ಚಿಕ್ಕಮಗಳೂರಿನಲ್ಲಿ ಚುನಾವಣೆ ಬಹಿಷ್ಕರಿಸಿದ 145 ಹಳ್ಳಿಗಳ ಜನ; ಈವರೆಗೂ ಯಾರೂ ನಾಮಪತ್ರ ಸಲ್ಲಿಸಿಲ್ಲ

ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಜನ ಕಾವಲಿಗೆ ಕೂತಿದ್ದಾರೆ. ಯಾರೂ ನಾಮಪತ್ರ ಸಲ್ಲಿಸುವಂತಿಲ್ಲ ಎಂದು ಷರಾ ಬರೆದಿದ್ದಾರೆ. ಒಂದು ವೇಳೆ, ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ಬ್ಯಾನರ್ ಹಾಕಿರುವುದರಿಂದ ಯಾರೂ ನಾಮಪತ್ರ ಸಲ್ಲಿಸಲು ಮುಂದೆ ಬಂದಿಲ್ಲ.

ಗ್ರಾಮಸ್ಥರು

ಗ್ರಾಮಸ್ಥರು

  • Share this:
ಚಿಕ್ಕಮಗಳೂರು(ಡಿ.08): ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಜನರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆದರೆ, ಕಸ್ತೂರಿ ರಂಗನ್ ವರದಿ, ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ಯೋಜನೆ ವಿರೋಧಿಸಿರುವ ಮಲೆನಾಡಿಗರು, ಯೋಜನೆ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ಯಾರು ನಾಮಪತ್ರ ಸಲ್ಲಿಸಿಲ್ಲ. ಈಗಾಗಲೇ ಜಿಲ್ಲೆಯ ಈ ಯೋಜನೆಯ ವ್ಯಾಪ್ತಿಗೆ ಬರುವ ಸುಮಾರು 145 ಹಳ್ಳಿಗಳಷ್ಟು ಜನ ಚುನಾವಣೆಯನ್ನ ಬಹಿಷ್ಕಾರ ಮಾಡಿದ್ದಾರೆ. ಹಳ್ಳಿ-ಹಳ್ಳಿಗಳಲ್ಲೂ ಬ್ಯಾನರ್ ಹಾಕಿ ಯೋಜನೆ ಹಾಗೂ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇಡೀ ಮಲೆನಾಡಿಗರು ಒಮ್ಮತದ ನಿರ್ಧಾರಕ್ಕೆ ಬಂದು ಚುನಾವಣೆಯನ್ನ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಬ್ಯಾನರ್ ತೆಗೆಯಲು ಬಂದ ಅಧಿಕಾರಿಗಳಿಗೆ ರಸ್ತೆ ಮಧ್ಯೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟೆ ಅಲ್ಲದೇ, ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಜನ ಕಾವಲಿಗೆ ಕೂತಿದ್ದಾರೆ. ಯಾರೂ ನಾಮಪತ್ರ ಸಲ್ಲಿಸುವಂತಿಲ್ಲ ಎಂದು ಷರಾ ಬರೆದಿದ್ದಾರೆ. ಒಂದು ವೇಳೆ, ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ಬ್ಯಾನರ್ ಹಾಕಿರುವುದರಿಂದ ಯಾರೂ ನಾಮಪತ್ರ ಸಲ್ಲಿಸಲು ಮುಂದೆ ಬಂದಿಲ್ಲ. ಶತಮಾನಗಳ ಬದುಕೇ ಬೀದಿಗೆ ಬೀಳುವಾಗ ಗ್ರಾಮ ಪಂಚಾಯಿತಿ ಸದಸ್ಯನೆಂಬ ಹಣೆಪಟ್ಟಿ ಹೊತ್ತುಕೊಂಡು ಮಾಡೋದೇನಿದೆ ಎಂದು ರಾಜಕೀಯ ದ್ವೇಷ, ವೈಮನಸ್ಸನ್ನ ಮರೆತು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಲ್ಲಾ ಪಕ್ಷದ ಕಾರ್ಯಕರ್ತರು, ಮುಖಂಡರು ಕೂಡ ಚುನಾವಣೆಗೆ ಹಿಂದೇಟು ಹಾಕ್ತಿದ್ದಾರೆ. ಅಧಿಕಾರಿಗಳು ರಾಜಿ ಸಂಧಾನ ಕೂಡ ಯಾವುದೇ ಫಲ ನೀಡಿಲ್ಲ. ಚುನಾವಣೆಗಿಂತ ಬದುಕೇ ದೊಡ್ಡದು ಎಂದು ಬದುಕನ್ನ ಉಳಿಸಿಕೊಳ್ಳಲು ಮಲೆನಾಡಿನ ಬಹುತೇಕ ಭಾಗ ರಾಜಕೀಯ ಮರೆತು ಒಂದಾಗಿದೆ.

ತುಮಕೂರು: ನೀರಿಗಾಗಿ ಗ್ರಾ.ಪಂ ಚುನಾವಣೆಯನ್ನೇ ಬಹಿಷ್ಕರಿಸಿದ 33 ಗ್ರಾಮಗಳ ಜನರು

ಕಸ್ತೂರಿ ರಂಗನ್ ವರದಿ, ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ಯೋಜನೆಯಿಂದ ಬಹುತೇಕ ಖಾಂಡ್ಯ ಹೋಬಳಿಯೇ ಕಣ್ಮರೆಯಾಗುವುದರಿಂದ ಈ ಭಾಗದ ಜನ ಚುನಾವಣೆಯನ್ನ ತೀವ್ರ ಕಠೋರವಾಗಿ ವಿರೋಧಿಸಿದ್ದಾರೆ. ಖಾಂಡ್ಯ ಹೋಬಳಿ ಚಿಕ್ಕಮಗಳೂರು ಹಾಗೂ ಎನ್.ಆರ್.ಪುರ ತಾಲೂಕಿನ ಗಡಿ ಭಾಗವಾಗಿದ್ದು ಯೋಜನೆಯಿಂದ ಇಡೀ ಹೋಬಳಿಯೇ ಅಪಾಯದ ಅಂಚಿನಲ್ಲಿದೆ. ಹಾಗಾಗಿ, ಇಂದು ಎನ್.ಆರ್.ಪುರ ತಾಲೂಕಿನಲ್ಲಿ ಓರ್ವ ಅಭ್ಯರ್ಥಿ ಕೂಡ ನಾಮಪತ್ರ ಸಲ್ಲಿಸಿಲ್ಲ. ಬಿದರೆ, ಉಜ್ಜನಿ, ಶಿರಗೋಳ ಸೇರಿದಂತೆ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ನಾಮಪತ್ರ ಸಲ್ಲಿಸಿಲ್ಲ. ಸ್ಥಳಿಯರು ಗ್ರಾಮ ಪಂಚಾಯಿತಿ ಮುಂದೆ ಕಾವಲಿಗೆ ನಿಂತಿದ್ದಾರೆ.

ಇಂದು ನಾಮಪತ್ರ ಸಲ್ಲಿಕೆಗೆ ಮೊದಲ ದಿನ. ಇನ್ನೂ ಮೂರು ದಿನ ಬಾಕಿ ಇದೆ. ದಿನದಿಂದ ದಿನಕ್ಕೆ ಹಳ್ಳಿಗರ ಹೋರಾಟದ ಹಾದಿ ತೀವ್ರಗೊಳ್ಳುತ್ತಿದೆ. ಅಧಿಕಾರಿಗಳು ಹಳ್ಳಿಗರ ಮನಪರಿವರ್ತಿಸಿ ಚುನಾವಣೆ ನಡೆಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಬದುಕಿನ ಮುಂದೆ ಯಾವುದೂ ದೊಡ್ಡದ್ದಲ್ಲ ಎಂದು ಹಳ್ಳಿಗರ ಒಮ್ಮತದ ನಿರ್ಧಾರ ಮಾಡಿದ್ದಾರೆ. ಸರ್ಕಾರ ಏನು ಮಾಡುತೋ, ಅಧಿಕಾರಿಗಳು ಹೇಗೆ ಮನಪರಿವರ್ತಿಸುತ್ತಾರೋ ಜನ ಯಾವ ತೀರ್ಮಾನ ಮಾಡುತ್ತಾರೋ ಕಾದು ನೋಡಬೇಕಿದೆ.
Published by:Latha CG
First published: