ಕೊಡಗು(ಏ.12): ಪಶ್ಚಿಮಘಟ್ಟದಲ್ಲಿ () ಇರುವ ಕೊಡಗು ಜಿಲ್ಲೆಯಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಆದರೆ ಕಳೆದ ಒಂದು ದಶಕದಲ್ಲಿ ಅದು ಮಿತಿಮೀರಿದ್ದು, ಜಿಲ್ಲೆಯಲ್ಲಿ ಕೇವಲ ನಾಲ್ಕು ವರ್ಷಗಳಲ್ಲಿ 26 ಜನರು ಕಾಡು ಪ್ರಾಣಿಗಳ ದಾಳಿಯಿಂದ ಪ್ರಾಣತೆತ್ತಿದ್ದಾರೆ. ಹಾಗಾದರೆ ವನ್ಯಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷ ಇಷ್ಟು ಮಿತಿಮೀರುವುದಕ್ಕೆ ಕಾರಣವೇನು. ನೈಜ ಕಾರಣಗಳು ಗೊತ್ತಿದ್ದರೂ ಸರ್ಕಾರ ಅರಣ್ಯ ಇಲಾಖೆಗಳು ಯಾಕೆ ಅದರ ಬಗ್ಗೆ ಸರಿಯಾದ ಕ್ರಮವಹಿಸುತ್ತಿಲ್ಲ ಎನ್ನೋದು ಯಕ್ಷಪ್ರಶ್ನೆ.
ಹೌದು ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿಯೇ ಬರೋಬ್ಬರಿ 26 ಜನರು ಕಾಡಾನೆಗಳ ದಾಳಿ ಮತ್ತು ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ.
ಕಾಡು ಪ್ರಾಣಿಗಳ ಸಂತತಿ ಹೆಚ್ಚಳ
ಮನುಷ್ಯನ ಮೇಲೆ ಕಾಡಾನೆಗಳು ಅಥವಾ ಹುಲಿ ದಾಳಿಗಳು ಹೆಚ್ಚಳವಾಗುವುದಕ್ಕೆ ಮುಖ್ಯವಾಗಿ ಕಾಡು ಪ್ರಾಣಿಗಳ ಸಂತತಿ ಹೆಚ್ಚಳವಾಗಿದ್ದು, ಅರಣ್ಯದ ಕೊರತೆ ಎದುರಾಗಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. 1998 ರ ಸಂದರ್ಭ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕೇವಲ 37 ಹುಲಿಗಳಿದ್ದವು.
20 ವರ್ಷಗಳಲ್ಲಿ 200 ದಾಟಿದ ಹುಲಿಗಳ ಸಂಖ್ಯೆ
ಆ ಬಳಿಕ 20 ವರ್ಷಗಳಲ್ಲಿಯೇ ಅಂದರೆ 2018 ರ ಗಣತಿ ಪ್ರಕಾರ ಅವುಗಳ ಸಂಖ್ಯೆ 200 ದಾಟಿದೆ. ಹೀಗಾಗಿ ಅವುಗಳಿಗೆ ಬೇಕಾಗಿದ್ದ ಜಾಗ ಸಂಪೂರ್ಣ ಕಡಿಮೆಯಾಗಿದೆ. ಒಂದು ಹುಲಿ ಜೀವಿಸುವುದಕ್ಕೆ ಕನಿಷ್ಠ 14 ಕಿಲೋ ಮೀಟರ್ ಸುತ್ತಳತೆಯ ವ್ಯಾಪ್ತಿಯ ಅರಣ್ಯಬೇಕು. ಆದರೆ ಹುಲಿಗಳ ಸಂಖ್ಯೆ ಜಾಸ್ತಿಯಾಗಿದ್ದರಿಂದ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಒಂದು ಹುಲಿಗೆ ಕೇವಲ ನಾಲ್ಕು ಕಿಲೋಮೀಟರ್ ವ್ಯಾಪ್ತಿಯ ಅರಣ್ಯಪ್ರದೇಶವಿದೆ. ಇನ್ನು ಬಂಡೀಪುರ ಮತ್ತು ಮಧುಮಲೈ ಅರಣ್ಯ ಸೇರಿ ಮೂರು ಕಡೆಗಳಿಂದ 450 ಕ್ಕೂ ಹೆಚ್ಚು ಹುಲಿಗಳಿವೆ.
ಜನವಸತಿ ಪ್ರದೇಶಗಳತ್ತ ಬರುತ್ತಿರೋ ವಯಸ್ಸಾದ ಹುಲಿಗಳು
ವಯಸ್ಸಾದ ಹುಲಿಗಳು, ಪ್ರಾಯದ ಹುಲಿಗಳೊಂದಿಗೆ ಹೋರಾಡಿ ಬದಕಲಾರದೆ ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಈ ವೇಳೆ ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಇದನ್ನು ತಪ್ಪಿಸುವುದು ಕಷ್ಟದ ಕೆಲಸ ಎನ್ನುತ್ತಾರೆ ಪರಿಸರವಾದಿ ತಮ್ಮುಪೂವಯ್ಯ.
ಒಂದೇ ವರ್ಷದಲ್ಲಿ ನಾಲ್ವರು ಹುಲಿಗೆ ಬಲಿ
2021 ರಲ್ಲಿ ಒಂದೇ ವರ್ಷದಲ್ಲಿ ಒಂದೇ ಹುಲಿ 4 ಜನರನ್ನು ಕೊಂದು ಹಾಕಿತ್ತು. ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲದಲ್ಲಿ ಹುಲಿ ನಾಲ್ವರನ್ನು ಕೊಂದಿತ್ತು. ಇದೀಗ ವಿರಾಜಪೇಟೆ ತಾಲ್ಲೂಕಿನ ರುದ್ರಗುಪ್ಪೆ ಗಾಮದಲ್ಲಿ ಮತ್ತೊಂದು ಹುಲಿ 28 ವರ್ಷದ ಯುವಕನನ್ನು ಬಲಿ ಪಡೆದುಕೊಂಡಿದೆ. ಅಂದರೆ ಎರಡೇ ವರ್ಷದಲ್ಲಿ ಹುಲಿ ದಾಳಿಯಿಂದ 5 ಜನರು ಮೃತಪಟ್ಟಿದ್ದಾರೆ. ಇನ್ನು ನಾಲ್ಕು ವರ್ಷದಲ್ಲಿ ಜಿಲ್ಲೆಯ ವಿವಿಧೆಡೆ ನಡೆದಿರುವ ಆನೆ ದಾಳಿಯಿಂದ 21 ಜನರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: Heavy Rain: ಅಕಾಲಿಕ ಮಳೆಗೆ ಕುಸಿದೇ ಹೋಯ್ತು ಬದುಕು! ಮದುವೆ ನಡೆಯಬೇಕಿದ್ದ ಮನೆಯಲ್ಲಿ ಕಣ್ಣೀರಧಾರೆ!
ಮಾನವನ ಮೇಲೆ ಆನೆಗಳ ದಾಳಿಗೆ ಮುಖ್ಯವಾಗಿ ಅರಣ್ಯ ಪ್ರದೇಶ ಕಡಿಮೆಯಾಗಿರುವುದು ಕಾರಣವಾಗಿದ್ದರೆ, ಇರುವ ಅರಣ್ಯ ಅರಣ್ಯದಲ್ಲಿ ಆನೆಗಳಿಗೆ ಅಗತ್ಯವಾಗಿರುವ ಆಹಾರ ಸಿಗುತ್ತಿಲ್ಲ. ಇದರಿಂದ ಆಹಾರ ಅರಸಿ ಆನೆಗಳು ಜನವಸತಿ ಪ್ರದೇಶ ಮತ್ತು ತೋಟ, ಗದ್ದೆಗಳಿಗೆ ನುಗ್ಗುತ್ತಿವೆ. ಈ ವೇಳೆ ಎದುರಾದ ಮನುಷ್ಯರ ಮೇಲೂ ದಾಳಿ ಮಾಡಿ 21 ಜನರನ್ನು ಕೊಂದಿವೆ.
ಬಫರ್ ಝೋನ್ ಪ್ರದೇಶ ಬೇಕು
ಆನೆಗಳ ಕಾರಿಡಾರ್ ಕಾಫಿತೋಟ, ರಸ್ತೆ ಮತ್ತಿತರೆ ಕಾರಣಗಳಿಂದ ಒತ್ತುವರಿಯಾಗಿವೆ. ಇದೆಲ್ಲವೂ ಅರಣ್ಯ ಆನೆ ಮತ್ತು ಹುಲಿದಾಳಿಗೆ ಕಾರಣ ಎನ್ನಲಾಗುತ್ತಿದೆ. ಅರಣ್ಯ ಪ್ರದೇಶದಿಂದ 10 ಕಿಲೋಮೀಟರ್ ವರೆಗೆ ಬಫರ್ ಝೋನ್ ಪ್ರದೇಶವಿರುತ್ತದೆ. ಇದನ್ನು ಮಾಡೋದಕ್ಕೆ ಅರಣ್ಯ ಇಲಾಖೆ ಅಥವಾ ಸರ್ಕಾರ ಗಮನಹರಿಸುತ್ತಿಲ್ಲ.
ಇದನ್ನೂ ಓದಿ: Hubballi: ಪೂರಿ-ಬಾಜಿಯಲ್ಲಿ ಬೆಂದ ಹಲ್ಲಿ, ಗ್ರಾಹಕರಿಗೆ 90 ಸಾವಿರ ಪರಿಹಾರ
ಕೇವಲ ಐದರಿಂದ ಏಳು ಲಕ್ಷ ರೂಪಾಯಿ ಪರಿಹಾರಧನ ನೀಡಿ ಫೋಟೋ ತೆಗೆಸಿಕೊಂಡು ಸಚಿವರು ಪ್ರಚಾರ ಪಡೆದುಕೊಳ್ಳುತ್ತಾರೆ. ಆದರೆ ಒಂದು ಕುಟುಂಬದ ಊರುಗೋಲಾಗಿದ್ದವರು ಮೃತಪಟ್ಟರೆ ಜೀವನ ಪರ್ಯಂತ ಆ ಕುಟುಂಬ ಎಂತಹ ಕಷ್ಟ ಅನುಭವಿಸಬೇಕು ಎಂಬುದನ್ನು ಚಿಂತಿಸುತ್ತಿಲ್ಲ ಎಂದು ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಮನುಸೋಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ