ಮಹಿಳಾ ಟಿ20 ವಿಶ್ವಕಪ್ನಲ್ಲಿ ( Women's T20 World Cup) ಭಾರತ (India) ಮಹಿಳಾ ತಂಡ ಐರ್ಲೆಂಡ್ (Ireland) ಮಹಿಳಾ ತಂಡದ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದೆ. ಮಳೆಯಿಂದ ಅಡಚಣೆಗೆ ಒಳಗಾಗಿದ್ದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ 5 ರನ್‌ಗಳ ಜಯ ಸಾಧಿಸಿ ಸತತ 3ನೇ ಭಾರಿ ಒಟ್ಟಾರೆ 5ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 155 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಐರ್ಲೆಂಡ್ 8.2 ಓವರ್‌ಗಳಲ್ಲಿ 54 ರನ್ಗಳಿಸಿದ್ದ ವೇಳೆ ಮಳೆಯಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಮಳೆ ನಿಲ್ಲದ ಕಾರಣ ಫಲಿತಾಂಶಕ್ಕೆ ಡಿಎಲ್ಎಸ್ ನಿಯಮದ ಆಧಾರದ ಮೇಲೆ ಭಾರತ ವಿಜಯಿ ತಂಡ ಎಂದು ಘೋಷಿಸಲಾಯಿತು. ಮಳೆ ಬಾಧಿತ ಪಂದ್ಯದಲ್ಲಿ ಆಟ ಸ್ಥಗಿತಗೊಂಡಾಗ ಡಿಎಲ್ಎಸ್ ವಿಧಾನದ ಪ್ರಕಾರ 8.2 ಓವರ್‌ಗಳಲ್ಲಿ 59 ರನ್ ಗಳಿಸಬೇಕಿತ್ತು. ಆದರೆ ಐರ್ಲೆಂಡ್ 54 ರನ್ ಗಳಿಸಿತ್ತು. ಹೀಗಾಗಿ 5 ರನ್‌ಗಳಿಂದ ಭಾರತ ಮಹಿಳಾ ತಂಡ ಗೆಲುವು ದಾಖಲಿಸಿತು.
ಮೊದಲ ಓವರ್ನಲ್ಲೇ ಆಘಾತ
ಭಾರತ ನೀಡಿದ್ದ 156 ರನ್‌ಗಳ ಪ್ರಬಲ ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ, ಮೊದಲ ಓವರ್‌ನ ಮೊದಲ ಎಸೆತದಲ್ಲೇ ಆರಂಭಿಕ ಬ್ಯಾಟರ್ ಆ್ಯಮಿ ಹಂಟರ್ ರನೌಟ್ ಆದರು. ನಂತರ ಅದೇ ಓವರ್ 5ನೇ ಎಸೆತದಲ್ಲಿ ಓರ್ಲಾ ಪ್ರೆಂಡರ್‌ಗಾಸ್ಟ್ ಅವರು ರೇಣುಕಾ ಸಿಂಗ್ ಠಾಕೂರ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಶೂನ್ಯಕ್ಕೆ ಪೆವಿಲಿಯನ್ಗೆ ಮರಳಿದರು. ಆದರೆ ಗ್ಯಾಬಿ ಲೂಯಿಸ್ 25 ಎಸೆತಗಳಲ್ಲಿ 5 ಬೌಂಡರಿ ಸಹಿತ 31 ಹಾಗೂ ನಾಯಕಿ ಲೌರಾ ಡೆಲಾನಿ 20 ಎಸೆತಗಳಲ್ಲಿ 3 ಬೌಂಡರಿ ಸಹಿತ 17 ರನ್ಗಳಿಸಿ ಕ್ರೀಸ್ನಲ್ಲಿದ್ದರು. ಈ ವೇಳೆ ಮಳೆಯಾಗಮಿಸಿ ಪಂದ್ಯವನ್ನು ಸ್ಥಗಿತಗೊಳಿಸಿತ್ತು.
ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಮಂಧಾನ ಮತ್ತು ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 62 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. ತಮ್ಮ ನೈಜ ಆಟ ಆಡುವಲ್ಲಿ ವಿಫಲರಾದ ಶಫಾಲಿ 29 ಎಸೆತಗಳಲ್ಲಿ 24 ರನ್ಗಳಿಸಿ ಔಟಾದರು. ನಂತರ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ದಾಖಲೆಯ 150 ಟಿ20 ಪಂದ್ಯದಲ್ಲಿ 20 ಎಸೆತಗಳಲ್ಲಿ ಎದುರಿಸಿ 13 ರನ್ ಗಳಿಸಿ ನಿರಾಶೆಯನುಭವಿಸಿದರು. ಜೆಮಿಮಾ ರೋಡ್ರಿಗಸ್ ಕೂಡ 12 ಎಸೆತಗಳಲ್ಲಿ 19 ರನ ಬಾರಿಸಿ ವಿಕೆಟ್ ಒಪ್ಪಿಸಿದರು.
ಅಬ್ಬರಿಸಿದ ಮಂಧಾನ
ಆರಂಭಿಕಳಾಗಿ ಕಣಕ್ಕಿಳಿದಿದ್ದ ಸ್ಮೃತಿ ಮಂಧಾನ ಏಕಾಂಗಿ ಹೋರಾಟ ನಡೆಸಿ 56 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳ ಸಹಿತ 87 ರನ್ ಗಳಿಸಿದರು. ಅವರ ಈ ಆಟಕ್ಕೆ ಪಂದ್ಯಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಮಂಧಾನ ಕಳೆದ ಪಂದ್ಯದಲ್ಲೂ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಬಾರಿಸಿದ್ದರು. ಆದರೂ ಭಾರತ 11 ರನ್‌ಗಳ ಸೋಲು ಕಂಡಿತ್ತು.
ಭಾರತ vs ಐರ್ಲೆಂಡ್ ಮಹಿಳಾ ತಂಡಗಳ ಆಡುವ 11ರ ಬಳಗ
ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ದೇವಿಕಾ ವೈದ್ಯ, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.
ಐರ್ಲೆಂಡ್ ತಂಡ: ಆ್ಯಮಿ ಹಂಟರ್, ಗೇಬಿ ಲೆವಿಸ್, ಓರ್ಲಾ ಪ್ರೆಂಡರ್‌ಗಾಸ್ಟ್, ಐಮಿಯರ್ ರಿಚರ್ಡ್‌ಸನ್, ಲೂಯಿಸ್ ಲಿಟಲ್, ಲಾರಾ ಡೆಲಾನಿ(ನಾಯಕಿ), ಅರ್ಲೀನ್ ಕೆಲ್ಲಿ, ಮೇರಿ ವಾಲ್ಡ್ರಾನ್(ವಿಕೆಟ್ ಕೀಪರ್), ಲೇಹ್ ಪಾಲ್, ಕಾರಾ ಮುರ್ರೆ, ಜಾರ್ಜಿನಾ ಡೆಂಪ್ಸೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ