ಕೇರಳದಿಂದ ಲಡಾಕ್​ವರಗೆ ಪಾದಯಾತ್ರೆ, ಇಬ್ಬರು ಯುವಕರ ರೋಚಕ ಗಾಥೆ ! ಇಷ್ಟೊಂದು ನಡೆಯುತ್ತಿರೋದು ಯಾಕೆ ಗೊತ್ತಾ?

ನಡೆದುಕೊಂಡು ಲಡಾಕ್​ಗೆ ಹೋಗ್ತೀವಿ ಅಂದಿದ್ದಕ್ಕೆ ದಿಲ್ಶದ್​ ಮಾಲೀಕ, ‘ನಿಂಗೆ ತಲೆ ಕೆಟ್ಟಿದೆ’ ಎಂದರಂತೆ. ಇಬ್ಬರ ಮನೆಯವರೂ ಇವರ ಸಾಹಸಕ್ಕೆ ಬೆಂಬಲ ನೀಡಿಲ್ಲ ಇದುವರಗೆ ಜೋಡಿಸಿಟ್ಟುಕೊಂಡಿದ್ದ ಅಲ್ಪಸ್ವಲ್ಪ ಹಣ ತೆಗೆದುಕೊಂಡು ಎಲ್ಲರ ವಿರೋಧದ ನಡುವೆ ಮಾರ್ಚ್ 19, 2021ರ ಬೆಳಗಿನ 4 ಗಂಟೆಗೆ ಹೆಗಲಿಗೊಂದು ಬ್ಯಾಗ್ ಹಾಕಿಕೊಂಡು ಹೊರಟೇ ಬಿಟ್ರು.

ದಿಲ್ಶದ್ ಮತ್ತು ಮನ್ಸೂರ್ ಬಿಲಾಲ್

ದಿಲ್ಶದ್ ಮತ್ತು ಮನ್ಸೂರ್ ಬಿಲಾಲ್

  • Share this:
ಕಾರವಾರ(ಏಪ್ರಿಲ್ 05): “ಶತಮಾನಗಳ ಹಿಂದೆ ಭೂಮಿಯ ಮೇಲೆ ವಾಹನಗಳೇ ಇಲ್ಲದಿದ್ದಾಗ ಜನ ಹೇಗೆ ಒಂದು ಕಡೆಯಿಂದ ಮತ್ತೊಂದೆಡೆಗೆ ನಡೆದುಕೊಂಡೇ ಹೋಗ್ತಿದ್ರು? ಆ ಅನುಭವ ಹೇಗಿರ್ತಿತ್ತು? ಇದನ್ನ ಸ್ವತಃ ನಾವೇ ನಡೆದು ತಿಳಿದುಕೊಳ್ಳೋಕೆ ಈ ಪಾದಯಾತ್ರೆ ಮಾಡ್ತಿದ್ದೀವಿ“. ಹೀಗಂದಿದ್ದು ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ ಎನ್ನುವ ಊರಿನಿಂದ ಕಾಲ್ನಡಿಗೆಯಲ್ಲೇ ಲಡಾಕ್​ಗೆ ಹೊರಟಿರೋ ಇಬ್ಬರು ಯುವಕರು.

20 ವರ್ಷದ ದಿಲ್ಶದ್ ಮತ್ತು 23 ವರ್ಷದ ಮನ್ಸೂರ್ ಬಿಲಾಲ್ ಮೂಲತಃ ಕೊಂಡೊಟ್ಟಿಯವರೇ. ಚಹಾ ಅಂಗಡಿ ನಿರ್ವಹಿಸುತ್ತಿದ್ದ ದಿಲ್ಶದ್​ಗೆ ಅರಬ್ ಎಮಿರೇಟ್ಸ್​ನಲ್ಲಿ ಕೆಲಸ ಮಾಡಿದ್ದ ಮನ್ಸೂರ್ ಗೆಳೆಯ. ಲಾಕ್​ಡೌನ್​ ಸಂದರ್ಭದಲ್ಲಿ ಮನೆಗೆ ಮರಳಿದ ಮನ್ಸೂರ್​ ಮತ್ತೆ ಕೆಲಸಕ್ಕೆ ಹೋಗೋ ಮನಸ್ಸು ಮಾಡ್ಲಿಲ್ಲ. ಇತ್ತ ದಿಲ್ಶದ್​ಗೂ ಟೀ ಅಂಗಡಿ ಕೆಲಸ ಬೇಸರವಾಗಿತ್ತು. ಇಬ್ಬರೂ ಸೇರಿ 3 ತಿಂಗಳು ಪ್ಲಾನ್ ಮಾಡಿ ಈ ಪರ್ಯಟನೆ ಶುರು ಮಾಡೇ ಬಿಟ್ರು.

ಹೀಗೆ ನಡೆದುಕೊಂಡು ಲಡಾಕ್​ಗೆ ಹೋಗ್ತೀವಿ ಅಂದಿದ್ದಕ್ಕೆ ದಿಲ್ಶದ್​ ಮಾಲೀಕ, ‘ನಿಂಗೆ ತಲೆ ಕೆಟ್ಟಿದೆ’ ಎಂದರಂತೆ. ಇಬ್ಬರ ಮನೆಯವರೂ ಇವರ ಸಾಹಸಕ್ಕೆ ಬೆಂಬಲ ನೀಡಿಲ್ಲ ಇದುವರಗೆ ಜೋಡಿಸಿಟ್ಟುಕೊಂಡಿದ್ದ ಅಲ್ಪಸ್ವಲ್ಪ ಹಣ ತೆಗೆದುಕೊಂಡು ಎಲ್ಲರ ವಿರೋಧದ ನಡುವೆ ಮಾರ್ಚ್ 19, 2021ರ ಬೆಳಗಿನ 4 ಗಂಟೆಗೆ ಹೆಗಲಿಗೊಂದು ಬ್ಯಾಗ್ ಹಾಕಿಕೊಂಡು ಹೊರಟೇ ಬಿಟ್ರು. ಮೊದಲ 13 ದಿನಗಳಲ್ಲಿ 500 ಕಿಲೋಮೀಟರ್ ನಡೆದು ಸಣ್ಣದೊಂದು ಖುಷಿ ಸೆಲಬ್ರೇಟ್ ಮಾಡಿದ್ರು. ಸದ್ಯ ಕರ್ನಾಟಕದ ಕಾರವಾರದ ಮೂಲಕ ಗೋವಾ ಕಡೆ ನಡೆಯುತ್ತಿದ್ದಾರೆ.

"ಬೆಳಗ್ಗೆ 4 ಗಂಟೆಗೆಲ್ಲಾ ನಡೆಯೋಕೆ ಶುರು ಮಾಡುತ್ತೇವೆ. ನಡುನಡುವೆ ಊಟ ತಿಂಡಿಗೆ ಎಂದು ಹೋಟೆಲ್ ಬಳಿ ನಿಲ್ಲಿಸುತ್ತೇವೆ. ರಾತ್ರಿ 9 ಗಂಟೆಯವರೆಗೂ ನಡೆದು ನಂತರ ಸಿಕ್ಕ ಊರಲ್ಲಿ ಉಳಿಯುತ್ತೇವೆ. ಆರಂಭದಲ್ಲಿ ಕೆಲ ಕಡೆ ಓಡಿಕೊಂಡೇ ಬಂದಿದ್ದೇವೆ. ಬಿಸಿಲು ಸಿಕ್ಕಾಪಟ್ಟೆ ಇರೋದ್ರಿಂದ ಮಧ್ಯಾಹ್ನದ ವೇಳೆಗೆ ತಲೆ ಮೇಲೆ ಛತ್ರಿ ಇದ್ದರೂ ನಡಿಗೆಯ ವೇಗ ಕಡಿಮೆಯಾಗುತ್ತದೆ" ಎಂದರು ದಿಲ್ಶದ್. ದಿನಕ್ಕೆ 45 ರಿಂದ 50 ಕಿಲೋಮೀಟರ್ ಸರಾಗವಾಗಿ ನಡೆಯುತ್ತಾರಂತೆ ಇವರು. ಸುಮಾರು ಮೂರೂವರೆ ತಿಂಗಳಲ್ಲಿ ಲಡಾಕ್ ತಲುಪುವ ಗುರಿ ಇವರದ್ದು.

ತಮ್ಮ ಪ್ರಯಾಣದ ವಿವರಗಳನ್ನು ‘Race Track’ ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇವರ ಈ ಕಾಲ್ನಡಿಗೆಯ ಯಾತ್ರೆ ಕಡಿಮೆ ಸಾಹಸವೇನಲ್ಲ.
Published by:Soumya KN
First published: