ನಾರ್ವೇಜಿಯನ್ ಮಹಿಳಾ ಬೀಚ್ ಹ್ಯಾಂಡ್‍ಬಾಲ್ ತಂಡ ಬಟ್ಟೆ ಬದಲಾಯಿಸುವುದಿಲ್ಲ ಎಂದು ನಿರ್ಧಾರ ಮಾಡಿರುವ ಕಾರಣಕ್ಕೆ ಸುದ್ದಿಯಲ್ಲಿದೆ. ಹೌದು ನಮಗೆ ಆರಾಮದಾಯಕ ಎನಿಸದ ಕ್ರೀಡಾ ಬಟ್ಟೆಗಳನ್ನು ಧರಿಸಲು ಸಾಧ್ಯವಿಲ್ಲ ಎಂದ ಮಹಿಳೆಯರ ಪರ ಇಡೀ ಜಗತ್ತಿನಾದ್ಯಂತ ಧ್ವನಿ ಮೊಳಗಿದೆ.
ನಿಜ ನಾರ್ವೇಜಿಯನ್ ಮಹಿಳಾ ಬೀಚ್ ಹ್ಯಾಂಡ್‍ಬಾಲ್ ತಂಡಕ್ಕೆ ಯುರೋಪಿಯನ್ ಚಾಂಪಿಯನ್‍ಶಿಪ್‍ನಲ್ಲಿ ಶಾರ್ಟ್ಸ್ ಧರಿಸಿದ್ದಕ್ಕಾಗಿ ಸೋಮವಾರ ದಂಡ ವಿಧಿಸಲಾಯಿತು. ಈ ಆಟದ ನಿಯಮಗಳ ಪ್ರಕಾರ ಮಹಿಳೆಯರು ಆಟದ ಸಮಯದಲ್ಲಿ ಬಿಕಿನಿ ಬಾಟಮ್‍ಗಳನ್ನು ಧರಿಸಬೇಕು.
ಅಂತರರಾಷ್ಟ್ರೀಯ ಹ್ಯಾಂಡ್‍ಬಾಲ್ ಫೆಡರೇಶನ್ ನಿಗದಿಪಡಿಸಿದ ನಿಯಮಾವಳಿಗಳ ಪ್ರಕಾರ ಯುರೋಪಿಯನ್ ಹ್ಯಾಂಡ್‍ಬಾಲ್ ಫೆಡರೇಶನ್ ಒಟ್ಟು 1,500 ಯುರೋಗಳ ದಂಡ ವಿಧಿಸಿದೆ. ಪ್ರತಿ ಆಟಗಾರನಿಗೆ 150 ಯುರೋಗಳಷ್ಟು ದಂಡವನ್ನು ವಿಧಿಸಿತು.
ಫೆಡರೇಶನ್‍ನ ನಿಯಮಗಳ ಪ್ರಕಾರ, ಪುರುಷರು ಶಾರ್ಟ್ಸ್ ಧರಿಸಬೇಕು, ಮಹಿಳೆಯರು ಬಿಕಿನಿ ಬಾಟಮ್‍ಗಳನ್ನು ಮಾತ್ರ ಧರಿಸಬೇಕು. ಬಿಕಿನಿಯು ಮಂಡಿಯಿಂದ ಮೇಲೆ ಇದ್ದು ವಿ ಆಕಾರದಲ್ಲಿ ಇರಬೇಕು ಎಂದು ಹೇಳಿತ್ತು. ಆದರೆ ಇದನ್ನು ಮಹಿಳೆಯರು ವಿರೋಧಿಸಿ ಶಾರ್ಟ್ಸ್ ಧರಿಸಿದ್ದರು.
ಬಾಟಮ್‍ಗಳು 10 ಸೆಂಟಿಮೀಟರ್ಗಳಿಗಿಂತ ಹೆಚ್ಚು ಅಥವಾ ಸುಮಾರು 3.9 ಇಂಚುಗಳಷ್ಟು ಅಗಲವನ್ನು ಹೊಂದಿರಬಾರದು ಎಂದು ನಿಯಮಗಳು ಹೇಳುತ್ತವೆ. ನಾರ್ವೆ ಹ್ಯಾಂಡ್‍ಬಾಲ್ ಫೆಡರೇಶನ್ (ಎನ್‍ಎಚ್‍ಎಫ್) ತಮ್ಮ ಆಟಗಾರರಿಗೆ ದಂಡ ವಿಧಿಸಿದರೆ ಪಾವತಿಸುವುದಾಗಿ ಮೊದಲೇ ತಿಳಿಸಿತ್ತು.
ಎನ್‍ಎಚ್‍ಎಫ್‍ನ ಮುಖ್ಯಸ್ಥ ಕರೇ ಗೀರ್ ಲಿಯೋ ಸುದ್ದಿ ಸಂಸ್ಥೆ ಎಎಫ್‍ಪಿಗೆ ದಂಡವನ್ನು ಪಾವತಿಸಲಾಗುವುದು ಎಂದು ಹೇಳಿದ್ದರು ಆದರೆ ಅದಕ್ಕೆ ಕೊಡುವ ಕಾರಣ ನ್ಯಾಯಸಮ್ಮತವಾಗಿ ಇರಬೇಕು ಎಂದು ಸಹ ಹೇಳಿದರು.
ಕ್ರೀಡಾಪಟುಗಳು ಆಟವಾಡುವ ವೇಳೆ ಯಾವುದೇ ಮುಜುಗರಕ್ಕೊಳಗಾಗದೆ ತಮಗೆ ಆರಾಮದಾಯಕವಾದ ಹಾಗೂ ಅನುಕೂಲಕರವಾದ ಬಟ್ಟೆಗಳನ್ನು ಧರಿಸುವುದು ಅತ್ಯಂತ ಮುಖ್ಯವಾದ ವಿಷಯ ಎಂದು ಸಹ ತಿಳಿಸಿದ್ದರು.
ಬದಲಾಯಿಸಲು ಬೆಂಬಲ
ಆಟಗಾರರಿಗೆ ದಂಡ ವಿಧಿಸುವ ನಿರ್ಧಾರವನ್ನು ಕೈಬಿಡಬೇಕು ಒತ್ತಾಯಿಸಲಾಗಿದೆ. "ಯುರೋಪಿಯನ್ ಚಾಂಪಿಯನ್‍ಶಿಪ್‍ನಲ್ಲಿ ಧ್ವನಿ ಎತ್ತಿದ ಮಹಿಳೆಯರಿಗೆ ಸಾಕಷ್ಟು ಮಂದಿ ಬೆಂಬಲ ಸೂಚಿಸಿದ್ದು, ಮಹಿಳೆಯರು ತೆಗೆದುಕೊಂಡ ತೀರ್ಮಾನದ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆ ಇದೆ ಎಂದು ಹೇಳಿದ್ದರು.
"ನಾವು ಎನ್‍ಎಚ್‍ಎಫ್‍ನಲ್ಲಿ ನಿಮ್ಮ ಜೊತೆಗೆ ನಿಂತು ನಿಮ್ಮನ್ನು ಬೆಂಬಲಿಸುತ್ತೇವೆ. ಒಟ್ಟಾರೆ ಆರಾಮದಾಯಕವಲ್ಲದ ಬಟ್ಟೆಗಳನ್ನು ಧರಿಸಲು ಒತ್ತಾಯಿಸುವ ನಿಯಮಗಳನ್ನು ನಾವು ವಿರೋಧಿಸುತ್ತೇವೆ. ನಾವು ನಿಯಮಗಳನ್ನು ಬದಲಾಯಿಸಲು ಹೋರಾಡುತ್ತೇವೆ, ಇದರಿಂದ ಆಟಗಾರರು ಆರಾಮದಾಯಕವಾದ ಬಟ್ಟೆಗಳಲ್ಲಿ ಆಡಬಹುದು.
ಚಾಂಪಿಯನ್‍ಶಿಪ್ ಮೊದಲು, ಶಾರ್ಟ್ಸ್ ಧರಿಸಿ ಆಡಲು ಅನುಮತಿ ಕೇಳಲು ನಾರ್ವೆ ಇಎಚ್‍ಎಫ್ ಅನ್ನು ಸಂಪರ್ಕಿಸಿತು ಆದರೆ ನಿಯಮಗಳ ಉಲ್ಲಂಘನೆಯಾದರೆ ಖಂಡಿತವಾಗಿಯೂ ಶಿಕ್ಷಾರ್ಹವಾಗುತ್ತದೆ, ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿತ್ತು
ಕೆಲವು ಆಟಗಾರರು ಬಿಕಿನಿ ಧರಿಸುವುದು ಅವಮಾನಕರ, ಲೈಂಗಿಕತೆ ಪ್ರಚೋದನೆ ನೀಡಿದಂತಾಗುತ್ತದೆ ಮತ್ತು ಅಪ್ರಾಯೋಗಿಕವೆಂದುಮೊದಲಿನಿಂದಲೂ ವಾದಿಸುತ್ತಾಬಂದಿದ್ದರು, ಮಹಿಳಾ ಆಟಗಾರರಿಗೆ ಈ ರೀತಿ ಬಿಕಿನಿ ಧರಿಸುವುದನ್ನು ನಿಷೇಧಿಸಬೇಕು ಎಂದು ಕ್ರೀಡಾ ವಲಯಗಳಲ್ಲಿ ಹಲವಾರು ವರ್ಷಗಳಿಂದ ಕೂಗು ಏಳುತ್ತಲೇ ಇತ್ತು. ಈಗ ಅದಕ್ಕೆ ಬಲ ಬಂದಿದ್ದು ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ