ನಿರೀಕ್ಷೆ ಹುಸಿಗೊಳಿಸಿದರೇ ಸಚಿನ್ ಮಗ ಅರ್ಜುನ್ ತೆಂಡೂಲ್ಕರ್?

news18
Updated:August 1, 2018, 8:18 PM IST
ನಿರೀಕ್ಷೆ ಹುಸಿಗೊಳಿಸಿದರೇ ಸಚಿನ್ ಮಗ ಅರ್ಜುನ್ ತೆಂಡೂಲ್ಕರ್?
news18
Updated: August 1, 2018, 8:18 PM IST
-ನ್ಯೂಸ್ 18 ಕನ್ನಡ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಅಂಡರ್ 19 ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆಡುವ ಹನ್ನೊಂದರಲ್ಲಿ ಸ್ಥಾನಗಿಟ್ಟಿಸಿದ್ದ ಅರ್ಜುನ್ ತೆಂಡೂಲ್ಕರ್ ಈ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಎರಡು ಟೆಸ್ಟ್​ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್​ ಮಾಡುವ ಅವಕಾಶ ಪಡೆದಿದ್ದ ಅರ್ಜುನ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಎಡವಿದ್ದಾರೆ.

ಶ್ರೀಲಂಕಾ ಪ್ರವಾಸದ ವೇಳೆ 18ರ ಹರೆಯದ ಯುವ ಆಲ್​ರೌಂಡರ್ ಅರ್ಜುನ್ ತೆಂಡೂಲ್ಕರ್ ಅವರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ ಲಂಕಾ ಪಿಚ್​ಗಳಲ್ಲಿನ ಅವರ ಪ್ರದರ್ಶನ ಗಮನಿಸಿದರೆ ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವುದಿಲ್ಲ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ. ಅಂಡರ್​ 19 ತಂಡದಲ್ಲಿ ಸ್ಥಾನ ಪಡೆದು ತಂದೆಯಂತೆ ಟೀಂ ಇಂಡಿಯಾ ಜರ್ಸಿ ತೊಡಲಿದ್ದಾರೆಂಬ ಭರವಸೆ ಮೂಡಿಸಿದ್ದ ಅರ್ಜುನ್, ನಿರಾಶದಾಯಕ ಪ್ರದರ್ಶನ ನೀಡುವ ಮೂಲಕ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದರು.ಕಳಪೆ ಪ್ರದರ್ಶನ :
ಜುಲೈ 17ರಂದು ಶ್ರೀಲಂಕಾದಲ್ಲಿ ಆರಂಭವಾದ ಟೆಸ್ಟ್​ ಸರಣಿ ಮೂಲಕ ಅರ್ಜುನ್ ತೆಂಡೂಲ್ಕರ್​ ಟೆಸ್ಟ್​ ಕ್ರಿಕೆಟ್​​ಗೆ ಪಾದಾರ್ಪಣೆ ಮಾಡಿದ್ದರು. ಆಲ್​ರೌಂಡರ್ ಆಟಗಾರನಾಗಿ ಆಡುವ ಹನ್ನೊಂದರಲ್ಲಿ ಅವಕಾಶ ಪಡೆದ ಅರ್ಜುನ್ ತಂಡದ ಸ್ಟ್ರೈಕ್ ಬೌಲರ್​ ಆಗಿದ್ದರು. ಆದರೆ ಎಡಗೈ ವೇಗಿಯಾಗಿರುವ ಸಚಿನ್ ಮಗ ಉತ್ತಮ ದಾಳಿ ಸಂಘಟಿಸುವಲ್ಲಿ ಎಡವಿದ್ದರು.

ಮೊದಲ ಇನಿಂಗ್ಸ್​ನಲ್ಲಿ 11 ಓವರ್​ ಎಸೆದಿದ್ದ ಅರ್ಜುನ್ 33 ರನ್​ಗಳನ್ನು ನೀಡಿದ್ದರು. ಇದರಲ್ಲಿ ಎರಡು ಮೇಡನ್ ಓವರ್ ಮಾಡಿದ್ದ ಅರ್ಜುನ್ ಪಡೆದಿದ್ದು ಕೇವಲ ಒಂದು ವಿಕೆಟ್ ಮಾತ್ರ. ಎರಡನೇ ಇನಿಂಗ್ಸ್​ನಲ್ಲೂ 11.2 ಓವರ್ ಬೌಲ್​ ಮಾಡಿದ ಅರ್ಜುನ್ ತೆಂಡೂಲ್ಕರ್ 32 ರನ್​ ನೀಡಿ ಮತ್ತೆ ಒಂದು ವಿಕೆಟ್​ ಕಬಳಿಸಲು ಮಾತ್ರ ಶಕ್ತರಾಗಿದ್ದರು.

ಬೌಲಿಂಗ್​ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದರಿಂದ ಅರ್ಜುನ್ ಬ್ಯಾಟಿಂಗ್​ನಲ್ಲಿ ಯಶ ಕಾಣುವ ನಿರೀಕ್ಷೆಯಿತ್ತು.  ಆದರೆ 11 ಎಸೆತಗಳನ್ನು ಎದುರಿಸಿದ್ದ ಕ್ರಿಕೆಟ್ ದೇವರ ಮಗ ಮೊದಲ ಇನಿಂಗ್ಸ್​ನಲ್ಲೇ ಸೊನ್ನೆ ಸುತ್ತುವ ಮೂಲಕ ನಿರಾಶೆ ಮೂಡಿಸಿದ್ದರು. ಅರ್ಜುನ್​ ತೆಂಡೂಲ್ಕರ್ ಸಾಧಾರಣ ಆಟದ ಹೊರತಾಗಿಯು ಭಾರತ ಅಂಡರ್​ 19 ತಂಡ ಶ್ರೀಲಂಕಾ ವಿರುದ್ಧ  21 ರನ್​ಗಳಿಂದ ಜಯಗಳಿಸಿತ್ತು.ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲ
ಮೊದಲ ಟೆಸ್ಟ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಟೀಂ ಮ್ಯಾನೆಜ್ಮೆಂಟ್ ಎರಡನೇ ಟೆಸ್ಟ್​ನಲ್ಲೂ ಅರ್ಜುನ್​ರನ್ನು ಆಡುವ ಹನ್ನೊಂದರಲ್ಲಿ ಉಳಿಸಲಾಗಿತ್ತು.  ಜುಲೈ 24 ರಂದು ಆಡಿರುವ 'ಯೂತ್​ ಟೆಸ್ಟ್' ಸರಣಿಯ ಎರಡನೇ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್​ನಲ್ಲಿ ಉತ್ತಮ ಆರಂಭ ಪಡೆದಿದ್ದರು. 18 ಎಸೆತಗಳನ್ನು ಎದುರಿಸಿದ್ದ ಅರ್ಜುನ್ ಎರಡು ಬೌಂಡರಿ ಸೇರಿದಂತೆ 14 ರನ್ ಗಳಿಸಿ ಔಟಾಗಿದ್ದರು. ಆದರೆ ಈ ಪಂದ್ಯದಲ್ಲೂ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಅರ್ಜುನ್ ತೆಂಡೂಲ್ಕರ್ ಯಶಸ್ವಿಯಾಗಿರಲಿಲ್ಲ.
Loading...

ದ್ವಿತೀಯಾ ಟೆಸ್ಟ್​​ನ ಮೊದಲ ಇನಿಂಗ್ಸ್​ನಲ್ಲಿ 15 ಓವರ್ ಬೌಲ್ ಮಾಡಿದ ಅರ್ಜುನ್ 33 ರನ್​ಗಳನ್ನು ನೀಡಿ ಉತ್ತಮ ದಾಳಿ ಸಂಘಟಿಸಿದ್ದರು. ಆದರೆ ಯಾವುದೇ ವಿಕೆಟ್​ ಪಡೆಯುವಲ್ಲಿ ಯಶಕಾಣಲಿಲ್ಲ. ಎರಡನೇ ಇನಿಂಗ್ಸ್​ನಲ್ಲಿ 9 ಓವರ್​ಗಳನ್ನು ಎಸೆದು 39 ರನ್ ಬಿಟ್ಟುಕೊಟ್ಟಿದ್ದರು. ಇದರಲ್ಲಿ ಒಂದು ವಿಕೆಟ್ ಪಡೆದರೂ ಮೊದಲ ಟೆಸ್ಟ್​ಗಿಂತ ಅವರ ಪ್ರದರ್ಶನ ಭಿನ್ನವಾಗಿರಲಿಲ್ಲ.

ಶ್ರೀಲಂಕಾ ಪ್ರವಾಸದಲ್ಲಿ ಅಂಡರ್ 19 ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಅರ್ಜುನ್​ ಅವರನ್ನು ಏಕದಿನ ಪಂದ್ಯಗಳಿಂದ ಕೈ ಬಿಡುವ ಸಾಧ್ಯತೆಯಿದೆ. ಸಚಿನ್ ತೆಂಡೂಲ್ಕರ್ ಅವರ ಮಗನೆಂದು ವಿಶ್ವದ ಗಮನ ಸೆಳೆದಿರುವ ಅರ್ಜುನ್ ಮುಂಬರುವ ದಿನಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ಉತ್ತಮ ಪ್ರದರ್ಶನ ನೀಡಬೇಕಿದೆ. ಒಟ್ಟಿನಲ್ಲಿ ಮೈದಾನಕ್ಕಿಳಿಯುವ ಮುನ್ನವೇ ಸೆಲೆಬ್ರಿಟಿಯಾಗಿರುವ ಅರ್ಜುನ್ ತೆಂಡೂಲ್ಕರ್ ಮುಂದಿನ ದಿನಗಳಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದರ ಮೇಲೆ ಕ್ರಿಕೆಟ್ ದೇವರ ಮಗನ ಕೆರಿಯರ್ ನಿಂತಿದೆ.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ