• Home
  • »
  • News
  • »
  • state
  • »
  • Bandipura Fireline : ಬಂಡೀಪುರ ಅರಣ್ಯದಲ್ಲಿ ಬೆಂಕಿ ತಡೆಗೆ 2,600 ಕಿ.ಮೀ ಫೈರ್ ಲೈನ್!

Bandipura Fireline : ಬಂಡೀಪುರ ಅರಣ್ಯದಲ್ಲಿ ಬೆಂಕಿ ತಡೆಗೆ 2,600 ಕಿ.ಮೀ ಫೈರ್ ಲೈನ್!

ಬಂಡೀಪುರದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ

ಬಂಡೀಪುರದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾಲಿ ಇರುವ  ಒಂದು ಸಾವಿರ ಅರಣ್ಯ ಸಿಬ್ಬಂದಿ ಜೊತೆಗೆ ಬೆಂಕಿ ನಿಯಂತ್ರಣಕ್ಕೆ  435 ಫೈರ್ ವಾಚರ್ ಗಳನ್ನು ನಿಯೋಜಿಸಲಾಗಿದೆ. ಬೆಂಕಿ ನಂದಿಸಲು 13 ವಲಯಗಳಿಗೂ ಅಗ್ನಿಶಾಮಕ ದಳದ ಮೂರು ದೊಡ್ಡ ವಾಹನಗಳು, 10  ಕ್ವಿಕ್ ರೆಸ್ಪಾನ್ಸ್ ವಾಹನಗಳನ್ನು ಸನ್ನದ್ಧವಾಗಿ ಇಡಲಾಗಿದೆ.

ಮುಂದೆ ಓದಿ ...
  • Share this:

ಚಾಮರಾಜನಗರ (ಫೆ.20) : ಕಳೆದ ಮೂರು ವರ್ಷಗಳ ಹಿಂದೆ  ಹೊತ್ತಿ ಉರಿದಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Bandipur National Park)ಭಾರೀ  ಮುನ್ನೆಚ್ಚರಿಕಾ (Prevention) ಕ್ರಮಗಳನ್ನು ಕೈಗೊಳ್ಳುವ ಮೂಲಕ ಅರಣ್ಯ ಇಲಾಖೆ (Forest Department) ಈ ವರ್ಷ ಬೆಂಕಿ ಬೀಳದಂತೆ ಹಾಗೂ ಬೆಂಕಿ ಹಬ್ಬದಂತೆ ತಡೆಗಟ್ಟಲು ಸರ್ವ ಸನ್ನದ್ಧವಾಗಿದೆ. ಫೈರ್ ಲೈನ್ ನಿರ್ಮಾಣ, ಫೈರ್ ವಾಚರ್‌ಗಳ ನೇಮಕ, ಸನ್ನದ್ಧ ಸ್ಥಿತಿಯಲ್ಲಿ, ಅಗ್ನಿಶಾಮಕ ವಾಹನಗಳು, ಬಂಡೀಪುರ ಅರಣ್ಯದ ಮೂಲಕ ಹಾದು ಹೋಗುವ ಹೆದ್ದಾರಿಗಳ ಇಕ್ಕೆಲಗಳಲ್ಲಿ ವಾಟರ್ ಸ್ಪ್ರೇ , ಅರಣ್ಯ ಸಿಬ್ಬಂದಿಯಿಂದ ಗಸ್ತು ಹೆಚ್ಚಳ  ಹೀಗೆ ಹಲವಾರು ಮುಂಜಾಗ್ರತಾ  ಕ್ರಮ  ಕೈಗೊಳ್ಳುವ ಮೂಲಕ ಈ ವರ್ಷ ಝೀರೋ ಫೈರ್ ಇಯರ್‌ಗಾಗಿ ಶ್ರಮಿಸಲಾಗುತ್ತಿದೆ.


ಇದನ್ನೂ ಓದಿ: Rescue Operation: ಬ್ರಹ್ಮಗಿರಿ ಬೆಟ್ಟದಲ್ಲಿ ಕಾಲು ಜಾರಿ ಬಿದ್ದ ಯುವಕ: ದೇವರ ದಯೆ ಮೊಬೈಲ್ ಜೇಬಲ್ಲೇ ಇತ್ತು!


ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು


ಜಿಲ್ಲೆಯ ಬಂಡೀಪುರ ಹುಲಿಸಂರಕ್ಷಿತ ಪ್ರದೇಶರಾಜ್ಯದಲ್ಲಿಯೇ ಅತೀ  ಹೆಚ್ಚು ಹುಲಿಗಳನ್ನ ಹೊಂದಿರುವ ತಾಣಗಳಲ್ಲಿ ಒಂದಾಗಿದೆ. ಹುಲಿಯಷ್ಟೆ ಅಲ್ಲದೆ ಆನೆ ಚಿರತೆ, ಕರಡಿ ಕಾಡೆಮ್ಮೆ, ಜಿಂಕೆ ಸೇರೀದಂತೆ ಅಸಂಖ್ಯಾತ  ಪ್ರಾಣಿ ಪಕ್ಷಿಗಳನ್ನು ಹೊಂದಿರುವ ಅಭಯಾರಣ್ಯ. 2019 ರಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ  4 ಸಾವಿರ ಹೆಕ್ಟೇರ್ ಗು ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಅಮೂಲ್ಯ ಅರಣ್ಯ ಸಂಪತ್ತು ಸುಟ್ಟು ಭಸ್ಮವಾಗಿತ್ತು. ವ್ಯಾಪಕವಾಗಿ ಹಬ್ಬಿದ ಬೆಂಕಿಯನ್ನು  ನಂದಿಸಲು ಅರಣ್ಯ ಇಲಾಖೆ ಹರಸಾಹಸವನ್ನೆ ನಡೆಸಿತ್ತು. ದುರ್ಗಮ ಅರಣ್ಯದಲ್ಲಿ  ವಾಯುಪಡೆ ಹೆಲೆಕ್ಯಾಪ್ಟರ್ ಗಳ ಮೂಲಕ ಬೆಂಕಿ ನಂದಿಸಲಾಗಿತ್ತು.


2600  ಕಿ.ಮೀ ಫೈರ್ ಲೈನ್!


ಹಾಗಾಗಿ ಕಳೆದ  ಎರಡು ವರ್ಷಗಳಿಂದ ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು  ಕೈಗೊಳ್ಳುವ ಮೂಲಕ ಯಾವುದೇ ಕಡೆ ಬೆಂಕಿ ಬೀಳದಂತೆ ಕ್ರಮ ವಹಿಸಲಾಗಿತ್ತು. ಅದೇ ರೀತಿ  ಈ ವರ್ಷವೂ ಸಹ ಝೀರೋ ಫೈರ್  ಇಯರ್ ಮಾಡಲು  ಬಂಡೀಪುರ ಅರಣ್ಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಬಂಡೀಪುರದ ನಡುವೆ ಹಾದು ಹೋಗುವ ರಸ್ತೆಗಳು ಅರಣ್ಯದಲ್ಲಿನ ಸಫಾರಿ ಮಾರ್ಗ, ಗೇಮ್ ರಸ್ತೆಗಳು ಸೇರಿದಂತೆ  ಈ ಬಾರಿ 2600 ಕಿಲೋಮೀಟರ್ ಗು ಹೆಚ್ಚು ಉದ್ದ ಬೆಂಕಿ ರೇಖೆ ನಿರ್ಮಿಸಲಾಗಿದೆ. ಬಂಡೀಪುರದ ಮೂಲಕ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿ ಹಾಗು ಅರಣ್ಯದಲ್ಲಿನ ಸಫಾರಿ ರೋಡ್, ಗೇಮ್ ರೋಡ್‌ ಸೇರಿದಂತೆ ಅರಣ್ಯ ದ ರಸ್ತೆಗಳ ಇಕ್ಕೆಲಗಳಲ್ಲಿ 10  ರಿಂದ 20 ಮೀಟರ್ ಅಗಲದಲ್ಲಿ ಬೆಳೆದಿರುವ ಸಣ್ಣಪುಟ್ಟ ಗಿಡಗಂಟಿಗಳು ಹಾಗು ಹುಲ್ಲಿಗೆ ಬೆಂಕಿ ಹಚ್ಚಿ ಸುಡಲಾಗಿದೆ. ಹೀಗೆ ಮಾಡುವುದರಿಂದ ಬೆಂಕಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಬ್ಬುವುದು ತಪ್ಪಲಿದೆ.


ರಸ್ತೆ ಬದಿಗಳಲ್ಲಿ ಬೇಗ ಹಸಿರು ಚಿಗರಲಿದೆ


ಬಂಡೀಪುರದ ಮದ್ಯೆ ತಮಿಳುನಾಡಿನ ಊಟಿಗೆ  ಸಂಪರ್ಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ 67, ಕೇರಳದ ಸುಲ್ತಾನ್ ಬತ್ತೇರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ರ ಇಕ್ಕೆಲಗಳಲ್ಲಿ ಟ್ಯಾಂಕರ್ ಗಳ ಮೂಲಕ ವಾಟರ್ ಸ್ಪ್ರೇ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ರಸ್ತೆ ಬದಿಗಳಲ್ಲಿ ಬೇಗ ಹಸಿರು ಚಿಗರಲಿದೆ.  ವಾಹನಗಳಲ್ಲಿ ಪಯಣಿಸುವವರು ಒಂದು ವೇಳೆ ಬೀಡಿ ಸೇದಿ ಆಕಸ್ಮಿಕವಾಗಿ ರಸ್ತೆ ಬದಿ ಬೀಸಾಡಿದರೂ  ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ.


ಇದನ್ನೂ ಓದಿ: Fire Accident: ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಗೆ ಉಳಿಯಿತು 11 ಜನರ ಪ್ರಾಣ


435 ಫೈರ್ ವಾಚರ್ ಗಳ ನಿಯೋಜನೆ 


"ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾಲಿ ಇರುವ  ಒಂದು ಸಾವಿರ ಅರಣ್ಯ ಸಿಬ್ಬಂದಿ ಜೊತೆಗೆ ಬೆಂಕಿ ನಿಯಂತ್ರಣಕ್ಕೆ  435 ಫೈರ್ ವಾಚರ್ ಗಳನ್ನು ನಿಯೋಜಿಸಲಾಗಿದೆ. ಬೆಂಕಿ ನಂದಿಸಲು 13 ವಲಯಗಳಿಗು ಅಗ್ನಿಶಾಮಕ ದಳದ ಮೂರು ದೊಡ್ಡ ವಾಹನಗಳು 10  ಕ್ವಿಕ್ ರೆಸ್ಪಾನ್ಸ್ ವಾಹನಗಳನ್ನು ಸನ್ನದ್ಧವಾಗಿ ಇಡಲಾಗಿದೆ.ಈ ಹುಲಿಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅರಣ್ಯ ಸಿಬ್ಬಂದಿಯ ಗಸ್ತು ಹೆಚ್ಚಿಸಲಾಗಿದೆ. ಗಿರಿಜನ ಹಾಡಿಗಳು ಹಾಗು ಕಾಡಂಚಿನ ಗ್ರಾಮಗಳ ಜನರನ್ನೇ ಜನವರಿ 20 ರಿಂದಲೇ ಫೈರ್ ವಾಚರ್ ಗಳಾಗಿ ನೇಮಕ ಮಾಡಿಕೊಳ್ಳಲಾಗಿದ್ದು ಅರಣ್ಯದ ವಿವಿದೆಡೆ ನಿಯೋಜಿಸಲಾಗಿದೆ ಅವರಿಗೆ ಸಂಬಳ, ಊಟ ತಿಂಡಿ ಇತ್ಯಾದಿ ಸೌಲಭ್ಯ ಗಳನ್ನು ನೀಡಲಾಗುತ್ತಿದೆ" ಎಂದು ಬಂಡೀಪುರ ಪ್ರಭಾರ ಅರಣ್ಯರಕ್ಷಣಾಧಿಕಾರಿ ಕರಿಕಾಳನ್ ತಿಳಿಸಿದ್ದಾರೆ


ಒಟ್ಟಾರೆ ಬೆಂಕಿ ಬಿದ್ದ ಮೇಲೆ ಕ್ರಮ ಕೈಗೊಳ್ಳುವ ಬದಲು ಬೆಂಕಿಯೇ ಬೀಳದಂತೆ ಸಮರೋಪಾದಿಯಲ್ಲಿ  ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಕಿ ಬಿದ್ದಲ್ಲಿ  ಅಮೂಲ್ಯ ವನ್ಯ ಸಂಪತ್ತು ನಾಶವಾಗುತ್ತದೆ, ಸಹಜವಾಗಿಯೇ ವನ್ಯಪ್ರಾಣಿಗಳು ಕಾಡಂಚಿನ ಜಮೀನುಗಳಿಗೆ ಬರುತ್ತವೆ. ಇದರಿಂದ ಪ್ರಾಣಿ ಮಾನವ ಸಂಘರ್ಷ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಅರಣ್ಯಕ್ಕೆ ಬೆಂಕಿ ಬೀಳದಂತೆ ಸಾರ್ವಜನಿಕರು ಸಹ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ.

Published by:Kavya V
First published: