ಮುಂಬೈ: ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ನ (Women's Premier League) ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಬಳಗ ಗುಜರಾತ್ ಜೇಂಟ್ಸ್ (Gujarat Giants) ವಿರುದ್ಧ 143 ರನ್ಗಳ ಬೃಹತ್ ಅಂತರದ ಜಯ ಸಾಧಿಸಿದೆ. ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್ಗಳಿಸಿತ್ತು, ಇದಕ್ಕೆ ಉತ್ತರವಾಗಿ ಗುಜರಾತ್ ಜೇಂಟ್ಸ್ ಕೇವಲ 64 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು.
ಟಾಸ್ ಸೋತರೂ ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿತು, ಗುಜರಾತ್ ಜೈಂಟ್ಸ್ ಬೌಲರ್ಗಳನ್ನು ಬೆಂಡೆತ್ತಿದ ಮುಂಬೈ ಬ್ಯಾಟರ್ಸ್ ಚೊಚ್ಚಲ ಪಂದ್ಯದಲ್ಲಿ 200ರ ಗಡಿ ದಾಟಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು.
ಮಿಂಚಿದ ಮ್ಯಾಥ್ಯೂಸ್
ಆರಂಭದಲ್ಲೇ ಯಸ್ತಿಕಾ ಭಾಟಿಯ ವಿಕೆಟ್ ಕಳೆದುಕೊಂಡರೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಉಳಿದ ಬ್ಯಾಟರ್ಗಳು ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ವಿಂಡೀಸ್ ಸ್ಟಾರ್ ಹೇಲಿ ಮ್ಯಾಥ್ಯೂಸ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಅವರು ಡಬ್ಲ್ಯೂಪಿಎಲ್ ಟೂರ್ನಿಯಲ್ಲೇ ಮೊದಲ ಸಿಕ್ಸರ್ ಹಾಗೂ ಮೊದಲ ಬೌಂಡರಿ ಸಿಡಿಸಿದ ಖ್ಯಾತಿಗೆ ಇವರು ಪಾತ್ರರಾದರು. ಕೇವಲ 31 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳೊಂದಿಗೆ 47 ರನ್ ಗಳಿಸಿದರು. ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ನ್ಯಾಟ್ ಸೀವರ್ ಬ್ರಂಟ್ 23 ರನ್ ಸಿಡಿಸಿದರು.
ಇದನ್ನೂ ಓದಿ: WPL 2023: ಐಪಿಎಲ್ ನೋಡೋಕೆ ಮಹಿಳೆಯರಿಗೆ ಸಿಗುತ್ತೆ ಫ್ರೀ ಟಿಕೆಟ್, ಗಂಡು ಹೈಕ್ಳಿಗೂ ಐತೆ ಡಿಸ್ಕೌಂಟ್!
ಕೌರ್-ಅಮೆಲಿಯಾ ಕೆರ್ ಅಬ್ಬರ
ಆ ಬಳಿಕ ಬಂದ ನಾಯಕಿ ಕೌರ್ ಬರೋಬ್ಬರಿ ಕಿವೀಸ್ನ ಯುವ ಬ್ಯಾಟರ್ ಅಮೆಲಿಯಾ ಕೆರ್ ಜೊತೆಗೂಡಿ 89 ರನ್ಗಳ ಜೊತೆಯಾಟ ನೀಡಿದರು. ಹರ್ಮನ್ 30 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 65 ರನ್ ಸಿಡಿಸಿದರು. ಆ ಮೂಲಕ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದ ಖ್ಯಾತಿಗೆ ಮುಂಬೈ ನಾಯಕಿ ಪಾತ್ರರಾದರು. ಇವರಿಗೆ ಸಾಥ್ ನೀಡಿದ ಕೆರ್ 24 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 45 ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು.
64ಕ್ಕೆ ಆಲೌಟ್ ಆಲೌಟ್
ಮುಂಬೈ ನೀಡಿದ 208 ರನ್ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಯಾವುದೇ ಅಂತದಲ್ಲಿ ಪ್ರತಿರೋಧ ತೋರದೆ 15.1 ಓವರ್ಗಳಲ್ಲಿ ಕೇವಲ 64 ರನ್ಗಳಿಗೆ ಸರ್ವಪತನ ಕಂಡು 143 ರನ್ಗಳ ಸೋಲು ಕಂಡಿತು. ಸೈಕಾ ಇಶಾಕ್ 11ಕ್ಕೆ 4, ಅಮೆಲಿಯಾ ಕೆರ್ 12ಕ್ಕೆ 2, ಸೀವರ್ 5ಕ್ಕೆ2 ಹಾಗೂ ಇಸ್ಸಿ ವಾಂಗ್ 7ಕ್ಕೆ 1 ವಿಕೆಟ್ ಪಡೆದುಕೊಂಡು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಸೊನ್ನೆ ಸುತ್ತಿದ ನಾಲ್ವರು, 20 ಗಡಿ ದಾಟಿದ್ದು ಒಬ್ಬರು ಮಾತ್ರ
208 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ ಗುಜರಾತ್ ಜೇಂಟ್ಸ್ ಆರಂಭದಿಂದಲೇ ಮುಂಬೈ ದಾಳಿಗೆ ಪರದಾಡಿತು. ನಾಯಕಿ ಬೆತ್ ಮೂನಿ ಗಾಯಗೊಂಡು ರಿಟೈರ್ಡ್ ಔಟ್ ಆದರು. ಇವರನ್ನು ಸೇರಿ ಒಟ್ಟ ನಾಲ್ವರು ಬ್ಯಾಟರ್ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ಆಸೀಸ್ ಆಲ್ರೌಂಡರ್ ಹಾಗೂ ಲೀಗ್ ದುಬಾರಿ ವಿದೇಶಿ ಆಟಗಾರ್ತಿ ಗಾರ್ಡ್ನರ್, ಹರ್ಲೀನ್ ಡಿಯೋಲ್ ಹಾಗೂ ತನುಜಾ ಕನ್ವರ್ ಸೊನ್ನೆಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
ದಯಾಳನ್ ಹೇಮಲತಾ23 ಎಸೆತಗಳಲ್ಲಿ 29 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಪುರುಷರ ಐಪಿಎಲ್ ಉದ್ಘಾಟನಾ ಪಂದ್ಯ ನೆನಪಿಸಿದ WPL ಮೊದಲ ಪಂದ್ಯ
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯ ಕೂಡ ಇದೇ ರೀತಿ ಸಂಪೂರ್ಣ ಏಕಪಕ್ಷೀಯ ಫಲಿತಾಂಶ ಕಂಡಿತ್ತು. ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 222 ರನ್ಗಳಿಸಿದರೆ, ಇದಕ್ಕೆ ಉತ್ತರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ 82 ರನ್ಗಳಿಗೆ ಆಲೌಟ್ ಆಗುವ ಮೂಲಕ 140 ರನ್ಗಳ ಹೀನಾಯ ಸೋಲು ಕಂಡಿತ್ತು. ವಿಶೇಷವೆಂದರೆ ಆ ಪಂದ್ಯದಲ್ಲಿ ಚೇಸಿಂಗ್ ತಂಡ 15.1 ಓವರ್ಗಳಲ್ಲಿ ಆಲೌಟ್ ಆಗಿತ್ತು. ಇಂದು ಕೂಡ ಗುಜರಾತ್ ಜೇಂಟ್ಸ್ 15.1 ಓವರ್ಗಳಲ್ಲೇ ಆಲೌಟ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ