ಇಂದು ಕಾಂಗ್ರೆಸ್​​​ ಶಾಸಕಾಂಗ ಸಭೆ; ಕಡ್ಡಾಯ ಹಾಜರಿಗೆ ಸಿದ್ದರಾಮಯ್ಯ ಸೂಚನೆ; ಗೈರಾಗುವ ಶಾಸಕರ ವಿರುದ್ಧ ವಿಪ್​​​ ಸಾಧ್ಯತೆ!

ನಮ್ಮ ಶಾಸಕನ ಮನೆಗೆ ಬಿಜೆಪಿ ನಾಯಕರು ಸೂಟ್​ಕೇಸ್​ ಸಮೇತ ಹೋಗಿದ್ದಾರೆ. 30 ಕೋಟಿ ರೂ. ಆಫರ್  ಅನ್ನು ಕಾಂಗ್ರೆಸ್ ಶಾಸಕನೋರ್ವ ತಿರಸ್ಕರಿಸಿದ್ದಾನೆ. ಆತನಿಗೆ ಸದನಕ್ಕೆ ಗೈರಾದರೆ 30 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದ್ದಾರೆ- ಸಿದ್ದರಾಮಯ್ಯ

 ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • News18
  • Last Updated :
  • Share this:
ಬೆಂಗಳೂರು(ಫೆ.08): ಬಜೆಟ್​​ ಮಂಡನೆ ದಿನವೇ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​​ ಪಕ್ಷದ ಶಾಸಕಾಂಗ ಸಭೆ ಕರೆದಿದ್ದಾರೆ. ಇಂದು ಸಿಎಲ್​​​ಪಿ ಸಭೆ ನಡೆಯಲಿದ್ದು, ಎಲ್ಲಾ ಕಾಂಗ್ರೆಸ್​ ಶಾಸಕರು ಕಡ್ಡಯವಾಗಿ ಹಾಜರಾಗಲೇಬೇಕು; ಇಲ್ಲವಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಖಡಕ್​​​ ಸಂದೇಶ ರವಾನಿಸಿದ್ದಾರೆ. ಸತತವಾಗಿ ಸಿಎಲ್​​​ಪಿ ಸಭೆಗೆ ಅತೃಪ್ತ ಶಾಸಕರು ಗೈರಾಗುತ್ತಿದ್ದರು. ಕೆಲ ಶಾಸಕರ ಈ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಈ ಶಾಸಕರಿಗೆ ಬಿಸಿ ಮುಟ್ಟಿಸುವ ಸಲುವಾಗಿಯೇ ಸಿದ್ದರಾಮಯ್ಯನವರು ಮತ್ತೊಮ್ಮೆ ಶಾಸಕಾಂಗ ಸಭೆ ಕರೆದಿದ್ದು, ಈ ಬಾರಿಯೂ ಸಭೆಗೆ ಹಾಜರಾಗದೇ ಹೋದರೇ ಶಾಸಕರಿಗೆ ವಿಪ್​​ ಜಾರಿ ಮಾಡಲು ನಿರ್ಧರಿಸಿದ್ಧಾರೆ.

ಇಂದು ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರದ ಬಜೆಟ್​​ ಮಂಡನೆ ನಡೆಯಲಿದೆ. ಸಿಎಂ ಎಚ್​​.ಡಿ ಕುಮಾರಸ್ವಾಮಿಯವರೇ ಬಜೆಟ್​ ಮಂಡಿಸಲಿದ್ದು, ಹಲವು ಜನಪ್ರಿಯ ಯೋಜನೆ ಘೋಷಿಸುವ ಸಾಧ್ಯತೆಯಿದೆ. ಈ ಮುನ್ನವೇ ಕಾಂಗ್ರೆಸ್​​ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಆಪರೇಷನ್​​ ಕಮಲ ಸೇರಿದಂತೆ ಹಲವು ವಿಚಾರಗಳನ್ನು ಇಲ್ಲಿ ಚರ್ಚಿಸಲಿದ್ದಾರೆ. ಒಂದು ವೇಳೆ ಈ ಬಾರಿ ಯಾರೇ ಶಾಸಕರು ಗೈರಾದರು, ಅವರ ವಿರುದ್ಧ ವಿಪ್​​ ಜಾರಿಗೊಳಿಸುವುದಾಗಿ ಖಡಕ್​​ ಸಂದೇಶ ರವಾನಿಸಿದ್ದಾರೆ.ಇತ್ತೀಚೆಗೆ ಬುಧವಾರ ಆರಂಭವಾದ ಜಂಟಿ ಅಧಿವೇಶದನ ಮೊದಲ ದಿನವೂ ಸುಮಾರು ಕಾಂಗ್ರೆಸ್ಸಿನ 8 ಅತೃಪ್ತ ಶಾಸಕರು ಸದನಕ್ಕೆ ಗೈರಾಗಿದ್ದರು. ಈ ಹಿಂದೆಯೂ ಜ.18 ರಂದು ನಡೆದಿದ್ದ ಸಿಎಲ್‌ಪಿ ಸಭೆಗೂ ನಾಲ್ವರು ಶಾಸಕರು ಗೈರಾಗಿದ್ದರು. ಸತತವಾಗಿ ಕಾಂಗ್ರೆಸ್​​ ಶಾಸಕಾಂಗ ಸಭೆಗೆ ಗೈರಾಗುತ್ತಿರುವ ಶಾಸಕರಿಗೆ ಬಿಸಿ ಮುಟ್ಟಿಸಲು ಸಿದ್ದರಾಮಯ್ಯನವರು ಮುಂದಾಗಿದ್ದಾರೆ. ಹೀಗಾಗಿ ಇಂದು ಫೆಬ್ರವರಿ 8ಕ್ಕೆ ಸಿಎಲ್​​ಪಿ ಸಭೆ ಕರೆದಿದ್ದಾರೆ. ಅಲ್ಲದೇ ಈ ಸಭೆಗೆ ಎಷ್ಟು ಜನ ಆಗಮಿಸಲಿದ್ದಾರೆ? ಮತ್ತು ಗೈರಾಗಲಿದ್ದಾರೆ? ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಬರೆದ ಪತ್ರಗಳಿಗೆ ಸಿಗುತ್ತಾ ಕಿಮ್ಮತ್ತು? ಬಜೆಟ್​ನಲ್ಲಿ ಬಾದಾಮಿಗೆ ಸಿಗುತ್ತಾ ಬಂಪರ್ ಆಫರ್?

ಇನ್ನು ಅತೃಪ್ತರ ಆಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಬಲ ಅಸ್ತ್ರ ಪ್ರಯೋಗಿಸುವ ಇರಾದೆಯಲ್ಲಿದ್ದಾರೆ. ಹೀಗಾಗಿಯೇ ಇಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಬೇಕೆಂದು ಸಿದ್ದರಾಮಯ್ಯ ಅವರು ಎಲ್ಲಾ ಕಾಂಗ್ರೆಸ್ ಶಾಸಕರಿಗೂ ವಿಪ್ ಹೊರಡಿಸಿದ್ದಾರೆ. ಯಾವುದೇ ಕಾರಣ ನೀಡದೇ ಸಭೆಗೆ ತಪ್ಪದೇ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಅಪ್ಪಣೆ ಹಾಕಿದ್ದಾರೆ.

ಒಂದು ವೇಳೆ ಸಕಾರಣವಿಲ್ಲದೆ ಸಭೆಗೆ ಬರದೇ ಇದ್ದರೆ ಅಂಥವರನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸುವ ಯೋಜನೆಯಲ್ಲಿದ್ದಾರೆ ಸಿದ್ದರಾಮಯ್ಯ. ಇದು ಅತೃಪ್ತ ಶಾಸಕರನ್ನು ಭಯಭೀತಗೊಳಿಸಿದೆ. ಶಾಸಕ ಸ್ಥಾನ ಅನರ್ಹಗೊಂಡರೆ ಮುಂದಿನ 6 ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ. ಹೀಗಾದರೆ ಹೆಚ್ಚೂಕಡಿಮೆ ಆ ವ್ಯಕ್ತಿಯ ರಾಜಕೀಯ ಭವಿಷ್ಯಕ್ಕೆ ಚ್ಯುತಿ ಬಂದಂತೆಯೇ ಆಗುತ್ತದೆ.

ಇದನ್ನೂ ಓದಿ: Karnataka Budget 2019​​: ಇಂದು ಸಮ್ಮಿಶ್ರ ಸರ್ಕಾರದ ಬಜೆಟ್​​; ಸಿಎಂಗೆ ಬಿಜೆಪಿ ಸಂಕಷ್ಟ; ಬಿಎಸ್​ವೈ ತಂತ್ರವೇನು?

ಎರಡು ದಿನದ ಹಿಂದೆಯಷ್ಟೇ ಸದನಕ್ಕೆ ಗೈರಾಗುವಂತೆ ಕಾಂಗ್ರೆಸ್​ ಶಾಸಕನಿಗೆ ಬಿಜೆಪಿ 30 ಕೋಟಿ ಆಮಿಷವೊಡ್ಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. ನಮ್ಮ ಶಾಸಕನ ಮನೆಗೆ ಬಿಜೆಪಿ ನಾಯಕರು ಸೂಟ್​ಕೇಸ್​ ಸಮೇತ ಹೋಗಿದ್ದಾರೆ. 30 ಕೋಟಿ ರೂ. ಆಫರ್  ಅನ್ನು ಕಾಂಗ್ರೆಸ್ ಶಾಸಕನೋರ್ವ ತಿರಸ್ಕರಿಸಿದ್ದಾನೆ. ಆತನಿಗೆ ಸದನಕ್ಕೆ ಗೈರಾದರೆ 30 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಆದರೆ, ನಮ್ಮ ಶಾಸಕ ಬಿಜೆಪಿಯ ಆಮಿಷಕ್ಕೆ ಮಣಿದಿಲ್ಲ ಎಂದು ತಿಳಿಸಿದ್ದರು.

-----------------

Published by:Ganesh Nachikethu
First published: