ಕೊರೋನಾ ಚೈನ್ ಲಿಂಕ್ ಕಟ್ ಮಾಡಬೇಕಿದ್ರೆ, 10 ದಿನ ಮತ್ತೆ ಲಾಕ್ಡೌನ್ ಅಗತ್ಯ: ಶಾಸಕ ಅಪ್ಪಚ್ಚು ರಂಜನ್
ರಾಜ್ಯದಲ್ಲಿ ಸರ್ಕಾರ ಶಾಲೆಗಳನ್ನು ಪುನರ್ ಆರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಹಿಂದೆ ಒಂದು ಕುಟುಂಬದಲ್ಲಿ ಐದಾರು ಮಕ್ಕಳಿರುತಿದ್ದರು. ಆದರೆ ಇಂದು ಪೋಷಕರಿಗೆ ಕೇವಲ ಒಂದು ಮಗುವಿರುತ್ತದೆ.
ಮಡಿಕೇರಿ (ಅ.2): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ಹೆಚ್ಚುತ್ತಿದ್ದು, ಅದನ್ನು ನಿಯಂತ್ರಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಹೀಗಾಗಿ ಕೊರೋನಾ ವೈರಸ್ ಅನ್ನು ನಿಯಂತ್ರಿಸ ಬೇಕಾದರೆ ಅದರ ಚೈನ್ ಲಿಂಕ್ ಕಟ್ ಮಾಡಬೇಕಾಗಿದೆ. ಅದಕ್ಕಾಗಿ ರಾಜ್ಯದಲ್ಲಿ ಮತ್ತೆ ಹತ್ತು ದಿನಗಳ ಕಾಲ ಲಾಕ್ಡೌನ್ ಮಾಡಬೇಕಾಗಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ. ಕೊಡಗಿನ ಕುಶಾಲನಗರದಲ್ಲಿ ಮಾತನಾಡಿದ ಅವರು ಇನ್ನು ಹತ್ತು ದಿನಗಳ ಕಾಲ ಲಾಕ್ ಡೌನ್ ಮಾಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ ಲಾಕ್ಡೌನ್ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಸರ್ಕಾರ ನಿರ್ಧರಿಸಬೇಕು ಎಂದರು.
ಕೊರೋನಾ ರೋಗಿಗಳ ಸಂಖ್ಯೆ ಲಕ್ಷ ಲಕ್ಷ ದಾಟುತಿದ್ದು, ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಇದನ್ನು ನಿಯಂತ್ರಿಸದಿದ್ದರೆ ಭಾರೀ ಅಪಾಯ ಎದುರಾಗಲಿದೆ. ಹೀಗಾಗಿ ಲಾಕ್ಡೌನ್ ಮಾಡುವುದರಿಂದ ಅದರ ಚೈನ್ ಲಿಂಕ್ ಕಟ್ ಮಾಡಬಹುದು ಎಂದಿದ್ದಾರೆ.
ಇನ್ನು ರಾಜ್ಯದಲ್ಲಿ ಸರ್ಕಾರ ಶಾಲೆಗಳನ್ನು ಪುನರ್ ಆರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಹಿಂದೆ ಒಂದು ಕುಟುಂಬದಲ್ಲಿ ಐದಾರು ಮಕ್ಕಳಿರುತಿದ್ದರು. ಆದರೆ ಇಂದು ಪೋಷಕರಿಗೆ ಕೇವಲ ಒಂದು ಮಗುವಿರುತ್ತದೆ. ಇನ್ನು ಮಕ್ಕಳಿಗೆ ಶಿಕ್ಷಣ ಎನ್ನೋದು ಅತೀ ಮುಖ್ಯವಾಗಿದೆ. ಹಾಗೆಂದ ಮಾತ್ರಕ್ಕೆ ಶಿಕ್ಷಣ ಬೇಕೆಂದು ಮಕ್ಕಳ ಜೀವದ ಜೊತೆಗೆ ಆಟವಾಡಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಸರ್ಕಾರ ಶಾಲೆಯನ್ನು ಸದ್ಯಕ್ಕೆ ಪುನರ್ ಆರಂಭಿಸಬಾರದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.