ಬೀದರ್​ ಜಿಲ್ಲೆಯೊಂದರಲ್ಲಿಯೇ ಕಳೆದ ಮೂರು ವರ್ಷದಲ್ಲಿ 140 ರೈತರ ಸಾವು!

ಜಿಲ್ಲೆ ಒಮ್ಮೆ ಅತಿವೃಷ್ಟಿ ಮತ್ತೊಮ್ಮೆ ಅನಾವೃಷ್ಟಿಗೆ ಸಾಕ್ಷಿಯಾಗುತ್ತಿದ್ದು, ಇದರಿಂದ ರೈತರ ಬದುಕು ಕಷ್ಟವಾಗಿದೆ. 

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೀದರ್ (ಡಿ. 18): ಮನುಕುಲಕ್ಕೆ ಅನ್ನ ನೀಡುವ ರೈತ ಮಾತ್ರ ಅನ್ನವಿಲ್ಲದೇ ಕಷ್ಟಪಡುತ್ತಾನೆ. ಅತಿವೃಷ್ಠಿ, ಅನಾವೃಷ್ಠಿಗಳ ನಡುವೆ ಬೆಳೆದ ಬೆಳೆ ಕೈ ತಪ್ಪುವ ಕಷ್ಟ ಒಂದೆಡೆಯಾದರೆ, ಮತ್ತೊಂದೆಡೆ,  ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು, ಸಾಲಗಾರ ಕಾಟ ಹೀಗೆ ಹತ್ತು ಹಲವು ಸಮಸ್ಯೆಗಳು ಆತನನ್ನು ಬೆಂಬಿಡದೆ ಕಾಡುತ್ತವೆ. ಈ  ಸಂಕಷ್ಟಗಳಿಂದ ಬೆಸತ್ತ ಅನೇಕ ಅನ್ನದಾತರು ನೇಣಿಗೆ ಕೊರಳೊಡ್ಡುವುದು ವರದಿಯಾಗುತ್ತವೆ. ಸರ್ಕಾರ ರೈತರಿಗೆ ಸಾಲ ಮುಕ್ತ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಒದಗಿಸಿದರೂ, ಹಲವು ತೊಂದರೆಯಿಂದ  ಆತ್ಮಹತ್ಯೆಯಂತಹ ಹಾದಿ ತುಳಿಯುತ್ತಿರುವುದು ಕಳವಳಕರ.  ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆ ಸಂಖ್ಯೆ ಏರುಗತಿ ಕಾಣುತ್ತಲೆ ಇದೆ. ಅದರಲ್ಲಿಯೂ ‌ ಕೃಷಿ ಪ್ರಧಾನ ಜಿಲ್ಲೆಯಾಗಿರುವ ಬೀದರ್​ನಲ್ಲಿ ಕಳೆದ ಮೂರು ವರ್ಷದಲ್ಲಿ ಸುಮಾರು 140 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಆತಂಕ ಮೂಡಿಸಿದೆ. 

ವಾಣಿಜ್ಯ ಬೆಳೆಗಳೆ ಪ್ರಧಾನವಾಗಿರುವ ಜಿಲ್ಲೆಯಲ್ಲಿ  ಕಬ್ಬು, ಉದ್ದು, ಹೆಸರು, ಸೋಯಾಬಿನ್‌, ಶುಂಠಿ, ಭತ್ತ ಹೀಗೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ಜಿಲ್ಲೆಯ ಒಂದಷ್ಟು ಕಡೆ ನೀರಾವರಿಯ ಸೌಲಭ್ಯವೂ ಇದೆ. ಆದರೆ, ಇವ್ಯಾವೂ ರೈತರನ್ನು ಗಟ್ಟಿಗೊಳಿಸುತ್ತಿಲ್ಲ ಎನ್ನುವುದು ರೈತರ ಆತ್ಮಹತ್ಯೆಯ ಸಂಖ್ಯೆಗಳಿಂ ದೃಢಪಡಿಸುತ್ತವೆ. ಮೂರು ವರ್ಷಗಳಲ್ಲಿ   ಜಿಲ್ಲೆಯೊಂದರಲ್ಲೇ ಬರೋಬ್ಬರಿ  140 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಬರಗಾಲ, ಸಾಲ ಮತ್ತಿತರೆ ಕಾರಣಗಳು ಪ್ರಮುಖವಾಗಿದೆ.

ಸರಕಾರದ ಸಾಲ ಮನ್ನಾ ಸೇರಿದಂತೆ ಅನೇಕ ಯೋಜನೆಗಳಿದ್ದ  ಮೇಲೂ ರೈತರ ಸರಣಿ ಆತ್ಮಹತ್ಯೆಯು ನಿಲ್ಲದಿರುವುದು ಕಳವಳಕಾರಿಯಾದ ಬೆಳವಣಿಗೆ. 2018-19ನೇ ಸಾಲಿನಲ್ಲಿ 57 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2019- 20ನೇ ವರ್ಷದಲ್ಲಿ 42 ರೈತರು ಜೀವ ಕಳೆದುಕೊಂಡಿದ್ದಾರೆ. 2020-21ನೇ ಸಾಲಿನಲ್ಲಿ 39 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಬರೀ ಮೂರೇ ವರ್ಷದಲ್ಲಿ 140 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಈ ಪೈಕಿ 101 ಮೃತ ರೈತರ ಕುಟುಂಬಸ್ಥರಿಗೆ ಸರಕಾರ ಪರಿಹಾರ ನೀಡಿದೆ. ಇನ್ನುಳಿದ 37 ರೈತರ ಆತ್ಮಹತ್ಯೆಯ ಪ್ರಕರಣಗಳು ನಾನಾ ಕಾರಣಗಳಿಂದ ತಿರಸ್ಕೃತಗೊಂಡಿವೆ.

ಜಿಲ್ಲೆ  ಒಮ್ಮೆ ಅತಿವೃಷ್ಟಿ ಮತ್ತೊಮ್ಮೆ ಅನಾವೃಷ್ಟಿಗೆ ಸಾಕ್ಷಿಯಾಗುತ್ತಿದ್ದು, ಇದರಿಂದ ರೈತರ ಬದುಕು ಕಷ್ಟವಾಗಿದೆ.  ಕಳೆದ ಮೂರ್ನಾಲ್ಕು ವರ್ಷಗಳಿಂದ ಬರಗಾಲ ಜಿಲ್ಲೆಯಲ್ಲಿ ಮಂಡಿಯೂರಿದ್ದು, ರೈತ ಕುಸಿದು ಹೋಗುವಂತಾಗಿದೆ. ಪ್ರಸಕ್ತ ಸಾಲಿನಲ್ಲಿ ಬರ ಪರಿಹಾರ, ಬೆಳೆ ವಿಮೆ, ಕಬ್ಬಿನ ಬಾಕಿ ಹಣ ಇನ್ನೂ ರೈತರ ಕೈಗೆ ಸಿಗದೇ ಜಿಲ್ಲೆಯ ಅನ್ನದಾತರು ಪರದಾಡುವಂತಾಗುತ್ತಿದೆ. 2018-19 ರಲ್ಲಿ 57 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‌ ಬೀದರ್ ತಾಲೂಕಿನಲ್ಲಿ 8 ರೈತರು, ಭಾಲ್ಕಿಯಲ್ಲಿ  17, ಬಸವಕಲ್ಯಾಣದಲ್ಲಿ  15, ಹುಮನಾಬಾದ್‌ನಲ್ಲಿ 07 ಹಾಗೂ ಔರಾದ್‌ ತಾಲೂಕಿನಲ್ಲಿ 10 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನು ಓದಿ: ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದ 10 ಅರ್ಥಶಾಸ್ತ್ರಜ್ಞರು

2019-20 ರಲ್ಲೂ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಬೀದರ್‌ನಲ್ಲಿ 11, ಭಾಲ್ಕಿಯಲ್ಲಿ 09, ಬಸವಕಲ್ಯಾಣದಲ್ಲಿ 03, ಹುಮನಾಬಾದ್‌ನಲ್ಲಿ 10 ಹಾಗೂ ಔರಾದ್‌ನಲ್ಲಿ 09 ರೈತರು ಜೀವ ಕಳೆದುಕೊಂಡಿದ್ದಾರೆ.

2020-21ರಲ್ಲಿ 37 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಬೀದರ್‌ನಲ್ಲಿ 3, ಭಾಲ್ಕಿ 05, ಬಸವಕಲ್ಯಾಣ 12, ಹುಮನಾಬಾದ್‌ 09 ಹಾಗೂ ಔರಾದ್‌ನಲ್ಲಿ 08 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಕಾರ ರೈತರಿಗೆ ಅನೂಕೂಲಕ್ಕಾಗಿ ರೈತರನ್ನ ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಹತ್ತಾರು ಯೋಜನೆಯನ್ನ ಜಾರಿಗೆ ತಂದರು ಕೂಡಾ ರೈತರ ಆತ್ಮಹತ್ಯೆಯನ್ನ ತಡೆಯಲು ಸಾಧ್ಯವಾಗುತ್ತಿಲ್ಲ.
Published by:Seema R
First published: