• Home
 • »
 • News
 • »
 • sports
 • »
 • Tokyo Paralympics- ಆವನಿ ಲೇಖರಗೆ ಚಿನ್ನ; ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇಂದು 4 ಪದಕ

Tokyo Paralympics- ಆವನಿ ಲೇಖರಗೆ ಚಿನ್ನ; ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇಂದು 4 ಪದಕ

ಆವನಿ ಲೇಖರ

ಆವನಿ ಲೇಖರ

ಮಹಿಳೆಯರ 10 ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ಆವನಿ ಲೇಖರ ಚಿನ್ನದ ಪದಕ ಗೆದ್ದರೆ ಡಿಸ್ಕಸ್ ಥ್ರೋನದಲ್ಲಿ ಯೋಗೇಶ್ ಬೆಳ್ಳಿ ಜಯಿಸಿದ್ದಾರೆ. ಜಾವೆಲಿನ್ ಥ್ರೋನದಲ್ಲಿ ಜಝಾರಿಯಾ ಬೆಳ್ಳಿ ಹಾಗೂ ಗುರ್ಜಾರ್ ಕಂಚಿನ ಪದಕ ಪಡೆದಿದ್ದಾರೆ.

 • News18
 • Last Updated :
 • Share this:

  ಬೆಂಗಳೂರು, ಆ. 30: ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ (Tokyo Paralympics) ನಿನ್ನೆ ಶುರುವಾದ ಭಾರತದ ಪದಕ ಬೇಟೆ ಇವತ್ತೂ ಮುಂದುವರಿದಿದೆ. ನಿನ್ನೆ ಇಡೀ ದಿನ ಮೂರು ಪದಕ ಗೆದ್ದಿದ್ದ ಭಾರತಕ್ಕೆ ಇಂದು ಬೆಳಗ್ಗೆಯೇ ನಾಲ್ಕು ಪದಕಗಳು ಸಿಕ್ಕಿವೆ. ಮಹಿಳೆಯರ ಆರ್​2 ವಿಭಾಗದ 10 ಮೀಟರ್ ಏರ್ ರೈಫಲ್ (10m Air Rifle) ಸ್ಪರ್ಧೆಯಲ್ಲಿ ಆವನಿ ಲೇಖರ (Avani Lekhara) ಅವರು ಚಿನ್ನದ ಪದಕ ಜಯಿಸಿದ್ದಾರೆ. ಹಾಗೆಯೇ, ಪುರುಷರ ಡಿಸ್ಕಸ್ ಥ್ರೋ (Discus Throw) ಸ್ಪರ್ಧೆಯಲ್ಲಿ ಯೋಗೇಶ್ ಕಥುನಿಯಾ (Yogesh Kathunia) ಬೆಳ್ಳಿ ಪದಕ ಪಡೆದಿದ್ದಾರೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಒಂದು ಬೆಳ್ಳಿ ಮತ್ತು ಒಂದು ಕಂಚು ಸಿಕ್ಕಿದೆ. ಇದರೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ಏಳಕ್ಕೆ ಏರಿದಂತಾಗಿದೆ. ಇವತ್ತು ಸಂಜೆಯ ವೇಳೆಗೆ ಭಾರತದ ಬುಟ್ಟಿಗೆ ಇನ್ನಷ್ಟು ಪದಕಗಳು ಬೀಳುವ ನಿರೀಕ್ಷೆ ಇದೆ. ಜಾವೆಲಿನ್ ಥ್ರೋ ಪಟುಗಳಾದ ಸುಮೀತ್ ಅಂಟಿಲ್, ಸಂದೀಪ್ ಚೌಧರಿ ಹಾಗೂ ಶೂಟರ್​ಗಳಾದ ದೀಪಕ್ ಸೈನಿ, ಸ್ವರೂಪ್ ಉಂಕಾಲ್ಕರ್ ಅವರು ಇಂದು ಸ್ಪರ್ಧೆಯಲ್ಲಿದ್ದಾರೆ.


  ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಆವನಿ ಲೇಖರ ಅವರು 269.6 ಅಂಕ ಗಳಿಸಿ ವಿಶ್ವದಾಖಲೆ ಸರಿಗಟ್ಟಿದರು. ಪ್ಯಾರಾಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ಗೆದ್ದುಕೊಟ್ಟರು. ಆವನಿ ಲೇಖರ ಅವರು ಸೆಪ್ಟೆಂಬರ್ 3ರಂದು 50 ಮೀಟರ್ ರೈಫಲ್ 3 ಪೊಸಿಶನ್ಸ್ ಸ್ಪರ್ಧೆಯಲ್ಲೂ ಪಾಲ್ಗೊಳ್ಳಲಿದ್ಧಾರೆ.


  ಇನ್ನು, ಪುರುಷರ ಎಫ್56 ವಿಭಾಗದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಯೋಗೇಶ್ ಕಥುನಿಯಾ 44.38 ಮೀಟರ್ ದೂರ ಎಸೆದು ಎರಡನೇ ಸ್ಥಾನ ಪಡೆದರು. ಇವರ ಆರನೇ ಯತ್ನದಲ್ಲಿ ಅವರಿಗೆ ಇಷ್ಟು ದೂರ ಎಸೆಯಲು ಸಾಧ್ಯವಾಗಿದೆ. ಐದನೇ ಯತ್ನದಲ್ಲಿ ಅವರು 43.55 ಮೀಟರ್ ದೂರ ಎಸೆದಿದ್ದರು. ಒಂದು ವೇಳೆ ಆರನೇ ಯತ್ನ ವಿಫಲವಾಗಿದ್ದರೂ ಅವರಿಗೆ ಕನಿಷ್ಠ ಕಂಚಿನ ಪದಕವಾದರೂ ದಕ್ಕುತ್ತಿತ್ತು. ಯಾಕೆಂದರೆ ಮೂರನೇ ಸ್ಥಾನ ಪಡೆದ ಕ್ಯೂಬಾದ ಪ್ಯಾರಾಥ್ಲೀಟ್ 43.36 ಮೀಟರ್ ದೂರ ಮಾತ್ರ ಎಸೆಯಲು ಶಕ್ಯರಾಗಿದ್ದರು.


  ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ದೇವೇಂದ್ರ ಝಝಾರಿಯಾ ಬೆಳ್ಳಿಗೆ ಮುತ್ತಿಕ್ಕಿದರೆ, ಸುಂದರ್ ಸಿಂಗ್ ಗುರ್ಜರ್ ಕಂಚಿನ ಪದಕ ಪಡೆದರು. ಆದರೆ, ಶ್ರೀಲಂಕಾದ ದಿನೇಶ್ ಮುದಿಯಾನ್​ಸೆಲಗೆ ಅವರು 67.79 ಮೀಟರ್ ದೂರ ಎಸೆದು ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಪಡೆದರು. ದೇವೇಂದ್ರ ಜಝಾರಿಯಾ ಹೆಸರಿನಲ್ಲಿ ವಿಶ್ವದಾಖಲೆ ಇತ್ತು. ಇವತ್ತಿನ ಸ್ಪರ್ಧೆಯಲ್ಲಿ ಜಝಾರಿಯಾ 64.35 ಮೀಟರ್ ದೂರ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಸುಂದರ್ ಸಿಂಗ್ ಗುರ್ಜಾರ್ ಅವರು 64.01 ಮೀಟರ್ ದೂರ ಎಸೆದು ಕಂಚಿನ ಪದಕ ಗಳಿಸಿದರು. ಜಾವೆಲಿನ್ ಥ್ರೋನ ಮತ್ತೊಂದು ವಿಭಾಗದಲ್ಲಿ ಸಂದೀಪ್ ಚೌಧರಿ, ಸುಮೀತ್ ಅಂಟಿಲ್ ಅವರು ಸ್ಪರ್ಧೆಯಲ್ಲಿದ್ದಾರೆ. ಇವರಿಂದಲೂ ಪದಕದ ನಿರೀಕ್ಷೆ ಇದೆ.


  ಇದನ್ನೂ ಓದಿ: Exclusive- ಪಾಕಿಸ್ತಾನದೊಂದಿಗೆ ಸೇರಿ ಭಾರತಕ್ಕೆ ಹಾನಿ ಮಾಡಲ್ಲ: ತಾಲಿಬಾನ್ ನಾಯಕ ಶೇರ್ ಮೊಹಮ್ಮದ್


  ನಿನ್ನೆ ಪ್ಯಾರಾಲಿಂಪಿಕ್ಸ್​ನ ನಾಲ್ಕನೇ ದಿನ ಭಾರತಕ್ಕೆ ಎರಡು ಬೆಳ್ಳಿ ಸೇರಿ ಮೂರು ಪದಕಗಳು ಸಿಕ್ಕಿದ್ದವು. ಟೇಬಲ್ ಟೆನಿಸ್​ನಲ್ಲಿ ಭಾವಿನಾ ಪಟೇಲ್ ಹಾಗೂ ಹೈಜಂಪ್​ನಲ್ಲಿ ನಿಶದ್ ಕುಮಾರ್ ಬೆಳ್ಳಿ ಪದಕ ಜಯಿಸಿದ್ದರು. ಡಿಸ್ಕಸ್ ಥ್ರೋದಲ್ಲಿ ವಿನೋದ್ ಕುಮಾರ್ ಕಂಚಿನ ಪದಕ ಪಡೆದಿದ್ದರು.


  ಈ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ 1 ಚಿನ್ನ ಸೇರಿ ಏಳು ಪದಕಗಳನ್ನ ಪಡೆದಿದ್ದು ಒಟ್ಟಾರೆ ಪದಕ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದೆ. ಟೋಕಿಯೋ ಕ್ರೀಡಾಕೂಟಕ್ಕೆ ಮುಂಚೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಒಟ್ಟಾರೆ ಗಳಿಸಿದ ಪದಕಗಳ ಸಂಖ್ಯೆ 12 ಮಾತ್ರ. ಆದರೆ, ಟೋಕಿಯೋ ಪ್ಯಾರಾಲಿಂಪಿಕ್ಸ್​ವೊಂದರಲ್ಲೇ ಭಾರತ ಏಳು ಪದಕ ಗಳಿಸಿದೆ. ಇನ್ನೂ ಹಲವು ಪದಕಗಳು ದೊರಕುವ ನಿರೀಕ್ಷೆ ಇದೆ.


  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  Published by:Vijayasarthy SN
  First published: