ಕೇಪ್‌ಟೌನ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ( Women's T20 World Cup) ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ (Champion) ಆಸ್ಟ್ರೇಲಿಯಾ (Australia) ತಂಡದ ವಿರುದ್ಧ ಭಾರತ ಮಹಿಳಾ (India Women) ತಂಡ 5 ರನ್ಗಳ ಸೋಲು ಕಂಡು ವಿಶ್ವಕಪ್ನಿಂದ ಹೊರಬಿದ್ದಿದೆ. ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 173 ರನ್ಗಳ ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 167 ರನ್ಗಳಿಸಲಷ್ಟೇ ಶಕ್ತವಾಗಿ 5 ರನ್ಗಳ ರೋಚಕ ಸೋಲು ಕಂಡಿದೆ.
ಅಬ್ಬರಿಸಿದ ಮೂನಿ -ಲ್ಯಾನಿಂಗ್
ಟೂರ್ನಿಮೆಂಟ್ ಗೆಲ್ಲುವ ನೆಚ್ಚಿನ ತಂಡವಾಗಿರುವ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಬ್ಯಾಟರ್ಗಳಾದ ಬೆತ್ ಮೂನಿ ಅರ್ಧಶತಕ ಹಾಗೂ ನಾಯಕಿ ಮೆಗ್ ಲ್ಯಾನಿಂಗ್ ಬಿರುಸಿನ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 172 ರನ್ ಗಳಿಸಿತು. ಮೂನಿ 37 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 54 ರನ್ಗಳಿಸಿದರೆ, ಲ್ಯಾನಿಂಗ್ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 49 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಆಲ್‌ರೌಂಡರ್ ಗಾರ್ಡ್ನರ್ 31 ಹಾಗೂ ವಿಕೆಟ್ ಕೀಪರ್ ಅಲಿಸಾ ಹೀಲಿ 25 ರನ್ ಕೊಡುಗೆ ನೀಡಿದ್ದರು.
173 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲೇ ಅಗ್ರ ಬ್ಯಾಟರ್ಗಳ ವಿಕೆಟ್ ಕಳೆದುಕೊಂಡು ಹಿನ್ನಡ ಅನುಭವಿಸಿತು. ಸ್ಮೃತಿ ಮಂಧಾನ 2, ಶಫಾಲಿ ವರ್ಮಾ 9 , ಯಸ್ತಿಕಾ ಭಾಟಿಯಾ 4 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: IND vs AUS: ಟೀಂ ಇಂಡಿಯಾ ಸ್ಟಾರ್ ಆಟಗಾರನ ತಂದೆ ವಿಧಿವಶ
ಭಾರತಕ್ಕೆ ಆರಂಭಿಕ ಆಘಾತ
28ಕ್ಕೆ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಭಾರತ ತಂಡಕ್ಕೆ ನಾಯಕಿ ಹರ್ಮನ್ ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರಿಗಸ್ ಅದ್ಭುತ ಜೊತೆಯಾಟ ನೀಡಿ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಈ ಜೋಡಿ 4ನೇ ವಿಕೆಟ್ ಜೊತೆಯಾಟದಲ್ಲಿ 69 ರನ್ ಜೊತೆಯಾಟ ನೀಡಿದರು. 24 ಎಸೆತಗಳಲ್ಲಿ 6 ಬೌಂಡರಿ ಸಹಿತ 43 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದ ಕೌರ್
ಜೆಮಿಮಾ ರೋಡ್ರಿಗಸ್ ಔಟಾದ ನಂತರ ಹರ್ಮನ್‌ಪ್ರೀತ್ ಕೌರ್ ಸ್ಫೋಟಕ ಆಟ ಮುಂದುವರೆಸಿದರು. ರಿಚಾ ಘೋಷ್ ಜೊತೆಗೂಡಿ 36 ರನ್‌ಗಳನ್ನು ಕಲೆಹಾಕಿದರು. ಆದರೆ, ಭಾರತಕ್ಕೆ ಅದೃಷ್ಟ ಕೈಕೊಟ್ಟಿತ್ತು, ಉತ್ತಮವಾಗಿ ಆಡುತ್ತಿದ್ದ ಹರ್ಮನ್‌ಪ್ರೀತ್ ಕೌರ್ ರನೌಟ್ ಆದರು. ಅವರು 34 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 52 ರನ್ಗಳಿಸಿದ್ದ ಭಾರತಕ್ಕೆ ಗೆಲ್ಲಲು 32 ಎಸೆತಗಳಲ್ಲಿ 40 ರನ್ಗಳ ಅವಶ್ಯಕತೆ ಇದ್ದಾಗ ವಿಕೆಟ್ ಒಪ್ಪಿಸಿದರು.
ಕಳೆದ 3 ಪಂದ್ಯಗಳಲ್ಲಿ ಅಬ್ಬರಿಸಿದ್ದ ರಿಚಾ ಘೋಷ್ ಇಂದಿನ ಪಂದ್ಯದಲ್ಲಿ ರನ್ಗಳಿಸಲು ಪರದಾಡಿದರು. ಅವರು 17 ಎಸೆತಗಳಲ್ಲಿ ಕೇವಲ 14 ರನ್ಗಳಿಸಿ ವಿಕೆಟ್ ಕೈಚೆಲ್ಲಿದರು. ಕೊನೆಯಲ್ಲಿ ದೀಪ್ತಿ ಶರ್ಮಾ 17 ಎಸೆತಗಳಲ್ಲಿ 20 ರನ್ಗಳಿಸಿ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ದಾಟಿಸುವಲ್ಲಿ ವಿಫಲರಾದರು.
ಆಸ್ಟ್ರೇಲಿಯಾ ಪರವಾಗಿ ಅತ್ಯುತ್ತಮ ಬೌಲಿಂಗ್ ಮಾಡಿದ ಡಾರ್ಸಿ ಬ್ರೌನ್ 4 ಓವರ್ ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಪಡೆದುಕೊಂಡರು. 2 ವಿಕೆಟ್ ಜೊತೆಗೆ 31 ರನ್ ಕಲೆಹಾಕಿದ ಆಲ್‌ರೌಂಡರ್ ಆಶ್ಲೆ ಗಾರ್ಡ್ನರ್ ಪಂದ್ಯದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದರು.
ತಂಡಗಳ ವಿವರ
ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ, ಸ್ನೇಹ ರಾಣಾ, ಶಿಖಾ ಪಾಂಡೆ, ರಾಧಾ ಯಾದವ್, ರೇಣುಕಾ ಠಾಕೂರ್ ಸಿಂಗ್.
ಆಸ್ಟ್ರೇಲಿಯಾ: ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ಆಶ್ಲೆ ಗಾರ್ಡ್ನರ್, ಎಲ್ಲಿಸ್ ಪೆರ್ರಿ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೇರ್‌ಹ್ಯಾಮ್, ಜೆಸ್ ಜೊನಾಸೆನ್, ಮೇಗನ್ ಸ್ಕಟ್, ಡಾರ್ಸಿ ಬ್ರೌನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ