ಬೆಂಗಳೂರು: ನಾಯಕತ್ವ ಬದಲಾವಣೆ ಕೂಗು ಮುಕ್ತಾಯವಾದ ಬಳಿಕ ಇಂದು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಅವರು, ಕೃಷಿ ಇಲಾಖೆಯಿಂದ ಬಿಎಸ್ಸಿ ಅಗ್ರಿ ಕೋರ್ಸ್ಗೆ ಶೇ. 40 ರಿಂದ ಶೇ. 50ಕ್ಕೆ ರೈತರ ಮಕ್ಕಳಿಗೆ ಮಿಸಲಾತಿ ಹೆಚ್ಚಳ ಮಾಡಲಾಗಿದೆ. ರಾಣಿ ಚೆನ್ನಮ್ಮ ವಿವಿ ಕಟ್ಟಡಕ್ಕೆ 110ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಬೀದರ್ ಮೆಡಿಕಲ್ ಕಾಲೇಜಿಗೆ 10.25 ಕೋಟಿ, ಮೈಸೂರು ಮೆಡಿಕಲ್ ಕಾಲೇಜಿಗೆ 154 ಕೋಟಿ ರೂ. ನರ್ಸಿಂಗ್ ಎಜುಕೇಶನ್ ಬೋರ್ಡ್ಗೆ ಕಟ್ಟಡಕ್ಕೆ 75 ಕೋಟಿ, 100 ಪೊಲೀಸ್ ಠಾಣೆ ಕಟ್ಟಡಕ್ಕೆ 200 ಕೋಟಿ ರೂ. ಹಾಸನ ಏರ್ಪೋರ್ಟ್ ನಿರ್ಮಾಣಕ್ಕೆ ಒಟ್ಟು 193.65 ಕೋಟಿ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಇದನ್ನು ಓದಿ: 2ನೇ ಬಾರಿಗೆ ಪ್ರಶಾಂತ್ ಕಿಶೋರ್ ಜೊತೆಗೆ ಸಭೆ; ಮಿಷನ್ 2024ಗೆ ಶರದ್ ಪವಾರ್ ಈಗಿನಿಂದಲೇ ಸಿದ್ದತೆ
ಅರಸೀಕೆರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 307ಕೋಟಿ ರೂ., ಟೌನ್ ಪ್ಲಾನಿಂಗ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಟಿಡಿಆರ್ ನೀಡಲು ಎರಡು ಸರ್ವೆ ಬದಲು ಒಂದೇ ಸಲ ಸರ್ವೆ ಮಾಡಲು ತೀರ್ಮಾನ ಮಾಡಲಾಗಿದೆ. 90 ದಿನದೊಳಗೆ ಟಿಡಿಆರ್ ನೀಡಬೇಕು. ಇಲ್ಲವಾದರೆ ಡೀಮ್ಡ್ ಟಿಡಿಆರ್ ಎಂದರ್ಥವಾಗುತ್ತದೆ ಎಂದರು. ಹೊನ್ನಾಳಿ ತಾಲೂಕಿನ ಗೋವಿನಕೋಯಿ, ಹನುಮಸಾಗರ ಏತನೀರಾವರಿಗೆ 415 ಕೋಟಿ 94 ಕೆರೆ ತುಂಬಿಸುವ ಯೋಜನೆ ಹಾಗೂ ಹೊನ್ನಾಳಿಯ ಸಾಸಿವೆಹಳ್ಳಿ ಏತನೀರಾವರಿಗೆ ಹೆಚ್ಚುವರಿ 167 ಕೋಟಿ ಅನುಮೋದನೆ ನೀಡಲಾಗಿದೆ ಎಂದರು. ಇದರೊಂದಿಗೆ ನಾಯಕತ್ವ ಬದಲಾವಣೆ ಸಮಯದಲ್ಲಿ ಸಿಎಂ ಪರವಾಗಿ ನಿಂತ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಯಡಿಯೂರಪ್ಪ ಅವರು ಬಂಪರ್ ಗಿಫ್ಟ್ ನೀಡಿದ್ದಾರೆ. ಮಾಜಿ ಸಚಿವ ರೇಣುಕಾಚಾರ್ಯ ಹಲವು ಶಾಸಕರನ್ನ ಒಟ್ಟುಗೂಡಿಸಿ ಸಿಎಂ ಮುಂದುವರಿಕೆಗೆ ಅರುಣ್ ಸಿಂಗ್ ಬಳಿ ಒತ್ತಾಯ ಮಾಡಿದ್ದರು. ಅಲ್ಲದೆ, ರಾಜ್ಯ ಬಿಜೆಪಿ ಯಡಿಯೂರಪ್ಪ ನಾಯಕತ್ವವನ್ನು ಬಲವಾಗಿ ನಂಬಿಕೊಂಡಿದೆ ಎಂದು ಮನದಟ್ಟು ಮಾಡಿದ್ದರು. ಇದೇ ಕಾರಣಕ್ಕೆ ಅರುಣ್ ಸಿಂಗ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸಲು ಒಲವು ತೋರಿಸಿದ್ದರು ಎನ್ನಲಾಗುತ್ತಿದೆ. ಹೀಗಾಗಿ ರೇಣುಕಾಚಾರ್ಯ ಅವರ ಕ್ಷೇತ್ರದ ಹಲವು ವರ್ಷಗಳ ಬೇಡಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಹೊನ್ನಾಳಿ ಕ್ಷೇತ್ರ ಸಾವಿರಾರು ಏಕರೆ ಭೂ ಪ್ರದೇಶಗಳಿಗೆ ಕೃಷಿ ಮತ್ತು ಕುಡಿಯುವ ನೀರು ಪೂರೈಕೆಯಾಗಲಿದೆ. ಅಲ್ಲದೆ, ಈ ಯೋಜನೆಗಳು ಹೊನ್ನಾಳಿಯ ಜನರ ದಶಕದ ಕನಸಾಗಿದೆ. ಇದಲ್ಲದೆ, ಇನ್ನೂ ಅನೇಕ ಯೋಜನೆಗಳಿಗೆ ಸಿಎಂ ಒಪ್ಪಿಗೆ ನೀಡಿದ್ದಾರೆ.
ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿ ಮೂಡಿದ್ದ ಎಲ್ಲಾ ಗೊಂದಲಗಳೂ ಕೊನೆಗೂ ಅಂತ್ಯವಾಗಿದೆ. 3 ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದ ಉಸ್ತುವಾರಿ ಅರುಣ್ ಸಿಂಗ್ ಈಗಾಗಲೇ ಹೈಕಮಾಂಡ್ಗೆ ತನ್ನ ವರದಿ ನೀಡಿದ್ದು, ಸಿಎಂ ಯಡಿಯೂರಪ್ಪ ಕಾರ್ಯವೈಖರಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಅಲ್ಲದೆ, ಸಿಎಂ ಬದಲಿಸುವ ಅಗತ್ಯತೆ ಇಲ್ಲ ಎಂದೂ ತಿಳಿಸಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರ ಸ್ಥಾನ ಮುಂದಿನ 2 ವರ್ಷಗಳಿಗೆ ಭದ್ರವಾಗಿರಲಿದೆ ಎಂದೇ ಹೇಳಲಾಗುತ್ತಿದೆ. ಹೀಗಾಗಿ ನಾಯಕತ್ವದ ವಿಚಾರದಲ್ಲಿ ತನ್ನನ್ನು ಬೆಂಬಲಿಸಿದ ಶಾಸಕರು ಮತ್ತು ಸಚಿವರುಗಳ ಕ್ಷೇತ್ರಗಳಿಗೆ ಯಡಿಯೂರಪ್ಪ ಬರಪೂರ ಕೊಡುಗೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ