ವಿಜಯಪುರ(ಆ.24): ಭಾನುವಾರ ಮಧ್ಯಾಹ್ನ ಫೋನ್ ಕರೆ ಬಂದಿದ್ದೇ ತಡ ಬಬಲೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಸುಟ್ಟ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿತ್ತು. ಕೂಡಲೇ ಇದು ಅಪರಿಚಿತ ಶವ ಪತ್ತೆ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರ ತಂಡ ತನಿಖೆ ನಡೆಸಿದೆ. ಬಬಲೇಶ್ವರ ಪಿಎಸ್‌ಐ ಕಲ್ಲೂರ ಮತ್ತು ವಿಜಯಪುರ ಗ್ರಾಮೀಣ ಸಿಪಿಐ ಮಹಾಂತೇಶ ಧಾಮಣ್ಣವರ ನೇತೃತ್ವದ ಪೊಲೀಸರ ತಂಡ ತನಿಖೆ ನಡೆಸಿದೆ.
ಯುವಕನ ಶವ ಪತ್ತೆಯಾದ ಜಾಗದಿಂದ ಅಣತಿ ದೂರದಲ್ಲಿ ಸ್ಕೂಟರ್ವೊಂದು ನಿಂತಿರುವುದು ಕಂಡು ಬಂದಿತ್ತು. ಈ ಸ್ಕೂಟರ್ ಆಧಾರದ ಮೇಲೆ ಪೊಲೀಸರು ಅದರ ದಾಖಲಾತಿ ಪರಿಶೀಲನೆ ನಡೆಸಿದರು. ಆಗ ಈ ಸ್ಕೂಟರ್ ಮಾಲೀಕನ ಹೆಸರು ಪತ್ತೆ ಮಾಡಿ ಮಾಹಿತಿ ಪಡೆದಾಗ ಕೊಲೆಯಾದ ಯುವಕನ ಗುರುತ ಪತ್ತೆಯಾಗಿದೆ.
ವಿಜಯಪುರ ನಗರದ ಎಸ್ಪಿ ಕಚೇರಿ ಹಿಂಭಾಗದ ನಿವಾಸಿ ಅಕ್ಷಯ ಮನೋಹರ ಲವಗಿ(23) ಕೊಲೆಯಾದ ಯುವಕ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಯುವಕ ಶುಕ್ರವಾರ ಅಂದರೆ ಆಗಸ್ಟ್ 21ರಂದು ಡೀಸೆಲ್ ತರುವುದಾಗಿ ಮನೆಯಿಂದ ಸ್ಕೂಟರ್ನಲ್ಲಿ ತೆರಳಿದ್ದ. ಮೊಬೈಲ್ ಮನೆಯಲ್ಲೇ ಇಟ್ಟು ಹೋಗಿದ್ದ. 10 ನಿಮಿಷದಲ್ಲಿ ವಾಪಾಸ್ ಬರುವುದಾಗಿ ಹೇಳಿದ್ದ ಈತ ಎಷ್ಟೋತ್ತಾದರೂ ಮನೆಗೆ ವಾಪಸ್ ಬಂದಿರಲಿಲ್ಲ.
ಬಳಿಕ ಮನೆಯವರು ಸಂಬಂಧಿಕರ ಬಳಿ ಯುವಕನ ನಾಪತ್ತೆ ಬಗ್ಗೆ ವಿಚಾರಣೆ ನಡೆಸಿದ್ದರೇ ಹೊರತು ಪೊಲೀಸ್ ಠಾಣೆಗೆ ದೂರು ನೀಡಿರಲಿಲ್ಲ. ನಿನ್ನೆ ಮಧ್ಯಾಹ್ನ ಪೊಲೀಸರು ಮನೆಯವರಿಗೆ ಯುವಕನ ಶವ ಪತ್ತೆಯಾಗಿರುವುದು ಮನೆಯವರಿಗೆ ಫೋನ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: Coronavirus Update: ದೇಶದಲ್ಲಿ ಕೋವಿಡ್-19 ಆರ್ಭಟ – 31 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ಪೊಲೀಸ್ ಮೂಲಗಳ ಪ್ರಕಾರ ಸುಮಾರು ಮೂರು ದಿನಗಳ ಹಿಂದೆಯೇ ಕೊಲೆ ಮಾಡಿ ಶವವನ್ನು ಸುಟ್ಟು ಹಾಕಲಾಗಿದೆ. ಈ ಪ್ರಕರಣದ ತನಿಖೆ ಮುಂದುವರೆದಿದೆ. ಆದರೆ, ಈ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಷ್ಟೇ ಅಲ್ಲ, ಯಾರು ಕೊಲೆ ಮಾಡಿದ್ದಾರೆ ಎಂಬುದೂ ಗೊತ್ತಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ