ಕಾರವಾರ: ಬೃಹತ್ ಗಾತ್ರದ ಬಂಡೆಕಲ್ಲಿಗೆ (Rock) ತಾಗಿ ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ನಿಂದ ಹದಿನೇಳು ಮಂದಿ ಮೀನುಗಾರರನ್ನು (Fisheries) ರಕ್ಷಿಸಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕು ಸಮೀಪದ ಕಡ್ಲೆ ಬಳಿ ನಡೆದಿದೆ. ಅರಬ್ಬಿ ಸಮುದ್ರದಲ್ಲಿ (Arabian Sea) ಈ ಘಟನೆ ಸಂಭವಿಸಿದ್ದು ಆಳ ಸಮುದ್ರದಲ್ಲಿ 17 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಶ್ರೀ ದೇವಿ ಅನುಗ್ರಹ ಹೆಸರಿನ ಬೋಟ್ ಅನಾಹುತಕ್ಕೆ ಈಡಾಗಿದೆ.
ಕುಮಟಾದ ಮೀನು ಉದ್ಯಮಿ ಸುಧಾಕರ್ ಖಾರ್ವಿ ಅವರಿಗೆ ಸೇರಿದ ಶ್ರೀದೇವಿ ಅನುಗ್ರಹ ಪರ್ಶಿಯನ್ ಬೋಟ್ ಇದಾಗಿದ್ದು, 17 ಮಂದಿ ಮೀನುಗಾರರು ಮೀನು ಹಿಡಿದುಕೊಂಡು ವಾಪಸ್ ಕಡಲ ತೀರಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ. ಮೀನುಗಾರಿಕಾ ಬೋಟ್ ಬೃಹತ್ ಗಾತ್ರದ ಬಂಡೆಕಲ್ಲಿಗೆ ತಾಗಿದ ತಕ್ಷಣ ವಿಷಯ ಇತರ ಮೀನುಗಾರರು ಕರಾವಳಿ ಕಾವಲು ಪಡೆಗೆ ಸುದ್ದಿ ತಲುಪಿಸಿದ್ದು, ಕರಾವಳಿ ಕಾವಲು ಪಡೆ ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ಶ್ರೀದೇವಿ ಅನುಗ್ರಹ ಬೋಟ್ನಲ್ಲಿದ್ದ 17 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
₹10 ಲಕ್ಷಕ್ಕೂ ಹೆಚ್ಚು ನಷ್ಟ
ಮೀನುಗಾರಿಕಾ ಬೋಟ್ ಬೃಹತ್ ಗಾತ್ರದ ಬಂಡೆಕಲ್ಲಿಗೆ ತಾಗಿ ಮುಳುಗಡೆ ಆಗಿರುವುದರಿಂದ ಶ್ರೀದೇವಿ ಅನುಗ್ರಹ ಬೋಟ್ನ ಮಾಲೀಕ ಸುಧಾಕರ್ ಖಾರ್ವಿ ಅವರಿಗೆ ಸುಮಾರು 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಹಾನಿ ಸಂಭವಿಸಿದ್ದು, ಸದ್ಯ ಬೋಟ್ನಲ್ಲಿದ್ದ 17 ಮಂದಿ ಮೀನುಗಾರರು ಮಾತ್ರ ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ.
ಇದನ್ನೂ ಓದಿ: Banda Boat Accident: 30 ಜನರಿದ್ದ ದೋಣಿ ನದಿಯಲ್ಲಿ ಪಲ್ಟಿ; ರಕ್ಷಾ ಬಂಧನದ ದಿನವೇ ಭಾರೀ ದುರಂತ
ಮಿನಿಹಡಗು ಮುಳುಗಿ 145 ಸಾವು
ವಾಯವ್ಯ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಭೀಕರ ಬೋಟ್ ಅಪಘಾತ ಸಂಭವಿಸಿ 145 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿ 55 ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಮಂಗಳವಾರ ಮಧ್ಯರಾತ್ರಿ ಈ ದುರಂತ ಸಂಭವಿಸಿದ್ದು, 200 ಪ್ರಯಾಣಿಕರಿದ್ದ ಮೋಟಾರ್ ಬೋಟ್ ಮಂಗಳವಾರ ಲುಲೋಂಗಾ ನದಿಯಲ್ಲಿ ಮುಳುಗಿದ್ದು, ಈಕ್ವಟೂರ್ ಪ್ರಾಂತ್ಯದ ಬಸಂಕುಸು ಪಟ್ಟಣದ ಬಳಿ ಅಪಘಾತ ಸಂಭವಿಸಿದೆ. ಬೋಟ್ನಲ್ಲಿ ಒವರ್ ಲೋಡ್ ಆಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೋಣಿಯಲ್ಲಿ ಪ್ರಯಾಣಿಕರು, ಸರಕುಗಳು ಮತ್ತು ಜಾನುವಾರುಗಳನ್ನು ಅಧಿಕವಾಗಿ ತುಂಬಿದ್ದರು. ಇದರಿಂದಾಗಿ ದೋಣಿ ನದಿಯಲ್ಲಿ ಮುಳುಗಿದೆ. ಈಜು ಬಾರದವರು ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈಜಲು ಬಂದವರೂ ಸಹ ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ 145 ಮಂದಿ ಜಲ ಸಮಾಧಿಯಾಗಿದ್ದಾರೆ. ಅದೃಷ್ಟವಶಾತ್ 55 ಮಂದಿ ಬದುಕುಳಿದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Tiger: 120 ಕಿಮೀ ಬ್ರಹ್ಮಪುತ್ರ ನದಿ ಈಜಿಕೊಂಡು ಬಂದ ಬೆಂಗಾಲ್ ಟೈಗರ್; ವಿಡಿಯೋ ವೈರಲ್!
ಓವರ್ ಲೋಡ್ನಿಂದ ಬೋಟ್ ಮುಳುಗಡೆ
ಕಾಂಗೋದ ಈಕ್ವಟೂರ್ ಪ್ರಾಂತ್ಯವು ಕಳಪೆ ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದು, ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕೆಲವೊಮ್ಮೆ ಬೋಟ್ನಲ್ಲಿಯೇ ಜನ ಆಶ್ರಯ ಪಡೆಯಬೇಕಾಗುತ್ತದೆ. ಅಲ್ಲದೇ ಬೋಟ್ ನಿರ್ವಾಹಕರು ಹಣಕ್ಕಾಗಿ ಹೆಚ್ಚು ಪ್ರಯಾಣಿಕರನ್ನು ಬೋಟ್ಗೆ ಹತ್ತಿಸಿಕೊಳ್ಳುತ್ತಾರೆ. ಇದರಿಂದ ಆಗಾಗ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಈ ಹಿಂದೆ ಕಳೆದ ಅಕ್ಟೋಬರ್ನಲ್ಲಿ ಬೋಟ್ ಮುಳುಗಿ 40 ಮಂದಿ ಸಾವನ್ನಪ್ಪಿದ್ದರು.
ಈ ಹಿಂದೆ ಲಿಬಿಯಾ ಬೋಟ್ ದುರಂತದಲ್ಲಿ 22 ಮಂದಿ ಸಾವು
ಈ ಹಿಂದೆ ಲಿಬಿಯಾ ಕರಾವಳಿಯಲ್ಲಿ ಸಂಭವಿಸಿದ ಬೋಟ್ ದುರಂತದಲ್ಲಿ ಮಾಲಿ ದೇಶದ 22 ಮಂದಿ ವಲಸಿಗರು ಮೃತಪಟ್ಟಿದ್ದರು. 2022ರ ಜೂನ್ 22ರಂದು ವಲಸಿಗರು ಲಿಬಿಯಾದ ಝುವರಾ ನಗರದಿಂದ ರಬ್ಬರ್ ಬೋಟ್ನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆ ನಡೆದ 9 ದಿನಗಳ ಬಳಿಕ 61 ಮಂದಿಯನ್ನು ಲಿಬಿಯಾ ಕರಾವಳಿ ಪಡೆ ರಕ್ಷಿಸಿ ತೀರಕ್ಕೆ ಕರೆತಂದಿತ್ತು. ಬದುಕುಳಿದವರಲ್ಲಿ ಬಹುತೇಕರು ಮಾಲಿ ದೇಶದವರಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ