news18-kannada Updated:January 20, 2021, 9:31 PM IST
ಪತ್ತೆಯಾದ 2 ಲಕ್ಷ ವರ್ಷಗಳ ಹಿಂದಿನ ಪ್ರಾಗೈತಿಹಾಸಿಕ ಕಾಲದ ಶಿಲಾಯುಧ ತಯಾರಿಕಾ ನೆಲೆ
ಬಾಗಲಕೋಟೆ (ಜ,20): ಐತಿಹಾಸಿಕ ಚಾಲುಕ್ಯರ ನಾಡು ಬಾದಾಮಿ, ಹಲವು ಶಿಲ್ಪಕಲೆ, ಶಿಲಾಶಾಸನ, ಕುರುಹುಗಳಿಗೆ ಸಾಕ್ಷಿಯಾಗಿದೆ. ಇದೀಗ ಭಾರತೀಯ ಪುರಾತತ್ವ ಇಲಾಖೆಯ ತಂಡವೊಂದು ಅಂದಾಜು 2 ಲಕ್ಷ ವರ್ಷಗಳ ಹಿಂದಿನ ಶಿಲಾ ಆಯುಧ ತಯಾರಿಕಾ ಜಾಗವನ್ನು ಪತ್ತೆ ಹಚ್ಚಿ ಸಂಶೋಧನೆ ನಡೆಸುತ್ತಿದ್ದಾರೆ. ರಸ್ತೆಗೆ ಹಾಕಿದ ಮರಂ ಕಲ್ಲಿನಿಂದ 2 ಲಕ್ಷ ವರ್ಷಗಳ ಹಿಂದಿನ ಪ್ರಾಗೈತಿಹಾಸಿಕ ಕಾಲದ ಶಿಲಾಯುಧ ತಯಾರಿಕಾ ಘಟಕ ಪತ್ತೆಯಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಾಗ್ಪುರದ ಅಧೀಕ್ಷಕ ರಮೇಶ್ ಮೂಲಿಮನಿ ಎಂಬುವರು ತಮಿನಾಳ ಗ್ರಾಮದ ರಸ್ತೆಗೆ ಹಾಕಿದ ಮರಂನಲ್ಲಿ ಮೊನಚಾದ ಕಲ್ಲನ್ನು ಕಂಡಿದ್ದಾರೆ. ಆಗ ಊರಿನವರನ್ನು ಕೇಳಿದಾಗ ಗುಡ್ಡದಿಂದ ತರಲಾಗಿತ್ತು ಎಂದು ಹೇಳಿದಾಗ, ಗುಡ್ಡದಲ್ಲಿ ರಮೇಶ್ ಮೂಲಿಮನಿ ನೇತೃತ್ವದ ಸದಸ್ಯರಾದ ಸಹಾಯಕ ಅಧಿಕಾರಿ ಡಾ. ಗಜಾನನ ಕತಾಡೆ,ಡಾ.ನರ್ಸಿಲಾಲ, ಡಾ. ದೇವೇಂದ್ರ ಸೇರಿದಂತೆ ಪುರಾತತ್ವ ಇಲಾಖೆಯ ನಾಲ್ವರ ತಂಡ ವಾರದಿಂದ ಸಂಶೋಧನೆಗೆ ಮುಂದಾಗಿ, ಪ್ರಾಗೈತಿಹಾಸಿಕ ಕಾಲದ ಮತ್ತೊಂದು ಅಂಶವನ್ನು ಬೆಳಕಿಗೆ ತಂದಿದ್ದಾರೆ.
ತಾಲೂಕಿನ ತಮಿನಾಳ, ಕಾತರಕಿ ಗ್ರಾಮಗಳ ರಂಗನಾಥ ಗುಡ್ಡದಲ್ಲಿ 2 ಲಕ್ಷ ವರ್ಷಗಳ ಹಿಂದಿನ ಶಿಲಾಯುಧಗಳು ಲಭ್ಯವಾಗಿದ್ದು, ಈ ಗುಡ್ಡಗಾಡು ಪ್ರದೇಶವನ್ನು ಸಂರಕ್ಷಣೆಗೊಳಪಡಿಸಬೇಕು. ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಯಬೇಕು ಎಂದು ಬಾಗಲಕೋಟೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗುತ್ತದೆ. ದೆಹಲಿಗೆ ವರದಿ ಸಲ್ಲಿಸಲಾಗುವುದು ಎಂದು ನಾಗ್ಪುರದ ಪುರಾತತ್ವ ಇಲಾಖೆ ಅಧೀಕ್ಷಕ ರಮೇಶ್ ಮೂಲಿಮನಿ ತಿಳಿಸಿದ್ದಾರೆ. ಜೊತೆಗೆ ಈ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಅರಣ್ಯ ಇಲಾಖೆ, ಬಾದಾಮಿ ತಹಶೀಲ್ದಾರ್ ಪತ್ರದ ಮೂಲಕ ಸ್ಥಳ ಸಂರಕ್ಷಣೆ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವಂತೆ ಸೂಚಿಸಲಾಗುತ್ತದೆ.
ಇನ್ನು ಚೊಳಚಗುಡ್ಡ ಗ್ರಾಮದ ಗುಡ್ಡದಿಂದ ಲಖಮಾಪೂರವರೆಗಿನ ಅಂದಾಜು 10 ಕಿಮೀ ಉದ್ದ ಗುಡ್ಡಗಾಡು ಪ್ರದೇಶದ ಮಧ್ಯದಲ್ಲಿ ತಮಿನಾಳ ಮತ್ತು ಕಾತರಕಿ ಗುಡ್ಡಗಾಡು ಪ್ರದೇಶದಲ್ಲಿ ಶಿಲಾಯುಧಗಳು ಲಭ್ಯವಾಗುತ್ತಿವೆ. ಇವುಗಳಲ್ಲಿ ವಿವಿಧ ಮಾದರಿಯ ಕೈಗೊಡಲಿ, ಬ್ಯೂರಿನ್, ಕೀಮ್, ಚಾಪರ್, ಸ್ಕೀಪರ್ ಆಯುಧಗಳಿವೆ. ಇವು ಸುಮಾರು 2 ಲಕ್ಷ ವರ್ಷಗಳ ಹಿಂದಿನ ಆದಿ ಹಳೆಯ ಶಿಲಾಯುಗಕ್ಕೆ ಸೇರಿದ್ದು, ಈ ಸ್ಥಳದಲ್ಲಿ ಅಧಿಕ ಸಂಖ್ಯೆ ಆಯುಧಗಳು ಮತ್ತು ಆಯುಧ ತಯಾರಿಸುವ ಸಂದರ್ಭದಲ್ಲಿ ಹಲವಾರು ಉಂಟಾದ ಘಟನಾವಳಿ ಅವಲೋಕಿಸಬಹುದಾಗಿದೆ. ಈ ಪ್ರದೇಶ ಆದಿಮಾನವರು ಆಯುಧ ತಯಾರಿಕಾ ನೆಲೆ(ಉದ್ಯಮ ನೆಲೆ)ಯಾಗಿತ್ತು ಎಂದು ಹೇಳಬಹುದಾಗಿದೆ.
ಖಾತೆ ಹಂಚಿಕೆ ಅಂತಿಮ, ನಾಳೆ ಬೆಳಗ್ಗೆ 8 ಗಂಟೆಯೊಳಗೆ ಪಟ್ಟಿ ಪ್ರಕಟಿಸುತ್ತೇನೆ ಎಂದ ಸಿಎಂ ಯಡಿಯೂರಪ್ಪ
ಬಾದಾಮಿ ಪರಸರದಲ್ಲಿ 1888ರಲ್ಲಿ ಮಲಪ್ರಭಾ ನದಿ ಪ್ರದೇಶ ಖ್ಯಾಡ ಹಾಗೂ ಢಾಣಕಶಿರೂರನಲ್ಲಿ ಭಾರತೀಯ ಪ್ರಾಗೈತಿಹಾಸ ಪಿತಾಮಹ ಬ್ರಿಟಿಷ್ ಭೂವಿಜ್ಞಾನಿ ರಾಬರ್ಟ ಬ್ರೂಸಪ್ ಎರಡು ಲಕ್ಷ ವರ್ಷಗಳಷ್ಟು ಹಿಂದಿನ ಶಿಲಾಯುಧಗಳನ್ನು ಪತ್ತೆ ಹಚ್ಚಿ ವರದಿ ಮಾಡುವುದರ ಜತೆಗೆ ಅವಿಭಜಿತ ವಿಜಯಪುರ ಜಿಲ್ಲೆ ಇತಿಹಾಸ ಪೂರ್ವಕಾಲದ ಮೇಲೆ ಬೆಳಕು ಚೆಲ್ಲಿದ್ದರು. ಈ ಪ್ರದೇಶದಲ್ಲಿ ಲಂಡನ್ ವಿವಿ ಎಫ್.ಇ.ಝಯಿನರ್(1949) ಪುಣೆಯ ಡೆಕ್ಕನ ಕಾಲೇಜಿನ ಪುರಾತತ್ವ ವಿದ್ವಾಂಶ ಎಚ್.ಡಿ.ಸಂಕಾಲಿಯಾ, ಆರ್.ವಿ.ಜೋಶಿ, ಅ ಸುಂದರ, ಎಸ್.ಬಿ.ದೇವ, ಪದ್ದಯ್ಯ, ರಾಜಗುರು, ರವಿ ಕೋರಿಶೆಟ್ಟರ ಮುಂತಾದವರು ಪ್ರಾಗೈತಿಹಾಸದ ಮೇಲೆ ಬೆಳಕು ಚೆಲ್ಲಲು ಯತ್ನಿಸಿದವರಾಗಿದ್ದಾರೆ.
ಖ್ಯಾಡ ಪರಿಸರ ಆದಿ ಶಿಲಾಯುಗದ ಮಹತ್ವದ ನೆಲೆಯಾಗಿದೆ. ಇಲ್ಲಿ ಹಲವಾರು ಶಿಲಾಯುಧಗಳು ಹೇರಳವಾಗಿವೆ. ಇದರಿಂದ ಆ ನೆಲೆಯ ಸಮೀಪದಲ್ಲಿ ಶಿಲಾಯೋಧೋಪಕರಣ (ಕಾರ್ಖಾನೆ) ಘಟಕ ಇದ್ದಿರಬೇಕು ಎಂದು ತರ್ಕಿಸಲಾಗಿದೆ. ಈ ಶೋಧಿತ 1ಕಿಲೋ ಮೀಟರ್ ಸ್ಥಳವೆ ಕಾತರಕಿ, ತಮಿನಾಳ ಮಧ್ಯದ ರಂಗನಾಥ ಬೆಟ್ಟದ ಪ್ರದೇಶವಾಗಿದೆ. ಚಾಲುಕ್ಯರ ಕಾಲಕ್ಕೂ ಮೊದಲಿನ ಈ ಶಿಲಾಯುಧಗಳು ಮುಂದಿನ ಪೀಳಿಗೆಗೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನು ಗುಡ್ಡದ ಕಲ್ಲುಗಳು ಹೊರಹೋಗದಂತೆ ಜವಾಬ್ದಾರಿ ತೋರಬೇಕಿದೆ.
ಇನ್ನು ಬಾದಾಮಿಯಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ದಾರಿ ಮಧ್ಯೆಯಿರುವ ಕೋಣಮ್ಮದೇವಿ ದೇಗುಲದ ಎದುರಿಗಿನ ರಸ್ತೆಯಿಂದ 3 ಕಿಲೋ ಮೀಟರ್ ಕ್ರಮಿಸಿದರೆ ಸಿಡಿಲು ಪಡಿ ಎಂಬ ಜಾಗವಿದ್ದು,ಇಲ್ಲಿ ಆದಿಮಾನವರು ವಾಸಮಾಡಿದ್ದರು ಎಂಬುವದಕ್ಕೆ ರೇಖಾ ಚಿತ್ರ, ಶಿಲಾಶಾಸನಗಳು ಕಾಣಬಹುದಾಗಿದೆ. ಇದೀಗ ತಮಿನಾಳ ಗ್ರಾಮದ ರಂಗನಾಥ್ ಗುಡ್ಡದಲ್ಲಿ ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಿಸಿದಕ್ಕೆ ಆದಿಮಾನವರು ನೆಲೆಸಿದ್ದು, ಆಯುಧ ತಯಾರಿಕಾ ಜಾಗವೊಂದು ಪತ್ತೆಯಾಗಿದ್ದರಿಂದ ಮತ್ತಷ್ಟು ಇತಿಹಾಸ ಸಂಶೋಧಕರಿಗೆ ಅನುಕೂಲವಾಗಿದೆ. ಸರ್ಕಾರ, ಜಿಲ್ಲಾಡಳಿತ ಐತಿಹಾಸಿಕ ತಾಣ ಅಭಿವೃದ್ಧಿ, ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕಿದೆ.
Published by:
Latha CG
First published:
January 20, 2021, 9:31 PM IST