ವಿನೇಶ್ ಫೋಗಾಟ್ ಹೊಸ ಇತಿಹಾಸ; ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 2ನೇ ಚಿನ್ನ


Updated:August 20, 2018, 7:12 PM IST
ವಿನೇಶ್ ಫೋಗಾಟ್ ಹೊಸ ಇತಿಹಾಸ; ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 2ನೇ ಚಿನ್ನ
ಕಾಮನ್ವೆಲ್ತ್ ಗೇಮ್ಸ್​ನಲ್ಲಿ ವಿನೇಶ್ ಫೋಗಾಟ್ ಚಿನ್ನ ಗೆದ್ದ ಸಂದರ್ಭದ ಚಿತ್ರ.

Updated: August 20, 2018, 7:12 PM IST
- ನ್ಯೂಸ್18 ಕನ್ನಡ

ಜಕಾರ್ತ(ಆ. 20): ಇಂಡೇನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್ ಚಿನ್ನ ಜಯಿಸಿದರು. ಮಹಿಳೆಯರ ಫ್ರೀಸ್ಟೈಲ್ ಕುಸ್ತಿ 50 ಕಿಲೋ ವಿಭಾಗದ ಫೈನಲ್​ನಲ್ಲಿ ಜಪಾನ್​ನ ಯೂಕಿ ಈರೀ ಅವರನ್ನು 6-2 ಅಂಕಗಳಿಂದ ಮಣಿಸಿದರು. 23 ವರ್ಷದ ವಿನೇಶ್ ಇಡೀ ಕ್ರೀಡಾಕೂಟದಲ್ಲಿ ಸರಿಸಾಟಿ ಇಲ್ಲದಂತೆ ಎದುರಾಳಿಗಳನ್ನ ಕೆಡವಿದ್ದು ವಿಶೇಷ. ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ದಾಖಲೆ, ಇತಿಹಾಸ ಮತ್ತು ಮೈಲಿಗಲ್ಲು ವಿನೇಶ್ ಫೋಗಾಟ್ ಅವರಿಗೆ ಸಿಕ್ಕಂತಾಗಿದೆ. ಕೂಟದ ಎರಡನೇ ದಿನದಂದು ಭಾರತಕ್ಕೆ ಒಟ್ಟಾರೆ 2ನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.

ಹರಿಯಾಣದ ಖ್ಯಾತ ಫೋಗಾಟ್ ಕುಟುಂಬಕ್ಕೆ ಸೇರಿದ ವಿನೇಶ್ ಫೋಗಾಟ್ ಅವರು 2016ರ ರಯೋ ಒಲಿಂಪಿಕ್ಸ್​ನಲ್ಲಿ ಅನುಭವಿಸಿದ ಸೋಲಿಗೆ ಇಂಡೋನೇಷ್ಯಾದಲ್ಲಿ ಸೇಡು ತೀರಿಸಿಕೊಂಡರು. ಚೀನಾದ ಯನನ್ ಸುನ್ ಅವರನ್ನ ಸುಲಭವಾಗಿ ಸೋಲಿಸಿ ಏಷ್ಯನ್ ಗೇಮ್ಸ್​ನಲ್ಲಿ ಫೋಗಾಟ್ ಶುಭಾರಂಭ ಮಾಡಿದ್ದರು. ಒಲಿಂಪಿಕ್ಸ್​ನಲ್ಲಿ ಇದೇ ಯನನ್ ಸುನ್ ವಿರುದ್ಧದ ಪಂದ್ಯದಲ್ಲಿ ವಿನೇಶ್ ಗಾಯಗೊಂಡು ಇಡೀ ಕೂಟದಿಂದಲೇ ಹೊರಬೀಳಬೇಕಾಯಿತು. ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವ ಆಸೆಯಲ್ಲಿದ್ದ ವಿನೇಶ್ ಫೋಗಾಟ್ ಅವರು ಆಗ ಅತೀವ ನಿರಾಸೆಯಾಗಿತ್ತು. ಆ ನಂತರ ಅವರು ಗಾಯದ ಸಮಸ್ಯೆಯಿಂದ ಹೊರಬಂದು ಈಗ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದಿರುವುದು ಇತರ ಕ್ರೀಡಾಪಟುಗಳಿಗೆ ಮಾದರಿಯಾಗಿದೆ. ಈ ಕ್ರೀಡಾಕೂಟಕ್ಕೂ ಮುನ್ನ ಕಾಮನ್​ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ವಿನೇಶ್ ಚಿನ್ನ ಜಯಿಸಿದ್ದರು. ಗ್ಲಾಸ್ಗೋ ಕೂಟದಲ್ಲೂ ಅವರು ಅಗ್ರಸ್ಥಾನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಏಷ್ಯಾಡ್​ನಲ್ಲಿ ವಿನೇಶ್ ಚಿನ್ನ ಗೆಲ್ಲುವುದು ನಿರೀಕ್ಷಿತವೇ ಆಗಿತ್ತು.

ಕಳೆದ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ 48 ಕಿಲೋ ವಿಭಾಗದಲ್ಲಿ ಸೆಣಸಿದ್ದ ವಿನೇಶ್ ಫೋಗಾಟ್ ಅವರು ಕಂಚಿನ ಪದಕ ಗೆದ್ದಿದ್ದರು. ಈ ಕೂಟದಲ್ಲಿ ವಿನೇಶ್ ಚಿನ್ನ ಗೆದ್ದಿರುವುದು ಭಾರತದ ಪಾಲಿತೆ ಎರಡನೆಯದ್ದಾಗಿದೆ. ಮೊದಲ ದಿನದಂದು ಪುರುಷರ ವಿಭಾಗದ ಜಟ್ಟಿ ಭಜರಂಗ್ ಪೂನಿಯಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಭಾರತಕ್ಕೆ ಬಂದ ಮೊದಲ ಎರಡೂ ಚಿನ್ನದ ಪದಕಗಳನ್ನ ಜಯಿಸಿಕೊಟ್ಟಿದ್ದು ಜಟ್ಟಿಗಳೇ.

ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದು ಇಡೀ ದೇಶಕ್ಕೆ ಉತ್ಸಾಹ ಮೂಡಿಸಿದ್ದ ಸಾಕ್ಷಿ ಮಲ್ಲಿಕ್ ನಿರಾಸೆ ಮೂಡಿಸಿದ್ದಾರೆ. ಮಹಿಳೆಯರ 62 ಕಿಲೋ ವಿಭಾಗದಲ್ಲಿ ಸಾಕ್ಷಿ ಮಲಿಕ್ ಮೊದಲೆರಡು ಪಂದ್ಯಗಳನ್ನ ಲೀಲಾಜಾಲವಾಗಿ ಜಯಿಸಿದರೂ ಸೆಮಿಫೈನಲ್​ನಲ್ಲಿ ಕಿರ್ಗಿಸ್ತಾನ್​ನ ಐಸುಲು ಟಿನಿಬೆಕೋವಾ ವಿರುದ್ಧ ಅನಿರೀಕ್ಷಿತ ಸೋಲನುಭವಿಸಿದರು. ಇದರೊಂದಿಗೆ ಚಿನ್ನ ಗೆಲ್ಲುವ ಅವಕಾಶ ಸಾಕ್ಷಿ ಕೈತಪ್ಪಿದಂತಾಗಿದೆ.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ