• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಇನ್ಮುಂದೆ ಪುಸ್ತಕ ಓದೋದು ಇನ್ನೂ ಸುಲಭ; ಡಿಜಿಟಲ್ ಗ್ರಂಥಾಲಯ ಆ್ಯಪ್​ಗೆ 10 ಲಕ್ಷ ಪುಸ್ತಕಗಳ ಸೇರ್ಪಡೆ

ಇನ್ಮುಂದೆ ಪುಸ್ತಕ ಓದೋದು ಇನ್ನೂ ಸುಲಭ; ಡಿಜಿಟಲ್ ಗ್ರಂಥಾಲಯ ಆ್ಯಪ್​ಗೆ 10 ಲಕ್ಷ ಪುಸ್ತಕಗಳ ಸೇರ್ಪಡೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ 205 ಗ್ರಂಥಾಲಯಗಳಲ್ಲಿ 100 ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈ ಗ್ರಂಥಾಲಯಗಳನ್ನು ತಂತ್ರಜ್ಞಾನದೊಂದಿಗೆ ಡಿಜಿಟಲೀಕರಣಗೊಳಿಸಿ ಇನ್ನು ನಾಲ್ಕು ತಿಂಗಳಲ್ಲಿ ತಂತ್ರಜ್ಞಾನದ ಸೇವೆ ಸಾರ್ವಜನಿಕರಿಗೆ ದೊರೆಯುವಂತೆ ಮಾಡಲು ನಿರ್ಧರಿಸಲಾಗಿದೆ.

  • Share this:

ಕೋವಿಡ್ ಸೃಷ್ಟಿಸಿದ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲ ಉಪಕ್ರಮವಾಗಿ ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಲೋಕಾರ್ಪಣೆಗೊಳಿಸಿದ ಡಿಜಿಟಲ್ ಗ್ರಂಥಾಲಯ ಮೊಬೈಲ್ ಆಪ್ ನಲ್ಲಿ ಪ್ರಸ್ತುತ ಒಂದು ಲಕ್ಷ   ಪುಸ್ತಕಗಳು ಲಭ್ಯವಿದ್ದು,  10 ಲಕ್ಷ ಪುಸ್ತಕಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. 


ರಾಜಾಜಿನಗರದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಈ ಆಪ್ ನ್ನು  7 ಲಕ್ಷಕ್ಕೂ ಹೆಚ್ಚು ಜನ ಈ ಆಪ್ ಬಳಸುತ್ತಿದ್ದಾರೆ. ಇದು ಸಾರ್ವಕಾಲಿಕ ದಾಖಲೆಯಾಗಿದ್ದು,   ಪಠ್ಯಪುಸ್ತಕ, ಸಾಮಾನ್ಯಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗಳು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿ ಲೇಖಕರ ಪುಸ್ತಕಗಳು ಹಾಗೆಯೇ ವಿಡಿಯೋಗಳು, ಇ-ಪುಸ್ತಕಗಳು ಸೇರಿದಂತೆ 10 ಲಕ್ಷ ಪುಸ್ತಕಗಳನ್ನು ಸೇರ್ಪಡೆಗೊಳಿಸಲು   ಇಂತಹ ಪುಸ್ತಕಗಳನ್ನು ಗುರುತಿಸುವ  ಪ್ರಕ್ರಿಯೆ  ಪ್ರಗತಿಯಲ್ಲಿದ್ದು, ಮುಂದಿನ ಮೂರು ತಿಂಗಳೊಳಗೆ 10 ಲಕ್ಷ ಪುಸ್ತಕಗಳು ಲಭ್ಯವಾಗಲಿವೆ ಎಂದರು.


ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬೆರಳೆಣಿಕೆ ಸಂಖ್ಯೆಯ ಗ್ರಂಥಾಲಯಗಳಿವೆ ಎಂಬ ಮಾಹಿತಿ ಇದೆ. ಕರ್ನಾಟಕ ಗ್ರಂಥಾಲಯ ಇಲಾಖೆ ಇಡೀ ದೇಶದಲ್ಲೇ  ಮಂಚೂಣಿಯಲ್ಲಿದೆ. ದೇಶದಲ್ಲಿಯೇ ಅತಿ ಹೆಚ್ಚು ಹಾಗೂ ಅತ್ಯುತ್ತಮ ಗ್ರಂಥಾಲಯಗಳನ್ನು ಹೊಂದಿರುವುದು ಕರ್ನಾಟಕ ಮಾತ್ರ. ಪುಸ್ತಕ ಸಂಸ್ಕೃತಿ ಬೆಳೆಸಲು ಬೆಂಗಳೂರಿನಲ್ಲಿ 205ಮತ್ತು ರಾಜ್ಯದಲ್ಲಿ 7000ಕ್ಕೂ ಹೆಚ್ಚು ಗ್ರಂಥಾಲಯಗಳಿದ್ದು, ಇದ ರಾಷ್ಟ್ರೀಯ ದಾಖಲೆಯಾಗಿದೆ.   ಡಿಜಿಟಲ್ ಗ್ರಂಥಾಲಯಕ್ಕೆ ಸುಮಾರು 7 ಲಕ್ಷ ಸದಸ್ಯರು ಚಂದಾದಾರರಾಗಿದ್ದಾರೆ.  ರಾಜ್ಯದ ಎಲ್ಲ ಗ್ರಾಮೀಣ ಗ್ರಂಥಾಲಯಗಳಿಗೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ಸರ್ಕಾರದ ಮುಂದಿದ್ದು, ಈ ಕುರಿತು ಯೋಜನೆ  ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.


ನಾನು  ಗ್ರಂಥಾಲಯ ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಇಂದಿನ ಅವಶ್ಯಕತೆಗಳಿಗನುಗುಣವಾಗಿ ಡಿಜಿಟಲ್ ಗ್ರಂಥಾಲಯಗಳನ್ನು ರಾಜ್ಯಾದ್ಯಂತ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ   ರಾಜ್ಯದೆಲ್ಲೆಡೆ 272 ಡಿಜಿಟಲ್ ಗ್ರಂಥಾಲಯಗಳು ಕಾರ್ಯಾರಂಭ ಮಾಡಿದ್ದು, ಇಡೀ ದೇಶದಲ್ಲಿ ಇದು ಅಭೂತ ಪ್ರಯತ್ನವಾಗಿದೆ. ಇದು ದೇಶದಲ್ಲಿಯೇ ಮಾದರಿ ಗ್ರಂಥಾಲಯ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ವರ್ಗದ ಜನರ ಜ್ಞಾನಾರ್ಜನೆಗೆ ಉಪಯೋಗವಾಗುವಂತೆ ಗ್ರಂಥಾಲಯಗಳನ್ನು ಅವಶ್ಯಕ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.


ಬೆಂಗಳೂರಿನ 100 ಗ್ರಂಥಾಲಯಗಳ ಡಿಜಿಟಲೀಕರಣ:


ಬೆಂಗಳೂರಿನಲ್ಲಿ 205 ಗ್ರಂಥಾಲಯಗಳಲ್ಲಿ 100 ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಈ ಗ್ರಂಥಾಲಯಗಳನ್ನು ತಂತ್ರಜ್ಞಾನದೊಂದಿಗೆ ಡಿಜಿಟಲೀಕರಣಗೊಳಿಸಿ ಇನ್ನು ನಾಲ್ಕು ತಿಂಗಳಲ್ಲಿ ತಂತ್ರಜ್ಞಾನದ ಸೇವೆ ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗುವುದು. ಈ ಡಿಜಿಟಲೀಕರಣ ಕಾರ್ಯಕ್ರಮವನ್ನು  ಅಭಿಯಾನದ ರೀತಿಯಲ್ಲಿ ಕೈಗೊಂಡು ನಮ್ಮ ಓದುಗರಿಗೆ ಕೈಯಲ್ಲೇ ಪುಸ್ತಕಗಳು ದೊರೆಯುವಂತೆ ಮಾಡಲಾಗುವುದು.


ಶತಮಾನೋತ್ಸವ ಸ್ಮಾರಕ ಗ್ರಂಥಾಲಯ ಭವನ ನಿರ್ಮಾಣ:


ರಾಜಧಾನಿ ಬೆಂಗಳೂರಿನ ಕಬ್ಬನ್ ಪಾರ್ಕ್ನೀಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈನ ಅಣ್ಣಾ ಸ್ಮಾರಕ ಗ್ರಂಥಾಲಯ ಭವನದಂತೆ ಬೆಂಗಳೂರಿನಲ್ಲಿ ಸುಸಜ್ಜಿತವಾದ ಶತಮಾನೋತ್ಸವ ಗ್ರಂಥಾಲಯ ಭವನವನ್ನು  ನಿರ್ಮಿಸಲಾಗುವುದು.  ಇತರೆ ರಾಜ್ಯಗಳಲ್ಲಿ ಇರುವ ಗ್ರಂಥಾಲಯ ವ್ಯವಸ್ಥೆಯನ್ನು ಅವಲೋಕಿಸಿ ಎಲ್ಲ ವರ್ಗದ ಓದುಗರಿಗೆ ಅನುಕೂಲವಾಗುವ ರೀತಿಯಲ್ಲಿ ಮಾದರಿ ಶತಮಾನೋತ್ಸವ  ಗ್ರಂಥಾಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.


ಅತಿ ಹೆಚ್ಚು ಜನಸಂಖ್ಯೆ ಹೊಂದಿದ ನಮ್ಮ ಭಾರತದಲ್ಲಿ ಸಾಕ್ಷರತೆ ಪ್ರಮಾಣ ಮತ್ತು ಅನೌಪಚಾರಿಕ ನೀಡುವ ಗ್ರಂಥಾಲಯಗಳ ಪಾತ್ರವನ್ನು ದೇಶಾದ್ಯಂತ ಪ್ರಚುರ ಪಡಿಸುವುದು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರಲ್ಲಿ ಶಿಕ್ಷಣ, ಜ್ಞಾನ, ಓದಿನ ಅಭಿರುಚಿ, ಸಾಮಾಜಿಕ ಪ್ರಜ್ಞೆ, ರಾಜಕೀಯ ಪ್ರಜ್ಞೆ ಜೊತೆಜೊತೆಗೆ ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಅರಿವು  ಮೂಡಿಸಲು ಗ್ರಂಥಾಲಯಗಳು ಸಹಕಾರಿಯಾಗುತ್ತಿವೆ. ಪ್ರತಿ ಗ್ರಂಥಾಲಯಗಲ್ಲಿಯೂ ಗ್ರಂಥಾಲಯ ಸಪ್ತಾಹ ಆಚರಿಸುವ ಮೂಲಕ ಇನ್ನೂ ಹೆಚ್ಚೆಚ್ಚು ಜನರನ್ನು ಗ್ರಂಥಾಲಯಗಳತ್ತ ಸೆಳೆಯಲು ಒಂದು ವೇದಿಕೆಯಾಗಿದೆ. ಇದೊಂದು ರೀತಿಯ ಅಭಿಯಾನವೇ ಆಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.


ಹಾಗೆಯೇ ಜನಸಾಮಾನ್ಯರಲ್ಲಿ ಗ್ರಂಥಾಲಯಗಳ ಕುರಿತು ಅರಿವು ಮೂಡಿಸುವುದರೊಂದಿಗೆ ಈ ಸಪ್ತಾಹದಲ್ಲಿ ಇದಕ್ಕಾಗಿ ಹಲವಾರು ರೀತಿಯಲ್ಲಿ ಶ್ರಮಿಸಿದ  ಗ್ರಂಥಾಲಯ ಇಲಾಖೆಯ ವಿವಿಧ ಸ್ತರದ   28 ಮಂದಿ ಸಾಧಕರನ್ನು ಸಚಿವರು ಸನ್ಮಾನಿಸಿ ಗೌರವಿಸಿದರು.  ಸಮಾರಂಭದಲ್ಲಿ ವಿಧಾನಪರಿಷತ್ತಿನ ಸದಸ್ಯ ಡಾ. ವೈ.ಎ. ನಾರಾಯಣಸ್ವಾಮಿ, ಹಿರಿಯ ಸಾಹಿತಿ ಹಾಗೂ ಕರ್ನಾಟಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ. ದೊಡ್ಡರಂಗೇಗೌಡ, ಸಾಹಿತಿ ಹಾಗೂ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಮತ್ತಿತರರು ಭಾಗವಹಿಸಿದ್ದರು.

First published: