• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಅಪ್ರಾಪ್ತೆಯರನ್ನು ಪ್ರೀತಿಸಿ ಮದುವೆ: ಇಬ್ಬರು ಯುವಕರಿಗೆ 10 ವರ್ಷ ಕಠಿಣ ಶಿಕ್ಷೆ, ತಲಾ 5.20 ಲಕ್ಷ ರೂಪಾಯಿ ದಂಡ

ಅಪ್ರಾಪ್ತೆಯರನ್ನು ಪ್ರೀತಿಸಿ ಮದುವೆ: ಇಬ್ಬರು ಯುವಕರಿಗೆ 10 ವರ್ಷ ಕಠಿಣ ಶಿಕ್ಷೆ, ತಲಾ 5.20 ಲಕ್ಷ ರೂಪಾಯಿ ದಂಡ

ಚಾಮರಾಜನಗರ ನ್ಯಾಯಾಲಯ

ಚಾಮರಾಜನಗರ ನ್ಯಾಯಾಲಯ

ದಂಡ ತೆರಲು ತಪ್ಪಿದಲ್ಲಿ ಮತ್ತೆ ಎರಡು ವರ್ಷ  ಸಾಧಾರಣ ಶಿಕ್ಷೆ ವಿಧಿಸಿ  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಸದಾಶಿವ ಎಸ್. ಸುಲ್ತಾನ್ ಪುರಿ ಆದೇಶ ನೀಡಿದ್ದಾರೆ

  • Share this:

ಚಾಮರಾಜನಗರ (ಮಾ. 16): ಅಪ್ರಾಪ್ತ ಬಾಲಕಿಯರನ್ನು ಪ್ರೀತಿಸಿ ಮದುವೆಯಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಇಬ್ಬರು ಯುವಕರಿಗೆ  10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 5.20 ಲಕ್ಷ ರೂಪಾಯಿ ದಂಡ ವಿಧಿಸಿ ಚಾಮರಾಜನಗರದ  ಪ್ರಧಾನ ಜಿಲ್ಲಾ ಮತ್ತು ಸತ್ರ ಪೋಕ್ಸೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ದಂಡದ ಹಣವನ್ನು ನೊಂದ ಬಾಲಕಿಯರಿಗೆ ಪರಿಹಾರ ರೂಪದಲ್ಲಿ ನೀಡಬೇಕು. ದಂಡ ತೆರಲು ತಪ್ಪಿದಲ್ಲಿ ಮತ್ತೆ ಎರಡು ವರ್ಷ  ಸಾಧಾರಣ ಶಿಕ್ಷೆ ವಿಧಿಸಿ  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಸದಾಶಿವ ಎಸ್. ಸುಲ್ತಾನ್ ಪುರಿ ಆದೇಶ ನೀಡಿದ್ದಾರೆ.  ಹನೂರು ತಾಲೂಕು ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಿ.ಬಿ. ದೊಡ್ಡಿ ಗ್ರಾಮದ ಮಂಜು ಹಾಗು ಮುತ್ತು ಅಲಿಯಾಸ್ ಮುತ್ತುರಾಜು ಶಿಕ್ಷೆಗೆ ಗುರಿಯಾದ ಯುವಕರಾಗಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ರಾಮಾಪುರದ ಪೊಲೀಸ್ ಇನ್ಸ್ ಪೆಕ್ಟರ್  ಎಚ್. ಗೋವಿಂದರಾಜು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ  ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು 


ಪ್ರಕರಣದ ವಿವರ:


ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ರಾಮಾಪುರ ಸಮೀಪದ  ಪಿ.ಬಿ.ದೊಡ್ಡಿ ಗ್ರಾಮದ ಮಂಜು ಎಂಬಾತ  ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ.  ಇದೇ ಗ್ರಾಮದ ಮುತ್ತು ಅಲಿಯಾಸ್ ಮುತ್ತುರಾಜು ಎಂಬಾತನು ಸಹ ಮತ್ತೊಬ್ಬ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ. ಈ ಇಬ್ಬರು ಯುವಕರು ತಾವು ಪ್ರೀತಿಸುತ್ತಿದ್ದ ಬಾಲಕಿಯರನ್ನು ಮದುವೆಯಾಗಲು ನಿರ್ಧರಿಸಿ 2016 ರ ಜೂನ್ 13 ರಂದು ರಾತ್ರೋ ರಾತ್ರಿ  ಅವರನ್ನು ಬೈಕ್ ನಲ್ಲಿ ಕೊಳ್ಳೇಗಾಲಕ್ಕೆ ಬಂದು ಅಲ್ಲಿಂದ ತಮಿಳುನಾಡಿನ ನೀಲಗಿರಿ(ಊಟಿ) ಜಿಲ್ಲೆಯ ಕೂನೂರು ತಾಲೂಕು ಬರ್ಲಿಯಾರ್ ಪಂಚಾಯ್ತಿ ವ್ಯಾಪ್ತಿಯ  ಗರೆನ್ಸಿ ಎಂಬ ಗ್ರಾಮಕ್ಕೆ ಕರೆದೊಯ್ದಿದ್ದರು.


ತಾವು  ಈ ಹಿಂದೆ ಕೂಲಿ  ಕೆಲಸ ಮಾಡಿಕೊಂಡಿದ್ದ ಆರ್ಮುಗಂ ಎಂಬುವರ ಮನೆಗೆ ಹೋಗಿ ತಾವು ಗಂಡ ಹೆಂಡತಿ ಎಂದು ಸುಳ್ಳು ಹೇಳಿ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಮರುದಿನ ಗ್ರಾಮದಲ್ಲಿರುವ ಶ್ರೀ ಮುನೇಶ್ವರ ದೇವಾಲಯದಲ್ಲಿ ಬಾಲಕಿಯರಿಗೆ ತಾಳಿಕಟ್ಟಿ ಮದುವೆಯಾಗಿದ್ದರು. ಬಳಿಕ ದೈಹಿಕ ಸಂಪರ್ಕ ಬೆಳೆಸಿದ್ದರು.


ಇದನ್ನು ಓದಿ: ತಿಮ್ಲಾಪುರ ಗ್ರಾಮಸ್ಥರೊಂದಿಗೆ ನಟ ಯಶ್​​ ಜಮೀನು ವಿವಾದ ಸುಖಾಂತ್ಯ


ಇತ್ತ ಬಾಲಕಿಯರ ಪೋಷಕರು ತಮ್ಮ ಮಕ್ಕಳು  ಕಾಣೆಯಾಗಿರುವ ಬಗ್ಗೆ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಇನ್ಸ್ ಪೆಕ್ಟರ್ ಎಚ್. ಗೋವಿಂದರಾಜು ಅಪ್ರಾಪ್ತ ಬಾಲಕಿಯರು ಹಾಗು ಆರೋಪಿತ ಯುವಕರ ನ್ನು ಪತ್ತೆ ಹಚ್ಚಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.


ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಸದಾಶಿವ ಎಸ್. ಸುಲ್ತಾನ್ ಪುರಿ  ಇಬ್ಬರು ಯುವಕರಿಗೂ ಕಲಂ 366(ಎ), 376,  ಪೋಕ್ಸೋ ಕಲಂ 4, 8, 12  ಹಾಗು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9 ರ ಅನ್ವಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 5.20 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.


(ವರದಿ: ಎಸ್.ಎಂ.ನಂದೀಶ್ ) 

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು