Dowry Harassment: ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆ ನೇಣಿಗೆ ಶರಣು

ರಂಜನಿ ಹಾಗೂ ಬಾಲ ಮುರುಗನ್ ಮದುವೆ ವೇಳೆ ಕೊಡಬೇಕಿದ್ದ ವರದಕ್ಷಿಣೆ ಬಾಕಿ‌ ಇದ್ದ ಕಾರಣ ಪ್ರತಿನಿತ್ಯ ಪತಿಯಾದ ಬಾಲಮುರುಗ‌ನ್, ಮೈದುನ ಹಾಗೂ ಅತ್ತೆ ಪಳನಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಆ.25): ಗಂಡನ ಕುಟುಂಬದವರಿಂದ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಂಜನಿ (25) ಮೃತ ಗೃಹಿಣಿ. ಮೂಲತಃ ಬೆಂಗಳೂರಿನ ಗುಟ್ಟಹಳ್ಳಿ ನಿವಾಸಿಯಾದ ರಂಜನಿ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಹೊಸಹಳ್ಳಿ ನಿವಾಸಿ ಬಾಲ ಮುರುಗನ್‌ ಜೊತೆ ವಿವಾಹವಾಗಿದ್ದು, 2 ವರ್ಷದ ಹಿಂದೆ ಹೆಣ್ಣು ಮಗುವೊಂದು ಜನಿಸಿತ್ತು.

ರಂಜನಿ ಹಾಗೂ ಬಾಲ ಮುರುಗನ್ ಮದುವೆ ವೇಳೆ ಕೊಡಬೇಕಿದ್ದ ವರದಕ್ಷಿಣೆ ಬಾಕಿ‌ ಇದ್ದ  ಕಾರಣ ಪ್ರತಿನಿತ್ಯ ಪತಿಯಾದ ಬಾಲಮುರುಗ‌ನ್, ಮೈದುನ ಹಾಗೂ ಅತ್ತೆ ಪಳನಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದೇ ಸಮಯದಲ್ಲಿ ಹೆಣ್ಣು ಮಗು ಸಹ ಜನಿಸಿದ ಕಾರಣ ಗಂಡು ಮಗು ಜನಿಸಿಲ್ಲ ಎನ್ನುವ ವಿಚಾರದಲ್ಲಿ ಕಿರುಕುಳ‌ ಸಹ ನೀಡಲಾರಂಭಿಸಿದ್ದಾರೆ.

ಕುಟುಂಬಸ್ಥರ ನಿರಂತರ ಕಿರುಕುಳ‌ದಿಂದ ಬೇಸತ್ತ ಗೃಹಿಣಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಿರುಕುಳ‌ ಕೊಟ್ಟು‌ ಆತ್ಮಹತ್ಯೆಗೆ ಪ್ರಚೋದನೆ‌ ನೀಡಿದ ಪ್ರಕರಣದ ಅಡಿಯಲ್ಲಿ ಪತಿ ಬಾಲಮುರುಗನ್ ಹಾಗೂ ಅವರ ಕುಟುಂಬದ ಮೇಲೆ ಮಾದನಾಕಯನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಒಟ್ಟಾರೆ ವರದಕ್ಷಿಣೆ ಎಂಬ ಸಾಮಾಜಿಕ‌ ಪಿಡುಗು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಅದೇಷ್ಟೋ ಮಹಿಳೆಯರು ಹಾಗೂ ಆಕೆಯ ಕುಟುಂಬ ಕಿರುಕುಳ ತಾಳಲಾರದೆ ಆತ್ಮಹತ್ಯೆಯ ದಾರಿ ಇಡಿಯುತ್ತಿದ್ದಾರೆ. ಸರ್ಕಾರಗಳು ಇಂತಹ ಸಾಮಾಜಿಕ‌ ಪಿಡುಗನ್ನ ಹೋಗಲಾಡಿಸಲು ಅದೆಷ್ಟೇ ಕಠಿಣ ನಿಯಮಗಳನ್ನ ರೂಪಿಸಿದರು, ಜಾರಿಯಾಗಿ ಜನಸಾಮಾನ್ಯರು ಪಾಲಿಸದಿರುವುದು ವಿಪರ್ಯಾಸವೇ ಸರಿ. ಇನ್ನಾದರು ಸರ್ಕಾರ ವರದಕ್ಷಿಣೆ ಕಿರುಕುಳದ ವಿರುದ್ದ ಇನ್ನಷ್ಟು ಕಠಿಣ ಕಾನೂನು ಕ್ರಮಗಳನ್ನ‌ ಜರುಗಿಸಿ ಸಾಮಾಜಿಕ‌ ಪಿಡುಗಾದ ವರದಕ್ಷಿಣೆಯನ್ನ ತೊಳೆದು ಹಾಕಲು ಮುಂದಾಗಬೇಕಿದೆ.

ಇದನ್ನೂ ಓದಿ: Annamalai: ಭಾರತೀಯ ಪೊಲೀಸ್​ ಸೇವೆಯಿಂದ ನಿವೃತ್ತಿಹೊಂದಿದ್ದ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆ
Published by:Ganesh Nachikethu
First published: