Hassan Vaccine Village: ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಗ್ರಾಮದಲ್ಲಿ ಈಗ 100% ವ್ಯಾಕ್ಸಿನೇಷನ್‌

ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಗ್ರಾಮದಲ್ಲಿ ಈಗ 100 % ವ್ಯಾಕ್ಸಿನೇಷನ್‌. ಗ್ರಾಮಸ್ಥರ ಮನವೊಲಿಸಲು ಗ್ರಾ.ಪಂ. ಸದಸ್ಯ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಪಟ್ಟಪಾಡು ಅಷ್ಟಿಷ್ಟಲ್ಲ. ಇಡೀ ಗ್ರಾಮದಲ್ಲಿ ಕೇವಲ ಎಂಟು ಜನಕ್ಕೆ ಮಾತ್ರ ಕೊರೊನಾ ಸೋಂಕು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
 ಹಾಸನ: ಕೊರೊನಾ ಮಹಾಮಾರಿ ಇಡೀ ಜಗತನ್ನೇ ಬುಡಮೇಲು ಮಾಡಿದೆ. ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರೆ, ಕೋಟ್ಯಾಂತರ ಮಂದಿಗೆ ಸೋಂಕು ತಗುಲಿ ನರಳಾಡಿದ್ದಾರೆ. ಕೊವೀಡ್ ಹೆಚ್ಚೆಚ್ಚು ವ್ಯಾಪಿಸುತ್ತಿದ್ದಂತೆ ಜನರು ಜೀವ ಭಯದಿಂದ ಔಷಧಿ ಸಿಕ್ಕರೆ ಸಾಕು ಎಂದು ಹಪಹಪಿಸುತ್ತಿದ್ದರು. ಆದರೆ ಇದುವರೆಗೂ ಈ ಸೋಂಕಿಗೆ ನಿರ್ಧಿಷ್ಠ ಔಷಧಿ ಸಿಕ್ಕಿಲ್ಲ. ತಾತ್ಕಾಲಿಕವಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ‌ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎಂಬ ಎರಡು ಲಸಿಕೆ ನೀಡಲು ಆರಂಭಿಸಿವೆ. ಆದರೆ ಕೆಲ ಅಪಪ್ರಚಾರಗಳು, ಮೂಢನಂಬಿಕೆಯಿಂದ ಪ್ರಾರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಗ್ರಾಮೀಣ ಭಾಗದ ಜನರು ಹಿಂದೇಟು ಹಾಕಿದರು.

ಅದೇ ರೀತಿ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ನಾಗಯ್ಯನಕೊಪ್ಪಲಿನ ಗ್ರಾಮಸ್ಥರು ಲಸಿಕೆ ಅಂದಕೂಡಲೇ ಓಡಿ ಹೋಗುತ್ತಿದ್ದರು. ಇವರ ಮನವೊಲಿಕೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಈ ಗ್ರಾಮ ವಿಶ್ವವಿಖ್ಯಾತ ಶ್ರವಣಬೆಳಗೊಳದ ಪಕ್ಕದಲ್ಲೇ ಇದೆ. ಪ್ರತಿ‌ನಿತ್ಯ ದೇಶ, ವಿದೇಶಗಳಿಂದ ನೂರಾರು ಪ್ರವಾಸಿಗರು ಇಲ್ಲಿಗೆ ಬಂದು ಹೋಗುವುದರಿಂದ ಗ್ರಾಮದಲ್ಲಿ ಕೊರೊನಾ ಹರಡುವ ಭೀತಿ ಹೆಚ್ಚಾಗಿತ್ತು. ಇದರಿಂದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಲಸಿಕೆ ನೀಡಲು ನಿರ್ಧರಿಸಿದರು.

ಆರಂಭದಲ್ಲಿ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ ಉಂಟಾಗುತ್ತದೆ, ಸಾವನ್ನಪ್ಪುತ್ತಾರೆ ಎಂಬ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಜನರು ಲಸಿಕೆ ಪಡೆಯಲಿಲ್ಲ. ಹೀಗಿರುವಾಗ ಗ್ರಾ.ಪಂ. ಸದಸ್ಯ ವಾಸು, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು‌ ಗ್ರಾಮಸ್ಥರ ಮನವೊಲಿಸಿದರು‌. ಆದರೂ ಪ್ರಾರಂಭದಲ್ಲಿ ಗ್ರಾಮಕ್ಕೆ ಬಂದ ಸುಮಾರು 200 ಡೋಸ್ ಲಸಿಕೆ ಪಡೆಯಲು ಜನರೇ ಬರಲಿಲ್ಲ. ಆನಂತರದಲ್ಲಿ ಮನೆ ಮನೆಗೆ ತೆರಳಿದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಲಸಿಕೆ ಬಗ್ಗೆ ಅರಿವು ಮೂಡಿಸಿದರು.

ಇದನ್ನೂ ಓದಿ: Bangalore Central Jail: ಜೈಲಿನಲ್ಲಿ ಕೈದಿಗಳು ತಯಾರಿಸಿರುವ ಫೆನಾಯಿಲ್​​ಗೆ ಎಲ್ಲಿಲ್ಲದ ಬೇಡಿಕೆ

ಇದರ ಪರಿಣಾಮ ಗ್ರಾಮದ ಸುಮಾರು 800 ಕ್ಕೂ ಹೆಚ್ಚು 18 ವರ್ಷ ಮೇಲ್ಪಟ್ಟವರು ಒಂದು ಡೋಸ್ ಲಸಿಕೆ ಪಡೆದಿದ್ದರೆ, ಶೇ.90 ರಷ್ಟು ಮಂದಿ ಎರಡನೇ ಡೋಸ್ ‌ಲಸಿಕೆ ಹಾಕಿಸಿಕೊಂಡಿದ್ದು, ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ, ಹೀಗಾಗಿ ಎಲ್ಲರೂ ಲಸಿಕೆ ಪಡೆಯುವ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿ ಎನ್ನುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಕೊರೊನಾ ಲಸಿಕೆಗಾಗಿ ಪ್ರತಿನಿತ್ಯ ಅಲೆಯುವಂತಾಗಿದೆ. ಇದರ ಮಧ್ಯೆ ಲಸಿಕೆ ಬಗ್ಗೆ ಇದ್ದ ಅಪನಂಬಿಕೆಯನ್ನು ಬದಿಗೊತ್ತಿ ಇಡೀ ಗ್ರಾಮಸ್ಥರೆಲ್ಲರೂ ಲಸಿಕೆ ಪಡೆಯುವ ಮೂಲಕ ಇಡೀ ರಾಜ್ಯದ ಜನರಿಗೆ ಮಾದರಿಯಾಗಿದ್ದಾರೆ. ಇದುವರೆಗೆ ಗ್ರಾಮದ ಎಂಟು ಮಂದಿಗೆ ಸೋಂಕು ತಗುಲಿದ್ದು ಎಲ್ಲರೂ ಗುಣಮುಖರಾಗಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: