Kambala: ಪುರುಷ ಪ್ರಧಾನ ಕಂಬಳ ಕ್ರೀಡೆಯಲ್ಲಿ ಗಮನ ಸೆಳೆದ 11ರ ಪೋರಿ ಚೈತ್ರಾ

ತುಳುನಾಡಿನ ಅಪ್ಪಟ ಜನಪದ ಆಟ ಕಂಬಳದಲ್ಲಿ ಸದ್ಯ ಪುಟ್ಟ ಬಾಲಕಿ ಕೆಸರು ಗದ್ದೆಗೆ ಇಳಿದು ಹೊಸ ಇತಿಹಾಸ ಬರೆದಿದ್ದಾಳೆ.

ಚೈತ್ರಾ

ಚೈತ್ರಾ

  • Share this:
ಉಡುಪಿ (ಮಾ. 5): ಪುರುಷ ಪ್ರಧಾನ ಸಮಾಜ ಹೇಗೆ ಶತಮಾನ ಉರುಳಿದಂತೆ ಬದಲಾಯಿತೋ ಹಾಗೆ ಪುರುಷ ಪ್ರಧಾನ ಕ್ರೀಡೆ ಇದೀಗ ಬದಲಾವಣೆ ಹಾದಿಯಲ್ಲಿದೆ.‌ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರೂ ಸಾಧನೆ ಮೆರೆಯುತ್ತಿರುವ ಈ ಕಾಲಘಟ್ಟದಲ್ಲಿ ಇದೀಗ ಕಂಬಳದಲ್ಲೂ ಬಾಲಕಿ ಪ್ರವೇಶ ಮಾಡುವ ಮೂಲಕ ಕಂಬಳದ ಇತಿಹಾಸವೇ ಬದಲಾಗುವ ಲಕ್ಷಣ ಕಂಡುಬಂದಿದೆ.  ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಓಟ, ತುಳುನಾಡಿನ ಅಪ್ಪಟ ಜನಪದ ಆಟ ಎಂದರೆ, ಅದು  ಕರಾವಳಿಯ ಹೆಮ್ಮೆಯ ಕಂಬಳ. ಈ ಕಂಬಳದಲ್ಲಿ ಸದ್ಯ ಪುಟ್ಟ ಬಾಲಕಿ ಕೆಸರು ಗದ್ದೆಗೆ ಇಳಿದು ಹೊಸ ಇತಿಹಾಸ ಬರೆದಿದ್ದಾಳೆ. ಈ ಬಾರಿಯ ಕಂಬಳ ಕೂಟದಲ್ಲಿ ಕೆಸರು ಗದ್ದೆಗೆ ಇಳಿದು ಈಕೆ ಜನರ ಮನಸೊರೆಗೊಂಡಿದ್ದಾಳೆ.

ಕೆಸರು ಗದ್ದೆಯ ಆಟ ಕಂಬಳ ಪ್ರಮುಖ ಆಕರ್ಷಣೆ ಕ್ರೀಡೆ.  ಈ ಕೆಸರು ಗದ್ದೆಯ ಕಂಬಳ‌ಗಳಲ್ಲಿ ಬಾಲಕಿಯೊಬ್ಬಳು ಈಗ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಕಂಬಳ ಗದ್ದೆಗಳಲ್ಲಿ, ತಲೆಗೊಂದು ಮುಂಡಾಸು ಬಿಗಿದು ತನ್ನ ಮನೆಯ ಕೋಣಗಳ ಜೊತೆಗೆ ಕಂಬಳ ಗದ್ದೆಗೆ ಇಳಿದು ಹೊಸ ಅಧ್ಯಾಯ ‌ಬರೆದ ಈಕೆಯ ಹೆಸರು ಚೈತ್ರಾ. ಕುಂದಾಪುರದ ಬೋಳಂಬಳ್ಳಿ ಗ್ರಾಮದ ಪರಮೇಶ್ವರ ಭಟ್-ರಮ್ಯಾ ದಂಪತಿ ಹಿರಿಯ ಮಗಳು. 11 ವರ್ಷದ ಈಕೆ ಆರನೇ ತರಗತಿ ಕಲಿಯುತ್ತಿದ್ದು, ತಾನು ಕೂಡ ಕಂಬಳದಲ್ಲಿ ಕೋಣಗಳನ್ನು ಓಡಿಸಬೇಕು, ಕಂಬಳ ಕ್ಷೇತ್ರದ ಹುಸೇನ್ ಬೋಲ್ಟ್ ಶ್ರೀನಿವಾಸ ಗೌಡರಂತೆ ಮಿಂಚಬೇಕು ಎಂದು ಕನಸು ಕಾಣುತ್ತಿದ್ದಾಳೆ.



ಇನ್ನೂ ಚೈತ್ರಾಳಿಗೆ ಕಂಬಳ ಎಂದರೆ ಚಿಕ್ಕವಯಸ್ಸಿನಿಂದಲೇ ತುಂಬಾ ಪ್ರೀತಿ, ಕೋಣಗಳನ್ನು ಸ್ನಾನ ಮಾಡಿಸುವುದು, ಹುರುಳಿ ತಿನ್ನಿಸೋದರಲ್ಲಿ ಈಕೆ ಮುಂದು. 5ನೇ ವಯಸ್ಸಿನಲ್ಲೇ ತಂದೆಯೊಂದಿಗೆ ಕಂಬಳಕ್ಕೆ ಹೋಗುತ್ತಾ, ಸಾಕಿದ‌ ಕೋಣದೊಂದಿಗೆ ಸಮಯ ಕಳೆಯುತ್ತಿದ್ದ ಚೈತ್ರಾಳಿಗೆ ಈಗ ಕಂಬಳ ಅಚ್ಚುಮೆಚ್ಚು.‌ ಕೋಣವನ್ನ ಮುದ್ದಾಡಿ, ಸ್ನಾನ, ಶುಚಿ, ‌ಆಹಾರ ಹೀಗೆ ಎಲ್ಲಾ ಕಾರ್ಯ ಮಾಡುತ್ತಾ ಮುಂದಿನ ಕಂಬಳ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿ ಕನಸನ್ನ ಕಾಣುತ್ತಿದ್ದಾಳೆ ಈ ಪುಟ್ಟ ಬಾಲಕಿ ಚೈತ್ರಾ.

ಇದನ್ನು ಓದಿ: ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಲಸಿಕೆ ವಿತರಣೆಗೆ ಕ್ರಮ; ಸಚಿವ ಸುಧಾಕರ್

ಇನ್ನು ತನ್ನ ಮಗಳ ಬಗ್ಗೆ ಕನಸಿನ ಕುರಿತು ಮಾತನಾಡಿರುವ ಆಕೆಯ ತಂದೆ ಪರಮೇಶ್ವರ್,  ಕಂಬಳದಲ್ಲಿ ಚೈತ್ರಾ 5ನೇ ವಯಸ್ಸಿನಿಂದಲೂ ಆಸಕ್ತಿ ತೋರಿಸ್ತಾಯಿದ್ದಳು.‌  ಅವಕಾಶ ಸಿಕ್ಕಿದರೆ ಮುಂದಿನ ದಿನಗಳಲ್ಲಿ ಆಕೆಯನ್ನು ಪ್ರತೀ ವರ್ಷ ಕಾರ್ಕಳ ತಾಲೂಕಿನಲ್ಲಿ ಪುರುಷರಿಗೆ ‌ನಡೆಯುವ ಕಂಬಳ ತರಬೇತಿಯಲ್ಲಿ ಚೈತ್ರಾಳನ್ನು ಸೇರಿಸಿ ಜೂನಿಯರ್ ವಿಭಾಗದಲ್ಲಿ ಭಾಗವಹಿಸುವಂತೆ ಮಾಡಬೇಕೆನ್ನುವುದು ನಮ್ಮ ಇಚ್ಛೆ ಇದೆ ಎಂದಿದ್ದಾರೆ

ಮಹಿಳೆಯರು ಭಾಗವಹಿಸದೇ ಇದ್ದ ಕಂಬಗಳಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಮಹಿಳೆಯರು ಪ್ರೇಕ್ಷಕರಾಗಿ ಬಂದು ಬೆಳಗ್ಗಿನವರೆಗೆ ಕಂಬಳ ವೀಕ್ಷಿಸುತ್ತಾರೆ. ಸದ್ಯ ಚೈತ್ರಾ ಕಂಬಳ ಗದ್ದೆಗೆ ಇಳಿಯುವ ಮೂಲಕ ಹೊಸ ಅಧ್ಯಾಯ ಶುರು ಮಾಡಿದ್ದು, ಮುಂದಿನ ದಿನಗಳಲ್ಲಿ ಇನಷ್ಟು ಮಹಿಳೆಯರು ಭಾಗವಹಿಸುವ ಸಾಧ್ಯತೆ ಇದೆ.
Published by:Seema R
First published: