ಐಪಿಎಲ್ ಹರಾಜಿನಿಂದಾಗಿ ರಾತ್ರೋರಾತ್ರಿ ಕ್ರಿಕೆಟ್ (Cricket) ಆಟಗಾರರ ಜೀವನ ಬದಲಾಗಿದೆ. ಕೇರಳದ ಬುಡಕಟ್ಟು ಕ್ರಿಕೆಟ್ ಆಟಗಾರ್ತಿ ಮಿನ್ನು ಮಣಿ (Minnu Mani) ಇದಕ್ಕೆ ಉತ್ತಮ ಉದಾಹರಣೆ. ಮಹಿಳಾ ಪ್ರೀಮಿಯರ್ ಲೀಗ್ 2023ರ (WPL 2023) ಹರಾಜಿನಲ್ಲಿ ಮಿನ್ನು ಮಣಿ ಅವರನ್ನು ದೆಹಲಿ ಕ್ಯಾಪಿಟಲ್ಸ್ (DC) ತಂಡವು 30 ಲಕ್ಷ ರೂಪಾಯಿಗಳಿಗೆ ಖರೀದಿಸಿತು. ಕೇರಳದ ವಯನಾಡಿನ ಈ 23ರ ಹರೆಯದ ಕ್ರಿಕೆಟ್ ಆಟಗಾರ್ತಿ ಜೀವಮಾನದ ಕನಸು ಈ ಮೂಲಕ ನನಸಾದಂತಾಗಿದೆ. ಒಂದು ಬುಟಕಟ್ಟು ವಲಯದಿಮದ ಬಂದ ಈ ಆಟಗಾರ್ತಿ ಇದೀಗ ರಾತ್ರೋರಾತ್ರಿ ಲಕ್ಷ ಲಕ್ಷದ ಒಡತಿಯಾಗಿದ್ದಾರೆ. ಆದರೆ ಇದರ ಹಿಂದೆ ಅವರ ಜೀವನದ ಕಷ್ಟದ ಸಮಯದ ಕಥೆಗಳು ಇದೀಗ ಒಂದೊಂದಾಗಿ ತೆರೆದುಕೊಳ್ಳುತ್ತಿದೆ.
ಜೀವನದಲ್ಲಿ 30 ಲಕ್ಷ ನೊಡಿಲ್ಲ:
ಇನ್ನು, ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಆಯ್ಕೆಯಾದ ನಂತರ, ಮಿನ್ನು ಮಣಿ ಮಾತನಾಡಿದ್ದು, ‘ನಾನು ನನ್ನ ಜೀವನದಲ್ಲಿ 30 ಲಕ್ಷ ರೂಪಾಯಿಗಳನ್ನು ಈವರೆಗೂ ನೋಡಿಲ್ಲ. ಇದೀಗ ನನ್ನ ಭಾವನೆಯನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ‘ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. ಮಿನ್ನು ತನ್ನ ಹರಾಜಿನ ಬಗ್ಗೆ ತಿಳಿದಾಗ ಅಂತರ ವಲಯ ಪಂದ್ಯಾವಳಿಗಾಗಿ ಹೈದರಾಬಾದ್‌ನಲ್ಲಿದ್ದರು.
ಮಿನ್ನುವಿನ ತಂದೆ ದಿನಗೂಲಿ ಕಾರ್ಮಿಕ:
ವಯನಾಡ್‌ನಿಂದ ಐಪಿಎಲ್‌ಗೆ ಪ್ರಯಾಣ ಮಿನ್ನು ಮಣಿಗೆ ಸುಲಭವಾಗಿರಲಿಲ್ಲ. ಮಿನ್ನು ವಯನಾಡ್ ಕುರಿಚಿಯಾ ಬುಡಕಟ್ಟಿಗೆ ಸೇರಿದವರಾಗಿದ್ದು, ಅವರ ತಂದೆ ದಿನಗೂಲಿ ಕಾರ್ಮಿಕರಾಗಿದ್ದಾರೆ. ಮಿನ್ನು 10 ವರ್ಷದವಳಿದ್ದಾಗ, ಅವಳು ತನ್ನ ಸಹೋದರರೊಂದಿಗೆ ಗದ್ದೆಯಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅವರು ಇಡಪ್ಪಡ್ಡಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಅಲಸಮ್ಮ ಬೇಬಿ ಅವರು ಮಿನ್ನು ಅವರ ಪ್ರತಿಭೆಯನ್ನು ಗುರುತಿಸಿ ವಯನಾಡ್ ಜಿಲ್ಲೆಯ 13 ವರ್ಷದೊಳಗಿನವರ ತಂಡಕ್ಕೆ ಆಯ್ಕೆ ಟ್ರಯಲ್ಸ್‌ಗೆ ಕರೆದೊಯ್ದರು. ಆದರೆ ಮಿನ್ನು ಕ್ರಿಕೆಟ್ ಆಡುವುದನ್ನು ಪೋಷಕರು ವಿರೋಧಿಸಿದ್ದರು.
ಕ್ರಿಕೆಟ್ ಆಡಲು ಕುಟುಂಬದಿಂದ ವಿರೋಧ:
ನನ್ನ ತಂದೆಗೆ ಸ್ಥಿರವಾದ ಕೆಲಸ ಇರಲಿಲ್ಲ. ಅವರು ಆರಂಭದಲ್ಲಿ ಕ್ರಿಕೆಟ್ ಹುಡುಗರ ಆಟ ಎಂದು ಹೇಳುವ ಮೂಲಕ ನನ್ನನ್ನು ನಿರುತ್ಸಾಹಗೊಳಿಸಿದರು. ಆದಾಗ್ಯೂ, ಹೆಚ್ಚಿನ ಮನವೊಲಿಕೆಯ ನಂತರ, ಅವರು ಒಪ್ಪಿಕೊಂಡರು. ಬಳಿಕ ನಾನು 13 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾದೆ. ಇದಾದ ನಂತರ ರಾಜ್ಯಮಟ್ಟದ ಶಿಬಿರಕ್ಕೂ ಆಯ್ಕೆಯಾದೆ. ಇದಾದ ನಂತರ ನನ್ನ ತಂದೆಯ ಮನಸ್ಸು ಸಂಪೂರ್ಣ ಬದಲಾಯಿತು ಮತ್ತು ನಂತರ ಅವರು ನನ್ನನ್ನು ಕ್ರಿಕೆಟ್ ಆಡುವುದನ್ನು ತಡೆಯಲಿಲ್ಲ. ಮಿನ್ನು ಶೀಘ್ರದಲ್ಲೇ ಕೇರಳದ ಅಂಡರ್-16 ತಂಡದಲ್ಲಿ ಸ್ಥಾನ ಪಡೆದರು ಮತ್ತು ಒಂದು ವರ್ಷದೊಳಗೆ ಸೀನಿಯರ್ ತಂಡಕ್ಕೆ ಆಯ್ಕೆ ಆದರು.
ಇದನ್ನೂ ಓದಿ: WPL 2023 Schedule: ಮಹಿಳಾ ಐಪಿಎಲ್ ವೇಳಾಪಟ್ಟಿ ಪ್ರಕಟ, RCB ಪಂದ್ಯಗಳು ಯಾವಾಗ? ಇಲ್ಲಿದೆ ಮಾಹಿತಿ
ಕ್ರಿಕೆಟ್ಗಾಗಿ ಬೆಳಗ್ಗೆ 4ಕ್ಕೆ ಏಳುತ್ತಿದ್ದೆ:
ಮಿನ್ನು ತನ್ನ ಕ್ರಿಕೆಟ್ ಕನಸನ್ನು ನನಸು ಮಾಡಿಕೊಳ್ಳಲು ಹಲವು ಅಡೆತಡೆಗಳನ್ನು ಎದುರಿಸಬೇಕಾಯಿತು. ಮಿನ್ನುವಿನ ಮನೆಯ ಸುತ್ತಮುತ್ತ ಕ್ರಿಕೆಟ್ ತರಬೇತಿಗೆ ಯಾವುದೇ ಸೌಲಭ್ಯವಿರಲಿಲ್ಲ. ತರಬೇತಿಗಾಗಿ ಕೃಷ್ಣಗಿರಿಗೆ ಹೋಗಬೇಕಿತ್ತು. ಈ ಹೋರಾಟದ ಕುರಿತು ಮಾತನಾಡಿದ ಅವರು, ಬೆಳಗಿನ ಜಾವ 4 ಗಂಟೆಗೆ ನನ್ನ ದಿನ ಆರಂಭವಾಗುತ್ತಿತ್ತು. ಮುಂಜಾನೆ ಎದ್ದು ಅಮ್ಮನ ಜೊತೆ ಮನೆ ಅಡುಗೆ ಮಾಡ್ತಿದ್ದೆ. ಕೃಷ್ಣಗಿರಿ ಸ್ಟೇಡಿಯಂ ನನ್ನ ಮನೆಯಿಂದ ಸುಮಾರು ಒಂದೂವರೆ ಗಂಟೆ ದೂರವಿತ್ತು. ನನ್ನ ಮನೆಯಿಂದ ಕೃಷ್ಣಗಿರಿಗೆ ನೇರ ಬಸ್ ವ್ಯವಸ್ಥೆ ಇಲ್ಲದ ಕಾರಣ. ಈ ಕಾರಣಕ್ಕೆ 4 ಬಸ್ ಬದಲಾಯಿಸಿ ಬೆಳಗ್ಗೆ 9ಕ್ಕೆ ಕೃಷ್ಣಗಿರಿ ಸ್ಟೇಡಿಯಂ ತಲುಪಿ ಸಂಜೆ 7ಕ್ಕೆ ಮನೆಗೆ ಮರಳುತ್ತಿದ್ದೆ.
ಹೆಚ್ಚಿನ ಆಟಗಾರರು ಐಪಿಎಲ್ ಗುತ್ತಿಗೆ ಪಡೆದ ತಕ್ಷಣ ದುಬಾರಿ ವಾಹನ ಅಥವಾ ಮನೆ ಖರೀದಿಸುತ್ತಾರೆ. ಆದರೆ ಮಿನ್ನುವಿನ ಆಸೆ ಚಿಕ್ಕದು. ಅವಳು ಸ್ಕೂಟರ್ ಖರೀದಿಸಲು ಬಯಸುತ್ತಾಳೆ. ಇದರಿಂದ ಅಭ್ಯಾಸಕ್ಕೆ ನಿತ್ಯ 4 ಬಸ್ ಗಳನ್ನು ಬದಲಿಸಬೇಕಾದ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದಿದ್ದಾರೆ. ಪ್ರಯಾಣಕ್ಕೆ ತೆಗೆದುಕೊಳ್ಳುವ ಸಮಯವನ್ನು ಉಳಿಸಲಾಗುತ್ತದೆ ಮತ್ತು ಅವಳು ತನ್ನ ತರಬೇತಿಯ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ