ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಯಾರಾಗಲಿದ್ದಾರೆ ಅಭ್ಯರ್ಥಿ- ದೇವೇಗೌಡ ಇಲ್ಲ ಪ್ರಜ್ವಲ್​ ರೇವಣ್ಣ?

Hassan Lok Sabha Constituency Profile | ಮೈತ್ರಿಯಾದ ನಂತರವೂ ದೇವೇಗೌಡರ ಕುಟುಂಬವನ್ನು ಕಂಡಕಂಡಲ್ಲಿ ಟೀಕಿಸುತ್ತಾ ಬಂದಿರುವ ರೆಬೆಲ್​ ನಾಯಕ ಎ.ಮಂಜು ಅವರು ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ ಅವರಿಗೆ ಬೆಂಬಲ ನೀಡುತ್ತೇವೆ, ಅವರ ಬದಲು ಬೇರೆಯವರು ಸ್ಪರ್ಧಿಸಿದರೆ ಮುಂದಿನ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ದೇವೇಗೌಡರು ಇಲ್ಲಿ ಸ್ಪರ್ಧಿಸದೆ ಪ್ರಜ್ವಲ್​ಗೆ ಟಿಕೆಟ್ ನೀಡಿದರೆ, ಎ. ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಾಧ್ಯತೆ ದಟ್ಟವಾಗಿದೆ.

HR Ramesh | news18
Updated:March 27, 2019, 3:20 PM IST
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಯಾರಾಗಲಿದ್ದಾರೆ ಅಭ್ಯರ್ಥಿ- ದೇವೇಗೌಡ ಇಲ್ಲ ಪ್ರಜ್ವಲ್​ ರೇವಣ್ಣ?
ಎ.ಮಂಜು, ಎಚ್.ಡಿ.ದೇವೇಗೌಡ, ಪ್ರಜ್ವಲ್​ ರೇವಣ್ಣ
HR Ramesh | news18
Updated: March 27, 2019, 3:20 PM IST
- ರಮೇಶ್​ ಹಂಡ್ರಂಗಿ

ಹಾಸನ ಲೋಕ್ಷಸಭಾ ಕ್ಷೇತ್ರ ದೇಶದಲ್ಲಿಯೇ ಪ್ರತಿಷ್ಠಿತ ಕಣವಾಗಿದೆ. ರಾಜ್ಯದಿಂದ ಪ್ರಧಾನಿ ಮಂತ್ರಿಯನ್ನು ನೀಡಿದ ಕ್ಷೇತ್ರ ಎಂಬ ಹೆಗ್ಗಳಿಕೆ ಹಾಸನಕ್ಕೆ ಸಲ್ಲುತ್ತದೆ. ಅರೆ ಮಲೆನಾಡು, ಬಯಲುಸೀಮೆ, ಮಲೆನಾಡನ್ನು ಒಳಗೊಂಡ ಈ ಕ್ಷೇತ್ರಕ್ಕೆ ಹೇಮಾವತಿ ಜೀವನದಿ. ನಾಡಿನ ಜೀವಧಾರೆ ಕಾವೇರಿ ಜಿಲ್ಲೆಯಲ್ಲಿ ಹಾದುಹೋದರೆ, ಯಗಚಿ, ವಾಟೆಹೊಳೆ, ಎತ್ತಿನಹೊಳೆ, ಕೆಂಪುಹೊಳೆ ಪ್ರಮುಖ ನದಿಗಳಾಗಿವೆ. ಒಕ್ಕಲಿಗ ಪ್ರಾಬಲ್ಯವಿರುವ ಇಲ್ಲಿ ಎಚ್.ಡಿ.ದೇವೇಗೌಡ ಅವರೇ ಏಕಚಕ್ರಾಧಿಪತಿ. ಬಿ.ಜಿ.ಪುಟ್ಟಸ್ವಾಮಿ ಅವರು ಒಮ್ಮೆ ಮಾತ್ರ ದೇವೇಗೌಡರನ್ನು ಇಲ್ಲಿ ಸೋಲಿಸಲು ಸಾಧ್ಯವಾಗಿದ್ದು ಬಿಟ್ಟರೇ ಮತ್ಯಾರಿಂದಲೂ ದೇವೇಗೌಡರನ್ನು ಸೋಲಿಸಲು ಸಾಧ್ಯವಾಗಿಲ್ಲ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ಇಲ್ಲಿ ಜೆಡಿಎಸ್​ ಅಭ್ಯರ್ಥಿಗೆ ಪ್ರಬಲ ಸ್ಪರ್ಧೆ ಒಡ್ಡಿತಾದರೂ, ಗೆಲುವು ಸಾಧಿಸಲು ಆಗಲಿಲ್ಲ. ದೇವೇಗೌಡರು 5,09,843 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್​ನಿಂದ ಎ.ಮಂಜು 4,09,379 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಪ್ರಸ್ತುತ ಈಗಲೂ ಕಾಂಗ್ರೆಸ್​ನ ಎ.ಮಂಜು ವಿಧಾನಸಭೆಯಲ್ಲಿ ಸೋತ ಮೇಲೆ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಉತ್ಸುಕರಾಗಿದ್ದಾರೆ. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಪಕ್ಷಗಳಾಗಿವೆ. ಅದರಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ರಾಜ್ಯದ 28 ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಳ್ಳಲಿವೆ. ಅದರಂತೆ ಜೆಡಿಎಸ್​ 12 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಆದರೆ, ಕಾಂಗ್ರೆಸ್​ 8 ಕ್ಷೇತ್ರಗಳನ್ನು ಕೊಡುವುದಾಗಿ ಹೇಳುತ್ತಿದೆ. ಈ ವಿಚಾರವಾಗಿ ಮಾತುಕತೆ ಅಂತಿಮವಾಗಿಲ್ಲ.

ಜೆಡಿಎಸ್​ಗೆ ಕಾಂಗ್ರೆಸ್​ ಎಷ್ಟೇ ಸ್ಥಾನ ನೀಡಿದರೂ ಹಾಸನ, ಮಂಡ್ಯ, ಮೈಸೂರು ಜೆಡಿಎಸ್​ ಪಾಲಾಗುವ ಸಾಧ್ಯತೆ ಇದೆ. ಹಾಸನ ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂದು ಎ.ಮಂಜು ಪಟ್ಟುಹಿಡಿದಿದ್ದರೂ ಅವರ ಬಿಗಿಪಟ್ಟು ಸಾಕಾರಗೊಳ್ಳುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಬಹುತೇಕ ಈ ಕ್ಷೇತ್ರ ಜೆಡಿಎಸ್​ ಪಾಲಾಗುವುದರಲ್ಲಿ ಯಾವುದೇ ಅನುಮಾನ ಇಲ್ಲದಿದ್ದರೂ ಈ ಪಕ್ಷದಿಂದ ಯಾರೂ ಅಭ್ಯರ್ಥಿಯಾಗಲಿದ್ದಾರೆ ಎಂಬುದೇ ಕುತೂಹಲಕಾರಿಯಾಗಿದೆ. ಜೆಡಿಎಸ್​ ವರಿಷ್ಠ ದೇವೇಗೌಡರು ಮಾತ್ರ ಯಾವ ಕಾರಣಕ್ಕೂ  ಗುಟ್ಟು ಬಿಟ್ಟುಕೊಡುತ್ತಿಲ್ಲ.

ವಿಧಾನಸಭೆ ಚುನಾವಣೆಗೆ ರೇವಣ್ಣ ಅವರ ಮಗ ಪ್ರಜ್ವಲ್​ಗೆ ಟಿಕೆಟ್​ ನೀಡದ ದೇವೇಗೌಡರು ಲೋಕಸಭೆಗೆ ಟಿಕೆಟ್​ ನೀಡುವ ಆಶ್ವಾಸನೆ ನೀಡಿದ್ದರು. ಅದರಂತೆ ಈ ಚುನಾವಣೆಯಲ್ಲಿ ಪ್ರಜ್ವಲ್​ಗೆ ಹಾಸನದಿಂದ ಟಿಕೆಟ್ ನೀಡಲಾಗುವುದು ಎಂದು ಈಗಾಗಲೇ ದೇವೇಗೌಡರು ಅಧಿಕೃತವಾಗಿ ಘೋಷಿಸದಿದ್ದರೂ ಹಲವು ಸುಳಿವನ್ನು ನೀಡಿದ್ದಾರೆ. ಅದರಂತೆ ಹಾಸನ ಲೋಕಸಭೆ ಕ್ಷೇತ್ರಕ್ಕೆ ಜೆಡಿಎಸ್​ನಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮೈತ್ರಿಯಾದ ನಂತರವೂ ದೇವೇಗೌಡರ ಕುಟುಂಬವನ್ನು ಕಂಡಕಂಡಲ್ಲಿ ಟೀಕಿಸುತ್ತಾ ಬಂದಿರುವ ರೆಬೆಲ್​ ನಾಯಕ ಎ.ಮಂಜು ಅವರು ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ ಅವರಿಗೆ ಬೆಂಬಲ ನೀಡುತ್ತೇವೆ, ಅವರ ಬದಲು ಬೇರೆಯವರು ಸ್ಪರ್ಧಿಸಿದರೆ ಮುಂದಿನ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ದೇವೇಗೌಡರು ಇಲ್ಲಿ ಸ್ಪರ್ಧಿಸದೆ ಪ್ರಜ್ವಲ್​ಗೆ ಟಿಕೆಟ್ ನೀಡಿದರೆ, ಎ. ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಾಧ್ಯತೆ ದಟ್ಟವಾಗಿದೆ. ಇನ್ನು ಬಿಜೆಪಿ ಕ್ಷೇತ್ರದಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿರುವುದು ಒಂದು ಕ್ಷೇತ್ರದಲ್ಲಿ ಮಾತ್ರ. ಎ.ಮಂಜು ಏನಾದರೂ ಬಿಜೆಪಿಗೆ ಸೇರ್ಪಡೆಗೊಂಡರೆ, ಮಂಜು ಅವರಿಗಿರುವ ಒಕ್ಕಲಿಗ ಮತಗಳು ವಿಭಜನೆ ಆಗುವುದು ಖಂಡಿತ. ಕಳೆದ ಬಾರಿ ಮೈಸೂರಿನಿಂದ ವಲಸೆ ಬಂದ ಸಿ.ಎಚ್​.ವಿಜಯಶಂಕರ್ ಬಿಜೆಪಿ ಅಭ್ಯರ್ಥಿಯಾಗಿ​ ಸ್ಪರ್ಧೆ ಮಾಡಿದ್ದರು. ಈಗ ಅವರು ಬಿಜೆಪಿ ತೊರೆದು, ಕಾಂಗ್ರೆಸ್​ ಸೇರ್ಪಡೆಗೊಂಡಿದ್ದಾರೆ. ಇನ್ನು ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗ ರಮೇಶ್​ ಕೂಡ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಕಡೂರು ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಕ್ಷೇತ್ರ ವಿಂಗಡಣೆಗೂ ಮೊದಲು ಈ ಲೋಕಸಭಾ ವ್ಯಾಪ್ತಿಯಲ್ಲಿ ಒಕ್ಕಲಿಗರ ಪ್ರಾಬಲ್ಯವಿತ್ತು. ಆದರೆ, ಚಿಕ್ಕಮಗಳೂರಿನ ಕಡೂರು ಈ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದ್ದರಿಂದ ಕುರುಬ ಸಮುದಾಯದ ಮತಸಂಖ್ಯೆ ಹೆಚ್ಚಾಗಿದೆ. ಒಕ್ಕಲಿಗ, ಲಿಂಗಾಯತ, ಕುರುಬ, ಎಸ್​ಸಿ, ಎಸ್​ಟಿ ಕ್ರಮವಾಗಿ ಇದ್ದಾರೆ.

ಕಳೆದ ಜನಗಣತಿ ಪ್ರಕಾರ ಹಾಸನದಲ್ಲಿ 20,16,896 ಮಂದಿ ಇದ್ದು,  ಶೇ.78.50ರಷ್ಟು ಜನರು ಗ್ರಾಮೀಣ ಭಾಗದಲ್ಲಿ ಇದ್ದಾರೆ. ಉಳಿದ 21.50 ಮಂದಿ ನಗರ ಪ್ರದೇಶದಲ್ಲಿ ವಾಸವಾಗಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇ.19.69 ಎಸ್​ಸಿ, ಶೇ.1.84 ಎಸ್​ಟಿ ಇದ್ದಾರೆ.

ಯಾವ ಸಮುದಾಯದವರು ಎಷ್ಟಿದ್ದಾರೆ?

ಒಕ್ಕಲಿಗರು  - 4.50 ಲಕ್ಷ

ಲಿಂಗಾಯತ-  3 ಲಕ್ಷ

ಕುರುಬರು  - 1.75

ಎಸ್​ಸಿ/ಎಸ್ಟಿ – 3 ಲಕ್ಷ

ಮುಸ್ಲಿಂ  - 75 ಸಾವಿರ

ಇತರರು – 1 ಲಕ್ಷ

ಕಳೆದ ಚುನಾವಣೆಯಲ್ಲಿದ್ದ ಮತದಾರರು

ಒಟ್ಟು ಮತದಾರರು - 15,61,336

ಪುರುಷರು – 7,89,668

ಮಹಿಳೆಯರು – 7,71,668

2014ರ ಲೋಕಸಭೆ ಚುನಾವಣೆ

ಎಚ್.ಡಿ.ದೇವೇಗೌಡ   - ಜೆಡಿಎಸ್​     - 5,09,843

ಎ.ಮಂಜು   -              ಕಾಂಗ್ರೆಸ್​      -   4,09,379

2009ರ ಲೋಕಸಭೆ ಚುನಾವಣೆ

ಎಚ್​.ಡಿ.ದೇವೇಗೌಡ –  ಜೆಡಿಎಸ್​-    4,96,429

ಕೆ.ಎಚ್.ಹನುಮೇಗೌಡ  ಬಿಜೆಪಿ-        2,05,316

2004 ಲೋಕಸಭೆ ಚುನಾವಣೆ

ಎಚ್.ಡಿ.ದೇವೇಗೌಡ   ಜೆಡಿಎಸ್​      - 4,62,625

ಎಚ್.ಸಿ.ಶ್ರೀಕಂಠಯ್ಯ  ಕಾಂಗ್ರೆಸ್​   -   2,72,320

1999 ಲೋಕಸಭೆ ಚುನಾವಣೆ

ಜಿ.ಪುಟ್ಟಸ್ವಾಮಿ ಗೌಡ     – ಕಾಂಗ್ರೆಸ್​ – 3,98,344

ಎಚ್.ಡಿ.ದೇವೇಗೌಡ        -  ಜೆಡಿಎಸ್​   - 2,56,587

1988 ಲೋಕಸಭೆ ಚುನಾವಣೆ

ದೇವೇಗೌಡ  -            ಜೆಡಿಎಸ್​       -      3,36,407

ಎಚ್.ಸಿ.ಶ್ರೀಕಂಠಯ್ಯ – ಕಾಂಗ್ರೆಸ್​-      3,04,753

1996 ಲೋಕಸಭೆ ಚುನಾವಣೆ

ವೈ.ಎನ್.ರುದ್ರೇಶ್​ಗೌಡ    – ಜನತಾ ದಳ – 3,13,241

ಎಸ್​.ಎಂ.ಆನಂದ್​        –ಕಾಂಗ್ರೆಸ್            – 2,32,454

1991 ಲೋಕಸಭೆ ಚುನಾವಣೆ

ದೇವೇಗೌಡ                      ಜೆಡಿಎಸ್​          2,60,761

ಎಚ್​.ಸಿ.ಶ್ರೀಕಂಠಯ್ಯ      ಕಾಂಗ್ರೆಸ್​       2,57,570

 

ಸಂಸದರ ರಿಪೋರ್ಟ್​ ಕಾರ್ಡ್​

ದೇವೇಗೌಡರು ಐದು ವರ್ಷಗಳಲ್ಲಿ ಲಭ್ಯವಿರುವ 25 ಕೋಟಿ ರು. ಸಂಸದರ ನಿಧಿಯಿಂದ 12.27 ಕೋಟಿ ಖರ್ಚು ಮಾಡಿದ್ದಾರೆ. ಸಂಸತ್ತಿನಲ್ಲಿ 16 ಚರ್ಚೆಗಳಲ್ಲಿ ಭಾಗವಹಿಸಿದ್ದು, ಶೇ.54 ಹಾಜರಾತಿ ಇದೆ. ಸಂಸತ್ತಿನಲ್ಲಿ ಪ್ರಶ್ನೋತ್ತರ ರಾಷ್ಟ್ರೀಯ ಸರಾಸರಿ 233ರಷ್ಟಿದೆ. ಹಾಜರಾತಿ ಪ್ರಮಾಣ ರಾಷ್ಟ್ರೀಯ ಸರಾಸರಿ ಶೇ.40 ಇದೆ.

ಹಾಸನ ಕ್ಷೇತ್ರದ ಬೇಡಿಕೆಗಳು

ಕೃಷಿ, ಹೈನುಗಾರಿಕೆ ಆಧಾರಿತ ಕೈಗಾರಿಕೆಗಳಿದ್ದರೂ ಇಸ್ರೋ ಪೆಟ್ರೋಲಿಯಂ ಸಂಶೋಧನಾ ಕೇಂದ್ರಗಳಿದ್ದರೂ ಸ್ಥಳೀಯರಿಗೆ ಪ್ರಯೋಜನವಾಗಿಲ್ಲ. ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಸುಧಾರಣೆ ಕಂಡಿಲ್ಲ. ಸಾರಿಗೆ ಸಂಪರ್ಕ ವ್ಯವಸ್ಥೆ ಏಳಿಗೆಯಾಗಿಲ್ಲ. ಹಾಸನದಿಂದ ಬೆಂಗಳೂರು ಎಕ್ಸ್​ಪ್ರೆಸ್​, ಸೂಪರ್​ ಫಾಸ್ಟ್​ ರೈಲುಗಳಿಲ್ಲ. ಹಾಸನದಿಂದ ಚಿಕ್ಕಮಗಳೂರು ರೈಲು ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ. ದೇವೇಗೌಡರ ಕನಸಾದ ವಿಮಾನ ನಿಲ್ದಾಣ ನಿರ್ಮಾಣವಾಗಿಲ್ಲ. ಹೇಮಾವತಿ, ಯಗಚಿ ನೀರಾವರಿ ಯೋಜನೆ ಅಪೂರ್ಣವಾಗಿದೆ. ಕಾಡಾನೆ ಸಮಸ್ಯೆ ಹೆಚ್ಚಾಗಿದೆ.

ಇದನ್ನು ಓದಿ: ದೇವೇಗೌಡ, ನಿಖಿಲ್​, ಶಿವರಾಮೇಗೌಡ ಈ ಮೂವರಲ್ಲಿ ಮಂಡ್ಯ ಕ್ಷೇತ್ರದ​ ಅಭ್ಯರ್ಥಿ ಯಾರು?

ಇದನ್ನು ಓದಿ: ಮೈಸೂರಿನಲ್ಲಿ ‘ಸಿಂಹ’ನ ಬೇಟೆಗೆ ಮೈತ್ರಿ ಪಕ್ಷಗಳಿಂದ ಯಾರು ಹೂಡಲಿದ್ದಾರೆ ಬಾಣ?

ಇದನ್ನು ಓದಿ: ಸತತ ಮೂರು ಬಾರಿ ಗೆದ್ದ ಬಿಜೆಪಿ ಸಂಸದನಿಗೆ ಸೋಲಿನ ರುಚಿ ತೋರಿಸಲಿದ್ದಾರಾ ಸಿದ್ದರಾಮಯ್ಯ?

ಇದನ್ನು ಓದಿ: ಕೇಂದ್ರ ಸಚಿವ ರಮೇಶ್​ ಜಿಗಜಿಣಗಿ ಹ್ಯಾಟ್ರಿಕ್​ ಗೆಲುವಿಗೆ ಬ್ರೇಕ್​ ಹಾಕಲಿದೆಯೇ ಕಾಂಗ್ರೆಸ್​?

ಇದನ್ನು ಓದಿ: ಒಕ್ಕಲಿಗ ಪ್ರಾಬಲ್ಯದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ, ಬಿಜೆಪಿ ಜಯದ ಕುದುರೆಯನ್ನು ಕಟ್ಟಿಹಾಕತ್ತಾ ಮೈತ್ರಿ ಸರ್ಕಾರ?

ಇದನ್ನು ಓದಿ: ಸೋಲಿಲ್ಲದ ಸರದಾರ ಧ್ರುವನಾರಾಯಣ್​ ಎದುರು ಈ ಬಾರಿ ಪ್ರಬಲ ಅಭ್ಯರ್ಥಿಗಳೇ ಇಲ್ಲ!
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...