ಬೆಂಗಳೂರು: ಆರನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಕಳೆದ 11 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಿದ್ದಾರೆ. ಆದರೆ, ಸಾರಿಗೆ ನೌಕರರ ಪ್ರತಿಭಟನೆಗೆ ಸೊಪ್ಪು ಹಾಕದ ಸರ್ಕಾರ ಮುಷ್ಕರನಿರತ ಸಿಬ್ಬಂದಿ ಅಮಾನತು, ವರ್ಗಾವಣೆಯಂತಹ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಇಂದು ಒಂದೇ ದಿನ 2443 ಮಂದಿ ಸಿಬ್ಬಂದಿ ಅಮಾನತುಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಕೆಲಸಕ್ಕೆ ಹಾಜರಾಗುವಂತೆ ಸಿಬ್ಬಂದಿಗೆ ಬಿಎಂಟಿಸಿ ನೊಟೀಸ್ ಜಾರಿ ಮಾಡಿತ್ತು. ಆದರೆ ನಿಗಮ ಸೂಚಿಸಿದರೂ ಕೆಲಸಕ್ಕೆ ಹಾಜರಾಗದ ಹಿನ್ನಲೆಯಲ್ಲಿ 2443 ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಸಸ್ಪೆಂಡ್ ಆದವರ ಪೈಕಿ 1974 ಮಂದಿ ಹಿರಿಯ ನೌಕರರಾಗಿದ್ದಾರೆ. ನೊಟೀಸ್ಗೆ ಪ್ರತಿಕ್ರಿಯಿಸಲು ಸೋಮವಾರದವರೆಗೆ ಅವಕಾಶ ನೀಡಲಾಗಿದೆ. ಸೋಮವಾರ ಸರಿಯಾದ ಕಾರಣ ನೀಡದಿದ್ದರೆ ಎಲ್ಲಾ ಸಿಬ್ಬಂದಿಯನ್ನು ವಜಾಗೊಳಿಸುವುದಾಗಿ ಬಿಎಂಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಇದನ್ನು ಓದಿ: Bus Strike | ಸರ್ಕಾರಕ್ಕೆ ಸೋಮವಾರದವರೆಗು ಗಡುವು, ಆಗಲೂ ಸ್ಪಂದಿಸದಿದ್ದರೆ ಜೈಲ್ ಭರೋ ಚಳವಳಿ ಆರಂಭ; ಕೋಡಿಹಳ್ಳಿ ಚಂದ್ರಶೇಖರ್
ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರಿಗೆ ಕೆಲಸಗಾರರ ಬಗ್ಗೆ ಸರ್ಕಾರ ತಿರಸ್ಕಾರ ಭಾವನೆ ತೋರಿಸುತ್ತಿದೆ. ನೌಕರರ ಮನೆ ಮುಂದೆ ಹೋಗಿ ಅವರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತಿದೆ. ಇದರಿಂದ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ನಾವು ವಿಶ್ರಾಂತಿ ಪಡೆಯಲು ಕೊರೋನಾ ತೋರಿಸುತ್ತಿದ್ದೀರಾ. ಪ್ರಾಕೃತಿಕ ಸಮಸ್ಯೆ ಜಾಸ್ತಿ ಇರುತ್ತವೆ, ಅದನ್ನ ನಾವು ಎದುರಿಸಬೇಕು. ಸಮಸ್ಯೆ ಬಗ್ಗೆ ಮುಕ್ತ ಮಾತುಕತೆ ಮಾಡಿ ಬಗೆಹರಿಸಬೇಕು. ಸರ್ಕಾರ ದೌರ್ಜನ್ಯದ ಮಾರ್ಗ ಅನುಸರಿಸುತ್ತಿದೆ. ಹಲವಾರು ನೌಕರರನ್ನು ಕಾರಣ ಕೊಡದೇ ಅರೆಸ್ಟ್ ಮಾಡಿ, ಭಯೋತ್ಪಾದಕರಾಗಿ ನೋಡಲಾಗುತ್ತಿದೆ. ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ. 1 ಲಕ್ಷಕ್ಕೂ ಹೆಚ್ಚು ಜನರು ಜೈಲಿಗೆ ಹೋಗಲು ಸಿದ್ದರಿದ್ದಾರೆ. ಸೋಮವಾರದವರೆಗೂ ಸರ್ಕಾರಕ್ಕೆ ಡೆಡ್ ಲೈನ್. ಆಗಲೂ ಸರ್ಕಾರ ಸ್ಪಂದಿಸದಿದ್ದರೆ ಸೋಮವಾರದ ನಂತರ ಜೈಲ್ ಬರೋ ಚಳುವಳಿ ಆರಂಭ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ರಾಜ್ಯಪಾಲರಿಗೆ ಮನವಿ ಪತ್ರ ಕೊಡುತ್ತೇವೆ. ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಸರ್ಕಾರಕ್ಕೆ ತಿದ್ದಿ ಬುದ್ದಿ ಹೇಳಬೇಕು ಎಂದು ಮನವಿ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ