ಮೊನ್ನೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023 ರ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಆಗಿರುವ ರವೀಂದ್ರ ಜಡೇಜಾ ಅವರು ಕೊನೆಯ ಎರಡು ಎಸೆತಗಳಲ್ಲಿ 10 ರನ್ ಗಳಿಸುವ ಮೂಲಕ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ತಮ್ಮ ತಂಡಕ್ಕೆ ಐದನೇ ಬಾರಿ ಐಪಿಎಲ್ ಟ್ರೋಫಿಯನ್ನು ತಂದುಕೊಟ್ಟರು. ಈ ಫೈನಲ್ ಪಂದ್ಯದ ವಿಜಯೋತ್ಸವದಲ್ಲಿ ಸಿಎಸ್‌ಕೆ ತಂಡದ (CSK Team) ಆಟಗಾರರಾದ ರವೀಂದ್ರ ಜಡೇಜಾ ಅವರ ಜೊತೆಯಲ್ಲಿ ಅವರ ಪತ್ನಿ ರಿವಾಬಾ ಜಡೇಜಾ (Rivaba Jadeja) ಅವರು ಸಹ ಕಾಣಿಸಿಕೊಂಡಿದ್ದು ತುಂಬಾನೇ ವಿಶೇಷವಾಗಿತ್ತು.
ಐಪಿಎಲ್ 2023 ರ ಆವೃತ್ತಿಯಲ್ಲಿ ಸಿಎಸ್‌ಕೆ ಪರ ರವೀಂದ್ರ ಜಡೇಜಾ ಅವರು ಟೂರ್ನಿಯುದ್ದಕ್ಕೂ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದರು ಮತ್ತು ಚೆನ್ನೈ ತಂಡವು ಐದನೇ ಬಾರಿ ಟ್ರೋಫಿಯನ್ನು ಎತ್ತಿ ಹಿಡಿಯಲು ಸಹಾಯ ಮಾಡಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಅವರ ಮಗಳ ಜೊತೆಗೆ ಪಂದ್ಯವನ್ನು ನೋಡಲು ಬಂದಿದ್ದರು. ಅದರಂತೆ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಸಹ ಈ ಫೈನಲ್ ಪಂದ್ಯವನ್ನು ನೋಡಲು ಕ್ರೀಡಾಂಗಣಕ್ಕೆ ಬಂದಿದ್ದರು.
ಪಂದ್ಯದ ನಂತರ ಜಡೇಜಾ ಅವರ ಪತ್ನಿ ಟ್ರೋಫಿಯೊಂದಿಗೆ ತಾವು ತೆಗೆಸಿಕೊಂಡ ಕೆಲವು ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಅವು ಸಿಕ್ಕಾಪಟ್ಟೆ ವೈರಲ್ ಆಗಿವೆ.
ಇದನ್ನೂ ಓದಿ: IPL ನೋಡಿ ಜೀವನದಲ್ಲಿ ಟೈಮ್ ವೇಸ್ಟ್ ಮಾಡ್ಬೇಡಿ, ಜೀವನದಲ್ಲಿ ಹಿಂದೆ ಬೀಳ್ಬೇಡಿ! ಟ್ವೀಟ್ ವೈರಲ್
ಇತ್ತ ರವೀಂದ್ರ ಜಡೇಜಾ ಅವರು ಸಹ ತಮ್ಮ ಪತ್ನಿಯೊಂದಿಗೆ ತೆಗೆಸಿಕೊಂಡ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಪುಟಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಯಾರು ಗೊತ್ತೇ?
ಜಡೇಜಾ ಅವರ ಪತ್ನಿ ರಿವಾಬಾ ಅವರು ಸಕ್ರಿಯ ರಾಜಕಾರಣಿಯಾಗಿದ್ದು, ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ. ಅವರು ಪ್ರಸ್ತುತ ಭಾರತೀಯ ಜನತಾ ಪಕ್ಷದಲ್ಲಿದ್ದಾರೆ.
ಅವರು 1990 ರಲ್ಲಿ ಹರ್ದೇವ್ ಸಿಂಗ್ ಸೋಲಂಕಿ ಮತ್ತು ಪ್ರಫುಲ್ಲಬಾ ಸೋಲಂಕಿ ದಂಪತಿಗಳಿಗೆ ಜನಿಸಿದರು. ರಾಜಕೋಟ್ ನ ಆತ್ಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ನಂತರ 2019 ರಲ್ಲಿ ಅವರು ಬಿಜೆಪಿ ಪಾರ್ಟಿಗೆ ಸೇರಿದರು.
2016 ರಲ್ಲಿ ರವೀಂದ್ರ ಜಡೇಜಾ ಮತ್ತು ರಿವಾಬಾ ಮದುವೆಯಾದ್ರಂತೆ
ಆ ಸಮಯದಲ್ಲಿ ರಿವಾಬಾ ಜಡೇಜಾ ಅವರ ಸಹೋದರಿ ನೈನಾ ಅವರ ಉತ್ತಮ ಸ್ನೇಹಿತೆಯಾಗಿದ್ದ ಕಾರಣ ರವೀಂದ್ರ ಜಡೇಜಾ ಅವರನ್ನು ಪಾರ್ಟಿಯಲ್ಲಿ ಭೇಟಿಯಾದರು.
ಫೆಬ್ರವರಿ 5, 2016 ರಂದು ಕ್ರಿಕೆಟಿಗರ ಒಡೆತನದ 'ಜಡ್ಡುಸ್ ಫುಡ್ ಫೀಲ್ಡ್' ಎಂಬ ರೆಸ್ಟೋರೆಂಟ್ ನಲ್ಲಿ ಅವರ ನಿಶ್ಚಿತಾರ್ಥ ನಡೆಯಿತು. ಕೆಲವು ತಿಂಗಳ ನಂತರ ಈ ಜೋಡಿ ಏಪ್ರಿಲ್ 17 ರಂದು ವಿವಾಹವಾದರು. ದಂಪತಿಗೆ 2017 ರಲ್ಲಿ ಹೆಣ್ಣು ಮಗುವೊಂದು ಜನಿಸಿತು.
ಅವರು 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ್ ಉತ್ತರ ಕ್ಷೇತ್ರದಿಂದ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅವರು 88,835 ಮತಗಳನ್ನು ದಾಖಲಿಸುವ ಮೂಲಕ ಜಯ ಗಳಿಸಿದರು ಮತ್ತು ಅವರ ಮೊದಲ ಚುನಾವಣೆಯಲ್ಲಿ ಶೇಕಡಾ 57.79 ರಷ್ಟು ಮತಗಳನ್ನು ಗಳಿಸಿದರು. ಸ್ಟಾರ್ ಕ್ರಿಕೆಟಿಗ ಆಗಾಗ್ಗೆ ತನ್ನ ಹೆಂಡತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲಿಸುತ್ತಿರುವುದನ್ನು ನಾವು ನೋಡಬಹುದು.
ಏತನ್ಮಧ್ಯೆ, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಟ್ರೋಫಿ ತಂದುಕೊಟ್ಟ ನಂತರ, ರವೀಂದ್ರ ಜಡೇಜಾ ಈಗ ಓವಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗಾಗಿ ಲಂಡನ್ ಗೆ ಪ್ರಯಾಣಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ