ಕೇಪ್ಟೌನ್: ಹಾಲಿ ವಿಶ್ವಚಾಂಪಿಯನ್ (World Champion) ಆಸ್ಟ್ರೇಲಿಯಾ (Australia) ಮಹಿಳಾ ತಂಡ ಭಾನುವಾರ ದಕ್ಷಿಣ ಆಫ್ರಿಕಾ (South Africa) ಮಹಿಳಾ ತಂಡವನ್ನು ಮಣಿಸುವ ಮೂಲಕ 6ನೇ ಐಸಿಸಿ ಟಿ20 ಮಹಿಳಾ ವಿಶ್ವಕಪ್ (Women's T20I World Cup) ಜಯಿಸಿದೆ. ಕೇಪ್ ಟೌನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅತಿಥೇಯ ತಂಡವನ್ನು 19 ರನ್‌ಗಳಿಂದ ಮಣಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತದ (India) ವಿರುದ್ಧ ಸೆಮಿಫೈನಲ್ನಲ್ಲಿ ಅಬ್ಬರಿಸಿದ್ದ ಆರಂಭಿಕ ಬ್ಯಾಟರ್ ಬೆತ್ ಮೂನಿ (Beth Mooney) ಇಂದಿನ ಪಂದ್ಯದಲ್ಲೂ ಅಜೇಯ 74 ರನ್ಗಳಿಸಿ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೂನಿ ಅವರ ಅದ್ಭುತ ಇನ್ನಿಂಗ್ಸ್‌ನಿಂದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಇದಾದ ಬಳಿಕ ದಕ್ಷಿಣ ಆಫ್ರಿಕಾ ತಂಡ 6 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಗಿ 19 ರನ್‌ಗಳ ಸೋಲುಂಡಿತು.
6ನೇ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಮಹಿಳಾ ತಂಡ ಈ ವರ್ಷ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಆರನೇ ಬಾರಿಗೆ ಟಿ-20 ಮಹಿಳಾ ವಿಶ್ವ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ 2010, 2012, 2014, 2018 ಹಾಗೂ 2020ರಲ್ಲೂ ಟಿ20 ವಿಶ್ವಕಪ್ ಗೆದ್ದಿದ್ದರು. 2020ರಲ್ಲಿ ಭಾರತವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಮೂನಿ ಅರ್ಧಶತಕ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಓಪನರ್ ಬೆತ್ ಮೂನಿ 53 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 74 ರನ್ ಗಳಿಸಿದ್ದರು. ಉಳಿದಂತೆ ಆಶ್ಲೇ ಗಾರ್ಡ್ನರ್ 21 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್ಗಳ ಸಹಿತ 29 ರನ್ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಶಬ್ನಿಮ್ ಇಸ್ಮಾಯಿಲ್ 26ಕ್ಕೆ 2 ಮರಿಝಾನ್ ಕಾಪ್ 35ಕ್ಕೆ 2 ವಿಕೆಟ್ ಪಡೆದು ಮಿಂಚಿದರು.
ಲೌರಾ ವೋಲ್ವಾರ್ಟ್ ಆಟ ವ್ಯರ್ಥ
157 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಓಪನರ್ ವೊಲ್ವಾರ್ಟ್ 48 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ಗಳ ಸಹಿತ 61 ರನ್ ಗಳಿಸಿದರು. ಇವರು ಕ್ರೀಸ್ನಲ್ಲಿ ಇರುವ ತನಕ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿತ್ತು. ಆದರೆ 17ನೇ ಓವರ್‌ನಲ್ಲಿ ವೋಲ್ವಾರ್ಟ್ ವಿಕೆಟ್ ಕಳೆದುಕೊಳ್ಳುತ್ತಿದ್ದ ಟ್ರೋಫಿ ಗೆಲ್ಲುವ ದಕ್ಷಿಣ ಆಫ್ರಿಕಾದ ಭರವಸೆಯೂ ಕೊನೆಗೊಂಡಿತು.
ಇನ್ನು ಆಸ್ಟ್ರೇಲಿಯಾ ಅತ್ಯುತ್ತಮ ಬೌಲಿಂಗ್ 157 ರನ್‌ಗಳ ಸವಾಲಿನ ಗುರಿ ನೀಡಿದರೂ ಆಸ್ಟ್ರೇಲಿಯಾ ಶಿಸ್ತಿನ ಬೌಲಿಂಗ್ ಜೊತೆಗೆ ಅದ್ಭುತ ಕ್ಷೇತ್ರ ರಕ್ಷಣ ಮಾಡಿತು. ಆರಂಭದಿಂದಲೇ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳನ್ನು ಕಟ್ಟಿಹಾಕುವ ಮೂಲಕ ಒತ್ತಡ ಏರುವಲ್ಲಿ ಯಶಸ್ವಿಯಾಯಿತು. ಆಶ್ಲೆ ಗಾರ್ಡ್ನರ್ 4 ಓವರ್ ಗಳಲ್ಲಿ 20 ರನ್ ನೀಡಿ 1 ವಿಕೆಟ್ ಪಡೆದರು. ಮೇಗನ್ ಶಟ್, ಡಾರ್ಸಿ ಬ್ರೌನ್ ಮತ್ತು ಜೆಸ್ ಜೊನಾಸ್ಸೆನ್ ತಲಾ ಒಂದು ವಿಕೆಟ್ ಪಡೆದರು.
ಮೂನಿಗೆ ಪಂದ್ಯ ಶ್ರೇಷ್ಠ, ಗಾರ್ಡ್ನರ್ಗೆ ಸರಣಿ ಶ್ರೇಷ್ಠ ಪ್ರಶಸ್ತಿ
53 ಎಸೆತಗಳಲ್ಲಿ 74 ರನ್ ಗಳಿಸಿದ ಬೆತ್ ಮೂನಿ ಪಂದ್ಯದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು. ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಲ್‌ರೌಂಡರ್ ಆಟ ಪ್ರದರ್ಶಿಸಿದ ಆಶ್ಲೆ ಗಾರ್ಡ್ನರ್ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು.
ಎರಡನೇ ಸಲ ಹ್ಯಾಟ್ರಿಕ್ ವಿಶ್ವಕಪ್ ಗೆದ್ದ ಆಸೀಸ್
ಮಹಿಳಾ ಕ್ರಿಕೆಟ್ನಲ್ಲಿ ಅತ್ಯಂತ ಪ್ರಬಲ ತಂಡವಾಗಿರುವ ಆಸ್ಟ್ರೇಲಿಯಾ ತಂಡ ಎರಡನೇ ಬಾರಿ ಹ್ಯಾಟ್ರಿಕ್ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಈ ಹಿಂದೆ 2010, 2012, 2014 ರಲ್ಲಿ ಸತತ ಮೂರು ಬಾರಿ ಪ್ರಶಸ್ತಿ ಜಯಿಸಿತ್ತು. ಇದೀಗ 2018, 2020 ಹಾಗೂ 2023ರಲ್ಲಿ ಸತತ ಮೂರು ಬಾರಿ ಚಾಂಪಿಯನ್ ಆಗಿದೆ. ಈ ಮೂಲಕ ಪುರುಷ ಅಥವಾ ಮಹಿಳಾ ಕ್ರಿಕೆಟ್ನಲ್ಲಿ 2 ಬಾರಿ ಹ್ಯಾಟ್ರಿಕ್ ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.
13 ವಿಶ್ವಕಪ್ ಗೆದ್ದ ದಾಖಲೆ
ಆಸ್ಟ್ರೇಲಿಯಾ ಮಹಿಳಾ ತಂಡ ಒಟ್ಟಾರೆ 13 ಐಸಿಸಿ ಟೂರ್ನಮೆಂಟ್ ಗೆದ್ದ ಗೌರವಕ್ಕೆ ಪಾತ್ರವಾಗಿದೆ. 6 ಟಿ20 ವಿಶ್ವಕಪ್ ಹಾಗೂ 7 ಬಾರಿ ಏಕದಿನ ವಿಶ್ವಕಪ್ ಜಯಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ