World U20 Athletics- ಕಿರಿಯರ ವಿಶ್ವ ಅಥ್ಲೆಟಿಕ್ಸ್ 4x400 ಮೀ ಸ್ಪರ್ಧೆಯಲ್ಲಿ ಭಾರತಕ್ಕೆ ಪದಕ

ವಿಶ್ವ ಅಥ್ಲೆಟಿಕ್ಸ್ ಅಂಡರ್20 ಚಾಂಪಿಯನ್​ಶಿಪ್​ನ 400 ಮೀಟರ್ ರಿಲೇ ಓಟದಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದಿದೆ. ಚಾಂಪಿಯನ್​ಶಿಪ್ ಇತಿಹಾಸದಲ್ಲಿ ಭಾರತೀಯ ಅಥ್ಲೀಟ್​ಗಳು ಗೆದ್ದ ಐದನೇ ಪದಕ ಇದಾಗಿದೆ.

ಭಾರತದ ರಿಲೇ ಓಟದ ಸ್ಪರ್ಧಿಗಳು

ಭಾರತದ ರಿಲೇ ಓಟದ ಸ್ಪರ್ಧಿಗಳು

  • News18
  • Last Updated :
  • Share this:
    ನವದೆಹಲಿ: ಕೀನ್ಯಾ ರಾಜಧಾನಿ ನೈರೋಬಿಯಲ್ಲಿ ನಡೆಯುತ್ತಿರುವ ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಭಾರತದ 4x400 ಮೀಟರ್ ಮಿಕ್ಸೆಡ್ ರಿಲೇ ಓಟದ ತಂಡ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ನಿನ್ನೆ ಸಂಜೆ ನಡೆದ ಫೈನಲ್​ನಲ್ಲಿ ಭಾರತದ ಸ್ಪ್ರಿಂಟರ್​ಗಳಾದ ಭರತ್ ಎಸ್, ಪ್ರಿಯಾ ಮೋಹನ್, ಸಮ್ಮಿ ಮತ್ತು ಕಪಿಲ್ ಅವರಿದ್ದ ತಂಡ 3:20.60 ನಿಮಿಷದಲ್ಲಿ ಓಡಿ ಮೂರನೇ ಸ್ಥಾನ ಪಡೆದರು. ನೈಜೀರಿಯಾ ಮತ್ತು ಪೋಲೆಂಡ್ ದೇಶದ ತಂಡಗಳು ಕ್ರಮವಾಗಿ 3:19.70 ಹಾಗೂ 3:19.80 ನಿಮಿಷದಲ್ಲಿ ಸ್ಪರ್ಧೆ ಮುಗಿಸಿ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದರು. ಫೈನಲ್​ಗೆ ಮುನ್ನ ಹೀಟ್ ರೇಸ್​ನಲ್ಲಿ ಭಾರತೀಯರು 3:23.36 ನಿಮಿಷದಲ್ಲಿ ಓಡಿ ಒಟ್ಟಾರೆ ಎರಡನೇ ಅತ್ಯುತ್ತಮ ತಂಡವಾಗಿ ಫೈನಲ್​ಗೆ ಪ್ರವೇಶ ಪಡೆದಿದ್ದರು. ಆದರೆ, ಫೈನಲ್​ನಲ್ಲಿ ಭಾರತದ ಮಿಶ್ರ ರಿಲೇ ತಂಡ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

    ವಿಶ್ವ ಅಥ್ಲೆಟಿಕ್ಸ್ ಅಂಡರ್-20 ಚಾಂಪಿಯನ್​ಶಿಪ್ ಇತಿಹಾಸದಲ್ಲಿ ಭಾರತಕ್ಕೆ ದೊರೆತ ಐದನೇ ಪದಕ ಮಾತ್ರ ಇದು ಎಂಬುದು ಇಲ್ಲಿ ಗಮನಾರ್ಹ. ಇದಕ್ಕೆ ಮುನ್ನ 2002ರಲ್ಲಿ ಸೀಮಾ ಆಂಟಿಲ್ ಅವರು ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಅದಾದ ಬಳಿಕ ಈ ಚಾಂಪಿಯನ್​ಶಿಪ್​ನಲ್ಲಿ ಪದಕ ಗೆಲ್ಲಲು ಭಾರತ 2014ರವರೆಗೆ ಕಾಯಬೇಕಾಯಿತು. ಆ ವರ್ಷ ನವಜೀತ್ ಕೌರ್ ಧಿಲ್ಲೋನ್ ಅವರು ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ಆಗಿರುವ ಜಾವೆಲಿನ್ ಪಟು ನೀರಜ್ ಚೋಪ್ರಾ 2016ರಲ್ಲಿ ಚಿನ್ನ ಗೆದ್ದಿದ್ದರು. 2018ರಲ್ಲಿ ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮಾ ದಾಸ್ ಕೂಡ ಚಿನ್ನ ಗೆದ್ದು ಬೆರಗಾಗಿಸಿದ್ದರು.

    ಇದನ್ನೂ ಓದಿ: Sachin Tendulkar: ಸ್ಫೂರ್ತಿ ಎಲ್ಲಿಂದಲೂ ಸಿಗಬಹುದು, ಈ ಆಟಗಾರನನ್ನು ತೋರಿಸಿ ಆ ಮಾತು ಹೇಳಿದ್ರು ಸಚಿನ್ ತೆಂಡುಲ್ಕರ್...ಯಾರಿವನು?

    ಪ್ರಸ್ತುತ ಕೀನ್ಯಾದಲ್ಲಿ ನಡೆಯುತ್ತಿರುವ ಅಂಡರ್-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಭಾರತ ಮೊದಲ ಮೆಡಲ್ ಗೆದ್ದು ಬೀಗಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನೀರಜ್ ಪಟೇಲ್ ಅವರು ಭಾರತದ ಯುವ ಅಥ್ಲೀಟ್​ಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರಂತೆ. ಈ ಚಾಂಪಿಯನ್​ಶಿಪ್​ನಲ್ಲಿ ಇನ್ನಷ್ಟು ಪದಕ ಗೆಲ್ಲಲು ಭಾರತೀಯರಿಗೆ ಇನ್ನೂ ಅವಕಾಶಗಳಿವೆ. ಪ್ರಿಯಾ ಮೋಹನ್ ಅವರು ಮಹಿಳೆಯರ ವೈಯಕ್ತಿಕ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಶಾಟ್ ಪುಟ್​ನಲ್ಲಿ ಅಮನ್ ದೀಪ್ ಧಲಿವಾಲ ಅವರೂ ಕೂಡ ಅಂತಿಮ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅಜೈ ಸಿಂಗ್ ರಾಣ ಮತ್ತು ಜಯ್ ಕುಮಾರ್ ಇಬ್ಬರೂ ಫೈನಲ್ ತಲುಪಿದ್ದಾರೆ.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:Vijayasarthy SN
    First published: