ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ (Mangaluru) ಗಾಂಜಾ ಮಾಫಿಯಾ ಸಕ್ರಿಯವಾಗಿದೆ (Drugs Mafia) ಅನ್ನೋದು ಕಳೆದ ವಾರ ಮತ್ತೊಮ್ಮೆ ಸಾಬೀತಾಗಿತ್ತು. ಗಾಂಜಾ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಬೇಕಾಗಿದ್ದ ವೈದ್ಯರೇ (doctors) ಗಾಂಜಾ ಸೇವನೆ ಮಾಡ್ತಿದ್ದಾರೆ ಅನ್ನೋದು ತಿಳಿಯುತ್ತಿದ್ದಂತೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿತ್ತು. ಕಳೆದ ವಾರ ಗಾಂಜಾ ದಂಧೆ (Marijuana Mafia) ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು, ಮೆಡಿಕಲ್ ವಿದ್ಯಾರ್ಥಿನಿಯರು (Medical Students) ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆ ಗೇಟ್ಪಾಸ್ ನೀಡಿದೆ.
ಇದನ್ನೂ ಓದಿ: Mangaluru: ಕರಾವಳಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಗಾಂಜಾ ಘಾಟು; ಮೆಡಿಕಲ್ ವಿದ್ಯಾರ್ಥಿಗಳು, ವೈದ್ಯರುಗಳೇ ಪೆಡ್ಲರ್ಗಳು
ಮಂಗಳೂರಿನ ಪ್ರಸಿದ್ಧ ಖಾಸಗಿ ಆಸ್ಪತ್ರೆ ಕೆಎಂಸಿ ಆಡಳಿತ ಮಂಡಳಿ ಗಾಂಜಾ ಪ್ರಕರಣದಲ್ಲಿ ತಗ್ಲಾಕ್ಕೊಂಡ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದು, ದಂಧೆಯಲ್ಲಿ ಸಿಕ್ಕಿಬಿದ್ದ ಇಬ್ಬರು ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಗೇಟ್ಪಾಸ್ ನೀಡಲಾಗಿದೆ. ಆ ಇಬ್ಬರು ವೈದ್ಯರನ್ನು ಹುದ್ದೆಯಿಂದ ವಜಾ ಮಾಡಿ, ಉಳಿದ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಿ ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ವಜಾಗೊಂಡವರು ಯಾರ್ಯಾರು?
ಕೆಎಂಸಿ ಆಸ್ಪತ್ರೆ ಅತ್ತಾವರದ ಮೆಡಿಕಲ್ ಆಫೀಸರ್ ಡಾ. ಸಮೀರ್ ಮತ್ತು ಕೆಎಂಸಿ ಮಣಿಪಾಲದ ಮೆಡಿಕಲ್ ಸರ್ಜನ್ ಡಾ. ಮಣಿಮಾರನ್ ಮುತ್ತು ವಜಾಗೊಂಡ ವೈದ್ಯರಾಗಿದ್ದು, ಉಳಿದಂತೆ ಡಾ. ಕಿಶೋರಿ ಲಾಲ್, ಡಾ. ನದೀಯಾ ಸಿರಾಜ್, ಡಾ.ವರ್ಷಿಣಿ, ಡಾ.ರಿಯ, ಡಾ.ಇರಾ ಬಾಸಿನ, ಡಾ.ಕ್ಷಿತಿಜ್, ಡಾ.ಹರ್ಷ ಕುಮಾರ್ ಅವರು ಅಮಾನತು ಆದ ವೈದ್ಯಕೀಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಕಮಿಷನರ್ಗೆ ಮಾಹಿತಿ ನೀಡಿದ ಕೆಎಂಸಿ ಆಡಳಿತ ಮಂಡಳಿ
ಇನ್ನು ಮಂಗಳೂರಿನ ವೈದ್ಯರ ಗಾಂಜಾ ಪುರಾಣ ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಪ್ರಕರಣದ ಗಂಭೀರತೆ ಅರಿತ ಕೆಎಂಸಿ ಆಸ್ಪತ್ರೆ ಮಂಡಳಿ ದಂಧೆಯಲ್ಲಿ ತೊಡಗಿದ್ದ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಅದರನ್ವಯ ಆರೋಪಿಗಳಾದ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದೆ. ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ ಆಗಮಿಸಿದ ಕೆ.ಎಂ.ಸಿ ಡೀನ್ ಉನ್ನಿಕೃಷ್ಣನ್, ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ಶಿಸ್ತು ಕ್ರಮದ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: New Year Celebration: ಗಾಂಜಾ ವ್ಯಸನಿಗಳಿಗೆ ಲಾಠಿ ರುಚಿ, ಯುವತಿಯ ಜಡೆ ಎಳೆದ ಪುಂಡ
ಕಳೆದ ಜನವರಿ 7ರಂದು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಅಪಾರ್ಟ್ಮೆಂಟ್ಗೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು. ಈ ಪ್ರಕರಣದ ಜಾಡು ಹಿಡಿದ ಪೊಲೀಸರು ಈ ವರೆಗೆ ಒಟ್ಟು 15 ಮಂದಿಯನ್ನು ಬಂಧಿಸಿದ್ದರು. ವಿಪರ್ಯಾಸವೆಂದರೆ ಬಂಧಿತರಲ್ಲಿ ಬಹುತೇಕರು ವಿದ್ಯಾವಂತರಾಗಿದ್ದು, ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳೇ ಸೇರಿದ್ದರು. ನಗರದ ವಿವಿಧ ಕಾಲೇಜುಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಅಭ್ಯಾಸ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ವೈದ್ಯ!
ಆರೋಪಿಗಳ ಪೈಕಿ ಒಬ್ಬ ವೈದ್ಯ ಕಾರ್ಯಕ್ರಮಗಳಿಗೆ ಬರುವ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸ್ನೇಹಿತರಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಎಂಬುವುದು ತನಿಖೆಯ ಮೂಲಕ ತಿಳಿದುಬಂದಿದ್ದು, ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ಮತ್ತಷ್ಟು ಆರೋಪಿಗಳು ಇರುವ ಬಗ್ಗೆ ನೋಟಿಸ್ ನೀಡಲು ಹೋದಾಗ ಅವರೆಲ್ಲ ಅಲ್ಲಿಂದ ಎಸ್ಕೇಪ್ ಆಗಿದ್ದರು ಎಂದು ಕಳೆದ ವಾರ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ