ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಾಲೆಗಳ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ 15 ದಿನಗಳ ಗಡುವು

ಈ ಹೋರಾಟದಿಂದ ಶಾಲೆಗಳು ಮುಚ್ಚಿದರೆ ಸುಮಾರು 8 ಲಕ್ಷ ಮಕ್ಕಳಿಗೆ ಸಮಸ್ಯೆಯಾಗಲಿದೆ. ಬಜೆಟ್ ನಲ್ಲಿ ಸಿಎಂ ಎಲ್ಲಾ ಬಗೆಯ ಶಿಕ್ಷಣ ಸಂಸ್ಥೆಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲಿ. ಬೇಡಿಕೆ ಈಡೇರದಿದ್ದರೆ ಶಾಲೆಗಳು ಬಂದ್ ಆಗಲಿವೆ. ಆಗ  ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಸಿದ್ಧರಾಗಿರುವ ಮೂರು ಸಾವಿರ ಮಕ್ಕಳಿಗೂ ತೊಂದರೆಯಾಗಲಿದೆ ಎಂದು ಹೇಳಿದರು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು; ನಮ್ಮ ಬೇಡಿಕೆಯನ್ನಿಟ್ಟುಕೊಂಡು ಮೊದಲ ಬಾರಿ ರಾಜಧಾನಿಗೆ ಬಂದಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳು 1995-2021ರವರೆಗೂ ಹೋರಾಟ ಮುಂದುವರೆಸಿವೆ. 2015 ರವರೆಗೆ ಕನ್ನಡ ಮಾಧ್ಯಮ ಶಾಲೆಗಳಿಗೆ ನೀಡಬೇಕಿದ್ದ ಅನುದಾನವನ್ನು ಆದಷ್ಟು ಬೇಗ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಹೆಸರಿಗೆ ನಮ್ಮದು ಕಲ್ಯಾಣ ಕರ್ನಾಟಕ ಭಾಗ, ಆದರೆ ನಮಗೆ ಯಾವುದೇ ಕಲ್ಯಾಣ ಆಗಿಲ್ಲ. ನಮ್ಮ‌ಭಾಗದಲ್ಲಿ 1947 ರಲ್ಲಿ ಇದ್ದ ಸ್ಥಿತಿಯೇ ಈಗಲೂ ಇದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸುನೀಲ್ ಹೂಡ್ಗಿ ಹೇಳಿದರು.

  ಬೆಳಗಿನಿಂದ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳ ಬಗ್ಗೆ ರುಪ್ಸಾ ಸಭೆ ನಡೆಸಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನೀಲ್ ಹೂಡ್ಗಿ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ 20 ಸಾವಿರ ಶಿಕ್ಷಕರ ಕೊರತೆ ಇದೆ. ಶಿಕ್ಷಣದ ಕೊರತೆ ಇಂದ ಮಕ್ಕಳ ಮಾರಾಟ ದಂಧೆ ಜೋರಾಗಿ ನಡೆಯುತ್ತಿದೆ. ನಾವು ಹಿಂದುಳಿದ ಪ್ರದೇಶದವರು. ಏಳು ವರ್ಷಗಳಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಂದು ರೂಪಾಯಿ ಅನುದಾನ ಸಿಕ್ಕಿಲ್ಲ. 15 ಕೋಟಿ ನಿಧಿಯನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ, ಅದರಲ್ಲಿ ಅರ್ಧದಷ್ಟು ಹಣ ಇದುವರೆಗೆ ಬಳಕೆಯೇ ಆಗಿಲ್ಲ. 371 J ಅಡಿಯಲ್ಲಿ ಶಾಲೆಗಳ ಆಟೋಪಕರಣಗಳು, ಪ್ರಯೋಗಾಲಯ ಮುಂತಾದಕ್ಕೆ ಫಂಡ್ ಬರುತ್ತದೆ. ಆದರೆ ಅದ್ಯಾವುದೂ ಬಂದೇ ಇಲ್ಲ ಎಂದು ಆರೋಪಿಸಿದರು.

  ಇದನ್ನು ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಪೆದ್ದನಂತೆ ಮಾತನಾಡುತ್ತಾರೆ; ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ

  ನವೋದಯ ಮತ್ತು ಸೈನಿಕ ಶಾಲೆಗಳಲ್ಲಿ ಶೇ. 10 ಮೀಸಲಾತಿ ಆ ಭಾಗದ ಮಕ್ಕಳಿಗೆ ನೀಡಬೇಕು ಎನ್ನುವ ಬೇಡಿಕೆ ಇದೆ. ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಫೆಬ್ರವರಿ 15ರವರೆಗೆ ಗಡುವು ನೀಡುತ್ತಿದ್ದೇವೆ. ಫೆಬ್ರವರಿ 15 ರೊಳಗೆ ಬೇಡಿಕೆಗೆ ಸರ್ಕಾರ ಒಪ್ಪದಿದ್ದರೆ  ಫೆಬ್ರವರಿ ‌15 ರಿಂದ ಕಲ್ಯಾಣ ಕರ್ನಾಟಕದ ಖಾಸಗಿ ಶಾಲೆಗಳು ಬಂದ್ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಸಗಿ ಅನುದಾನರಹಿತ 4500 ಶಾಲೆಗಳಿವೆ. ಉರ್ದು, ಇಂಗ್ಲಿಷ್, ಕನ್ನಡ ಮಾಧ್ಯಮ ಶಾಲೆಗಳಿವೆ. 500-550 ಕನ್ನಡ ಮಾಧ್ಯಮ ಶಾಲೆಗಳು ಮಾತ್ರ ಉಳಿದಿವೆ. ಶಿಕ್ಷಣ ಸಚಿವರ ಸೂಚನೆಯಂತೆಯೇ ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ರಚನೆಯಾಗಿದೆ. ಈ ಹೋರಾಟಕ್ಕೆ ರುಪ್ಸಾ ಸಂಘಟನೆ  ಕೈಜೋಡಿಸಿದೆ ಎಂದರು.

  ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ, ಎಲ್​ಕೆಜಿ, ಯುಕೆಜಿ ಬಿಟ್ಟು 7,80,600 ಮಕ್ಕಳು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕಲಿಯುತ್ತಿದ್ದಾರೆ. ಈ ಹೋರಾಟದಿಂದ ಶಾಲೆಗಳು ಮುಚ್ಚಿದರೆ ಸುಮಾರು 8 ಲಕ್ಷ ಮಕ್ಕಳಿಗೆ ಸಮಸ್ಯೆಯಾಗಲಿದೆ. ಬಜೆಟ್ ನಲ್ಲಿ ಸಿಎಂ ಎಲ್ಲಾ ಬಗೆಯ ಶಿಕ್ಷಣ ಸಂಸ್ಥೆಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲಿ. ಬೇಡಿಕೆ ಈಡೇರದಿದ್ದರೆ ಶಾಲೆಗಳು ಬಂದ್ ಆಗಲಿವೆ. ಆಗ  ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಸಿದ್ಧರಾಗಿರುವ ಮೂರು ಸಾವಿರ ಮಕ್ಕಳಿಗೂ ತೊಂದರೆಯಾಗಲಿದೆ ಎಂದು ಹೇಳಿದರು.
  Published by:HR Ramesh
  First published: