Banglore Crime News| ಮಾದನಾಯಕನಹಳ್ಳಿ ಪೊಲೀಸರ ಬರ್ಜರಿ ಕಾರ್ಯಾಚರಣೆ 11 ಕೆಜಿ ಗಾಂಜಾ ವಶ!

ಒರಿಸ್ಸಾದ ಮಲ್ಕನರಿಗೆ ಬೆಟ್ಟದಲ್ಲಿ ಬೆಳೆಯುವ ಗಾಂಜಾವನ್ನು ಬೆಂಗಳೂರಿಗೆ ತಂದು ದುಬಾರಿ ಬೆಲೆಗೆ ಮಾರಾಟ ಮಾಡುವುದು ಈ ಜಾಲದ ಕೆಲಸ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ವಶಕ್ಕೆ ಪಡೆದ ಗಾಂಜಾದ ಜೊತೆಗೆ ಪೊಲೀಸರು.

ವಶಕ್ಕೆ ಪಡೆದ ಗಾಂಜಾದ ಜೊತೆಗೆ ಪೊಲೀಸರು.

 • Share this:
  ಬೆಂಗಳೂರು (ಜುಲೈ 04); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇಧಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೂ, ಎಲ್ಲೆಡೆ ಈ ಜಾಲ ಬಹುದೊಡ್ಡದಾಗಿ ಬೆಳೆದು ನಿಂತಿದೆ. ಸ್ಯಾಂಡಲ್​ ವುಡ್​ ಜೊತೆಗೆ ಅತಿದೊಡ್ಡ ಡ್ರಗ್ಸ್ ಜಾಲ ನಗರದಲ್ಲಿ ಸಕ್ರೀಯವಾಗಿರುವುದನ್ನು ಕಳೆದ ವರ್ಷವೇ ಸಿಸಿಬಿ ಪೊಲೀಸರು ಬಯಲಿಗೆ ಎಳೆದಿದ್ದರು. ಪರಿಣಾಮ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಸೇರಿ ಹಲವರು ಜೈಲು ವಾಸ ಅನುಭವಿಸಿದ್ದರು. ಅಲ್ಲದೆ, ಇತ್ತೀಚಿನವರೆಗೆ ಸಿಸಿಬಿ ಪೊಲೀಸರು ಹತ್ತಾರು ಡ್ರಗ್ಸ್​ ಪೆಡ್ಲರ್​ಗಳನ್ನು ಬಂಧಿಸಿದ್ದು, ನೂರಾರು ಕೆಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿರುವ ಸುದ್ದಿಗಳು ಸದ್ದು ಮಾಡುತ್ತಲೇ ಇವೆ. ಈ ನಡುವೆ ಗಾಂಜಾ ಜಾಲವೂ ದೊಡ್ಡದಾಗುತ್ತಿದ್ದು, ಇದರ ವಿರುದ್ಧವೂ ಪೊಲೀಸರು ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

  ಗಾಂಜಾವನ್ನು ಅನೇಕರು ಬೆಂಗಳೂರಿನಲ್ಲಿ ಬೇರೆ ಬೇರೆ ರೂಪದಲ್ಲಿ ಕಳ್ಳ ಸಾಗಾಣಿಕೆ ನಡೆಸುತ್ತಿದ್ದಾರೆ. ಇದೇ ರೀತಿ ಕೆಲವು ಕಿಡಿಗೇಡಿಗಳು ​ಮೀನಿನ ಬಾಕ್ಸ್ ಒಳಗೆ ಮೀನಿನ ರೀತಿಯಲ್ಲಿ ಯಾರಿಗೂ ಅನುಮಾನ ಬರದಂತೆ ಗಾಂಜಾ ಸಾಗಾಟ ಮಾಡುತ್ತಿದ್ದರ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಾದನಾಯಕನಹಳ್ಳಿ ಪೊಲೀಸರು ಬರ್ಜರಿ ಕಾರ್ಯಾಚರಣೆ ನಡೆಸಿ ಇಂದು 11 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಮೂರು ಜನ ಆರೋಪಿಗಳನ್ನೂ ವಶಕ್ಕೆ ಪಡೆದಿದ್ದಾರೆ.

  ಒರಿಸ್ಸಾ ಮೂಲದ ದಿವಾಕರ್, ಬೆಂಗಳೂರಿನ ಸುದರ್ಶನ್, ವಿಶ್ವನಾಥ್ ಬಂದಿತ ಆರೋಪಿಗಳು ಎಂದು ತಿಳಿದುಬಂದಿದೆ. ಮಾಜಿ ಸೈನಿಕನ ಪುತ್ರ ದಿವಾಕರ್ ಒರಿಸ್ಸಾದಿಂದ ಗಾಂಜಾ ಸಪ್ಲೈ ಮಾಡುತ್ತಿದ್ದ. ಒರಿಸ್ಸಾದ ಮಲ್ಕನರಿಗೆ ಬೆಟ್ಟದಲ್ಲಿ ಬೆಳೆಯುವ ಗಾಂಜಾವನ್ನು ಬೆಂಗಳೂರಿಗೆ ತಂದು ದುಬಾರಿ ಬೆಲೆಗೆ ಮಾರಾಟ ಮಾಡುವುದು ಈ ಜಾಲದ ಕೆಲಸ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

  ಇದನ್ನೂ ಓದಿ: Rafale Deal| ರಫೇಲ್ ಡೀಲ್​ನಲ್ಲಿ ಭ್ರಷ್ಟಾಚಾರದ ವಾಸನೆ, ಒಪ್ಪಂದದ ತನಿಖೆಗೆ ನ್ಯಾಯಾಧೀಶರನ್ನು ನೇಮಿಸಿದ ಫ್ರಾನ್ಸ್‌ ಸರ್ಕಾರ

  ದಿವಾಕರ್‌ನಿಂದ ಗಾಂಜಾ ಪಡೆದು ಸುದರ್ಶನ್ ಮೂಲಕ ಮಾರಾಟ ಮಾಡಿಸುತ್ತಿದ್ದ ವಿಶ್ವನಾಥ್ ಬೆಂಗಳೂರಿನ ವಿವಿಧ ಕಾಲೇಜು, ಕಾರ್ಖಾನೆಗಳ ಬಳಿ ಯುವಕರನ್ನ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ. ಕೊನೆಗೂ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ದೊಡ್ಡ ಜಾಲವನ್ನು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದ್ದವರಿಗೆ ಜೈಲಿನ ದಾರಿ ತೋರಿಸಿದ್ದಾರೆ. ಈ ಪ್ರಕರಣದ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: