ಚಿಕ್ಕಬಳ್ಳಾಪುರ: ನೂರಾರು ಜನರಿಗೆ ವಂಚನೆ ಮಾಡಿದ ಆರೋಪ ಮೇರೆಗೆ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿದ್ದ ಕರವೇ ಜಿಲ್ಲಾಧ್ಯಕ್ಷ, ಆತನ ಪುತ್ರ ಮತ್ತು ಗ್ಯಾಂಗ್, ಆತನನ್ನು ಕೊಲೆಗೈದು ಚಾರ್ಮಾಡಿಘಾಟ್ನಲ್ಲಿ ಮೃತದೇಹ ಬೀಸಾಡಿದ್ದ ಘಟನೆ 9 ತಿಂಗಳ ನಂತರ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನು ಬೆಂಗಳೂರಿನ ಕೋಣನಕುಂಟೆ ನಿವಾಸಿ ಹೆಚ್.ಶರತ್ ಎಂದು ಗುರುತಿಸಲಾಗಿದ್ದು, ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಗಲಗುರ್ಕಿ ಚಲಪತಿ ಅಲಿಯಾಸ್ ವೆಂಕಟಾಚಲಪತಿ, ಆತನ ಮಗ ಎ.ವಿ ಶರತ್ ಕುಮಾರ್ ಸೇರಿದಂತೆ ಒಟ್ಟಾರೆ 10 ಮಂದಿಯನ್ನು ಕಬ್ಬನ್ಪಾರ್ಕ್ ಪೊಲೀಸರು ಬಂಧನ ಮಾಡಿದ್ದಾರೆ.
ಏನಿದು ಪ್ರಕರಣ?
ಹಣಕಾಸು ವಿಚಾರದ ಹಿನ್ನೆಲೆಯಲ್ಲಿ ಫೈನಾನ್ಷಿಯರ್ ಆಗಿದ್ದ ಹೆಚ್.ಶರತ್ ಕುಮಾರ್ನನ್ನು ಮಾರ್ಚ್ 21 ರಂದು ಕಿಡ್ನಾಪ್ ಮಾಡಲಾಗಿತ್ತು. ಅಂದು ಕೆಲಸ ನಿಮಿತ್ತ ಮೈಸೂರಿಗೆ ತೆರಳಿ ವಾಪಸ್ ಆಗಿದ್ದ ಶರತ್ನನ್ನು ಬನಶಂಕರಿಯಿಂದ ಕಿಡ್ನಾಪ್ ಮಾಡಿದ್ದ ಚಲಪತಿ ಅಂಡ್ ಗ್ಯಾಂಗ್, ಗೌರಿಬಿದನೂರಿನ ತೋಟದ ಮನೆಗೆ ಕರೆತಂದಿದ್ದರು. ಅಲ್ಲಿ ಆತನನ್ನೂ ಕೆಲ ದಿನ ಕೂಡಿ ಹಾಕಿ, ದೊಣ್ಣೆ ಹಾಗೂ ಹಗ್ಗದಿಂದ ಹೊಡೆದು ಚಿತ್ರಹಿಂಸೆ ನೀಡಿದ್ದರು.
ಆ ಬಳಿಕ ಅಲ್ಲಿಂದ ಹೊಸಹಳ್ಳಿ ಬಳಿ ಇದ್ದ ಮಾವಿನ ತೋಟವೊಂದಕ್ಕೆ ಕರೆದುಕೊಂಡು ಹೋಗಿ ಮರಕ್ಕೆ ನೇತು ಹಾಕಿ ಹೊಡೆದಿದ್ದರು. ತೀವ್ರ ಹಲ್ಲೆಗೊಳಗಾಗಿದ್ದ ಶರತ್, ಹೊಡೆತ ತಾಳಲಾಗದೆ ಮೃತಪಟ್ಟಿದ್ದಾನೆ. ಇದರಿಂದ ಬೆದರಿದ್ದ ಆರೋಪಿಗಳು ಆತನ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿಘಾಟ್ಗೆ ತೆಗೆದುಕೊಂಡು ಹೋಗಿ ಎಸೆದು ಮರಳಿ ಬಂದಿದ್ದರು. ಆ ಬಳಿಕ ತಮಗೇನು ಗೊತ್ತೆ ಇಲ್ಲ ಎಂಬಂತೆ ಓಡಾಡಿಕೊಂಡಿದ್ದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಶರತ್ ಕುಮಾರ್ ಕೊಲೆಯಾದ ಬಗ್ಗೆ ಕಳೆದ ಒಂಬತ್ತು ತಿಂಗಳಿನಿಂದ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ಆದರೆ ಇತ್ತೀಚೆಗೆ ಬೆಂಗಳೂರಿನ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಬಳ್ಳಾಪುರ ಮೂಲದ ಪೊಲೀಸ್ ಅಧಿಕಾರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರಂತೆ. ಈ ಮಾಹಿತಿಯನ್ನು ಅಧಿಕಾರಿ, ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದರ ನಡುವೆಯೇ ಪೊಲೀಸರಿಗೆ ಅನಾಮದೇಯ ಹೆಸರಿನಲ್ಲಿ ಪೆನ್ಡ್ರೈವ್ ಒಂದನ್ನು ಕಳುಹಿಸಲಾಗಿತ್ತು. ಅದರಲ್ಲಿ ಶರತ್ ಕುಮಾರ್ನನ್ನು ಮರವೊಂದಕ್ಕೆ ಕಟ್ಟಿ ಚಿತ್ರಹಿಂಸೆ ನೀಡುತ್ತಿದ್ದ ದೃಶ್ಯಗಳು ಕಂಡು ಬಂದಿದ್ದವು. ಇದನ್ನು ಕಂಡ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ಆರಂಭ ಮಾಡಿದ್ದರು.
ಇದನ್ನೂ ಓದಿ: Crime News: ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ಟೀಚರ್ ಸಾವು; ಟ್ರಯಾಂಗಲ್ ಲವ್ ಸ್ಟೋರಿಗೆ ತಾಯಿ-ಮಗ ಬಲಿ
ಪ್ರಕರಣ ದಾಖಲಾಗುತ್ತಿದಂತೆ ಕರವೇ ಅಧ್ಯಕ್ಷ ಚಲಪತಿ, ಆತನ ಪುತ್ರ ಎ.ವಿ ಶರತ್ ಕುಮಾರ್, ಶರತ್ ಸ್ನೇಹಿತರಾದ ಕೆ.ಧನುಷ್, ಆರ್.ಶ್ರೀಧರ್, ಹಾಗೂ ಯಲಂಕದ ಎಂ.ವಿ ಮಂಜುನಾಥ್ ಎಂಬವರನ್ನು ಬಂಧನ ಮಾಡಿ ವಿಚಾರಣೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣದಲ್ಲಿ ಕಾರ್ಯಾಚರಣೆ ಮುಂದುವರಿಸಿರುವ ಕಬ್ಬನ್ಪಾರ್ಕ್ ಠಾಣೆ ಪೊಲೀಸರು, ಮತ್ತೆ ಐವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಒಬಳೇಶ್, ನವೀನ್ ಸಂಕೇತ್ , ಗೋವಿಂದ್ ಮತ್ತು ಉದಯ್ ರಾಜ್ ಬಂಧಿತ ಅರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳು ಮೃತದೇಹ ರವಾನೆ ಮಾಡಿದ್ದ ಕಾರನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರಗಳನ್ನು ಡ್ರೈವ್ ಮಾಡಿದ್ದರಂತೆ. ಉಳಿದಂತೆ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳನ್ನು ಪೊಲೀಸರು ಬಂಧನ ಮಾಡುವ ಸಾಧ್ಯತೆ ಇದೆ.
ಕೊಲೆಯಾದ ಹೆಚ್.ಶರತ್ ಕುಮಾರ್ ಮೇಲಿರೋ ಆರೋಪ ಏನು?
ಮೃತ ಶರತ್ ಕುಮಾರ್, ಹಲವರು ಜನರಿಗೆ ಸಬ್ಸಿಡಿ ದರದಲ್ಲಿ ಕಾರುಗಳನ್ನು ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದನಂತೆ. ಆದರೆ ಆತ ಹಣ ಪಡೆದ ಬಳಿಕ ಕಾರನ್ನು ಕೊಡಿಸದೆ, ಇತ್ತ ಹಣವನ್ನು ವಾಪಸ್ ನೀಡಿರಲಿಲ್ಲವಂತೆ. ಇದರಿಂ ಆತನಿಗೆ ಹಣ ನೀಡಿದ್ದ ಹಲವರು ಕರವೇ ಅಧ್ಯಕ್ಷ ಚಲಪತಿ ಬಳಿ ತೆರಳಿ ಹಣ ವಾಪಸ್ ಕೊಡಿಸುವಂತೆ ಕೇಳಿದ್ದರಂತೆ. ಈ ಕಾರ್ಯವನ್ನು ಮಾಡಲು ಚಲಪತಿ, ತನ್ನ ಮಗ ಹಾಗೂ ಗ್ಯಾಂಗ್ಗೆ ಸೂಚನೆ ನೀಡಿದ್ದರಂತೆ.
ಇದನ್ನೂ ಓದಿ: Chikkaballapur: ಪತ್ನಿಗೆ ಪ್ರೇಯಸಿ ಜೊತೆಗಿನ ಫೋಟೋ ಕಳುಹಿಸಿದ ಗಂಡ; ಡೆತ್ನೋಟ್ ಬರೆದು ಹೆಂಡ್ತಿ ಆತ್ಮಹತ್ಯೆ
ಇನ್ನು, ಮೃತ ಶರತ್ನನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳು, ಆತನ ಮೊಬೈಲ್ನಿಂದ ಪೋಷಕರಿಗೆ ಮೆಸೇಜ್ ಕಳುಹಿಸಿದ್ದರಂತೆ. ನಾಣು ದುಡಿಯಲು ಹೋಗುತ್ತಿದ್ದೇನೆ, ನನ್ನನ್ನು ಹುಡುಕಬೇಡಿ ಅಂತ ಸಂದೇಶ ಕಳುಹಿಸಿದ್ದರಂತೆ. ಇದನ್ನೇ ನಿಜ ಎಂದು ನಂಬಿದ್ದ ಕುಟುಂಬಸ್ಥರು, ಆತನನ್ನು ಎಲ್ಲೂ ಹುಟುಕಾಟ ನಡೆಸಿರಲಿಲ್ಲವಂತೆ. ಅಲ್ಲದೇ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರನ್ನು ಕೂಡ ನೀಡಿರಲಿಲ್ಲವಂತೆ. ಎಷ್ಟೇ ತಿಂಗಳಾದರು ಮಗ ವಾಪಸ್ ಆಗದೇ ಇದ್ದದ್ದು ಹಾಗೂ ಆತನನಿಂದ ಯಾವುದೇ ಪ್ರತಿಕ್ರಿಯೆಬಾರದ ಕಾರಣ ಬನಶಂಕರಿ ಪೊಲೀಸ್ ಠಾಣೆಗೆತೆರಳಿ ನಾಪತ್ತೆ ದೂರು ದಾಖಲಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ