ಇತ್ತೀಚೆಗೆ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮೆಟ್ರೋ ರೈಲುಗಳ ಕೆಲಸಗಳಿಗಾಗಿ, ನಿಲ್ದಾಣಗಳಲ್ಲಿ ಹಾಗೂ ಇನ್ನಿತರೆ ಕಾರ್ಯವೈಖರಿಗಳುಗಾಗಿ ಅಗತ್ಯವಿರುವ ವಿದ್ಯುತ್ ಬಳಕೆಯ ವಿಷಯದಲ್ಲಿ ಬೆಸ್ಕಾಂ (Bescom) ಮತ್ತು ಕೆಪಿಟಿಸಿಎಲ್ (KPTCL) ನೊಂದಿಗೆ ಕೆಲವೊಂದು ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಒಪ್ಪಂದದಂತೆ ಬೆಂಗಳೂರಿನ ಮೆಟ್ರೋನ (Namma Metro) 4 ಸ್ಟೇಷನ್ಗಳು ವಾರಷಿಕವಾಗಿ 31 ಸಾವಿರ ಕಿಲೋ ವ್ಯಾಟ್ ವಿದ್ಯುತ್ ಅನ್ನು ಮಾತ್ರ ಬಳಸಲು ಅನುಮತಿ ಇತ್ತು. ಆದರೆ ಈ ನಿಯಮವನ್ನು ಬೆಂಗಳೂರು ಮೆಟ್ರೋ ರೈಲು ನಿಗಮವು ಉಲ್ಲಂಘಿಸಿದೆ. ಇದೇ ಕಾರಣಕ್ಕೆ ವಿದ್ಯುತ್ ಸರಬರಾಜು ಕಂಪೆನಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಕಳೆದ ಎರಡು ವರ್ಷಗಳಿಂದ ದಂಡ ವಿಧಿಸುತ್ತಲೇ ಇದೆ.
ಬೆಂಗಳೂರು ನಗರದ ವಿದ್ಯುತ್ ಬಳಕೆದಾರರ ಅನುಕೂಲದ ಅನುಸಾರವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ವಿದ್ಯುತ್ ಸರಬರಾಜು ಕಂಪೆನಿಯ ಜೊತೆಗೆ ವಿದ್ಯುತ್ ಬಳಕೆಯ ಬಗ್ಗೆ ಕೆಲವೊಂದು ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಈ ಒಪ್ಪಂದ ಮೇರೆಗೆ ನಿಯಮವನ್ನು ಉಲ್ಲಂಘಿಸಿದ್ದರಿಂದ ಎರಡು ವರ್ಷಗಳಲ್ಲಿ ಈ ನಮ್ಮ ಮೆಟ್ರೋಗೆ ವಿದ್ಯುತ್ ಸರಬರಾಜು ಕಂಪೆನಿಯು 2.09 ಕೋಟಿ ದಂಡವನ್ನು ವಿಧಿಸಿದೆ.
ತಿಂಗಳಿಗೆ 205 ಲಕ್ಷ ಯೂನಿಟ್ ವಿದ್ಯುತ್ ಬಳಕೆ
ಕೇವಲ 56 ಕಿಲೋ ಮೀಟರ್ಗಳ ಮೆಟ್ರೋ ರೈಲುಗಳ ಕಾರ್ಯಾಚರಣೆಗೆ ತಿಂಗಳಿಗೆ 65 ಲಕ್ಷ ಯೂನಿಟ್ ವಿದ್ಯುತ್ ವೆಚ್ಚವಾಗುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ಪ್ರತೀ ತಿಂಗಳು 40 ಲಕ್ಷ ಯೂನಿಟ್ ವಿದ್ಯುತ್ ಅನ್ನು ಮೆಟ್ರೋ ಸ್ಟೇಷನ್ಗಳಿಗೆ ಮತ್ತು ಡಿಪೋಗಳ ಕಾರ್ಯವೈಖರಿಗೆ ಬಳಸಲಾಗುತ್ತಿದೆ. ಈ ಮೂಲಕ ಪ್ರತೀ ಕಿಲೋ ಮೀಟರ್ಗೆ 22 ಯೂನಿಟ್ ವಿದ್ಯುತ್ ಬೇಕಾಗುತ್ತದೆ. ಈ ಎಲ್ಲಾ ಲೆಕ್ಕಾಚಾರದ ಮೂಲಕ ಒಂದು ತಿಂಗಳಿಗೆ ಮೆಟ್ರೋ ರೈಲುಗಳು, ನಿಲ್ದಾಣಗಳೆಲ್ಲಾ ಕಾರ್ಯನಿರ್ವಹಿಸಬೇಕಾದರೆ 205 ಲಕ್ಷ ಯೂನಿಟ್ ವಿದ್ಯುತ್ ಬೇಕಾಗುತ್ತದೆ ಎಂದು ಬಿಎಂಆರ್ಸಿಎಲ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ವರ್ಷದಲ್ಲಿ 2.09 ಕೋಟಿ ದಂಡ
ಮೆಟ್ರೋ ಬೆಸ್ಕಾಂ ಮತ್ತು ಕೆಪಿಟಿಸಿಎಲ್ನೊಂದಿಗೆ ಮಾಡಿಕೊಂಡಿದ್ದಂತಹ ಒಪ್ಪಂದದ ಅನ್ವಯ ವಾರ್ಷಿಕವಾಗಿ ನಾಲ್ಕು ಸ್ಟೇಷನ್ಗಳಿಂದ ಕೇವಲ 31 ಸಾವಿರ ಕಿಲೋ ವ್ಯಾಟ್ ವಿದ್ಯುತ್ ಅನ್ನು ಬಳಸಬೇಕಿತ್ತು. ಆದರೆ ಈ ಒಪ್ಪಂದವನ್ನು ಉಲ್ಲಂಘಿಸಿ ಬಿಎಂಆರ್ಸಿಎಲ್ ಇದಕ್ಕಿಂತ ಹೆಚ್ಚು ವಿದ್ಯುತ್ ಅನ್ನು ಬಳಸಿದೆ. ಹೀಗಾಗಿ ಬೆಸ್ಕಾಂ ಬಿಎಂಆರ್ಸಿಎಲ್ಗೆ 2021ರಲ್ಲಿ 1.80 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಅದೇ ರೀತಿ 2022 ರಲ್ಲಿ ಮೈಸೂರು ರಸ್ತೆಯ ಉಪವಿಭಾಗದೊಂದಿಗೆ ವಿದ್ಯುತ್ ಬಳಕೆಯ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು. ಇಲ್ಲಿ ಸಹ ಉಲ್ಲಘಿಸಿದ್ದರಿಂದ ಕೇವಲ 8 ತಿಂಗಳ ಅವಧಿಯಲ್ಲೇ 29.82 ಲಕ್ಷ ರೂಪಾಯಿ ದಂಡವನ್ನು ಪಾವತಿ ಮಾಡಿದೆ.
ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳ ಅಭಿಪ್ರಾಯ
ಒಪ್ಪಂದಗಳ ಷರತ್ತು ಉಲ್ಲಂಘಿಸಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವಿದ್ಯುತ್ ಬಳಸಿದರೆ, ಬೆಸ್ಕಾಂನ ವಿತರಣಾ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟಿನಲ್ಲಿ ಪರಿಣಾಮ ಬೀರುತ್ತದೆ. ಇದರಿಂದ ಗ್ರಾಹಕರಿಗೂ ಬಹಳಷ್ಟು ವಿದ್ಯುತ್ನ ತೊಂದರೆಯುಂಟಾಗಬಹುದು. ಅಧಿಕ ವಿದ್ಯುತ್ನ ಅಗತ್ಯವಿದ್ದರೆ, ಬಿಎಂಆರ್ಸಿಎಲ್ ಒಪ್ಪಂದದಲ್ಲಿ ಬದಲಾವಣೆಯನ್ನು ಸಹ ಮಾಡುವ ಅವಕಾಶವಿದೆ ಅಥವಾ ಹೆಚ್ಚಿನ ಬೇಡಿಕೆಯನ್ನೂ ಸಲ್ಲಿಸಬಹುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.
![]()
ಸಾಂದರ್ಭಿಕ ಚಿತ್ರ
171 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಿದ ಮೆಟ್ರೋ
ನಮ್ಮ ಮೆಟ್ರೋ ಸಂಚಾರದ, ನಿಲ್ದಾಣದ ಕಾರ್ಯವೈಖರಿ ಮತ್ತು ಡಿಪೋದ ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ 2019 ರಿಂದ 2021 ರವರೆಗೆ ಬರೋಬ್ಬರಿ 171 ಕೋಟಿ ರೂಪಾಯಿ ವಿದ್ಯುತ್ ಬಿಲ್ ಅನ್ನು ಪಾವತಿಸಿದೆ ಎಂಬು ಬಿಎಂಆರ್ಸಿಎಲ್ ತಿಳಿಸಿದೆ.
ಸೌರ ವಿದ್ಯುತ್ ಉತ್ಪಾದನೆ ಯೋಜನೆ
ಪ್ರಸ್ತುತ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ಕನಕಪುರ ರಸ್ತೆ ಮೆಟ್ರೋ ಕಾರಿಡಾರ್ನಲ್ಲಿರುವ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಈ ಮೂಲಕ ಸೌರಶಕ್ತಿಯ ಮೂಲಕ ವಿದ್ಯುತ್ ಅನ್ನು ಬಳಕೆ ಮಾಡುವಂತೆ ಯೋಜನೆಯನ್ನು ರೂಪಿಸುತ್ತಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಸೌರ ವಿದ್ಯುತ್ನ ಬಳಕೆ
ಮೆಟ್ರೋ ಹಂತ-1ರ ನಿಲ್ದಾಣಗಳಲ್ಲಿ ಸೌರ ಶಕ್ತಿ ಉತ್ಪಾದಿಸಲು ಸಾಧ್ಯವಾಗಿಲ್ಲ. ಮೆಟ್ರೋ ನಿಲ್ದಾಣಗಳಲ್ಲಿನ ವಿದ್ಯುತ್ ದೀಪಗಳು, ಎಕ್ಸಲೇಟರ್ಗಳು ಮತ್ತು ಎಸಿಗೆ ಸೌರಶಕ್ತಿಯಿಂದ ಉತ್ಪಾದಿಸಲಾದ ವಿದ್ಯುತ್ ಪೂರೈಕೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ.
ಇದನ್ನೂ ಓದಿ: ಲುಡೋ ಗೇಮ್ ಆಡುವಾಗ ಲವ್; ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿ ಅರೆಸ್ಟ್
ಸೌರ ವಿದ್ಯುತ್ನಿಂದ 11 ಲಕ್ಷ ರೂಪಾಯಿ ಉಳಿತಾಯ
ಮೆಟ್ರೋ ತನ್ನ ರೈಲುಗಳ ಕಾರ್ಯಾಚರಣೆಗಾಗಿ ತಿಂಗಳಿಗೆ 4.22 ಕೋಟಿ ರೂಪಾಯಿ ಹಾಗೂ ಮೆಟ್ರೋ ನಿಲ್ದಾಣ ಮತ್ತು ಡಿಪೋಗಳ ವಿದ್ಯುತ್ ಶುಲ್ಕ 2.66 ಕೋಟಿ ರೂಪಾಯಿ ವಿದ್ಯುತ್ ಬಿಲ್ ಅನ್ನು ಪಾವತಿಸುತ್ತದೆ. ಆದರೆ ಇದೀಗ ಸೌರ ಫಲಕಗಳ ಸಹಾಯದಿಂದ ತಿಂಗಳಿಗೆ 1.5 ಲಕ್ಷ ಯೂನಿಟ್ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತಿದೆ. ಈ ಮೂಲಕ ಮಾಸಿಕವಾಗಿ 11 ಲಕ್ಷ ರೂಪಾಯಿ ಉಳಿತಾಯವಾಗುತ್ತಿದೆ ಎಂದು ತಂತ್ರಜ್ಞರು ಹೇಳಿದ್ದಾರೆ.