳ್ಳಾಲ ನಗರಸಭೆಯಲ್ಲೂ ಅತಂತ್ರ ಫಲಿತಾಂಶ ಹೊರಬಿದ್ದಿದೆ.
Loading...

ಉಡುಪಿ ನಗರಸಭೆಯಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಬಾರಿಸಿದೆ. 35 ವಾರ್ಡ್​ಗಳಲ್ಲಿ 31ರಲ್ಲಿ ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆ ಏರಲಿದೆ.

ಕಾಂಗ್ರೆಸ್ ಭದ್ರಕೋಟೆ ಚಾಮರಾಜನಗರದಲ್ಲಿ ಕಮಲ ಗೆಲುವಿನ ನಗೆಬೀರಿದರೂ ಅಧಿಕಾರ ಹಿಡಿಯಲು ಒಂದು ಸ್ಥಾನದ ಕೊರತೆ ಎದುರಿಸುತ್ತಿದೆ. 31 ವಾರ್ಡ್​ಗಳಲ್ಲಿ 15ರಲ್ಲಿ ಬಿಜೆಪಿ ಗೆದ್ದಿದ್ದರೆ, ಕಾಂಗ್ರೆಸ್​ 8 ಹಾಗೂ ಪಕ್ಷೇತರರು 8 ಮಂದಿ ಆಯ್ಕೆಯಾಗಿದ್ದಾರೆ. ಕೊಳ್ಳೇಗಾಲ ನಗರಸಭೆ ಅತಂತ್ರವಾಗಿದ್ದು, ಕಾಂಗ್ರೆಸ್​ 11, ಬಿಜೆಪಿ 6 ಹಾಗೂ ಮೂವರು ಪಕ್ಷೇತರರು ಚುನಾಯಿತರಾಗಿದ್ದಾರೆ. ಜೆಡಿಎಸ್​ ಒಂದೇ ಒಂದು ಖಾತೆಯನ್ನು ತೆರೆಯುವಲ್ಲಿ ವಿಫಲವಾಗಿದೆ.

ಹಾಸನ ನಗರಸಭೆ ಇದೇ ಮೊದಲ ಬಾರಿಗೆ ಅತಂತ್ರವಾಗಿದೆ. 35 ವಾರ್ಡ್​ಗಳಲ್ಲಿ ಬಹುಮತಕ್ಕೆ ಬೇಕಾದ 18 ಸ್ಥಾನ ಪಡೆಯಲು ಯಾವ ಪಕ್ಷಗಳು ಸಫಲವಾಗಿಲ್ಲ. ಜೆಡಿಎಸ್​ 17 ಸ್ಥಾನ ಗಳಿಸುವ ಮೂಲಕ ಅಧಿಕಾರ ಹಿಡಿಯಲು ಒಂದು ಸ್ಥಾನದಿಂದ ಅವಕಾಶವಂಚಿತಗೊಂಡಿದೆ. ಅರಸೀಕೆರೆ ನಗರಸಭೆಯಲ್ಲಿ 31 ವಾರ್ಡ್​ಗಳಲ್ಲಿ ಜೆಡಿಎಸ್ 22ರಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ಮಂಡ್ಯ ನಗರಸಭೆಯಲ್ಲಿ ಜೆಡಿಎಸ್​ಗೆ ಸ್ಪಷ್ಟ ಬಹುಮತ ಸಿಕ್ಕಿದ್ದು, 35 ವಾರ್ಡ್​ಗಳಲ್ಲಿ 18ರಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಬಿಜೆಪಿ 2, ಕಾಂಗ್ರೆಸ್ 9 ಹಾಗೂ ಪಕ್ಷೇತರರು ಆರು ಮಂದಿ ಚುನಾಯಿತರಾಗಿದ್ದಾರೆ.

ಚಿತ್ರದುರ್ಗ ನಗರಸಭೆಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. 35 ವಾರ್ಡ್​ಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 5, ಜೆಡಿಎಸ್​ 6 ಹಾಗೂ ಪಕ್ಷೇತರರು 7ರಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಆದರೆ, ಬಹುಮತಕ್ಕೆ 18 ಸ್ಥಾನಗಳ ಅವಶ್ಯಕತೆ ಇದೆ. ಚಳ್ಳಕೆರೆ ನಗರಸಭೆಗೆ ಬೇಕಾದ 16 ಮ್ಯಾಜಿಕ್ ಸಂಖ್ಯೆಯನ್ನು ಕಾಂಗ್ರೆಸ್​ ಪಡೆದಿದ್ದು, ಅಧಿಕಾರ ನಡೆಸಲಿದೆ.

ಕಲಬುರಗಿ ಜಿಲ್ಲೆಯ ಶಹಾಬಾದ್ ನಗರಸಭೆ 27 ವಾರ್ಡ್​ಗಳಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ರಾಯಚೂರು ನಗರಸಭೆಯೂ ಅತಂತ್ರವಾಗಿದ್ದು, ಬಿಜೆಪಿ 12, ಕಾಂಗ್ರೆಸ್ 11, ಜೆಡಿಎಸ್ 3 ಹಾಗೂ ಪಕ್ಷೇತರರು 9 ಮಂದಿ ಗೆದ್ದಿದ್ದಾರೆ. ಇದೇ ಜಿಲ್ಲೆಯ ಸಿಂಧನೂರು ನಗರಸಭೆಯಲ್ಲಿ ಕಾಂಗ್ರೆಸ್ 31 ವಾರ್ಡ್​ಗಳಲ್ಲಿ 20 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ.

ಯಾದಗಿರಿ ನಗರಸಭೆಗೆ ಬೇಕಾದ 16 ಮ್ಯಾಜಿಕ್ ಸಂಖ್ಯೆಯನ್ನು ಬಿಜೆಪಿ ಪಡೆದುಕೊಂಡಿದೆ. ಕಾಂಗ್ರೆಸ್ 11, ಜೆಡಿಎಸ್ 3 ಹಾಗೂ ಒಂದು ಪಕ್ಷೇತರ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ಇದೇ ಜಿಲ್ಲೆಯ ಸುರಪುರ ನಗರಸಭೆಯಲ್ಲೂ ಬಿಜೆಪಿ ಗೆಲುವಿನ ನಗೆ ಬೀರಿದೆ. 31 ವಾರ್ಡ್​ಗಳಲ್ಲಿ 16 ಸ್ಥಾನ ಗೆಲ್ಲುವ ಮೂಲಕ ಜಿಲ್ಲೆಯ ಎರಡು ನಗರಸಭೆಯಲ್ಲಿ ಅಧಿಕಾರ ಹಿಡಿದಿದೆ.

ಕೊಪ್ಪಳ ಹಾಗೂ ಗಂಗಾವತಿ ನಗರಸಭೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದ್ದು, ಎರಡು ಕಡೆ ಒಂದೊಂದು ಸ್ಥಾನದಿಂದ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ತಲುಪುವಲ್ಲಿ ಎಡವಿದೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ