ಬೆಂಗಳೂರು: ಗಾಳಿಪಟ ಹಾರಿಸುವಾಗ ಹೈ ಟೆನ್ಷನ್ ವಿದ್ಯುತ್ ತಂತಿ (High-tension wire) ಸ್ಪರ್ಶಿಸಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಆರ್ಟಿ ನಗರದ (RT Nagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 11 ವರ್ಷದ ಬಾಲಕ ಅಬೂಬಕ್ಕರ್ ಸಾವನ್ನಪ್ಪಿದ್ದಾನೆ. ಕಳೆದ ಒಂದುವರೆ ತಿಂಗಳಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಗಾಯ ಅಥವಾ ಸಾವನ್ನಪ್ಪಿರುವ ಮೂರನೇ ಪ್ರಕರಣ ಇದಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಹೈಟೆನ್ಷನ್ ತಂತಿ ಸ್ಪರ್ಶ ಮಾಡಿ ಇಬ್ಬರು ಬಾಲಕರು ಗಂಭೀರ ಗಾಯಗೊಂಡಿದ್ದರು. ಈ ಘಟನೆ ನಡೆದು ಮೂರು ದಿನಗಳಲ್ಲಿ ಮತ್ತೆ ಇಬ್ಬರು ಬಾಲಕರು ಹೈ ಟೆನ್ಷನ್ ವಿದ್ಯುತ್ ತಂತಿ ಸ್ವರ್ಶಿಸಿ, ಒಬ್ಬ ಸಾವನ್ನಪ್ಪಿದ್ದರೆ ಮತ್ತೊಬ್ಬ ಗಾಯಗೊಂಡಿದ್ದನು. ಇದೀಗ ಒಂದುವರೆ ತಿಂಗಳ ಅಂತರದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ.
ಆರ್.ಟಿ ನಗರದ ಚಾಮುಂಡಿ ಲೇಔಟ್ ಬಳಿ ಗಾಳಿಪಟ ಹಾರಿಸಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಸೋಮವಾರ ಈ ಘಟನೆ ನಡೆದಿದ್ದು ಗಾಯಗೊಂಡಿದ್ದ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆ.
ದಾರ ಬಿಡಿಸಲು ಹೋಗಿ ಘಟನೆ
ವಿಶ್ವೇಶ್ವರಯ್ಯ ಲೇಔಟ್ ಬಳಿಯ ತಮ್ಮ ಮನೆಯ ಮಹಡಿ ಮೇಲೆ ನಿಂತು ಗಾಳಿ ಪಟ ಹಾರಿಸುವ ವೇಳೆ ಗಾಳಿ ಪಟದ ಮಾಂಜಾ ದಾರ ವಿದ್ಯುತ್ ತಂತಿಗೆ ಸಿಲುಕಿಕೊಂಡಿದೆ. ಅದನ್ನು ಬಿಡಿಸಲು ಹೋದಾಗ ಬಾಲಕಿನಿಗೆ ವಿದ್ಯುತ್ ಪ್ರವಹಿಸಿದೆ. ತಕ್ಷಣ ಬಾಲಕ ಕಿರುಚಿಕೊಂಡಿದ್ದಾನೆ. ನರಳಾಟದ ಶಬ್ಧ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: Boy Death: ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕ ಸಾವು! ಕೊನೆಗೂ ಫಲಿಸಲೇ ಇಲ್ಲ ಪ್ರಾರ್ಥನೆ
ಬೆಸ್ಕಾಂ ನಿರ್ಲಕ್ಷ್ಯ ಕಾರಣ
ಘಟನೆ ನಡೆದಿರುವ ವ್ಯಾಪ್ತಿಯ ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ಜೋತಾಡುತ್ತಿವೆ. ಮನೆಯ ತಾರಸಿಯ ಮೇಲೆ ನಿಂತು ಕೈಚಾಚಿತರೆ ಕೈಗೆ ತಂತಿಗಳು ಕೈಗೆಟುಕುತ್ತಿವೆ. ಹಾಗಾಗಿ ಬಾಲಕ ಸಾವಿಗೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮದ(ಬೆಸ್ಕಾಂ) ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ತೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ, ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ವಿರುದ್ಧ ದೂರು
ಆರ್.ಟಿ ನಗರದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿದ ಸಂಬಂಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಬಿಎಂಪಿ, ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳ ಮೇಲೆ ಬಾಲಕನ ತಾಯಿ ಸುಲ್ತಾನ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಐಪಿಸಿ 304ಎ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡಸುತ್ತಿದ್ದಾರೆ.
ಬೈಕ್ನಲ್ಲಿ ವೃದ್ಧನನ್ನು ಎಳೆದೊಯ್ದ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ
ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ವೃದ್ಧನೊಬ್ಬನನ್ನು ಬೈಕ್ನಲ್ಲಿ ಒಂದು ಕಿಲೋಮೀಟರ್ಗಿಂತಲೂ ಹೆಚ್ಚು ದೂರ ಎಳೆದುಕೊಂಡು ಹೋಗಿ ಅಮಾನವೀಯವಾಗಿ ವರ್ತಿಸಿದ್ದ ಆರೋಪಿ ಸಾಹಿಲ್ ಎಂಬಾತನನ್ನು ಗೋವಿಂದರಾಜನಗರ ಪೊಲೀಸರು ಬುಧವಾರ ಎಸಿಎಂಎಂ ಕೋರ್ಟ್ ಮುಂದೆ ಆರೋಪಿ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸಾಹಿಲ್ಗೆ ಜನವರಿ 31ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಅಮಾನವೀಯ ವರ್ತನೆ
ಸಾಹಿಲ್ ನಿನ್ನೆ ಒನ್ ವೇ ನಲ್ಲಿ ಎಂಟ್ರಿ ಕೊಟ್ಟು ಟಾಟಾ ಸುಮೋಗೆ ಡಿಕ್ಕಿ ಹೊಡೆದಿದ್ದ. ಟಾಟಾ ಸುಮೋ ಡ್ರೈವರ್ ಹಿಡಿಯಲು ಪ್ರಶ್ನಿಸುತ್ತಿದ್ದಂತೆ ಬೈಕ್ ಹತ್ತಿ ಎಸ್ಕೇಪ್ ಆಗಲು ಪ್ರಯತ್ನಿಸಿದ. ಈ ವೇಳೆ ಟಾಟಾ ಸುಮೋ ಚಾಲಕ ಸಾಹಿಲ್ ಬೈಕ್ ಹಿಡಿದುಕೊಂಡಿದ್ದಾರೆ. ಆದರೆ ಸಾಹಿಲ್ ಮಾತ್ರ ಬೈಕ್ ನಿಲ್ಲಿಸದೇ ಹಾಗೆ ಒಂದುವರೆ ಕಿಮೀ ದೂರ ವೃದ್ಧ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಎಳೆದುಕೊಂಡು ಹೋಗಿದ್ದ. ತಕ್ಷಣ ಕೆಲವರು ಬೈಕ್ ಅಡ್ಡಗಟ್ಟಿ ಸಾಹಿಲ್ಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದರು. ಇನ್ನು ಸಾಹಿಲ್ ವೃದ್ಧನನ್ನು ಬೈಕ್ನಲ್ಲಿ ಎಳೆದುಕೊಂಡು ಹೋಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ