ಬೆಂಗಳೂರು (ಸೆಪ್ಟೆಂಬರ್ 11); ಕಳೆದ ವರ್ಷದಂತೆ ಈ ವರ್ಷವೂ ರಾಜ್ಯದಲ್ಲಿ ಪ್ರವಾಹ ತಲೆದೋರಿತ್ತು. ಕೃಷ್ಣಾ ಸೀಮೆ ಸೇರಿದಂತೆ ಬಹುಪಾಲು ಉತ್ತರ ಕರ್ನಾಟಕ ಮತ್ತೊಮ್ಮೆ ಪ್ರವಾಹವನ್ನು ಎದುರಿಸಿತ್ತು. ಇದಲ್ಲದೆ ಸತತ ಎರಡನೇ ವರ್ಷವೂ ಕೊಡಗಿನ ಜನ ತೀವ್ರ ಮಳೆ ಮತ್ತು ಭೂ ಕುಸಿತಕ್ಕೆ ಸಿಲುಕಿ ಕಂಗಾಲಾಗಿದ್ದರು. ಕಳೆದ ವರ್ಷದ ಮಳೆ ಸೃಷ್ಟಿಸಿದ್ದ ಅನಾಹುತದಿಂದ ಹೊರಬರುವುದರೊಳಗಾಗಿ ಈ ವರ್ಷವೂ ಮುಂದುವರೆದ ಪ್ರವಾಹ ಜನ ಜೀವನವನ್ನು ಅಸ್ತವ್ಯಸ್ಥಗೊಳಿಸಿತ್ತು. ಮಳೆಯಿಂದಾಗಿ ನೂರಾರು ಕೋಟಿ ಆಸ್ತಿ ಪಾಸ್ತಿಯೂ ಸಹ ನಷ್ಟವಾಗಿತ್ತು. ಕೊರೋನಾ ನಡುವೆ ಬಂದೆರಗಿದ್ದ ಈ ಪ್ರವಾಹ ಸರ್ಕಾರಕ್ಕೂ ನುಂಗಲಾರದ ತುತ್ತಾಗಿತ್ತು. ಇದೀಗ ಈ ಸಂಬಂಧ ಕೇಂದ್ರಕ್ಕೆ ವರದಿ ನೀಡಿರುವ ರಾಜ್ಯ ಸರ್ಕಾರ "2020ರ ಆಗಸ್ಟ್ ತಿಂಗಳಲ್ಲಿ ಉಂಟಾದ ಮಳೆ ಮತ್ತು ಪ್ರವಾಹದಿಂದ ತೀವ್ರ ಹಾನಿಗೊಳಗಾದ ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳನ್ನು ‘ಪ್ರವಾಹಪೀಡಿತ ತಾಲೂಕುಗಳು’ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಅಸಲಿಗೆ ರಾಜ್ಯದ ಮಟ್ಟಿಗೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಮಳೆ ಕಡಿಮೆಯೇ ಆಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಅಗತ್ಯಕ್ಕಿಂತ ಅಧಿಕ ಮಳೆಯಾಗಿತ್ತು. ಹೀಗಾಗಿ ಕೃಷ್ಣಾ ತುಂಬಿ ಹರಿದ ಪರಿಣಾಮ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಸಂದರ್ಭದಲ್ಲಿ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲೂ ಮಳೆಯಾಗಿ ಅಪಾರ ಪ್ರಮಾಣದ ಜೀವಹಾನಿ, ಬೆಳೆ ಹಾನಿ, ಮನೆ ಕುಸಿತಗಳು ಸಂಭವಿಸಿದ್ದವು.
ಪ್ರಸ್ತುತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದ ಪ್ರವಾಹ ಉಂಟಾಗಿದೆ ಎಂದು ತಿಳಿಸಿದೆ. ಈ ಉಸ್ತುವಾರಿ ಕೇಂದ್ರದ ವರದಿಯನ್ನಾಧರಿಸಿ, 130 ತಾಲೂಕುಗಳನ್ನು ಅತಿವೃಷ್ಟಿ ಅಥವಾ ಪ್ರವಾಹಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ.
ಪ್ರವಾಹಪೀಡಿತ ತಾಲ್ಲೂಕುಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಪ್ರಕಾರ ರಾಜ್ಯ ಸರ್ಕಾರ ಹೊರಡಿಸಿದ ಆದೇಶಗಳ ಜಿಲ್ಲಾಡಳಿತ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರವನ್ನು ವಿತರಿಸಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ