ಬೆಂಗಳೂರು: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ತೆರೆಬಿದ್ದಿದೆ. ಕೊರೋನಾ ಮಹಾಮಾರಿ ಕಾರಣದಿಂದ ಒಂದು ವರ್ಷ ವಿಳಂಬವಾಗಿ ಆರಂಭಗೊಂಡ ಕ್ರೀಡಾಕೂಟ ಈಗ ಅದೇ ಕಾರಣಕ್ಕೆ ಪ್ರೇಕ್ಷಕರಿಗೆ ಸಡಗರ, ಸಂಭ್ರಮ ಕಣ್ತುಂಬಿಕೊಳ್ಳಲು ಅವಕಾಶವಿಲ್ಲದಂತೆ ಅಂತ್ಯಗೊಂಡಿತು. ಮುಕ್ತಾಯ ಸಮಾರಂಭದಲ್ಲಿ ಜಪಾನ್ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನ ಪ್ರತಿಬಿಂಬಿಸುವ ನೃತ್ಯ ಇತ್ಯಾದಿ ಕಾರ್ಯಕ್ರಮಗಳು ಅಲ್ಲಿದ್ದ ಕ್ರೀಡಾಪಟುಗಳು, ಸಿಬ್ಬಂದಿ ಹಾಗೂ ಟಿವಿ ಮೂಲಕ ಕೋಟ್ಯಂತರ ಜನರ ಗಮನ ಸೆಳೆದವು. ಅಂತಿಮವಾಗಿ ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ಹೊತ್ತಿ ಉರಿಸಲಾಗುತಿದ್ದ ಜ್ಯೋತಿಯನ್ನ ಆರಿಸಲಾಯಿತು. 32ನೇ ಒಲಿಂಪಿಯಾಡ್ ಇದೀಗ ಮುಕ್ತಾಯಗೊಂಡಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್ ಘೋಷಿಸಿದರು. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಮುಂದಿನ ಒಲಿಂಪಿಕ್ಸ್ ನಡೆಯಲಿರುವ ಹಿನ್ನೆಲೆಯಲ್ಲಿ ಒಲಿಂಪಿಕ್ ದ್ವಜವನ್ನ ಪ್ಯಾರಿಸ್ ಮೇಯರ್ ಅವರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಫ್ರಾನ್ಸ್ ಅಥ್ಲೀಟ್ ಹಾಗೂ ಸಿಬ್ಬಂದಿ ಚೀರಿ ಕುಣಿದು ಸಂತಸ ಪಟ್ಟರು. ಫ್ರಾನ್ಸ್ ದೇಶಾದ್ಯಂತ ಲಕ್ಷಾಂತರ ಮಂದಿ ಈ ಕ್ಷಣದಲ್ಲಿ ಪುಳಕಿತರಾದರು.
ಜುಲೈ 23ರಂದು ಅಧಿಕೃತವಾಗಿ ಉದ್ಘಾಟನೆಗೊಂಡ ಈ ಕ್ರೀಡಾಕೂಟದಲ್ಲಿ ಎರಡು ದಿನ ಮುಂಚಿತವಾಗಿಯೇ ಕೆಲ ಆಟಗಳು ಪ್ರಾರಂಭಗೊಂಡಿದ್ದನ್ನ ಪರಿಗಣಿಸಿದರೆ ಒಟ್ಟು 19 ದಿನಗಳ ಕಾಲ ಸ್ಪರ್ಧೆ ನಡೆದಿವೆ. ಪದಕಗಳ ರೇಸ್ನಲ್ಲಿ ಚೀನಾವನ್ನು ಅಮೆರಿಕ ಸೋಲಿಸಿ ಅಗ್ರಸ್ಥಾನ ಪಡೆದಿದೆ. ಬಹುತೇಕ ಆರಂಭದಿಂದಲೂ ಚೀನಾವೇ ಪದಕ ಪಟ್ಟಿಯಲ್ಲಿ ಮೊದಲಿಗೆ ಇತ್ತಾದರೂ ಕೊನೆಯ ಕೆಲ ದಿನಗಳಲ್ಲಿ ಅಮೆರಿಕದ ಸ್ಪರ್ಧಿಗಳು ಹೆಚ್ಚು ಚಿನ್ನದ ಬೇಟೆಯಾಡಿದ ಪರಿಣಾಮ ವಿಶ್ವದ ಹಿರಿಯಣ್ಣನೇ ಮೊದಲಿಗೆ ಬಂದಿದ್ದಾನೆ. ಅಮೆರಿಕ 39 ಚಿನ್ನ, 41 ಬೆಳ್ಳಿ ಹಾಗೂ 33 ಕಂಚು ಗೆದ್ದಿತು. ಚೀನಾ 28 ಚಿನ್ನ, 32 ಬೆಳ್ಳಿ ಹಾಗು 18 ಕಂಚು ಪದಕಗಳನ್ನ ಗೆದ್ದು ಎರಡನೇ ಸ್ಥಾನ ಪಡೆಯಿತು. ಆತಿಥೇಯ ಜಪಾನ್ ತಂಡ 27 ಚಿನ್ನದ ಪದಕ ಸೇರಿ ಒಟ್ಟಾರೆ 58 ಪದಕಗಳನ್ನ ಜಯಿಸಿತು. ಬ್ರಿಟನ್ ಹಾಗೂ ರಷ್ಯಾ ದೇಶಗಳೂ ಕೂಡ 20ಕ್ಕೂ ಹೆಚ್ಚು ಚಿನ್ನ ಪಡೆವು. ಆಸ್ಟ್ರೇಲಿಯಾ, ನೆದರ್ಲೆಂಡ್ಸ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿ ಒಳಗೊಂಡಂತೆ 10 ದೇಶಗಳು ಈ ಬಾರಿ 10ಕ್ಕಿಂತ ಹೆಚ್ಚು ಚಿನ್ನದ ಪದಕಗಳನ್ನ ಗೆದ್ದಿವೆ.
ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶಿನಾಥ್ ನಾಯ್ಕ್ಗೆ ರಾಜ್ಯ ಸರ್ಕಾರದಿಂದ 10 ಲಕ್ಷ ಬಹುಮಾನ ಘೋಷಣೆ
ಭಾರತ 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚು ಸೇರಿ ಒಟ್ಟು 7 ಪದಕಗಳನ್ನ ಪಡೆಯಿತು. ಒಟ್ಟು 93 ದೇಶಗಳು ಕನಿಷ್ಠ ಒಂದು ಪದಕವನ್ನಾದರೂ ಪಡೆದಿವೆ. ಈ ಪಟ್ಟಿಯಲ್ಲಿ ಭಾರತ 48ನೇ ಸ್ಥಾನ ಪಡೆಯಿತು. ಒಟ್ಟು ಪದಕಗಳನ್ನ ಪರಿಗಣಿಸಿದರೆ ಭಾರತ 33ನೇ ಸ್ಥಾನದಲ್ಲಿದೆ. ಭಾರತ ಹೊರತುಪಡಿಸಿ ದಕ್ಷಿಣ ಏಷ್ಯಾದ ಮತ್ಯಾವ ದೇಶವೂ ಪದಕಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಏಷ್ಯನ್ ರಾಷ್ಟ್ರಗಳ ಪೈಕಿ ಭಾರತ ಎಂಟನೇ ಸ್ಥಾನದಲ್ಲಿದೆ. ಚೀನಾ, ಜಪಾನ್, ದಕ್ಷಿಣ ಕೊರಿಯಾ, ಇರಾನ್, ಉಜ್ಬೆಕಿಸ್ತಾನ್, ಚೀನೀ ಥೈಪೆ ಮತ್ತು ಕತಾರ್ ದೇಶಗಳು ಮಾತ್ರ ಭಾರತಕ್ಕಿಂತ ಮುಂದಿವೆ.
ದೇಶಗಳು ಹಾಗೂ ಅವು ಗೆದ್ದ ಚಿನ್ನ ಹಾಗೂ ಒಟ್ಟಾರೆ ಪದಕಗಳು:
1) ಅಮೆರಿಕ: 39 ಚಿನ್ನ ಸೇರಿ ಒಟ್ಟು 113 ಪದಕ
2) ಚೀನಾ: 38 ಚಿನ್ನ ಸೇರಿ ಒಟ್ಟು 88 ಪದಕ
3) ಜಪಾನ್: 27 ಚಿನ್ನ ಸೇರಿ ಒಟ್ಟು 58 ಪದಕ
4) ಬ್ರಿಟನ್: 22 ಚಿನ್ನ ಸೇರಿ ಒಟ್ಟು 65 ಪದಕ
5) ರಷ್ಯಾ: 20 ಚಿನ್ನ ಸೇರಿ ಒಟ್ಟು 71 ಪದಕ
6) ಆಸ್ಟ್ರೇಲಿಯಾ: 17 ಚಿನ್ನ ಸೇರಿ ಒಟ್ಟು 46 ಪದಕ
7) ನೆದರ್ಲೆಂಡ್ಸ್: 10 ಚಿನ್ನ ಸೇರಿ ಒಟ್ಟು 36 ಪದಕ
8) ಫ್ರಾನ್ಸ್: 10 ಚಿನ್ನ ಸೇರಿ ಒಟ್ಟು 33 ಪದಕ
9) ಜರ್ಮನಿ: 10 ಚಿನ್ನ ಸೇರಿ ಒಟ್ಟು 37 ಪದಕ
10) ಇಟಲಿ: 10 ಚಿನ್ನ ಸೇರಿ ಒಟ್ಟು 40 ಪದಕ
48: ಭಾರತ: 1 ಚಿನ್ನ ಸೇರಿ ಒಟ್ಟು 7 ಪದಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ