Theft: ಟೈಯರ್ ಪಂಕ್ಚರ್ ಆಗಿದೆ ಅಂತ ಯಾಮಾರಿಸಿದ ಕಳ್ಳರು! ವಿವಿಧೆಡೆ 11 ಲಕ್ಷ ಕ್ಯಾಶ್, ಚಿನ್ನಾಭರಣ ಕದ್ದು ಪರಾರಿ

ಹಾಸನ ಜಿಲ್ಲೆಯ ವಿವಿಧೆಡೆ ಕಳ್ಳರು ಕೈಚಳಕ ತೋರಿದ್ದಾರೆ. ಒಟ್ಟು 11 ಲಕ್ಷ ನಗದು 15 ಲಕ್ಷದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ತೋರರ ಉಪಟಳದಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಪೊಲೀಸರಿಂದ ಪರಿಶೀಲನೆ

ಪೊಲೀಸರಿಂದ ಪರಿಶೀಲನೆ

  • News18
  • Last Updated :
  • Share this:
ಹಾಸನ: ಜಿಲ್ಲೆಯ ಹಲವೆಡೆ ನಡೆದಿರುವ ನಾಲ್ಕು ಪ್ರತ್ಯೇಕ ಕಳ್ಳತನ ಪ್ರಕರಣ (Theft case) ನಡೆದಿದೆ. ಈ ಪ್ರಕರಣಗಳಲ್ಲಿ ಅಂದಾಜು 11 ಲಕ್ಷ ರೂ. ನಗದು, 15 ಲಕ್ಷಕ್ಕೂ ಹೆಚ್ಚು  ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ವಸ್ತುಗಳನ್ನು ಕಳ್ಳರು ದೋಚಿ ಎಸ್ಕೇಪ್ ಆಗಿದ್ದಾರೆ. ಮಂಡ್ಯ (Mandya) ಜಿಲ್ಲೆ ಕದಬಳ್ಳಿ ಗ್ರಾಮದ ಹೇಮಂತ್‌ಕುಮಾರ್ ಎಂಬುವರು ಸೋಮವಾರ 11 ಗಂಟೆ ಸುಮಾರಿನಲ್ಲಿ ತಮ್ಮ ಶ್ರೀ ಲಕ್ಷ್ಮಿರಂಗನಾಥಸ್ವಾಮಿ ಪೆಟ್ರೋಲ್ ಬಂಕ್‌ನಿಂದ ಸ್ವಿಫ್ಟ್ ಕಾರಿನಲ್ಲಿ (Swift Car) 10 ಲಕ್ಷ ಹಣ ತೆಗೆದುಕೊಂಡು ಮಟ್ಟನವಿಲೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ (Bank) ಕಟ್ಟಲು ಬರುತ್ತಿದ್ದರು. ಈ ವೇಳೆ ಚನ್ನರಾಯಪಟ್ಟಣ ತಾಲ್ಲೂಕಿನ ರಾಜಪುರ ಗೇಟ್ ಬಳಿ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ (Bike) ಬಂದ ಇಬ್ಬರು ಅಪರಿಚಿತರು ಟೈಯರ್ ಪಂಕ್ಚರ್ (Tire puncture) ಆಗಿದೆ ಎಂದು ಸನ್ನೆ ಮಾಡಿದ್ದಾರೆ. ಆದರು ಕಾರು ನಿಲ್ಲಸದೆ ಮುಂದೆ ಸಾಗಿದ ಹೇಮಂತ್ ಕುಮಾರ್‌, ಸ್ವಲ್ಪ ದೂರದಲ್ಲೇ ರಸ್ತೆ ಬದಿ ಕಾರು ನಿಲ್ಲಿಸಿ ಕಾರಿನ ಟೈಯರ್ ಚೆಕ್ ಮಾಡುತ್ತಿದ್ದ ವೇಳೆ ಬಂದ ಬೈಕ್ ಸವಾರರು ಕಾರಿನಲ್ಲಿದ್ದ ಹಣದ ಬ್ಯಾಗ್‌ನ್ನು ತೆಗೆದುಕೊಂಡಿದ್ದಾರೆ‌.

ಚಾಕು ತೋರಿಸಿ 10 ಲಕ್ಷ ಕಿತ್ತಿದ ಕಳ್ಳರು

ಬ್ಯಾಗ್ ಕಿತ್ತುಕೊಳ್ಳಲು ಹೋದ ಹೇಮಕುಮಾರ್‌‌ಗೆ ಚಾಕು ತೋರಿಸಿ 10 ಲಕ್ಷ ರೂ. ನಗದಿನೊಂದಿಗೆ  ಪರಾರಿಯಾಗಿದ್ದಾರೆ. ಹಿರೀಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆಗೆ ಬಂದು ದೋಚಿ ಹೋದ ಕಳ್ಳರು

ಇಂದು ಮಧ್ಯಾಹ್ನ ಹಾಸನದ ವಿಜಯನಗರ ಬಡಾವಣೆಯ ಎರಡನೇ ಕ್ರಾಸ್‌ನ‌ಲ್ಲಿರುವ ಸಿಲ್ಕ್ ಬೋರ್ಡ್ ನಿವಾಸಿ ಗೋವಿಂದಸ್ವಾಮಿ ಎಂಬುವವರು, ತಮ್ಮ ಮದುವೆ ವಾರ್ಷಿಕೋತ್ಸವದ ಸಮಾರಂಭಕ್ಕಾಗಿ ಅಗತ್ಯ ಸಾಮಾನುಗಳನ್ನು ಖರೀದಿಸಲು ಮನೆಗೆ ಬೀಗ ಹಾಕಿಕೊಂಡು ಪತ್ನಿ ಜಯರತ್ನ ಜೊತೆ ಹೊರ ಹೋಗಿದ್ದರು. ಇವರ ಪುತ್ರ ತೇಜಸ್, ಮನೆಗೆ ಬಂದು ಊಟ ಮುಗಿಸಿ ಮನೆಗೆ ಬೀಗ ಹಾಕಿ ಕೀಯನ್ನು ಬಾಗಿಲ ಬಳಿ ಇಟ್ಟಿದ್ದ ಚಪ್ಪಲಿ ಬಾಕ್ಸ್‌ನಲ್ಲಿ ಇಟ್ಟು ಹೋಗಿದ್ದ. ಇದಾದ ಬಳಿಕ ಬಂದ ಚೋರರು ಮನೆಯೊಂದರ ಬಾಗಿಲು ಬೀಗ ಮುರಿದು ಬಿರುವಿನಲ್ಲಿಟ್ಟಿದ್ದ 3.45  ಲಕ್ಷ ಬೆಲೆ ಬಾಳುವ 138 ಗ್ರಾಂ ಚಿನ್ನಾಭರಣ, 70 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ:

ನಿವೇಶನ ಖರೀದಿಸಲು ಇಟ್ಟಿದ್ದ ಹಣ ಗಾಯಬ್

ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ ಹಳುವಳ್ಳಿ ಗ್ರಾಮದ ಸಂದೀಪ್ ಎಂಬವವರು ಮನೆಗೆ ಬೀಗ ಹಾಕಿಕೊಂಡು ಕಣತೂರು ಗ್ರಾಮದಲ್ಲಿರುವ ತಮ್ಮ ಚಿಲ್ಲರೆ ಅಂಗಡಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ, ಮನೆ ಬಾಗಿಲ ಬೀಗ ಮುರಿದು ಒಳನುಗ್ಗಿರುವ ಕಳ್ಳರು 3 ಲಕ್ಷದ 30 ಸಾವಿರ ನಗದು, ಐದು ಲಕ್ಷದ ಬೆಲೆಯ 100 ಗ್ರಾಂ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ. ಸಂಜೆ ವಾಪಸ್ ಹೋದಾಗ ಮನೆಯ ಬಾಗಿಲ ಬೀಗವನ್ನು ಆಯುಧದಿಂದ ಮೀಟಿ, ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ನಿವೇಶನ ಖರೀದಿಸಲು ಇಟ್ಟಿದ್ದ 3 ಲಕ್ಷದ 30 ಸಾವಿರ ಹಣ ಕದ್ದು ಚೋರರು ಪರಾರಿಯಾಗಿದ್ದಾರೆ.

ಬೆಂಗಳೂರಿಗೆ ಹೋಗಿದ್ದಾಗ ಮನೆಯಲ್ಲಿ ಕಳ್ಳತನ

ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ಪಟ್ಟಣದ ಸಿದ್ದಪ್ಪನಗರದ ನಿವಾಸಿ ಸಿದ್ದಪ್ಪ ನಾಸೀರ್ ಅಹಮದ್ ಅವರು,  ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಬೆಂಗಳೂರಿಗೆ ಹೋಗಿದ್ದರು. ಜೂ.27 ರಂದು ಮನೆಗೆ ಬಂದ ವೇಳೆ ಬೀಗ ಮುರಿದಿರುವುದು ಕಂಡುಬಂದಿದ್ದು, ತಕ್ಷಣವೇ ಒಳಹೋಗಿ ನೋಡಿದಾಗ ಕಳ್ಳತನವಾಗಿರುವುದು ತಿಳಿದಿದೆ.

ಹಣ, ಚಿನ್ನಾಭರಣ ದೋಚಿ ಪರಾರಿ

ಮನೆಯಲ್ಲಿದ್ದ 45 ಗ್ರಾಂ ತೂಕದ 1 ನೆಕ್ಲೆಸ್, 7 ಗ್ರಾಂ ತೂಕದ 2 ಜೊತೆ ನೆಕ್ಲೆಸ್, 7 ಗ್ರಾಂ ತೂಕದ 2 ಓಲೆ ಮತ್ತು ಪೆಂಡೆಂಟ್, 15 ಗ್ರಾಂ ತೂಕದ 1 ಬ್ರಾಸ್ಲೆಟ್, 36 ಗ್ರಾಂ ತೂಕದ 6 ಉಂಗುರ, 63 ಸಾವಿರದ 18 ಗ್ರಾಂ ತೂಕದ ಪೆಂಡೆಂಟ್ ಇರುವ ಒಂದು ಲಾಂಗ್ ಚೈನ್, 8 ಗ್ರಾಂನ 2 ಬೇಬಿ ಚೈನ್, 2 ಸಾವಿರದ 2 ಬೆಳ್ಳಿ ಮಕ್ಕಳ ಕಡಗ, 3 ಸಾವಿರ ಬೆಲೆಯ 2 ಬೆಳ್ಳಿ ಲೋಟ ಕದ್ದು ಪರಾರಿಯಾಗಿದ್ದಾರೆ. ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:

ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ.‌ ಪೊಲೀಸರು ಕಳ್ಳತನ ಪ್ರಕರಣ ಬೇಗ ಪತ್ತೆಹಚ್ಚ ಬೇಕು ಹಾಗೂ ಪೊಲೀಸ್ ಬೀಟ್ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.
Published by:Annappa Achari
First published: