ಬೆಂಗಳೂರಿನ ಶಾಂತಿನಗರದ ಅಧಿಪತ್ಯಕ್ಕಾಗಿ ಡಾನ್ ಲಿಂಗರಾಜ್ ಕೊಲೆ; ಹತ್ಯೆಯ ಹಿಂದಿದೆ ರೋಚಕ ಕಥೆ

ಶಾಂತಿನಗರವನ್ನ ತಮ್ಮ ಕಪಿಮುಷ್ಠಿಗೆ ತೆಗೆದುಕೊಳ್ಳಬೇಕು. ನಾವುಗಳೇ ಅಲ್ಲೊಂದು ಸಾಮ್ರಾಜ್ಯವನ್ನ ಕಟ್ಟಬೇಕು ಎಂದು 4 ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿಯನ್ನ ಹೊಡೆದು ಹಾಕಿ ಒಂದು ವಾರ ತಲೆ ಮರೆಸಿಕೊಂಡು ಮೆರೆದ ರೌಡಿಗಳು ಈಗ ಪೊಲೀಸರ ಕೈಗೆ ತಗಲಾಕಿಕೊಂಡು ಮತ್ತೆ ಜೈಲು ಸೇರಿದ್ದಾರೆ.

ಲಿಂಗರಾಜು ಹತ್ಯೆ ಆರೋಪಿಗಳು.

ಲಿಂಗರಾಜು ಹತ್ಯೆ ಆರೋಪಿಗಳು.

  • Share this:
ಹಾಸನ; ಬೆಂಗಳೂರಿನ‌ ಶಾಂತಿನಗರದ ಅಧಿಪತ್ಯಕ್ಕಾಗಿ ಎರಡು ಗುಂಪಿನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಅಂಡರ್ ವರ್ಲ್ಡ್ ಡಾನ್ ಲಿಂಗರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 12 ಮಂದಿ ಆರೋಪಿಗಳನ್ನ ಹೆಡೆಮುರಿ ಕಟ್ಟುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಮನಗರ ಮೂಲದ ಆಟೋ ಡ್ರೈವರ್ ಮೋಹನ್ ಅಲಿಯಾಸ್ ಡಬ್ಬಲ್ ಮೀಟರ್ ಮೋಹನ್ (32), ಬೆಂಗಳೂರಿನ ದೊಡ್ಡಬಿದರಕಲ್ಲು ಮೂಲದ ಕಾರುಚಾಲಕ ನಂಜಪ್ಪ ಅ. ಕರಿಯ (35), ವಿಲ್ಸನ್ ಗಾರ್ಡನ್ ಸಮೀಪದ ವಿನಾಯಕ ನಗರದ ನಾಗರಾಜ್ ಬಿನ್ ಜೈರಾಮ್ (34), ಶಕ್ತಿ ವೇಲು ನಗರದ ಪಾರ್ಥಿಬನ್ ಅ. ಪಾರ್ಥಿ ( 28), ತಿಲಕ್ ನಗರದ ವಾಲ್ಟರ್ ಅ. ಗ್ರೇಸ್ ವಾಲ್ಟರ್ (30), ಆಡುಗೋಡಿಯ ನವೀನ್ (28), ಜಾಲಹಳ್ಳಿ ಸಮೀಪದ ಅಯ್ಯಪ್ಪ ಲೇಔಟ್‌ನ ಪ್ರದೀಪ್ ಅ. ದಾಸರಳ್ಳಿ ಕೇಬಲ್ ಪ್ರದಿ (26), ಜಯನಗರದ ಕಾರು ಚಾಲಕ ಸುನೀಲ್ (30), ಗಿರಿನಗರದ ಹಣ್ಣಿನ ವ್ಯಾಪಾರಿ ರಮೇಶ್ (29), ಕೇಬಲ್ ಕೆಲಸ ಮಾಡ್ತಿದ್ದ ಜೆ.ಪಿ.ನಗರದ ಕಣ್ಣನ್ ಅ. ಕಣ್ಣ (26), ವೇಲು (27), ಶಾಂತಿನಗರದ ಕಾರುಚಾಲಕ ಸುರೇಶ್ (30), ಬನಶಂಕರಿಯ ಬಾರ್ ಬೆಂಡಿಂಗ್ ಕೆಲಸ ಮಾಡ್ತಿದ್ದ ಮನೋಹರ್ ಅ. ಮನು (28), ರಾಮನಗರ ಜಿಲ್ಲೆಯ ಚನ್ನಪಟ್ಟಣದ ಯಲಕೆರೆಯ ಪಾನಿಪುರಿ ವ್ಯಾಪಾರಿ ದರ್ಶನ್ (32), ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕಮರವಳ್ಳಿಯ ಟ್ರ್ಯಾಕ್ಟರ್ ಡ್ರೈವರ್ ಸುದೀಪ್ (20), ಮತ್ತು ಹಿರೀಸಾವೆ ಸಮೀಪದ ಜೋಳಂಬಳ್ಳಿ ಗ್ರಾಮದ ಮಂಜುನಾಥ್ (18) ಬಂಧಿತ ಆರೋಪಿಗಳು.

ಘಟನೆ ವಿವರ

ಡಿ.8ರ ತಡರಾತ್ರಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಸಮೀಪದ ಕಮರಳ್ಳಿಯಲ್ಲಿ ಬೆಂಗಳೂರಿನ ನಟೋರಿಯಸ್ ರೌಡಿ ಶೀಟರ್ ಲಿಂಗರಾಜ್ ತಮ್ಮ ಫಾರ್ಮ್ ಹೌಸ್ ನಲ್ಲಿ ಪಾನಮತ್ತನಾಗಿ ಮಲಗಿದ್ದಾಗ 10 ರಿಂದ 15 ಮಂದಿ ದುಷ್ಕರ್ಮಿಗಳು ಆತನ ಮೇಲೆ ದಾಳಿ ನಡೆಸಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಬಳಿಕ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರೌಡಿಸಂನಲ್ಲಿ ಬದುಕೋದು ಮೂರು ದಿನವಾದ್ರು, ಹೆಸರು ಮಾಡಬೇಕು. ಜೀವವಿರೋತನ ದುಡ್ಡು ಮಾಡಿಕೊಂಡು ಬಿಂದಾಸ್ ಆಗಿ ಬದುಕಬೇಕು. ಈ ಕೊಲೆ ನಡೆದಿದ್ದು ಅದೇ ಕಾರಣಕ್ಕೆ. ಇವನನ್ನ ಕೊಲೆ ಮಾಡಿದ್ರೆ, ನಾವು ಶಾಂತಿನಗರ, ಪ್ರಕಾಶ್ ನಗರ, ಜಯನಗರ, ವಿಲ್ಸನ್ ಗಾರ್ಡನ್ ನಂತಹ ಏರಿಯಾಗಳಿಗೆ ಡಾನ್ ಆಗಿ ಮೆರೆಯಬಹುದು ಅಂತ ಹಿಂದಿನಿಂದಲೂ ಈ ಡಬ್ಬಲ್ ಮೀಟರ್ ಮೋಹನ್ ಮತ್ತು ವಿಲ್ಸನ್ ಗಾರ್ಡನ್ ನಾಗನೊಂದಿಗೆ ಸೇರಿ ಲಿಂಗರಾಜು ಕೊಲೆ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಮತ್ತು ಹಫ್ತಾ ವಸೂಲಿ ವಿಚಾರದಲ್ಲಿ ಇವರ ನಡುವೆ ಹಿಂದೆ ಪದೇ ಪದೇ ಜಗಳ ಸಹ ಆಗುತ್ತಿತ್ತು.

ಇವರಿಬ್ಬರನ್ನು ಕೊಲೆ ಮಾಡಬೇಕೆಂದು ಲಿಂಗರಾಜು ತನ್ನ ಗುರುವಾದ ಚಿಗರಿ ಸುನೀಲನೊಂದಿಗೆ ಸ್ಕೆಚ್ ಹಾಕಿದ್ದ. ಆದರೆ ಈ ವಿಚಾರ ಡಬ್ಬಲ್ ಮೀಟರ್ ಮೋಹನ್ ಮತ್ತು ವಿಲ್ಸನ್ ಗಾರ್ಡನ್ ನಾಗನಿಗೆ ಗೊತ್ತಾಗಿ ಲಿಂಗರಾಜುವಿಗೆ ಸ್ಕೆಚ್ ಹಾಕೋದಿಕ್ಕೆ ಸಂಚು ರೂಪಿಸಿದರು. ಅದ್ರಂತೆ ಬೆಂಗಳೂರಿನ ಬನ್ನೇರುಘಟ್ಟದ ರಸ್ತೆಯಲ್ಲಿರುವ ರಾಯಲ್ ಮೀನಾಕ್ಷಿ ಮಾಲ್ ನಲ್ಲಿ ಆರೋಪಿಗಳು ಒಟ್ಟಿಗೆ ಸೇರಿ ಸ್ಕೇಚ್ ರೆಡಿ ಮಾಡಿ ರಾಜಿ ಮಾಡಿಕೊಳ್ಳುವ ನೆಪದಲ್ಲಿ ವಿಲ್ಸನ್ ಗಾರ್ಡನ್ ನಾಗರಾಜು ದೂರವಾಣಿಯಲ್ಲಿ ಮಾತುಕತೆ ನಡೆಸಿ ನಂತರ ಲಿಂಗರಾಜ್ ತೋಟದ ಮನೆಗೆ ಬಂದು ಆತನೊಂದಿಗೆ ಮದ್ಯಪಾನ ಸೇವಿಸಿ ಹೊರಹೋದವನಂತೆ ನಾಟಕವಾಗಿ ರಾತ್ರಿ ತನ್ನ 15 ಮಂದಿ ಸ್ನೇಹಿತರೊಂದಿಗೆ ಬಂದು ಪಾನಪತ್ತನಾಗಿ ಮಲಗಿದ್ದ ಲಿಂಗರಾಜ್ ರೂಮಿನ ಬಾಗಿಲನ್ನ ಕಬ್ಬಿಣದ ರಾಡ್ ನಿಂದ ಒಡೆದುಹಾಕಿ ಬರ್ಬರವಾಗಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು.

ಕೊಲೆಯ ಹಿಂದಿನ ಘಟನಾವಳಿ

ಲಿಂಗರಾಜ್ ಕೊಲೆ ಪ್ರಕರಣ ತಿಳಿಯಬೇಕಾದರೆ ಈ ಕತೆಯನ್ನು ನೀವು ಓದಲೇಬೇಕು. 1980-90ರ ದಶಕದಲ್ಲಿ ಬೆಂಗಳೂರಿನ ನಟೋರಿಯಸ್ ಪಾತಕಿ ಗಿಡ್ಡನಾಗ. ಆ ಗಿಡ್ಡ ನಾಗನ ತಮ್ಮನೇ ಪ್ರಕಾಶ್ ನಗರ ಕಿಟ್ಟಿ. ಆ ಕಾಲದಲ್ಲಿ ಕಿಟ್ಟಿ ಪ್ರಕಾಶ್ ನಗರದಲ್ಲಿ ತನ್ನದೇ ಹವಾ ಸೃಷ್ಟಿಸಿದ್ದ. 1990-92ರಲ್ಲಿ ಪೊಲೀಸ್ ವರ್ಲ್ಡ್‌ ಪತ್ರಿಕೆಯೊಂದರಲ್ಲಿ ರಾಜಾಜಿನಗರದ ಪೊಲೀಸ್ ಪೇದೆಯೊಬ್ಬರ ವಿರುದ್ಧ ಇದೇ ಕಿಟ್ಟಿ ಲೇಖನವೊಂದನ್ನ ಬರೆಸ್ತಾನೆ. ಅದು ಕಿಟ್ಟಿ ಮತ್ತು ಪೊಲೀಸ್ ಕಾನ್ಸ್‌ಟೇಬಲ್‌ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತೆ. ಪೊಲೀಸ್ ಕಾನ್ಸ್‌ಟೇಬಲ್‌ ಕಿಟ್ಟಿ ಮನೆಗೆ ಹೋಗಿ ಆತನ ತಂಗಿಗೆ ಅವಾಜ್ ಹಾಕಿ ಬರ್ತಾರೆ. ಇದು ಕಿಟ್ಟಿಯ ರೋಷವನ್ನ ಕೆರಳಿಸುತ್ತೆ. ತನ್ನ ಏರಿಯಾದಲ್ಲಿ ದೊಡ್ಡಜಾತ್ರೆ ನಡೆಯುವ ವೇಳೆ ಇಬ್ಬರು ಮೊದಲ ಬಾರಿಗೆ ಮುಖಾಮುಖಿ ಭೇಟಿಯಾಗಿ ಮಾತಿನ ಮೂಲಕ ಜಗಳವಾಡ್ತಾರೆ. ಜಾತ್ರೆ ಮುಗಿದ ಬಳಿಕ ಪೊಲೀಸ್ ಕಾನ್ಸ್‌ಟೇಬಲ್‌, ಕಿಟ್ಟಿಯನ್ನ ಅಟ್ಟಾಡಿಸಿಕೊಂಡು ಹೋಗುವಾಗ ಪ್ರಕಾಶ್ ನಗರದ ಪಾರ್ಕ್‌ ಬಳಿಯಿಂದ ಜಿಂಕೆಯಂತೆ ಓಡಿ ಬಂದ ಬಾಲಕನೋರ್ವ ಪೊಲೀಸ್ ಕಾನ್ಸ್‌ಟೇಬಲ್‌ನನ್ನ ಎಳೆದು ಬೀಳಿಸ್ತಾನೆ. ನಂತ್ರ ಕಿಟ್ಟಿ ಸೇರಿದಂತೆ ನಾಲ್ಕೈದು ರೌಡಿಗಳು ಸ್ಥಳದಲ್ಲಿಯೇ ಕಾನ್ಸ್‌ಟೇಬಲ್‌ನನ್ನು ಬರ್ಬರವಾಗಿ ಕೊಲೆ ಮಾಡ್ತಾರೆ. ಆ ಸಂದರ್ಭದಲ್ಲಿ ಬಾಲಕನ ವಿರುದ್ಧವೂ ಪ್ರಕರಣ ದಾಖಲಾಗುತ್ತೆ. ಆ ಬಾಲಕ ಬೇರ್ಯಾರು ಅಲ್ಲ. ಅಂಡರ್ ವರ್ಲ್ಡ್‌ ಜಗತ್ತಿನೊಂದಿಗೆ ಕಾಣಿಸಿಕೊಂಡಿದ್ದ ಭೂಗತ ಲೋಕದಲ್ಲಿ ಮೆರೆಯುತ್ತಿರುವ ಚಿಗರಿ ಸುನೀಲ ಅಲಿಯಾಸ್ ಸೈಲೆಂಟ್ ಸುನೀಲ.

90ರ ದಶಕದಲ್ಲಿ ಪ್ರಕಾಶ್ ನಗರದ ನಟೋರಿಯಸ್ ರೌಡಿ ಶೀಟರ್ ಕಿಟ್ಟಿ ಎಂಬಾತನಿಗೆ ಕಾಫಿ-ಟೀ ತಂದು ಕೊಡುವ ಮೂಲಕ ಚಿಗರಿ ಸುನೀಲ ಗುರುತಿಸಿಕೊಂಡಿದ್ದ. ಕೇರಳ ಮೂಲದ ಈತ 16ನೇ ವಯಸ್ಸಿಯನ್ನಲ್ಲಿಯೇ ಕಾನ್ಸ್‌ಟೇಬಲ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ ಬಾಲಾಪಾರಾಧಿ. ನಂತ್ರ ಕಿಟ್ಟಿಯ ಅಣ್ಣ ಗಿಡ್ಡನಾಗನನ್ನು ಬೆಕ್ಕಿನ ಕಣ್ಣಿನ ರಾಜೇಂದ್ರ ಮತ್ತು ಆತನ ಸಹಚರರು ಕೊಚ್ಚಿ ಹಾಕ್ತಾರೆ. ಜೈಲಿನಲ್ಲಿದ್ದ ಕಿಟ್ಟಿ ಹೊರಬಂದು ತನ್ನ ಅಣ್ಣನನ್ನು ಕೊಲೆ ಮಾಡಿದ ರಾಜೇಂದ್ರನನ್ನ ಮುಗಿಸಬೇಕೆಂದು ಸ್ಕೇಚ್ ರೂಪಿಸಿದಾಗ ಆತನ ಸಹಾಯಕ್ಕೆ ನಿಂತವನೇ ಸುನೀಲ. ಈತ ಓಡುವುದಕ್ಕೆ ಪ್ರಾರಂಭಿಸಿದ್ರೆ ಜಿಂಕೆಯಂತೆ ಓಡ್ತಿದ್ದ. ಹಾಗಾಗಿ ಈತನಿಗೆ ಚಿಗರಿ ಸುನೀಲ ಅಂತನೂ ಕರಿತಾರೆ.

ಅಣ್ಣನನ್ನು ಕೊಲೆ ಮಾಡಿದನಿಗೆ ಸ್ಕೆಚ್ ಹಾಕಿದ ಕಿಟ್ಟಿ, ಹೋಟೆಲ್ ಕಾನಿಷ್ಕಾ ಬಾಗಿಲಿನ ಬಳಿಯಲ್ಲಿ ವಾಲೆ ಮಂಜುವಿನ ಜೊತೆ ಮಾತನಾಡಿಕೊಂಡು ನಿಂತಿದ್ದ ಬೆಕ್ಕಿನ ಕಣ್ಣಿನ ರಾಜೇಂದ್ರನನ್ನು ಕಿಟ್ಟಿ ಮತ್ತು ಸೈಲೆಂಟ್ ಸುನೀಲ ತನ್ನ ಸಹಚರರಾದ ಪಿಟಿ ಸಂತೋಷ್, ತೊದ್ಲುಮಂಜು ಮತ್ತು ಒಂಟೆ ರೋಹಿತ್ ಸೇರಿ 10ಕ್ಕೂ ಹೆಚ್ಚು ಮಂದಿ ಕೊಚ್ಚಿ ಕೊಲೆ ಮಾಡ್ತಾರೆ. ಆದ್ರೂ ರಾಜೇಂದ್ರ ಬದುಕಿಬಿಡ್ತಾನೆ. ಇದಾದ 15 ದಿನದೊಳಗೆ ಪ್ರಕಾಶ್ ನಗರದ ಪಿಎಸ್ ಐ ನರಸಿಂಹಯ್ಯ ಕಿಟ್ಟಿಯನ್ನ ಶೂಟೌಟ್ ಮಾಡ್ತಾರೆ. ಕಿಟ್ಟಿ ಕೊಲೆಯಾದ ಮೇಲೆ ಬೆಂಗಳೂರಿನ ಪಾತಕ ಲೋಕದಲ್ಲಿ ಚಿಗರಿ ಸುನೀಲನ ಹೆಸರು ರಾರಾಜಿಸುತ್ತೆ.

ಬುಲೇಟ್ ರವಿ ಕೊಲೆ ಪ್ರಕರಣ ಸೇರಿದಂತೆ ಹಲವು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ 2016ರಲ್ಲಿ ನಡೆದ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಕೇಸ್‌ನಲ್ಲಿಯೂ ಭಾಗಿಯಾಗಿದ್ದ ಅಗ್ನಿ ಶ್ರೀಧರ್ ಸಹಚರನೇ ಆ ಚಿಗರಿ ಸುನೀಲ ಅಲಿಯಾಸ್ ಸೈಲೆಂಟ್ ಸುನೀಲ. ವಿಲ್ಸನ್ ಗಾರ್ಡನ್ ನಾಗನಿಗೆ ಹಾಕಿದ್ದ ಸ್ಕೆಚ್ ಮಿಸ್ಸಾಗಿತ್ತು. ಹಾಸನ ಮೂಲಕ ಕಮರವಳ್ಳಿಯ ಲಿಂಗರಾಜು ಎರಡೂವರೆ ದಶಕಗಳ ಹಿಂದೆ ಬೆಂಗಳೂರಿನತ್ತ ಮುಖಮಾಡಿ ಶಾಂತಿನಗರದಲ್ಲಿ ಸಣ್ಣ ಪುಟ್ಟ ಕೆಲ್ಸಮಾಡಿಕೊಂಡು ಜೀವನ ನಡೆಸ್ತಿದ್ದ. ಬಳಿಕ ಸೈಲೆಂಟ್ ಸುನೀಲನನ್ನು ಪರಿಚಯ ಮಾಡಿಕೊಂಡು ನಂತ್ರ ಶಿಷ್ಯನಾಗಿ ಗುರುತಿಸಿಕೊಂಡಿದ್ದ ಕೊಲೆಯಾದ ಲಿಂಗರಾಜು. ರಿಯಲ್ ಎಸ್ಟೇಟ್ ವ್ಯವಹಾರದ ಜೊತೆಗೆ ಹಫ್ತಾ ವಸೂಲಿ ಮಾಡಿಕೊಂಡು ಹಲವು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಲಿಂಗರಾಜ್, ಶಾಂತಿನಗರದ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ. ಕೊರೊನಾ ವೇಳೆ ತನ್ನ ಸ್ವಗ್ರಾಮ ಕಮರವಳ್ಳಿಯಲ್ಲಿರುವ ತನ್ನ ಜಮೀನಿನಲ್ಲಿ ನಿರ್ಮಿಸಿದ್ದ ಮನೆಯಲ್ಲಿಯೇ ಬಂದು ವಾಸವಾಗಿದ್ದ.

ಶಾಂತಿನಗರದಲ್ಲಿ ಹಫ್ತಾ ವಸೂಲಿ, ರಿಯಲ್ ಎಸ್ಟೇಟ್ ಮಾಡಿ ಕೋಟ್ಯಾಂತರ ರೂಪಾಯಿ ದುಡ್ಡ ಮಾಡಿದ್ದ. ರಿಯಲ್ ಎಸ್ಟೇಟ್ ವಿಚಾರದಲ್ಲಿ ಲಿಂಗರಾಜ್ ಮತ್ತು ವಿಲ್ಸನ್ ಗಾರ್ಡನ್ ನಾಗ, ಡಬ್ಬಲ್ ಮೀಟ್ರು ಮೋಹನ ಹಲ್ಲೆ ಮಾಡಿದ್ರು. ಇದೇ ವಿಚಾರಕ್ಕೆ ಲಿಂಗರಾಜ್ ತನ್ನ ಗುರು ಸೈಲೆಂಟ್ ಸುನೀಲ್ ಮೂಲಕ ಕೊಲೆ ಮಾಡಿಸಲು ಸ್ಕೇಚ್ ಹಾಕಿದ್ದ. ಎರಡು ಮೂರು ಬಾರಿ ಸ್ಕೇಚ್ ಮಿಸ್ಸಾಗಿತ್ತು.

ಒಬ್ಬರನೊಬ್ಬರು ಕೊಲೆ ಮಾಡಲು ಸ್ಕೆಚ್ ಹಾಕಿಕೊಂಡಿದ್ರು. ಆದ್ರೆ ವಿಲ್ಸನ್ ಗಾರ್ಡನ್ ನಾಗ ತನ್ನ ಬುದ್ದಿವಂತಿಕೆಯನ್ನ ಬಳಸಿ ರಾಜಿ ಮಾಡಿಕೊಳ್ಳುವ ನೆಪದಲ್ಲಿ ಆತನೊಂದಿಗೆ ಮಾತನಾಡಿ, ಹಾಸನಕ್ಕೆ ಬರ್ತಾನೆ. ರಾಜಿ ಸಂಧಾನ ಮಾಡಿಕೊಳ್ಳುವ ನೆಪ ಮಾಡಿ ಆರೋಪಿಗಳೆಲ್ಲರೂ ಲಿಂಗರಾಜು ಜೊತೆ ಮದ್ಯಪಾನ ಮಾಡಿ ಅಲ್ಲಿಂದ ಹೊರಡುತ್ತಾರೆ. ಪಾನಮತ್ತನಾದ ಲಿಂಗರಾಜು ನಿದ್ರೆಗೆ ಜಾರಿದ ವಿಚಾರವನ್ನ ತಿಳಿದು ಮನೆಯ ಬಾಗಿಲನ್ನು ಸುತ್ತಿಗೆಯಿಂದ ಹೊಡೆದು, ಮನೆಯೊಳಗೆ ನುಗ್ಗಿ ಮನೆಯಲ್ಲಿ ಮಲಗಿದ್ದ ಲಿಂಗರಾಜನನ್ನು ಸುತ್ತಿಗೆ ಮತ್ತು ಮಚ್ಚುಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡುತ್ತಾರೆ.

ಬಳಿಕ ಕೃತ್ಯದ ದೃಶ್ಯಗಳು ಸೆರೆಯಾಗಿದ್ದ ಸಿಸಿಟಿವಿಯ ಡಿ.ವಿ.ಆರ್‌ಅನ್ನು ಹೊತ್ತೊಯ್ದಿದ್ದರು. ಸದ್ಯ ಒಂದು ವಾರದೊಳಗೆ ಎಲ್ಲಾ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೃತ್ಯಕ್ಕೆ ಬಳಸಿದ 9 ಲಾಂಗ್, ಒಂದು ಸುತ್ತಿಗೆ, 2 ಕಾರು, 1 ದ್ವಿಚಕ್ರ ವಾಹನ ಸೇರಿದಂತೆ ಹಲವು ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.

ಇನ್ನು, ಆರೋಪಿಗಳ ಹಿನ್ನೆಲೆ ನೋಡೋದಾದ್ರೆ ಮೋಹನ ಅಲಿಯಾಸ್ ಡಬ್ಬಲ್ ಮೀಟ್ರು ಮೋಹನ ಬೆಂಗಳೂರು ನಗರದ ಕೆಂಗೇರಿ, ವಿಲ್ಸನ್‌ಗಾರ್ಡನ್‌, ಯಲಹಂಕ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, 4 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ಜೈರಾಮ್, ಹಾಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಪೆರೋಲ್ ಮೇಲೆ ಹೊರಬಂದು ಈ ಕೃತ್ಯದಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಕೂಡ ಕಲಾಸಿಪಾಳ್ಯ, ವೈಟ್ ಫೀಲ್ಡ್ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕೊಲೆ ಪ್ರಕರಣಗಳಿವೆ. ಇನ್ನು ನಂಜಪ್ಪ ಅಲಿಯಾಸ್ ಕರಿಯ ಗೇಟ್ ಗಣೇಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ನವೀನ್ ಕುಮಾರ ಕೂಡಾ ಒಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ವೈಟ್ ಫೀಲ್ಡ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಾಸರಹಳ್ಳಿಯ ಪ್ರದೀಪ್ ಯಲಹಂಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ. ಸುನೀಲ್ ಕೂಡಾ ಒಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

ಇದನ್ನು ಓದಿ: ಪ್ರಮುಖ ರಾಜಕಾರಣಿಗೆ ಬಿಗ್ ಬಾಸ್ ಗಾಳ; ಕನ್ನಡದ 8ನೇ ಆವೃತಿಯಲ್ಲಿ ಕೇಳಲಿದೆಯೇ ಹಳ್ಳಿ ಹಕ್ಕಿ ಕಲರವ?

ಇನ್ನು ತಮಿಳುನಾಡು ಮೂಲದ ಶಕ್ತಿವೇಲುನಗರದ ನಿವಾಸಿ ಪಾರ್ಥಿಬನ್ ಆಲಿಯಾಸ್ ಪಾರ್ಥಿ ಕೂಡಾ ಕೊಲೆ ಪ್ರಕರಣ ಮತ್ತು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು, ವಿಲ್ಸನ್ ಗಾರ್ಡನ್ ಮತ್ತು ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಣ್ಣನ್ ಅಲಿಯಾಸ್ ಕಣ್ಣ, ವೇಲು ಹಾಗೂ ಸುರೇಶ್ ಕೂಡಾ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಹುಳಿಮಾವು ಮತ್ತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ರೌಡಿ ಶೀಟರ್ ಗಳಾಗಿದ್ದಾರೆ.

ಜಮೀನಿನ ವಿಚಾರಕ್ಕೆ ನಡೆದಿದ್ದ ಕೊಲೆ ರಹಸ್ಯ ಭೇದಿಸಿದ ಪೊಲೀಸರು ಕೊಲೆಯಾದ ಲಿಂಗರಾಜ್ ಮತ್ತು ಕಮರವಳ್ಳಿ ಗ್ರಾಮದ ಆರೋಪಿ ಟ್ರ್ಯಾಕ್ಟರ್ ಡ್ರೈವರ್ ಸುದೀಪ್ ಮತ್ತು ಮಂಜುನಾಥ್ ನಡುವೆ ಜಮೀನಿನ ವಿಚಾರದಲ್ಲಿ ಜಗಳವಾಗಿರುತ್ತೆ. ಜಗಳ ತಾರಕಕ್ಕೇರಿ ಸುದೀಪ್ ಕೊಲೆ ಮಾಡುವ ಯೋಚನೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ಇದೇ ವೇಳೆಗೆ ಇವರಿಬ್ಬರಿಗೂ ಬೆಂಗಳೂರಿನ ಈ ನಟೋರಿಯಸ್ ರೌಡಿಗಳ ಪರಿಚಯವಾಗಿ ಲಡ್ಡು ಬಂದು ಬಾಯಿಗೆ ಬಿದ್ದಂಗೆ ಆರೋಪಿಗಳಿಗೆ ಇವರುಗಳ ಸಹಾಯ ಸಿಕ್ಕಿದ್ದು. ನಂತರ ಕೊಲೆ ಮಾಡಲು ಸಹಕಾರಿಯಾಯ್ತು. ಮೊಬೈಲ್ ಟವರ್ ಆಧಾರದ ಮೇಲೆ ಸುದೀಪ್ ಮತ್ತು ಮಂಜುನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ಸಂಪೂರ್ಣ ಮಾಹಿತಿ ಹೊರಬಿದ್ದಿದೆ.

ಒಟ್ಟಾರೆ, ರೌಡಿಸಂ ನಿಂದ ಹೆಸರು ಮಾಡಬೇಕೆಂಬ ಒಂದೇ ಒಂದು ಕಾರಣದಿಂದ 90ರ ದಶಕಗಳಿಂದಲೂ ಪಾತಕಿಗಳ ತಲೆಗಳು ಪಾತಕಿಗಳಿಂದಲೇ ಉರುಳುತ್ತಿದ್ದು, ಶಾಂತಿನಗರವನ್ನ ತಮ್ಮ ಕಪಿಮುಷ್ಠಿಗೆ ತೆಗೆದುಕೊಳ್ಳಬೇಕು. ನಾವುಗಳೇ ಅಲ್ಲೊಂದು ಸಾಮ್ರಾಜ್ಯವನ್ನ ಕಟ್ಟಬೇಕು ಎಂದು 4 ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿಯನ್ನ ಹೊಡೆದು ಹಾಕಿ ಒಂದು ವಾರ ತಲೆ ಮರೆಸಿಕೊಂಡು ಮೆರೆದ ರೌಡಿಗಳು ಈಗ ಪೊಲೀಸರ ಕೈಗೆ ತಗಲಾಕಿಕೊಂಡು ಮತ್ತೆ ಜೈಲು ಸೇರಿದ್ದಾರೆ.

ವರದಿ - ಡಿಎಂಜಿಹಳ್ಳಿ ಅಶೋಕ್
Published by:HR Ramesh
First published: