US Open- ರಾಜೀವ್ ರಾಮ್ ಡಬಲ್ಸ್ ಚಾಂಪಿಯನ್- ಇತಿಹಾಸದ ಹೊಸ್ತಿಲಲ್ಲಿ ಜೋಕೋವಿಚ್

Novak Djokovic- ಸರ್ಬಿಯಾ ದೇಶದ ವಿಶ್ವ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೋಕೊವಿಚ್ ಅವರು ಯುಎಸ್ ಓಪನ್ ಸೆಮಿಫೈನಲ್​ನಲ್ಲಿ ಜವೆರೆವ್ ವಿರುದ್ಧ 4-6, 6-2, 6-4, 4-6, 6-2ರಿಂದ ಗೆಲುವು ಸಾಧಿಸಿದ್ಧಾರೆ. ಫೈನಲ್​ನಲ್ಲಿ ರಷ್ಯಾದ ಮೆಡ್ವೆಡೆವ್ ಅವರನ್ನ ಎದುರಿಸಲಿದ್ದಾರೆ.

ನೊವಾಕ್ ಜೊಕೋವಿಚ್

ನೊವಾಕ್ ಜೊಕೋವಿಚ್

 • News18
 • Last Updated :
 • Share this:
  ನ್ಯೂಯಾರ್ಕ್, ಸೆ. 11: ಸರ್ಬಿಯಾ ದೇಶದ ಶ್ರೇಷ್ಠ ಟೆನಿಸ್ ಆಟಗಾರ ನೊವಾಕ್ ಜೋಕೊವಿಚ್ ಅವರು ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಫೈನಲ್ ತಲುಪಿದ್ದಾರೆ. ಶುಕ್ರವಾರ ರಾತ್ರಿ (ಭಾರತೀಯ ಕಾಲಮಾನದಲ್ಲಿ ಇಂದು) ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್​ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜವೆರೆವ್ ವಿರುದ್ಧ ಜೊಕೋವಿಚ್ 4-6, 6-2, 6-4, 4-6, 6-2 ರೋಚಕ ಗೆಲುವು ಪಡೆದರು. ಟೂರ್ನಿಯ ಅಗ್ರ ಶ್ರೇಯಾಂಕದ ಜೋಕೊವಿಚ್ ಅವರು ಹೊಸ ಇತಿಹಾಸದ ಹೊಸ್ತಿಲಲ್ಲಿದ್ದಾರೆ. ನಾಳೆ ನಡೆಯಲಿರುವ ಫೈನಲ್​ನಲ್ಲಿ ಜೋಕೊವಿಚ್ ಗೆದ್ದರೆ ಕ್ಯಾಲೆಂಡರ್ ವರ್ಷದ ಸ್ಲಾಮ್​ಗಳನ್ನ ಪೂರ್ಣಗೊಳಿಸಲಿದ್ದಾರೆ. ಒಂದು ವರ್ಷದಲ್ಲಿ ನಡೆಯುವ ಎಲ್ಲಾ ನಾಲ್ಕು ಸ್ಲಾಮ್​ಗಳನ್ನ ಗೆದ್ದ ಕೀರ್ತಿಗೆ ಅವರು ಬಾಜನರಾಗಲಿದ್ದಾರೆ. 1969ರಲ್ಲಿ ಟೆನಿಸ್ ಲೆಜೆಂಡ್ ಎನಿಸಿರುವ ರಾಡ್ ಲೇವರ್ ಅವರು ಈ ಸಾಧನೆ ಮಾಡಿದ್ದರು. ಆ ಬಳಿಕ ಯಾವ ಟೆನಿಸ್ ಆಟಗಾರರಿಗೂ ಒಂದು ಕ್ಯಾಲೆಂಡರ್ ವರ್ಷದ ನಾಲ್ಕು ಗ್ರ್ಯಾನ್ ಸ್ಲಾಮ್ ಟೂರ್ನಿಗಳನ್ನ ಗೆಲ್ಲಲು ಸಾಧ್ಯವಾಗಿಲ್ಲ. ಈಗ ಜೋಕೊವಿಚ್​ಗೆ ಆ ಅಪರೂಪದ ಅವಕಾಶ ಸಿಕ್ಕಿದೆ.

  ವರ್ಷದ ನಾಲ್ಕು ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಯುಎಸ್ ಓಪನ್ ಕೊನೆಯದ್ದು. ವಿಂಬಲ್ಡನ್ ಓಪನ್, ಫ್ರೆಂಚ್ ಓಪನ್ ಮತ್ತು ಆಸ್ಟ್ರೇಲಿಯನ್ ಓಪನ್ ಟೂರ್ನಿಗಳು ಇತರ ಮೂರು ಗ್ರ್ಯಾನ್ ಸ್ಲಾಮ್ ಟೂರ್ನಿಗಳೆನಿಸಿವೆ. ಉಳಿದೆಲ್ಲಾ ಎಟಿಪಿ ಟೂರ್ನಿಗಳಿಗಿಂತ ಇವುಗಳಿಗೆ ತೂಕ ಹೆಚ್ಚು. ನೊವಾಕ್ ಜೊಕೋವಿಚ್ ಅವರು ಈ ವರ್ಷ ವಿಂಬಲ್ಡನ್, ಫ್ರೆಂಚ್ ಮತ್ತು ಆಸ್ಟ್ರೇಲಿಯನ್ ಓಪನ್ ಟೂರ್ನಿಗಳನ್ನ ಗೆದ್ದಿದ್ದಾರೆ. ಈಗ ಉಳಿದಿರುವುದು ಯು ಎಸ್ ಓಪನ್ ಮಾತ್ರ. ಕುತೂಹಲವೆಂದರೆ, ಜೊಕೋವಿಚ್ ಅವರಿಗೆ ಒಲಿಂಪಿಕ್ಸ್ ಟೆನಿಸ್​ನಲ್ಲಿ ಚಿನ್ನ ಗೆಲ್ಲಲು ಸಾಧ್ಯವಾಗಿದ್ದಿದ್ದರೆ ಅಪರೂಪದ ವಿಶ್ವದಾಖಲೆ ಸ್ಥಾಪಿಸುವ ಅವಕಾಶ ಇತ್ತು. ಈಗ ಐದು ದಶಕಗಳ ಹಿಂದಿನ ದಾಖಲೆಯನ್ನ ಸರಿಗಟ್ಟುವ ಚಾನ್ಸ್ ಇದೆ. ಇದಕ್ಕೆ ಅವರು ನಾಳೆ ನಡೆಯಲಿರುವ ಯು ಎಸ್ ಓಪನ್ ಫೈನಲ್​ನಲ್ಲಿ ರಷ್ಯಾದ ಡೇನಿಲ್ ಮೆಡ್ವೆಡೆವ್ ಅವರನ್ನ ಸೋಲಿಸಬೇಕಿದೆ.

  ಅಲ್ಲದೇ ವಿಶ್ವದ ನಂಬರ್ ಒನ್ ಆಟಗಾರನೂ ಆಗಿರುವ ಜೊಕೋವಿಚ್ ಅವರು ಇದೂವರೆಗೆ 20 ಗ್ರ್ಯಾನ್​ಸ್ಲಾಮ್ ಟೂರ್ನಿಗಳನ್ನ ಗೆದ್ದಿದ್ದಾರೆ. ಸಮಕಾಲೀನ ದಿಗ್ಗಜರಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರಿಬ್ಬರೂ ಕೂಡ 20 ಗ್ರ್ಯಾನ್ ಸ್ಲಾಂ ಗೆದ್ದ ಸಾಧನೆ ಮಾಡಿದ್ದಾರೆ. ಈಗ ಜೊಕೋವಿಚ್ ಅವರು ಯುಎಸ್ ಓಪನ್ ಗೆದ್ದರೆ ಅತಿ ಹೆಚ್ಚು ಗ್ರ್ಯಾನ್ ಸ್ಲಾಂ ಜಯಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ಧಾರೆ.

  ಇದನ್ನೂ ಓದಿ: Ban vs NZ T20| ನ್ಯೂಜಿಲೆಂಡ್​ ತಂಡವನ್ನು 3-2 ಅಂತರದಲ್ಲಿ ಮಣಿಸಿದ ಬಾಂಗ್ಲಾ; ಒಂದೇ ತಿಂಗಳಲ್ಲಿ ಮೂರು ಸರಣಿ ಹುಲಿಗಳ ವಶಕ್ಕೆ!

  ಟೂರ್ನಿಯ ಎರಡನೇ ಶ್ರೇಯಾಂಕದ ಡೇನಿಲ್ ಮೆಡ್ವೆಡೆವ್ ಅವರು ಸೆಮಿಫೈನಲ್​ನಲ್ಲಿ 12ನೇ ಶ್ರೇಯಾಂಕದ ಫೆಲಿಕ್ಸ್ ಅವರನ್ನು 6-4, 7-5, 6-2ರಿಂದ ಮಣಿಸಿ ಫೈನಲ್ ತಲುಪಿದ್ದಾರೆ. ಜೋಕೋವಿಚ್ ಅವರಿಗೆ ಪ್ರಬಲ ಸವಾಲು ಒಡ್ಡುವ ಎಲ್ಲಾ ಸಾಮರ್ಥ್ಯ ಅವರಿಗಿದೆ. 34 ವರ್ಷದ ನೊವಾಕ್ ಜೊಕೋವಿಚ್ ಅವರು ಫೈನಲ್ ಪಂದ್ಯ ಗೆದ್ದೇ ಗೆಲ್ಲುವ ಸಂಕಲ್ಪ ತೊಟ್ಟಿದ್ದಾರೆ. ಅದು ತನ್ನ ವೃತ್ತಿ ಜೀವನದ ಕೊನೆಯ ಪಂದ್ಯವೆಂಬಂತೆ ಆಡಿ ಗೆಲ್ಲುತ್ತೇನೆ ಎಂದು ಅವರು ಹೇಳಿದ್ಧಾರೆ. ಹೀಗಾಗಿ, ಜೋಕೊವಿಚ್ ಅವರಿಂದ ಬೆಸ್ಟ್ ಟೆನಿಸ್ ಆಟವನ್ನು ನಿರೀಕ್ಷಿಸಬಹುದು.

  ರಾಜೀವ್ ರಾಮ್ ಡಬಲ್ಸ್ ಚಾಂಪಿಯನ್:

  ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್​ನ ಜೋ ಸ್ಯಾಲಿಸ್​ಬುರಿ ಜೋಡಿ ಯುಎಸ್ ಓಪನ್ ಪುರುಷರ ಡಬಲ್ಸ್ ಚಾಂಪಿಯನ್ ಎನಿಸಿದೆ. ಪುರುಷರ ಡಬಲ್ಸ್​ನಲ್ಲಿ ನಾಲ್ಕನೇ ಶ್ರೇಯಾಂಕದ ರಾಜೀವ್ ಮತ್ತು ಸ್ಯಾಲಿಸ್​ಬುರಿ ಜೋಡಿ 3-6, 6-2, 6-2ರಿಂದ ಬ್ರಿಟನ್​ನ ಜೇಮೀ ಮುರೆ ಮತ್ತು ಬ್ರೆಜಿಲ್​ನ ಬ್ರೂನೋ ಸೋರೆಸ್ ಜೋಡಿಯನ್ನ ಸೋಲಿಸಿತು.

  ಇಂದು ನಡೆಯುವ ಇತರ ಪಂದ್ಯಗಳಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಾಗಿ ಕೆನಡಾದ ಲೇಲಾ ಫೆರ್ನಾಂಡೆಜ್ ಮತ್ತು ಬ್ರಿಟನ್​​ನ ಎಮ್ಮಾ ರಡುಕಾನು ಮಧ್ಯೆ ಹಣಾಹಣಿ ನಡೆಯಲಿದೆ. ಮಿಶ್ರ ಡಬಲ್ಸ್, ಬಾಲಕರು ಮತ್ತು ಬಾಲಕಿಯರ ವಿಭಾಗದ ಪಂದ್ಯಗಳು ಹಾಗೂ ವಿಶೇಷ ಚೇತನರ ನಡುವಿನ ಪಂದ್ಯಗಳೂ ಇವೆ.
  Published by:Vijayasarthy SN
  First published: