ಮಾರ್ಚ್ 31 ರಂದು ಪ್ರಾರಂಭವಾಗುವ ಮುಂಬರುವ ಐಪಿಎಲ್ (IPL 2023) ಆವೃತ್ತಿಯಲ್ಲಿ ಎಮ್‌ಎಸ್ ಧೋನಿ (MS Dhoni) ಕಾಣಿಸಿಕೊಳ್ಳಲಿದ್ದಾರೆ. 2020 ರ ಮಧ್ಯಭಾಗದಲ್ಲಿ ಧೋನಿ ತಮ್ಮ ನಿವೃತ್ತಿಯನ್ನು ಘೋಷಿಸಿದರೂ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುನ್ನತ ಆಟಗಾರರಾಗಿ ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ. ಓಡಿಐಗಳಲ್ಲಿ 10,000 ಕ್ಕೂ ಹೆಚ್ಚು ರನ್‌ಗಳು, 5,000 ಟೆಸ್ಟ್ ರನ್‌ಗಳು, 634 ಕ್ಯಾಚ್‌ಗಳು, 195 ಸ್ಟಂಪಿಂಗ್‌ಗಳು ಮತ್ತು ಮೂರು ಪ್ರಮುಖ ಐಸಿಸಿ (ICC) ಪ್ರಶಸ್ತಿಗಳ ಹಿರಿಮೆಯೊಂದಿಗೆ ಭಾರತ ತಂಡವನ್ನು ಮುನ್ನಡೆಸಿರುವ ಹೆಗ್ಗಳಿಕೆ ಧೋನಿಯದ್ದಾಗಿದೆ.
ಧೋನಿ ಎಂಬ ಶಾಂತ ಮೂರ್ತಿ
ಧೋನಿ ಕ್ರೀಡಾಂಗಣಕ್ಕೆ ನುಗ್ಗಿದರು ಎಂದರೆ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಎಂಬುದಿಲ್ಲ ಎಂಬಷ್ಟರ ಮಟ್ಟಿಗೆ ಧೋನಿಯ ಮೇಲೆ ಭರವಸೆಯನ್ನಿಟ್ಟುಕೊಂಡಿದ್ದಾರೆ. ಅದೇ ರೀತಿ ಧೋನಿ ಕೂಡ ತಮ್ಮ ಅಭಿಮಾನಿಗಳಿಗೆ ಎಂದಿಗೂ ನಿರಾಸೆಯನ್ನುಂಟು ಮಾಡಿಲ್ಲ. ಧೀಮಂತ ಶಾಂತ ನಾಯಕನಾಗಿ ತಂಡದ ಮುನ್ನಡೆಗೆ ಕಾರಣರಾದ ವ್ಯಕ್ತಿ ಎಮ್‌ಎಸ್ ಧೋನಿ.
ಧೋನಿ-ಸಿಎಸ್‌ಕೆ ನಂಟು
ಧೋನಿ ಐಪಿಎಲ್ 16 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ದೊಡ್ಡ ಬ್ರ್ಯಾಂಡ್ ಆಗಿ, ಅಂತೆಯೇ ಸಿಎಸ್‌ಕೆ ಫ್ರಾಂಚೈಸಿಯ ಯಶಸ್ಸಿನ ಪ್ರಮುಖ ಕ್ರೆಡಿಟ್ ಮಾಜಿ ಭಾರತೀಯ ನಾಯಕ ಎಮ್‌ಎಸ್ ಧೋನಿಗೆ ಸಲ್ಲುತ್ತದೆ.
ಇದನ್ನೂ ಓದಿ: ಮಹಿಳಾ ದಿನಾಚರಣೆಗೆ ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ, ಪ್ರತಿಯೊಬ್ಬರಿಗೂ ಉಚಿತ ಟಿಕೆಟ್ ಘೋಷಣೆ
ಧೋನಿ ಹಾಗೂ ಸಿಎಸ್‌ಕೆ ಅನುಬಂಧ ಕ್ರಿಕೆಟ್ ಲೋಕದಲ್ಲೇ ಅವಿಸ್ಮರಣೀಯವಾದುದು. ಜಾರ್ಖಂಡ್‌ನ ಈ ಪ್ರತಿಭೆಯು ಐಪಿಎಲ್ ಉದ್ಘಾಟನಾ ಹರಾಜಿನಲ್ಲಿ ತಂಡದ ಮಾಲೀಕರಿಂದ ಆಯ್ಕೆಯಾದ ನಂತರ ಚೆನ್ನೈನ ಪ್ರೇಕ್ಷಕರು ಕ್ಷಣಮಾತ್ರದಲ್ಲಿ ಧೋನಿಯನ್ನು ತುಂಬುಹೃದಯದಿಂದ ಬರಮಾಡಿಕೊಂಡರು ಹಾಗೂ ಅವರ ಮನಸ್ಸಿನಲ್ಲಿ ಧೋನಿಗೆ ಮಹೋನ್ನತ ಸ್ಥಾನವಿದೆ.
ಧೋನಿಗೂ ಮುನ್ನ ಸಿಎಸ್‌ಕೆ ಮುಂದೆ ಸೆಹ್ವಾಗ್ ಆಯ್ಕೆ ಇತ್ತಂತೆ
ಚೆನ್ನೈ ಸೂಪರ್ ಕಿಂಗ್ಸ್‌ಗೆ ಧೋನಿ ಒಬ್ಬರೇ ಮುಂದಿರುವ ಆಯ್ಕೆಯಾಗಿರಲಿಲ್ಲ. ಈ ಹಿಂದೆ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಈ ಕುರಿತು ಮಾತನಾಡಿದ ಸಿಎಸ್‌ಕೆ ತಂಡದ ಮಾಜಿ ಬ್ಯಾಟರ್ ಸುಬ್ರಮಣ್ಯಂ ಬದರಿನಾಥ್, ಆರಂಭದಲ್ಲಿ ಫ್ರಾಂಚೈಸಿಯು ಧೋನಿಯ ಬದಲಿಗೆ ವೀರೇಂದ್ರ ಸೆಹ್ವಾಗ್‌ರನ್ನು ಆಯ್ಕೆಮಾಡುವ ನಿರ್ಧಾರದಲ್ಲಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಕೊನೆಗೂ ಧೋನಿಯನ್ನು ಆಯ್ಕೆಮಾಡಿದ ಸಿಎಸ್‌ಕೆ
ಸಿಎಸ್‌ಕೆ ಮ್ಯಾನೇಜ್‌ಮೆಂಟ್ (ಐಪಿಎಲ್ 2008 ರ ಮೊದಲು) ಸೆಹ್ವಾಗ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿತ್ತು, ಆದರೆ ಸೆಹ್ವಾಗ್ ತಾವು ದೆಹಲಿಯಲ್ಲಿ ಬೆಳೆದವರು ಎಂಬ ಕಾರಣವನ್ನು ಸ್ವತಃ ನೀಡಿ ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ ಸಂಪರ್ಕ ಸಾಧಿಸಲು ಅನುಕೂಲಕಾರಿಯಾಗಿರುತ್ತದೆ ಎಂದು ದೆಹಲಿಯಲ್ಲಿ ಪಂದ್ಯವನ್ನಾಡಲು ಅಂಗೀಕರಿಸಿದರು.
ಇದನ್ನೇ ಸೂಕ್ತ ಎಂದು ಒಪ್ಪಿದ ಸಿಎಸ್‌ಕೆ, ಹರಾಜಿನ ಸಮಯದಲ್ಲಿ ತಂಡಕ್ಕೆ ಉತ್ತಮ ಆಟಗಾರ ಯಾರು ಎಂಬುದಾಗಿ ತಲೆಕೆಡಿಸಿಕೊಂಡಿತ್ತು. ಅದಕ್ಕೂ ಮುನ್ನ 2007 ರ T20 ವಿಶ್ವಕಪ್ ಅನ್ನು ಭಾರತ ಗೆದ್ದುಕೊಂಡಿತು. ನಂತರ ಧೋನಿಯೇ ಸೂಕ್ತ ಎಂಬುದಾಗಿ ಸಿಎಸ್‌ಕೆ ನಿರ್ಧರಿಸಿತು ಎಂದು ಬದರಿನಾಥ್ ತಿಳಿಸಿದ್ದಾರೆ.
ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಗೆಲುವಿನ ಪಯಣ
ಧೋನಿ ಸಿಎಸ್‌ಕೆಯನ್ನು ನಾಲ್ಕು ಐಪಿಎಲ್ ಮತ್ತು ಎರಡು ಚಾಂಪಿಯನ್ಸ್ ಲೀಗ್ (ಸಿಎಲ್‌ಟಿ 20) ಪ್ರಶಸ್ತಿಗಳಿಗೆ ಭಾಜನರಾಗುವಂತೆ ಮಾಡಿದ್ದಾರೆ. ಧೋನಿ ನಾಯಕತ್ವದಲ್ಲಿ, ಚೆನ್ನೈ ಫ್ರಾಂಚೈಸಿಯು 2020 ರಲ್ಲಿ ಹಾಗೂ 2022 ರಲ್ಲಿ ಕೊನೆಯ ನಾಲ್ಕರಿಂದ ಹೊರಗುಳಿಯುವುದಕ್ಕೂ ಮುನ್ನ 2008, 2009, 2010, 2011, 2012, 2013, 2014, 2015, 2018, 2019 ರಲ್ಲಿ ಪ್ಲೇಆಫ್‌ಗಳನ್ನು ತಲುಪಿತು. ಧೋನಿ ಐಪಿಎಲ್‌ನಲ್ಲಿ 4,978 ರನ್ ಗಳಿಸಿದ್ದಾರೆ, ಸಿಎಸ್‌ಕೆ ಪರ 22 ಅರ್ಧಶತಕಗಳೊಂದಿಗೆ 4,404 ರನ್ ಗಳಿಸಿದ್ದಾರೆ.
ಧೋನಿ ನೇತೃತ್ವದ ಸಿಎಸ್‌ಕೆ ತಂಡ ಐಪಿಎಲ್ 2023 ರ ಆರಂಭಿಕ ಪಂದ್ಯವನ್ನು ಆಡಲಿದೆ, ತಂಡವು ಮಾರ್ಚ್ 31 ರಂದು ಅಹಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (ಜಿಟಿ) ಅನ್ನು ಎದುರಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ