• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Olympics: ಫೈನಲ್​ಗೆ ಜಾವೆಲಿನ್ ಪಟು ನೀರಜ್; ಸೆಮಿಫೈನಲ್​ಗೆ ಕುಸ್ತಿಪಟುಗಳಾದ ರವಿ, ದೀಪಕ್

Olympics: ಫೈನಲ್​ಗೆ ಜಾವೆಲಿನ್ ಪಟು ನೀರಜ್; ಸೆಮಿಫೈನಲ್​ಗೆ ಕುಸ್ತಿಪಟುಗಳಾದ ರವಿ, ದೀಪಕ್

ರವಿ ಕುಮಾರ್ ದಾಹಿಯಾ

ರವಿ ಕುಮಾರ್ ದಾಹಿಯಾ

Olympics 2020: ಕುಸ್ತಿಪಟುಗಳಾದ ರವಿಕುಮಾರ್ ದಾಹಿಯಾ ಮತ್ತು ದೀಪಕ್ ಪೂನಿಯಾ ತಮ್ಮ ವಿಭಾಗಗಳಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಕ್ವಾಲಿಫಿಕೇಶನ್ ಸುತ್ತಿನಲ್ಲಿ ಅಗ್ರಸ್ಥಾನಿಗರಾಗಿ ಫೈನಲ್ ಪ್ರವೇಶಿಸಿದ್ದಾರೆ.

  • News18
  • 3-MIN READ
  • Last Updated :
  • Share this:

ಬೆಂಗಳೂರು (ಆ. 04): ಜಪಾನ್​ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ 12ನೇ ದಿನ ಭಾರತಕ್ಕೆ ಶುಭಕರವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ. ಭಾರತದ ಇಬ್ಬರು ಕುಸ್ತಿಪಟುಗಳು ಸೆಮಿಫೈನಲ್ ತಲುಪಿದ್ದಾರೆ. ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಒಬ್ಬರು ಫೈನಲ್ ಹಂತಕ್ಕೆ ಏರಿದ್ದಾರೆ. ಬಾಕ್ಸಿಂಗ್​ನಲ್ಲಿ ಒಂದು ಪದಕ ಇಂದು ಬುಟ್ಟಿಗೆ ಬೀಳಲಿದೆ. ಗಾಲ್ಫ್​ನಲ್ಲೂ ಭಾರತದ ಆಟಗಾರ್ತಿ ಟಾಪ್ 3 ಯಲ್ಲಿದ್ದಾರೆ. ಕುಸ್ತಿ ಕ್ರೀಡೆಯಲ್ಲಿ ಭಾರತದ ಮಹಿಳೆಯರ 57 ಕಿಲೋ ವಿಭಾಗದಲ್ಲಿ ಅಂಶು ಮಲಿಕ್ ಆರಂಭಿಕ ಸುತ್ತಿನಲ್ಲೇ ನಿರ್ಗಮಿಸಿದರಾದರೂ ಇಬ್ಬರು ಪುರುಷರ ಸ್ಪರ್ಧಿಗಳು ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. 86 ಕಿಲೋ ಪುರುಷರ ವಿಭಾಗದಲ್ಲಿ ದೀಪಕ್ ಪೂನಿಯಾ ಅವರು ಪ್ರೀ ಕ್ವಾರ್ಟರ್ ಫೈನಲ್​ನಲ್ಲಿ ನೈಜೀರಿಯಾದ ಎಕೆರೆಕೆಮೆ ಅಗಿಯೋಮೋರ್ ಅವರನ್ನ 12-1 ಅಂಕಗಳಿಂದ ಸುಲಭವಾಗಿ ಮಣಿಸಿದರು. ನಂತರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಲಿನ್ ಜುಶೆನ್ ಅವರನ್ನ 6-3 ಪಾಯಿಂಟ್​ಗಳಿಂದ ಸೋಲಿಸಿ ಸೆಮಿಫೈನಲ್ ತಲುಪದರು. ಅಲ್ಲಿ ಅವರಿಗೆ ಫೈನಲ್ ಹಾದಿಗೆ ತಡೆಯಾಗಿ ನಿಂತಿರುವವರು ಅಮೆರಿಕದ ಡೇವಿಡ್ ಮಾರಿಸ್ ಟೇಲರ್.


ಪುರುಷರ 57 ಕಿಲೋ ವಿಭಾಗದಲ್ಲಿ ರವಿಕುಮಾರ್ ದಾಹಿಯಾ ಅವರು ಪ್ರೀ ಕ್ವಾರ್ಟರ್ ಫೈನಲ್​ನಲ್ಲಿ ಕೊಲಂಬಿಯಾದ ಆಸ್ಕರ್ ಟೈಗ್ರೆರೋಸ್ ಅವರನ್ನ 13-2 ಅಂಕಗಳಿಂದ ಸೋಲಿಸಿದರು. ಬಳಿಕ ನಡೆದ ಕ್ವಾರ್ಟರ್ ಫೈನಲ್​ನಲ್ಲಿ ಬಲ್ಗೇರಿಯಾದ ಜಾರ್ಜಿ ವಾಂಜೆಲೋವ್ ಅವರನ್ನ 14-4 ಅಂಕಗಳಿಂದ ಮಣಿಸಿದರು. ಸೆಮಿಫೈನಲ್​ನಲ್ಲಿ ಅವರಿಗೆ ಕಜಕಸ್ತಾನದ ನೂರಿಸ್ಲಾಮ್ ಸನಾಯೆವ್ ಅವರು ಸವಾಲೊಡ್ಡಲಿದ್ದಾರೆ. ದೀಪಕ್ ಪೂನಿಯಾ ಮತ್ತು ರವಿ ಕುಮಾರ್ ದಾಹಿಯಾ ಅವರ ಸೆಮಿಫೈನಲ್ ಪಂದ್ಯಗಳು ಇಂದು ಮಧ್ಯಾಹ್ನ ನಡೆಯಲಿವೆ.


ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಭಾರತಕ್ಕೆ ಮಿಶ್ರ ಫಲ ಸಿಗುವಂತಿದೆ. ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ನೀರಜ್ ಚೋಪ್ರಾ ತಮ್ಮ ಎ ಗುಂಪಿನಲ್ಲಿ ಅಗ್ರಸ್ಥಾನಿಗರಾಗಿ ಫೈನಲ್​ಗೆ ಅರ್ಹತೆ ಪಡೆದಿದ್ದಾರೆ. ಬಿ ಗುಂಪಿನಲ್ಲಿದ್ದ ಭಾರತದ ಇನ್ನೊಬ್ಬ ಸ್ಪರ್ಧಿ ಶಿವಪಾಲ್ ಸಿಂಗ್ ನಿರಾಸೆಯ ಪ್ರದರ್ಶನ ನೀಡಿ ಹೊರಬಿದ್ದಿದ್ಧಾರೆ. ಪದಕದ ನಿರೀಕ್ಷೆ ಮೂಡಿಸಿರುವ ನೀರಜ್ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲೇ 86.68 ಮೀಟರ್ ದೂರ ಎಸೆದು ಕ್ವಾಲಿಫೈ ಆದರು. ಫೈನಲ್​ಗೆ ಅರ್ಹತೆ ಗಳಿಸಲು 83.50 ಮೀಟರ್ ದೂರದ ಮಾನದಂಡ ಇರಿಸಲಾಗಿತ್ತು. ಇನ್ನೊಂದಡೆ ಶಿವಪಾಲ್ ಸಿಂಗ್ ಕೇವಲ 74.81 ಮೀಟರ್ ದೂರಕ್ಕೆ ಮಾತ್ರ ಎಸೆಯಲು ಶಕ್ಯರಾದರು. ಇವರ ಬಿ ಗುಂಪಿನಲ್ಲಿ ಪಾಕಿಸ್ತಾನದ ಕ್ರೀಡಾಪಟು ಟಾಪರ್ ಆಗಿ ಹೊರಹೊಮ್ಮಿದ್ದು ಗಮನಾರ್ಹ. ಆದರೆ, ನೀರಜ್ ಚೋಪ್ರಾ ಎರಡೂ ಗುಂಪಿನಲ್ಲೂ ಅತಿ ದೂರ ಎಸೆದ ಆಟಗಾರನೆನಿಸಿದ್ದಾರೆ. ಆಗಸ್ಟ್ 7ರಂದು ಫೈನಲ್ ಸ್ಪರ್ಧೆ ನಡೆಯಲಿದೆ. ನೀರಜ್ ಚೋಪ್ರಾ ಅವರು ಈ ಹಿಂದೆ 88.07 ಮೀಟರ್​ನಷ್ಟು ದೂರ ಜಾವೆಲಿನ್ ಎಸೆದು ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು. ಆ ಮಟ್ಟವನ್ನು ಅವರು ತಲುಪಲು ಸಾಧ್ಯವಾದಲ್ಲಿ ಒಲಿಂಪಿಕ್ ಪದಕ ನಿಶ್ಚಿತ ಎನ್ನಲಾಗುತ್ತಿದೆ.


ಇದನ್ನೂ ಓದಿ: ಸುಶೀಲ್ ಕುಮಾರ್: ಎರಡೆರಡು ಒಲಂಪಿಕ್ ಪದಕ ಗೆದ್ದು ಮೆರೆದ ಕುಸ್ತಿಪಟು ಜೈಲು ಪಾಲಾದ ಕಥೆ.. 


ಇನ್ನು ಮಹಿಳೆಯರ ಗಾಲ್ಫ್ ಕ್ರೀಡೆಯಲ್ಲಿ ಬೆಂಗಳೂರಿನ ಹುಡುಗಿ ಅದಿತಿ ಅಶೋಕ್ ಮೊದಲ ಸುತ್ತಿನಲ್ಲಿ ಅಗ್ರಸ್ಥಾನ ಗಳಿಸಿ ಮುನ್ನಡೆದಿದ್ದಾರೆ. ಮತ್ತೊಬ್ಬ ಸ್ಪರ್ಧಿ ದೀಕ್ಷಾ ದಾಗರ್ ತೀರಾ ಹಿಂದುಳಿದಿದ್ದಾರೆ. ಅದಿತಿ ಅಶೋಕ್ ಅವರಿಂದ ಪದಕದ ನಿರೀಕ್ಷೆ ಇದೆ.


ಇವತ್ತು ಬಾಕ್ಸಿಂಗ್ ಕ್ರೀಡೆಯಲ್ಲಿ ಮಹಿಳೆಯರ 69 ಕಿಲೋ ವಿಭಾಗದಲ್ಲಿ ಲವ್ಲಿನಾ ಬೊರ್ಗೋಹೇನ್ ಅವರು ಟರ್ಕಿಯ ಬುಸೆನಾಜ್ ಸುರ್ಮೆನೆಲಿ ಅವರನ್ನ ಎದುರಿಸಲಿದ್ದಾರೆ. ಇದರಲ್ಲಿ ಗೆದ್ದರೆ ಲವ್ಲಿನಾ ಅವರು ಚಿನ್ನದ ಪದಕಕ್ಕೆ ಪ್ರಯತ್ನಿಸಬಹುದು. ಸೋತರೆ ಕಂಚಿನ ಪದಕ ಪ್ರಾಪ್ತಿಯಾಗುತ್ತದೆ.


ಇನ್ನು, ಹಾಕಿ ಕ್ರೀಡೆಯಲ್ಲಿ ಮೊತ್ತಮೊದಲ ಬಾರಿಗೆ ಒಲಿಂಪಿಕ್ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ಮಹಿಳಾ ತಂಡ ಇಂದು ಮಧ್ಯಾಹ್ನ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗೆದ್ದರೆ ಭಾರತಕ್ಕೆ ಒಂದು ಪದಕ ನಿಶ್ಚಿತ. ಒಂದು ವೇಳೆ ಸೋತರೆ ಕಂಚಿನ ಪದಕಕ್ಕೆ ಪ್ರಯತ್ನಿಸಬಹುದು. ಭಾರತದ ಪುರುಷರ ತಂಡ ನಿನ್ನೆ ಸೆಮಿಫೈನಲ್​ನಲ್ಲಿ ಸೋಲನುಭವಿಸಿತ್ತು.

top videos
    First published: