Ukraine Crisis: ನನ್ನ ಮಗಳಿರುವ ಸ್ಥಳದಲ್ಲೇ ಬಾಂಬ್​​ಗಳು ಸ್ಫೋಟಿಸುತ್ತಿವೆ: ಬಾಗಲಕೋಟೆಯಲ್ಲಿ ತಾಯಿಯ ಕಣ್ಣೀರು

ಕ್ಷಣ ಕ್ಷಣಕ್ಕೂ ಆತಂಕ... ಉಕ್ರೇನ್ ನಲ್ಲಿ ಸಿಲುಕಿರುವ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿಗಳ ಸುರಕ್ಷಿತ ಆಗಮನಕ್ಕೆ ಪಾಲಕರು ಪ್ರಾರ್ಥಿಸುತ್ತಿದ್ದಾರೆ.

ಉಕ್ರೇನ್​​ನಲ್ಲಿ ಸಿಲುಕಿರುವ ಬಾಗಲಕೋಟೆಯ ವಿದ್ಯಾರ್ಥಿನಿ

ಉಕ್ರೇನ್​​ನಲ್ಲಿ ಸಿಲುಕಿರುವ ಬಾಗಲಕೋಟೆಯ ವಿದ್ಯಾರ್ಥಿನಿ

 • Share this:
  ಬಾಗಲಕೋಟೆ :  ಮಗಳು (Daughter) ಫೋನ್‌ನಲ್ಲಿ (Phone) ಮಾತನಾಡುತ್ತಲೇ ಸೈರನ್ ಸದ್ದು ಆಯಿತು. ಬೆಳಗ್ಗೆಯಿಂದಲೂ ಸಿಡಿಯುತ್ತಿರುವ ಬಾಂಬ್‌ಗಳ (Bombs) ಸದ್ದು ನಮ್ಮನ್ನು ಆತಂಕಕ್ಕೆ ತಳ್ಳಿದೆ. ದೂರದ ದೇಶದಲ್ಲಿರುವ ಮಕ್ಕಳ ಬಗ್ಗೆ ಕ್ಷಣ.. ಕ್ಷಣಕ್ಕೂ ಆತಂಕ ಹೆಚ್ಚಾಗಿದೆ. ಕೇಂದ್ರ ಸರ್ಕಾರ (Central Government) ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ನಂಬಿಕೆಯಿದೆ. ಅದಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದೊಂದೆ ನಮಗಿರುವ ಮಾರ್ಗ.. ಉಕ್ರೇನ್‌ನ ಕಾರ್ಕಿವ್ ಪ್ರದೇಶದಲ್ಲಿ ವೈದ್ಯಕೀಯ ಪದವಿ ವ್ಯಾಸಂಗಕ್ಕೆ ತೆರಳಿರುವ ವಿದ್ಯಾಗಿರಿಯ ಅಪೂರ್ವ ಕದಾಂಪುರ ಅವರ ತಾಯಿ ಜ್ಯೋತಿ ಕದಾಂಪುರ ಕಣ್ಣೀರಿಡುತ್ತ  ಹೇಳಿದ ಮಾತುಗಳಿವು. ಸೋಮವಾರ ರಾತ್ರಿ ರಷ್ಯಾ ದೇಶ ಯುದ್ಧ ಘೋಷಿಸುತ್ತಿದ್ದಂತೆ ಉಕ್ರೇನ್ ಅಕ್ಷರಶಃ ನಲುಗಿದ್ದು, ಅಲ್ಲಿರುವ ಭಾರತೀಯರ ಪೈಕಿ ಕರ್ನಾಟಕದ 135 ವಿದ್ಯಾರ್ಥಿಗಳು ಕಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (ಕೆಎನ್‌ಎಂಯು) ವ್ಯಾಸಂಗ ಮಾಡುತ್ತಿದ್ದಾರೆ. ಅವರೆಲ್ಲರ ಸುರಕ್ಷತೆ ಬಗ್ಗೆ ಪಾಲಕರಲ್ಲಿ ಆತಂಕ ಮೂಡಿದೆ. ಸದ್ಯದ ಮಾಹಿತಿ ಪ್ರಕಾರ ಬಾಗಲಕೋಟೆ ಜಿಲ್ಲೆಯ  22 ಜನ ಉಕ್ರೇನ್‌ನಲ್ಲಿದ್ದು, ಅವರೆಲ್ಲರಿಗೂ ಅಪಾಯ ಎದುರಾಗದಿರಲಿ ಎಂಬ ಪ್ರಾರ್ಥನೆ ಎಲ್ಲರದಾಗಿದೆ. 

  ಉಕ್ರೇನ್‌ಗೆ ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ತೆರಳುವುದು ಹೆಚ್ಚು. ಹೀಗಾಗಿ ಜಿಲ್ಲೆಯ 14 ಜನ ಅಲ್ಲಿರುವುದು ಕಂಡು ಬಂದಿದ್ದು, ಸದ್ಯಕ್ಕಂತೂ ಕಾರ್ಕಿವ್ ಪ್ರದೇಶ ಸುರಕ್ಷಿತವಾಗಿದೆ ಎಂದು ಹೇಳಲಾಗಿದ್ದರೂ, ಯುದ್ಧ ವಿಮಾನಗಳ ಹಾರಾಟ ಅತಂಕ ಮೂಡಿಸಿದೆ. ಅಲ್ಲಲ್ಲಿ ಬಾಂಬ್ ದಾಳಿಗಳ ಸದ್ದು ಕೇಳಿ ಬರುತ್ತಿವೆ ಎಂದು ವಿದ್ಯಾರ್ಥಿಗಳು ಹೇಳಿರುವುದು ಪಾಲಕರ ನಿದ್ದೆಗೆಡಿಸಿದೆ.

  ಇದನ್ನೂ ಓದಿ: Russia-Ukraine Crisis: ಉಕ್ರೇನ್​ನಲ್ಲಿ ಸಿಲುಕಿದ ರಾಯಚೂರಿನ 8 ವಿದ್ಯಾರ್ಥಿಗಳು, ರಾತ್ರಿಯಿಡಿ ಬಂಕರ್​ನಲ್ಲಿ ಬಂಧಿ

  ನಿರಂತರ ಬಾಂಬ್‌ಗಳ ಸದ್ದು..

  ವಿದ್ಯಾಗಿರಿ 9ನೇ ಕ್ರಾಸ್ ನಿವಾಸಿ ಅಪೂರ್ವ ಕದಾಂಪುರ ಅವರ ತಾಯಿ ಜ್ಯೋತಿ ನ್ಯೂಸ್ 18 ನೊಂದಿಗೆ ಮಾತನಾಡಿದರು. ಗುರುವಾರ ಬೆಳಗ್ಗೆಯಿಂದಲೂ ಆತಂಕದ ಸ್ಥಿತಿಯಿದೆ. ಸಂಜೆ ಅದು ಮತ್ತಷ್ಟು ಬಿಗಡಾಯಿಸಿದೆ. ಕಾರ್ಕಿವ್ ಪ್ರದೇಶದ 40 ಕಿ.ಮೀ. ದೂರದಲಷ್ಟೇ ಯುದ್ಧದ ಸ್ಥಿತಿಯಿದ್ದು, ಅಲ್ಲಿಯೇ ವಿಮಾನಗಳ ಹಾರಾಟವಾಗುತ್ತಿದೆ, ಬಾಂಬ್‌ಗಳು ಬೀಳುತ್ತಿವೆ. ಉಕ್ರೇನ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಅಲ್ಲಿನ ಸರ್ಕಾರ ಘೋಷಿಸಿದ್ದು, ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ನಿಂದ ಆಚೆ ಕಾಲು ಇಡದಂತೆ ಸೂಚನೆ ನೀಡಲಾಗಿದೆ. ಬೆಳಗ್ಗೆ ಎರಡು ಬಾರಿ ಮಗಳು ಕರೆ ಮಾಡಿದಾಗ ಬಾಂಬ್‌ಗಳ ಸದ್ದು ಕೇಳಿರುವುದಾಗಿ ಹೇಳಿದಳು. ಸಂಜೆ ಮಾಧ್ಯಮಗಳ ಎದುರು ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗಲೇ ಎಚ್ಚರಿಕೆಯ ಗಂಟೆಯಾಗಿ ಸೈರನ್ ಹೊಡೆಯಲಾಯಿತು. ಅದರ ಅರ್ಥ ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂಬ ಸೂಚನೆ ಬಂತು ಹಾಗೆ ಹೇಳಿ ಮಗಳು ಕರೆಯನ್ನು ಪೂರ್ಣಗೊಳಿಸಿ ಹೊರಟಳು ಇದು ಮತ್ತಷ್ಟು ನಮ್ಮನ್ನು ಆತಂಕಕ್ಕೆ ದೂಡಿದೆ ಎಂದು ಜ್ಯೋತಿ ಭಾವುಕರಾದರು.

  ಕುಟುಂಬಕ್ಕೆ ಮೇಲ್ಮನೆ ಸದಸ್ಯರ ಬೆಂಬಲ 

  ನಮ್ಮ ಸಂಬಂಧಿಯೊಬ್ಬರು ವಾಯುದಳದಲ್ಲಿದ್ದು, ಅವರಿಂದಲೂ ಸಹಾಯ ಕೇಳಲಾಗಿದೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಇಮೇಲ್ ಮುಖಾಂತರವೂ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತರುವ ನಿಟ್ಟಿನಲ್ಲಿ ಮನವಿ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರು ನಿರಂತರವಾಗಿ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ಮಗಳೊಂದಿಗೂ ಅವರು ದೂರವಾಣಿ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ. ಕೇಂದ್ರ ಸರ್ಕಾರಕ್ಕೆ ವಿಚಾರ ತಿಳಿಸುವ ಪ್ರಯತ್ನದಲ್ಲಿ ಅವರು ಇದ್ದಾರೆ ಎಂದು ಜ್ಯೋತಿ ತಿಳಿಸಿದರು.

  ಇದನ್ನೂ ಓದಿ: Explained: ರಷ್ಯಾ-ಉಕ್ರೇನ್ ನಡುವೆ ಏನಿದೆ ವೈರತ್ವ? ಉಭಯ ರಾಷ್ಟ್ರಗಳ ಯುದ್ಧದ Time Line ಇಲ್ಲಿದೆ

  ಫೆ.28 ರಂದು ಮಗಳು ಭಾರತಕ್ಕೆ ಮರಳುವ ಸಂಬಂಧ ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿತ್ತು. ಆದರೆ ಏರ್‌ಸ್ಪೇಸ್ ಕೂಡ ಬ್ಲಾಕ್ ಆಗಿರುವುದರಿಂದ ಈಗ ಅವರು ಬರುವುದು ಕಷ್ಟ ಸಾಧ್ಯವಾಗಲಿದೆ ಎಂದು ಹೇಳಿದರು.  ಇನ್ನು ಉಕ್ರೇನ್‌ನಿಂದ ಮಾತನಾಡಿರುವ ಅಪೂರ್ವ ಕದಾಂಪುರ ಅವರು, ಮುಂದಿನ 14 ದಿನಕ್ಕೆ ಆಗುವಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಂಡಿದ್ದೇವೆ. ಕುಡಿಯುವ ನೀರು ಲಭ್ಯತೆ ವಿಚಾರವಾಗಿ ಈಗಲೇ ಸಮಸ್ಯೆಗಳು ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಹಾಸ್ಟೇಲ್‌ನಲ್ಲಿ ಕಾಲೇಜು ಆಡಳಿತ ಮಂಡಳಿ ಅಗತ್ಯ ಸಹಕಾರ ನೀಡುತ್ತಿದ್ದು, ರಾಯಭಾರಿ ಕಚೇರಿ ಕೂಡ ಇರುವ ಸ್ಥಳ ಬಿಟ್ಟು ಕದಲದಂತೆ ಸೂಚನೆ ನೀಡಿದೆ. ರಾಯಭಾರಿ ಕಚೇರಿ ನಮ್ಮನ್ನು ಭಾರತಕ್ಕೆ ಕರೆದೊಯ್ಯುವ ನಿರಂತರ ಪ್ರಯತ್ನದಲ್ಲಿದೆ ಎಂದು ಹೇಳಿದರು.

  ಮಗನಿರುವ ಸ್ಥಳ ಸುರಕ್ಷಿತ..! 

  ಕಾರ್ಕಿವ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಮನೋಜ್ ಅವರ ತಂದೆ ಬಾಲಕೃಷ್ಣ ಚಿತ್ರಗಾರ ಹಾಗೂ ತಾಯಿ ಸುಮಿತ್ರಾ ಅವರು ಮಾತನಾಡಿ, ಮನೋಜ್ ವಾಸವಿರುವ ಕಾರ್ಕಿವ್ ಪ್ರದೇಶ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾನೆ. ಅಗತ್ಯ ವಸ್ತುಗಳನ್ನು ಖರೀದಿಸಿ ಸ್ವಲ್ಪ ದುಡ್ಡು ಅವ್ನ ಬಳಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಸರ್ಕಾರ, ರಾಯಭಾರಿ ಕಚೇರಿಯ ಸೂಚನೆಗಳನ್ನು ತಪ್ಪದೆ ಪಾಲಿಸುವಂತೆ ಆತನಿಗೆ ತಿಳಿಸಲಾಗಿದೆ. ಅಲ್ಲಿ ಯುದ್ಧ ವಿಮಾನಗಳ ಹಾರಾಟ, ಬಾಂಬ್ ದಾಳಿಯನ್ನು ನೋಡಿದರೆ ಕ್ಷಣ, ಕ್ಷಣಕ್ಕೂ ಆತಂಕವಾಗುತ್ತಿದೆ. ಪುತ್ರ ಸುರಕ್ಷಿತವಾಗಿ ಭಾರತಕ್ಕೆ ಬರಬೇಕು. ನಮಗೆ ಕ್ಷಣ, ಕ್ಷಣವೂ ಆತಂಕವಾಗುತ್ತಿದೆ ಎಂದು ಹೇಳಿದರು. ಆತನೊಂದಿಗೆ ನಿರಂತರವಾಗಿ ದೂರವಾಣಿ ಮೂಲಕ ಮಾತನಾಡುತ್ತಿದ್ದೇವೆ. ಯುದ್ಧದ ಭೀತಿ ಆದಷ್ಟು ಬೇಗ ಕಡಿಮೆ ಆಗಬೇಕು. ಅವರೆಲ್ಲರೂ ಸುರಕ್ಷಿತವಾಗಿ ಬರಬೇಕೆಂದು ಹೇಳಿದರು.

  ಇನ್ನು ಸೀಮಿಕೇರಿಯ ಸ್ಪೂರ್ತಿ ದೊಡ್ಡಮನಿ ಅವರ ತಾಯಿ ಡಾ.ಗಂಗಾ ದೊಡ್ಡಮನಿ ಅವರು ಮಾತನಾಡಿ, ಕಾರ್ಕಿವ್‌ನಲ್ಲಿ ಎಂಬಿಬಿಎಸ್ ಮೊದಲ ವರ್ಷದ ಅಧ್ಯಯನ ಮಾಡುತ್ತಿರುವ ಸ್ಪೂರ್ತಿ ಫ್ಲ್ಯಾಟ್‌ವೊಂದರಲ್ಲಿ ವಾಸವಾಗಿದ್ದಾಳೆ.  ಆಶ್ರಯ ತಾಣದಲ್ಲಿ ಬಂದು ನೆಲೆಸುವಂತೆ ಸರಕಾರ ತಿಳಿಸಿದ ಹಿನ್ನೆಲೆಯಲ್ಲಿ ಸದ್ಯ ಶೆಲ್ಟರ್‌ನಲ್ಲಿ ಸ್ನೇಹಿತರೊಂದಿಗೆ ಇದ್ದಾರೆ. ವಿಮಾನಗಳ ಹಾರಾಟ ರದ್ದಾಗಿರುವುದರಿಂದ ಅವಳು ಬರಲು ಸಾಧ್ಯವಾಗುತ್ತಿಲ್ಲ. ಅವಳು ಸುರಕ್ಷಿತವಾಗಿದ್ದರೆ ಸಾಕು ಎಂದಿದ್ದಾರೆ.

  ಜಿಲ್ಲೆಯ 22  ಜನ ಉಕ್ರೇನ್‌ನಲ್ಲಿ...!

  ಬಾಗಲಕೋಟೆ ವಿದ್ಯಾಗಿರಿಯ ನಿವಾಸಿಗಳಾದ ಮನೋಜ ಚಿತ್ರಗಾರ, ಅಪೂರ್ವ ಕದಾಂಪುರ, ಸೀಮಿಕೇರಿಯ ಸ್ಪೂರ್ತಿ ದೊಡ್ಡಮನಿ, ಜಮಖಂಡಿಯ ಕಿರಣ ಸವದಿ, ರೋಹಿತ ಹಿಪ್ಪರಗಿ, ಸುಷ್ಮಾ ನ್ಯಾಮಗೌಡ, ಅಶ್ವತ್ಥ ಗುರವ್, ಪ್ರಕಾಶ ಬಂಗಾರಶೆಟ್ಟಿ, ಅನಿಕೇತ ಶಿಪ್ಪರಮಟ್ಟಿ, ಕಿರಣ್ ಸಿಂಗಾಡಿ, ಪ್ರಜ್ವಲ್ ಹಿಪ್ಪರಗಿ, ಚೇತನ ಶ್ರೀಶೈಲ ಮಾಗಿ, ಸಹನಾ ಮಲ್ಲನಗೌಡ ಪಾಟೀಲ, ಅಶ್ವಿನಿ ಯಾದವಾಡ ಎಂಬುವವರು ಉಕ್ರೇನ್‌ನಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ. ಬಹುತೇಕರು ಮೆಡಿಕಲ್ ವ್ಯಾಸಂಗಕ್ಕಾಗಿ ಅಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.

  (ವರದಿ: ಮಂಜುನಾಥ್ ತಳವಾರ) 
  Published by:Kavya V
  First published: