ಮಹಿಳಾ ಟಿ20 ವಿಶ್ವಕಪ್ನಲ್ಲಿ (T20 world Cup) ಸತತ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಭಾರತ (India) ತಂಡ ಶನಿವಾರ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲಿ 11 ರನ್ಗಳ ಸೋಲು ಕಂಡಿದೆ. ಯುವ ಬ್ಯಾಟರ್ ರಿಚಾ ಘೋಷ್ (Richa Ghosh) ಅವರ ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ ಹರ್ಮನ್ ಪ್ರೀತ್ ಕೌರ್ (Harmanpreet Kaur) ಬಳಗ ಇಂಗ್ಲೆಂಡ್ (England) ತಂಡ ನೀಡಿದ್ದ 152 ರನ್ಗಳ ಗುರಿಯನ್ನು ತಲುಪಲು ಸಾಧ್ಯವಾಗದೇ ಸೋಲು ಕಂಡಿತು. ಇತ್ತ ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.
ಪೋರ್ಟ್ ಎಲಿಜಬೆತ್‌ನ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಬಿ ಗುಂಪಿನ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಚೇಸಿಂಗ್ ಮಾಡಿ ಗೆಲುವು ಸಾಧಿಸಿದ್ದರಿಂದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೂಡಲೇ ಹರ್ಮನ್ ಪ್ರೀತ್ ಕೌರ್ ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ನೀಡಿದರು.
ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ
ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಇಂಗ್ಲೆಂಡ್ 10 ರನ್ಗಳಾಗುವಷ್ಟರಲ್ಲಿ ಅನುಭವಿ ಡೇನಿಯಲ್ ವ್ಯಾಟ್(0) ಮತ್ತು ಅಲಿಸ್ ಕ್ಯಾಪ್ಸೆ(3) ವಿಕೆಟ್ ಕಳೆದುಕೊಂಡಿತು. 5ನೇ ಓವರ್ನಲ್ಲಿ ಸೋಫಿಯಾ ಡಂಕ್ಲೆ(10) ಕೂಡ ಔಟಾದರು. ಈ ಮೂವರನ್ನು ರೇಣುಕಾ ಸಿಂಗ್ ಪೆವಿಲಿಯನ್ಗಟ್ಟಿದ್ದರು.
ನ್ಯಾಟ್ ಸೀವರ್ ಭರ್ಜರಿ ಬ್ಯಾಟಿಂಗ್
ಕೇವಲ 29 ರನ್ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಆಲ್ರೌಂಡರ್ ಹಾಗೂ ಐಪಿಎಲ್ ದುಭಾರಿ ವಿದೇಶಿ ಆಟಗಾರ್ತಿಯಾಗಿರುವ ನ್ಯಾಟ್ ಸೀವರ್ ಅರ್ಧಶತಕ ಸಿಡಿಸಿ ಇಂಗ್ಲಂಡ್ ತಂಡಕ್ಕೆ ನೆರವಾದರು. ಅವರು ನಾಯಕಿ ಹೀದರ್ ನೈಟ್(28) ಜೊತೆಗೂಡಿ 4 ವಿಕೆಟ್ಗೆ 51 ರನ್ ಸೇರಿಸಿದರು. ನಂತರ ವಿಕೆಟ್ ಕೀಪರ್ ಆ್ಯಮಿ ಜೋನ್ಸ್(40) ಜೊತೆಗೂ 40 ರನ್ ಸೇರಿಸಿದರು. ಅವರು ಔಟಾಗುವ ಮುನ್ನ 42 ಎಸೆತಗಳಲ್ಲಿ 5 ಬೌಂಡರಿ ಸಹಿತ 50 ರನ್ಗಳಿಸಿದ್ದರು. ಈ ಮೂವರ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಭಾರತಕ್ಕೆ 152 ರನ್ಗಳ ಸವಾಲಿನ ಗುರಿಯನ್ನು ನೀಡಿತ್ತು.
ಮಂಧಾನ- ಘೋಷ್ ಆಟ ವ್ಯರ್ಥ
152 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡ ಉತ್ತಮ ಆರಂಭ ಪಡೆದರೂ ಸ್ಮೃತಿ ಮಂಧಾನ ಅವರಿಗೆ ಸೂಕ್ತ ಬೆಂಬಲ ಸಿಗದ ಕಾರಣ ಹಿನ್ನಡೆ ಅನುಭವಿಸಿತು. ಮೊದಲೆರಡು ಪಂದ್ಯಗಳಲ್ಲಿ ತಂಡದ ಗೆಲುವಿಗೆ ಅಲ್ಪ ಕೊಡುಗೆ ನೀಡಿದ್ದ ಶೆಫಾಲಿ ವರ್ಮಾ ಕೇವಲ 8 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಜೆಮಿಮಾ ರೋಡ್ರಿಗಸ್ 13, ನಾಯಕಿ ಹರ್ಮನ್ ಪ್ರೀತ್ ಕೌರ್ 4 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
ಆದರೆ ಉಪನಾಯಕಿ ಮಂಧಾನ ಹಾಗೂ ವಿಕೆಟ್ ಕೀಪರ್ ರಿಚಾ ಘೋಷ್ 4ನೇ ವಿಕೆಟ್ಗೆ 43 ರನ್ ಸೇರಿಸಿ ಭಾರತಕ್ಕೆ ಗೆಲವಿನ ಆಸೆ ಮೂಡಿಸಿದ್ದರು. ಆದರೆ ಮಂಧಾನ ಔಟಾಗುವುದರೊಂದಿಗೆ ಟೀಮ್ ಇಂಡಿಯಾ ಗೆಲುವಿನ ಆಸೆ ಕೂಡ ಕಮರಿತು. 41 ಎಸೆತಗಳನ್ನು ಮಂಧಾನ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 52 ರನ್ಗಳಿಸಿದರು.
ಮಂಧಾನ ವಿಕೆಟ್ ಒಪ್ಪಿಸಿದಾಗ ಭಾರತದ ಗೆಲುವಿಗೆ 24 ಎಸೆತಗಳಲ್ಲಿ 47 ರನ್ಗಳ ಅವಶ್ಯಕತೆಯಿತ್ತು. ಆದರೆ 35 ರನ್ಗಳನ್ನಷ್ಟೇ ಗಳಿಸಲು ಶಕ್ತವಾಗಿ 11 ರನ್ಗಳ ಸೋಲೊಪ್ಪಿಕೊಂಡಿತು. ರಿಚಾ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 47 ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು.
ಇಂಗ್ಲೆಂಡ್ಗೆ ಸತತ 6ನೇ ಜಯ
ಭಾರತದ ವಿರುದ್ಧ ಟಿ20 ವಿಶ್ವಕಪ್ನಲ್ಲಿ ಸತತ 6ನೇ ಜಯ ಸಾಧಿಸಿದ ಇಂಗ್ಲೆಂಡ್ ತಂಡ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಅಲ್ಲದೆ ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಆಂಗ್ಲ ಪಡೆ 2023ರ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.
ಹರ್ಮನ್ ಪ್ರೀತ್ ಕೌರ್ ಬಳಗ ತನ್ನ ಕೊನೆಯ ಪಂದ್ಯವನ್ನು ಮಾರ್ಚ್ 18ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಬಿ ಗುಂಪಿನಲ್ಲಿ ಉಪಾಂತ್ಯ ಪ್ರವೇಶಿಸಲು ಈ ಪಂದ್ಯವನ್ನು ಭಾರತ ತಂಡ ಗೆಲ್ಲಲೇಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ