ವಿರಧವಲ್ ಖಾಡೆಗೆ ಪದಕ ಕೈತಪ್ಪಲು ಸರಕಾರದ ಕುರುಡು ನಿಯಮ ಕಾರಣವಾಯಿತೇ?


Updated:August 22, 2018, 9:22 PM IST
ವಿರಧವಲ್ ಖಾಡೆಗೆ ಪದಕ ಕೈತಪ್ಪಲು ಸರಕಾರದ ಕುರುಡು ನಿಯಮ ಕಾರಣವಾಯಿತೇ?

Updated: August 22, 2018, 9:22 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 22): ಭಾರತದ ಅಪ್ರತಿಮ ಈಜುಪಟು ವಿರಧವಲ್ ಖಾಡೆಗೆ ಏಷ್ಯನ್ ಗೇಮ್ಸ್​ನಲ್ಲಿ ನಿನ್ನೆ ಕೂದಲೆಳೆ ಅಂತರದಿಂದ ಕಂಚಿನ ಪದಕ ಕೈತಪ್ಪಿತ್ತು. 50 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದರೂ ಖಾಡೆಗೆ ಪದಕ ಭಾಗ್ಯ ಒಲಿಯಲಿಲ್ಲ. 22.47 ಸೆಕೆಂಡ್​ನಲ್ಲಿ ಗುರಿ ಮುಟ್ಟಿದ ಅವರಿಗೆ ಕೇವಲ ನೂರನೇ ಒಂದು ಸೆಕೆಂಡ್​ನಿಂದ ಮೂರನೇ ಸ್ಥಾನ ವಂಚಿತವಾಯಿತು.

ಮಹಾರಾಷ್ಟ್ರ ರಾಜ್ಯದ ವಿರಧವಲ್ ಖಾಡೆ ಅವರಿಗೆ ಮಿಶ್ರಾನುಭವದ ಸ್ಥಿತಿ. ಒಂದು ಕಡೆ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಸಾಧನೆಯಾದರೆ, ಮತ್ತೊಂದೆಡೆ ಏಷ್ಯಾಡ್ ಪದಕ ಕೈತಪ್ಪಿದ ಪರಿತಾಪವಿದೆ. ನಿಮಗೆ ಪದಕವೇ ಸಿಕ್ಕಿಲ್ಲವೆಂದರೆ ಏನೇ ದಾಖಲೆ ಮುರಿದರೂ ಏನು ಪ್ರಯೋಜನ ಎಂಬದು ಖಾಡೆ ಪ್ರಶ್ನೆ.

2010ರ ಏಷ್ಯನ್ ಗೇಮ್ಸ್​ನ 50 ಮೀಟರ್ ಬಟರ್​ಫ್ಲೈ ಈಜು ಸ್ಪರ್ಧೆಯಲ್ಲಿ ಖಾಡೆ ಕಂಚು ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ, 26 ವರ್ಷದ ವಿರಧವಲ್ ಖಾಡೆ ಅವರಿಂದ ಈ ಬಾರಿ ಪದಕದ ನಿರೀಕ್ಷೆ ಇತ್ತು. ಆದರೆ, ಅವರಿಗೆ ಯಾಕೆ ಗೆಲುವು ಪ್ರಾಪ್ತವಾಗಲಿಲ್ಲ? ಯಾವುದೇ ಕ್ರೀಡೆಯಾದರೂ ಒಬ್ಬ ಕ್ರೀಡಾಪಟು ಸಕ್ಷಮವಾಗಿ ಆಡಲು ನಿರಂತರವಾಗಿ ಅಭ್ಯಾಸ ನಡೆಬೇಕಾಗುತ್ತದೆ. ಇದು ಈಜಿಗೂ ಅನ್ವಯ. ಆದರೆ, ವೀರ್​ಧವಳ್ ಖಾಡೆ ಅವರು ಒಂದೂವರೆ ವರ್ಷದ ಹಿಂದಷ್ಟೇ ಏಷ್ಯನ್ ಗೇಮ್ಸ್​ಗಾಗಿ ಅಭ್ಯಾಸ ಶುರುವಿಟ್ಟುಕೊಂಡಿದ್ದರು.

ಅಲ್ಲಿಯವರೆಗೂ ಖಾಡೆ ಅವರು ಸರಕಾರಿ ಸೇವೆಯಲ್ಲಿ ನಿರತರಾಗಿದ್ದರಂತೆ. ಮಹಾರಾಷ್ಟ್ರದ ಥಾನೆ ಜಿಲ್ಲೆಯ ತಹಶೀಲ್ದಾರ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಎಂಥದ್ದೇ ಕ್ರೀಡಾಪಟುವಾದರೂ ಅವರಿಗೆ ಕೊಟ್ಟಿರುವ ಹುದ್ದೆಯನ್ನು ಸರಿಯಾಗಿ ನಿರ್ವಹಿಸಬೇಕು ಎಂಬುದು ಸರಕಾರೀ ನಿಯಮವಂತೆ. ಹೀಗಾಗಿ, ವಿರ್​ಧವಲ್ ಖಾಡೆ ಅವರಿಗೆ ತರಬೇತಿಗೆ ಸಮಯವೇ ಸಿಗುತ್ತಿರಲಿಲ್ಲ.

ಭಾರತದಲ್ಲಿ ಈಜು ಕ್ರೀಡೆ ಇನ್ನೂ ಜನರ ಗಮನ ಸೆಳೆದಿಲ್ಲ. ಇದಕ್ಕೆ ಪ್ರಾಯೋಜಕರು ಸಿಗುವುದು ಭಾರೀ ಕಷ್ಟ. ಖಾಡೆ, ಶ್ರೀಹರಿ ನಟರಾಜ್, ಸಂದೀಪ್ ಸೆಜ್ವಾಲ್, ಸಾಜನ್ ಪ್ರಕಾಶ್ ಮೊದಲಾದ ಅಪ್ರತಿಮ ಸ್ವಿಮರ್ಸ್ ಇದ್ದರೂ ಈಜಿಗೆ ಹೆಚ್ಚು ಜನಮಾನ್ಯತೆ ಮತ್ತು ಜನಪ್ರಿಯತೆ ಸಿಕ್ಕಿಲ್ಲ. ಹೀಗಾಗಿ, ಕೆಲಸ ಬಿಟ್ಟು ಬರೀ ಈಜನ್ನು ನೆಚ್ಚಿಕೊಂಡು ಇರಲು ಸಾಧ್ಯವಿಲ್ಲ. ಅಷ್ಟೊಂದ ಸಿರಿವಂತ ಸ್ಥಿತಿಯಲ್ಲಿ ಖಾಡೆ ಅವರಿಲ್ಲ. ಕೆಲಸದಲ್ಲಿದ್ದುಕೊಂಡು ಎಷ್ಟು ಸಾಧ್ಯವೋ ಅಷ್ಟು ಈಜಿನಲ್ಲಿ ತೊಡಗಿಸಿಕೊಳ್ಳುವುದು ಭಾರತದ ಈಜುಪಟುಗಳಿಗೆ ಅನಿವಾರ್ಯ. ಕ್ರಿಕೆಟ್ ಹೊರತುಪಡಿಸಿ ಉಳಿದ ಕ್ರೀಡೆಗಳ ಕ್ರೀಡಾಪಟುಗಳೆಲ್ಲರಿಗೂ ಇದೇ ಸ್ಥಿತಿ ಇದೆ.

ಖಾಡೆಯಂತಹ ಪದಕ ಗೆಲ್ಲಬಲ್ಲ ಸಾಮರ್ಥ್ಯವಿರುವ ಕ್ರೀಡಾಪಟುಗಳನ್ನ ಸರಕಾರವೇ ಗುರುತಿಸಿ ಅವರ ತರಬೇತಿ ಮತ್ತು ಅಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ನಿಯಮಗಳನ್ನ ಬದಲಾವಣೆ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ವಿರಧವಲ್ ಖಾಡೆಯಂತಹ ತಾರೆಯರು ಮಿನುಗುವುದು ನಿಂತುಹೋಗಿಬಿಡುತ್ತದೆ. ಖೇಲೋ ಇಂಡಿಯಾ ಮೂಲಕ ಸಾಕಷ್ಟು ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿರುವ ಕೇಂದ್ರ ಸರಕಾರ ಇನ್ನೂ ಹಲವು ಹೆಜ್ಜೆಗಳನ್ನ ಮುಂದಿಡುವುದು ಅಗತ್ಯವಿದೆ. ಮುಂಬರಲಿರುವ ಒಲಿಂಪಿಕ್ಸ್​ನಷ್ಟರಲ್ಲಿ ಭಾರತದ ಕ್ರೀಡೆಯನ್ನು ಇನ್ನಷ್ಟು ಶಕ್ತಿಯುತಗೊಳಿಸಬೇಕಾಗುತ್ತದೆ.
Loading...

ಈ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ವಿರಧವಲ್ ಖಾಡೆ ಅವರ ಅಭಿಯಾನ ಇನ್ನೂ ಅಂತ್ಯಗೊಂಡಿಲ್ಲ. 2010ರಲ್ಲಿ ಕಂಚಿನ ಪದಕ ಗೆದ್ದಿದ್ದ 50 ಮೀಟರ್ ಬಟರ್​ಫ್ಲೈ ಈಜು ಸ್ಪರ್ಧೆ ಇನ್ನೂ ಬಾಕಿ ಇದೆ. ಹಾಗೆಯೇ 100 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯೂ ನಡೆಯಬೇಕಿದೆ. ಇವೆರಡರಲ್ಲೂ ರಾಷ್ಟ್ರೀಯ ದಾಖಲೆಗಳು ಖಾಡೆ ಹೆಸರಲ್ಲೇ ಇವೆ. ಇದರಲ್ಲಾದರೂ ಖಾಡೆ ನಮ್ಮ ದೇಶಕ್ಕೆ ಪದಕ ಗೆದ್ದುತರಲೆಂದು ನಾವು ಹಾರೈಸಬಹುದು.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ