ಟೆನಿಸ್: ರಫೇಲ್ ನಡಾಲ್ ಮುಡಿಗೆ ಯುಎಸ್ ಓಪನ್ ಕಿರೀಟ; ಫೆಡೆರರ್ ದಾಖಲೆ ಸರಿಗಟ್ಟಲು ಇನ್ನೊಂದೇ ಪ್ರಶಸ್ತಿ ಬಾಕಿ

ರಫೇಲ್ ನಡಾಲ್ ಅವರಿಗೆ ಇದು 4ನೇ ಯುಎಸ್ ಓಫನ್ ಹಾಗೂ ಒಟ್ಟಾರೆ 19ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ. ಫೆಡರರ್ ವಿಶ್ವದಾಖಲೆ ಸರಿಗಟ್ಟಲು ಅವರಿಗೆ ಇನ್ನೊಂದೇ ಪ್ರಶಸ್ತಿಯ ಕೊರತೆ ಇದೆ.

Vijayasarthy SN | news18
Updated:September 9, 2019, 12:37 PM IST
ಟೆನಿಸ್: ರಫೇಲ್ ನಡಾಲ್ ಮುಡಿಗೆ ಯುಎಸ್ ಓಪನ್ ಕಿರೀಟ; ಫೆಡೆರರ್ ದಾಖಲೆ ಸರಿಗಟ್ಟಲು ಇನ್ನೊಂದೇ ಪ್ರಶಸ್ತಿ ಬಾಕಿ
ರಫೇಲ್ ನಡಾಲ್
  • News18
  • Last Updated: September 9, 2019, 12:37 PM IST
  • Share this:
ನ್ಯೂಯಾರ್ಕ್(ಸೆ. 09): ವಿಶ್ವದ ನಂಬರ್ ಟೂ ಟೆನಿಸ್ ಆಟಗಾರ ರಫೇಲ್ ನಡಾಲ್ ಅವರು 2019ರ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿ ಜಯಿಸಿದರು. ಇವತ್ತು ನಡೆದ ಪುರುಷರ ಸಿಂಗಲ್ಸ್ ಫೈನಲ್​ನಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 5 ಸೆಟ್​ಗಳ ರೋಚಕ ಥ್ರಿಲ್ಲರ್​ನಲ್ಲಿ ಗೆಲುವು ಸಾಧಿಸಿದರು. ಬರೋಬ್ಬರಿ 4 ಗಂಟೆ 49 ನಿಮಿಷಗಳ ನಡೆದ ಹಣಾಹಣಿಯಲ್ಲಿ ಸ್ಪೇನ್ ದೇಶದ ನಡಾಲ್ 7-5, 6-3, 5-7, 4-6, 6-4ರಿಂದ ಎದುರಾಳಿಯನ್ನು ಮಣಿಸಿ ತಮ್ಮ ಜೀವಮಾನದ 19ನೇ ಗ್ರ್ಯಾನ್​ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದರು.

ಕಳೆದ ತಿಂಗಳಷ್ಟೇ ಮಾಂಟ್ರಿಯಲ್ ಮಾಸ್ಟರ್ಸ್ ಟೆನಿಸ್ ಟೂನಿಯಲ್ಲಿ ಮೆಡ್ವೆಡೆವ್ ವಿರುದ್ಧ ನಡಾಲ್ 6-3, 6-0 ನೇರ ಸೆಟ್​ಗಳಿಂದ ಸುಲಭ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಯುಎಸ್ ಓಪನ್ ಫೈನಲ್​ನಲ್ಲಿ ನಡಾಲ್ ಅವರೇ ಗೆಲ್ಲಲು ನೆಚ್ಚಿನ ಆಟಗಾರನೆನಿಸಿದ್ದರು. ಪಂದ್ಯದ ಮೊದಲೆರಡು ಸೆಟ್​ಗಳನ್ನು ಗೆಲ್ಲುವ ಮೂಲಕ ನಡಾಲ್ ನೇರ ಸೆಟ್​ಗಳಿಂದ ಯುಎಸ್ ಓಪನ್ ಗೆಲ್ಲುವ ಸೂಚನೆ ನೀಡಿದ್ದರು. ಆದರೆ, ರಷ್ಯಾದ ಮೆಡ್ವೆಡೆವ್ ಅವರು ಮುಂದಿನ ಎರಡು ಸೆಟ್ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದರು. ಅಂತಿಮ ಹಾಗೂ ಡಿಸೈಡಿಂಗ್ ಸೆಟ್ ಕೂಡ ತೂಗುಯ್ಯಾಲೆಯಲ್ಲೇ ಇತ್ತು. 3-5ರಿಂದ ಹಿನ್ನಡೆ ಹೊಂದಿದ್ದರೂ ಮೆಡ್ವೆಡೆವ್ ಕಂಬ್ಯಾಕ್ ಮಾಡಲು ಪ್ರಯತ್ನಿಸಿದರು. ಆದರೆ, ಅಂತಿಮವಾಗಿ ನಡಾಲ್ ಗೆಲುವಿನ ನಗೆ ಬೀರಿದರು.

ಫೋಟೋ ಗ್ಯಾಲರಿ: ಗ್ರ್ಯಾನ್ ಸ್ಲಾಮ್ ಗೆದ್ದ ಬಿಯಾಂಕಗೆ ಕೇವಲ 19 ವರ್ಷ; ಮುದ್ದು ಮುಖದ ಚೆಲುವೆಯ ಫೋಟೋ ಇಲ್ಲಿದೆ ನೋಡಿ!ನಡಾಲ್ ಅವರಿಗೆ ಇದು ನಾಲ್ಕನೇ ಯುಎಸ್ ಓಪನ್ ಪ್ರಶಸ್ತಿಯಾಗಿದೆ. ಇಲ್ಲಿಯವರೆಗೆ ಅವರು 19 ಗ್ರ್ಯಾನ್ ಸ್ಲಾಮ್ ಗೆದ್ದಂತಾಗಿದೆ. ಈ ವಿಚಾರದಲ್ಲಿ ರೋಜರ್ ಫೆಡೆರರ್ ಅವರ ದಾಖಲೆಯನ್ನು ಸರಿಗಟ್ಟಲು ನಡಾಲ್​ಗೆ ಇನ್ನೊಂದು ಗ್ರ್ಯಾನ್​ಸ್ಲಾಮ್ ಗೆಲುವು ಅಗತ್ಯವಿದೆ.

ನಡಾಲ್ ಗೆದ್ದಿರುವ ಗ್ರ್ಯಾನ್​ಸ್ಲಾಮ್ ಪ್ರಶಸ್ತಿಗಳ ಪಟ್ಟಿ: 
ಫ್ರೆಂಚ್ ಓಪನ್: 12ಯುಎಸ್ ಓಪನ್: 4
ವಿಂಬಲ್ಡನ್ ಓಪನ್: 2
ಆಸ್ಟ್ರೇಲಿಯನ್ ಓಪನ್: 1

ಇದರ ಜೊತೆಗೆ ಯುಎಸ್ ಓಪನ್ ಫೈನಲ್ ಕೂಡ ಕೆಲ ದಾಖಲೆಗೆ ಸಾಕ್ಷಿಯಾಯಿತು. 33 ವರ್ಷದ ನಡಾಲ್ ಅವರು ಯುಎಸ್ ಓಪನ್ ಗೆದ್ದ ಅತ್ಯಂತ ಹಿರಿಯ ಆಟಗಾರನೆನಿಸಿದರು. ಹಾಗೆಯೇ, 4 ಗಂಟೆ 49 ನಿಮಿಷ ನಡೆದ ನಡಾಲ್-ಮೆಡ್ವೆಡೆವ್ ಪಂದ್ಯವು ಯುಎಸ್ ಓಪನ್ ಇತಿಹಾಸದಲ್ಲಿ ಎರಡನೇ ಸುದೀರ್ಘ ಅವಧಿ ನಡೆದ ಪಂದ್ಯವಾಗಿದೆ. 2012ರಲ್ಲಿ ಆ್ಯಂಡಿ ಮುರ್ರೆ ಮತ್ತು ನೊವಾಕ್ ಜೋಕೋವಿಚ್ ನಡುವಿನ ಪಂದ್ಯ 5 ನಿಮಿಷ ಹೆಚ್ಚು ಹೊತ್ತು ನಡೆದಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ