ವಿಜಯನಗರ: ಜೈನ ಸಮುದಾಯದಕ್ಕೆ ಸೇರಿದ 19 ವರ್ಷದ ಯುವತಿ ಚಿಕ್ಕ ವಯಸ್ಸಿಗೆ ಆಧ್ಯಾತ್ಮದತ್ತ ಒಲವು ತೋರಿ ಇಂದು ಜೈನ ಧರ್ಮದ (Jain community) ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಹೊಸಪೇಟೆಯ (Hospet) ಉದ್ಯಮಿಯೊಬ್ಬರ ಮಗಳಾದ 19 ವರ್ಷದ ಯುವತಿ ಮುಮುಕ್ಷು ವಿಧಿ ಕುಮಾರಿ (Mumukshu vidhi kumari) ಸನ್ಯಾಸತ್ವ ಸ್ವೀಕರಿಸಿದ್ದಾರೆ. ಹೊಸಪೇಟೆಯ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆಯಲಿದ್ದು, ಆದಿನಾಥ ಜೈನ ಶ್ವೇತಾಂಬರ ಮುನಿ ಆಚಾರ್ಯ ಭಗವಂತ ನರರತ್ನ ಸೂರಿಶ್ವರಜೀ ಮಹಾರಾಜ ಅವರ ಸಾನ್ನಿಧ್ಯದಲ್ಲಿ ವಿಧಿ ಕುಮಾರಿ ಸನ್ಯಾಸತ್ವ ಸ್ವೀಕಾರ ಮಾಡಿದರು. ಇಂದು ದೀಕ್ಷೆ ಅಂಗವಾಗಿ ನಗರದಲ್ಲಿ ಅದ್ದೂರಿ ಶೋಭಾಯಾತ್ರೆಯನ್ನು ನಡೆಸಲಾಯಿತು.
ಹೊಸಪೇಟೆಯ ಉದ್ಯಮಿ ದಿವಂಗತ ಕಾಂತಿಲಾಲ್ ಮತ್ತು ರೇಖಾದೇವಿ ಎಂಬ ದಂಪತಿಯ ನಾಲ್ವರು ಪುತ್ರಿಯರಲ್ಲಿ ಮಮುಕ್ಷಾ 3ನೇಯವರಾಗಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಅವರು ತಮ್ಮ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 94.8 ಹಾಗೂ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.99 ಅಂಕವನ್ನು ಪಡೆದುಕೊಂಡಿದ್ದರು. ಆದರೂ ಅಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ಇದ್ದರಿಂದ ಜೈನ ಸನ್ಯಾಸಿಯಾಗಿದ್ದಾರೆ.
ಬಾಲ್ಯದಿಂದಲೇ ಸನ್ಯಾಸತ್ವದತ್ತ ಆಸಕ್ತಿ
ವಿದ್ಯಾಭ್ಯಾಸದಲ್ಲಿ ಮುಂದಿದ್ದ ಮುಮುಕ್ಷಾ ಬಾಲ್ಯದಿಂದಲೇ ಜೈನ ಸನ್ಯಾಸ ತತ್ವದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಅವರು ತಮ್ಮ 17ನೇ ವಯಸ್ಸಿಗೆ 48 ದಿನ ಉಪಧ್ಯಾನ ತಪ ಸಂಪನ್ನಗೊಳಿಸಿಕೊಂಡಿದ್ದರು. ಗದಗ ಜಿಲ್ಲೆಯಲ್ಲಿ ನರರತ್ನ ಮಹಾರಾಜರ ಚಾತುರ್ಮಾಸದಲ್ಲಿ ಪಾಲ್ಗೊಂಡಿದ್ದ ವಿಧಿ ಕುಮಾರಿ ಜೈನ ಧರ್ಮದ ತತ್ವ ಸಿದ್ದಾಂತಗಳಿಂದ ಆಕರ್ಷಣೆಗೊಂಡು ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:Monk Life: ಅಮೆರಿಕಾ ಲೈಫ್ ಬೋರಾಯ್ತು, ಲಕ್ಷ ಲಕ್ಷ ಸಂಬಳ ಸಾಕಾಯ್ತು! ಐಶಾರಾಮಿ ಜೀವನ ಬಿಟ್ಟು ಸನ್ಯಾಸಿಯಾದ ಯುವಕ!
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭಾಗಿ
ಮುಮುಕ್ಷಾ ವಿಧಿ ಕುಮಾರಿ ಅವರ ಜೈನ ಸನ್ಯಾಸ ದೀಕ್ಷಾ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಾಜಿ ಶಾಸಕ ಎಚ್. ಆರ್. ಗವಿಯಪ್ಪ, ಕಾಂಗ್ರೆಸ್ ಮುಖಂಡ ಇಮಾಜ್ ನಿಯಾಜಿ, ಬಿಜೆಪಿಯ ಸಿದ್ದಾರ್ಥ್ ಸಿಂಗ್ ಸೇರಿ ಸಾವಿರಾರು ಜನರ ಭಾಗವಹಿಸಿದ್ದರು. ಈ ಶೋಭಯಾತ್ರೆಯಲ್ಲಿ ಆಧ್ಯಾತ್ಮಿಕ ಜೀವನವನ್ನು ಅಪ್ಪಿಕೊಳ್ಳುತ್ತಿರುವ ಸಂಭ್ರಮವನ್ನು ಕುಣಿಯುವ ಮೂಲಕ ಪ್ರದರ್ಶಿಸಿದರು.
ಪ್ರತಿವರ್ಷ 300 ಯುವಕರಿಂದ ಸನ್ಯಾಸತ್ವ ಸ್ವೀಕಾರ
ದೇಶದಲ್ಲಿ 300 ಯುವಕ- ಯುವತಿಯರು ಪ್ರತೀವರ್ಷ ಅಧ್ಯಾತ್ಮದ ಕಡೆಗೆ ಮುಖಮಾಡಿ ಸನ್ಯಾಸತ್ವ ಸ್ವೀಕರಿಸುತ್ತಿದ್ದಾರೆ. ಹೀಗೆ ಸನ್ಯಾಸತ್ವ ಸೀಕಾರ ಮಾಡಿದ ಯುವ ಸಮೂಹ ಮತ್ತೆ ಲೌಕಿಕ ಬದುಕಿನ ಕಡೆಗೆ ಮರಳುವುದಿಲ್ಲ. ಅವರೆಲ್ಲಾ ಜೈನ ಸನ್ಯಾಸತ್ವದಲ್ಲಿ ಸಾಕಷ್ಟು ನಂಬಿಕೆಯನ್ನಿಟ್ಟಿರುತ್ತಾರೆ. ಇವರಿಗೆ ಯಾವುದೇ ವಸ್ತುಗಳ ಮೇಲೆ ವ್ಯಾಮೋಹ ಇರುವುದಿಲ್ಲ. ಕೇವಲ ಭಿಕ್ಷೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಹೀಗೆ ಸನ್ಯಾಸತ್ವ ಸ್ವೀಕರಿಸುವ ಯುವಕರಲ್ಲಿ ಬಹುತೇಕರು ಸಿರಿವಂತ ಕುಟುಂಬವರಿಂದ ಬಂದವರಾಗಿರುತ್ತಾರೆ ಜೈನ ಮುನಿಗಳು ತಿಳಿಸಿದ್ದಾರೆ.
ಗುಜರಾತ್ನಲ್ಲಿ ವಜ್ರ ವ್ಯಾಪಾರಿ ಮಗಳಿಂದ ಸನ್ಯಾಸತ್ವ ಸ್ವೀಕಾರ
ಇದೇ ದಿನ ಗುಜರಾತ್ನಲ್ಲಿ 9 ವರ್ಷದ ಬಾಲಕಿಯೊಬ್ಬಳು ಜೈನ ಸನ್ಯಾಸತ್ವ ಸ್ವೀಕರಿಸಿದ್ದಾಳೆ. ಸೂರತ್ನ ಪ್ರಸಿದ್ಧ ಡೈಮಂಡ್ ಪಾಲಿಶಿಂಗ್ ಮತ್ತು ರಪ್ತು ಸಂಸ್ಥೆಯಾದ ಸಾಂಘ್ವಿ ಅಂಡ್ ಸನ್ಸ್ ಕಂಪನಿಯ ಮಾಲೀಕರ ಮಗಳಾದ ದೇವಾಂಶಿ ತನ್ನ 9ನೇ ವಯಸ್ಸಿಗೆ ತನ್ನ ಭೌತಿಕ ಜೀವನವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದಾಳೆ. ವಜ್ರ ವ್ಯಾಪಾರಿ ಧನೇಶ್ ಮತ್ತು ಆಮಿ ಸಾಂಘ್ವಿ ದಂಪತಿಯ ಇಬ್ಬರು ಪುತ್ರಿಯರಲ್ಲಿ ಮೊದಲ ಪುತ್ರಿಯಾಗಿರುವ ದೇವಾಂಶಿ ಜೈನ ಸನ್ಯಾಸಿ ಆಚಾರ್ಯ ವಿಜಯ್ ಕೀರ್ತಿಸೂರಿ ಅವರ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ