Tokyo Paralympics- ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ 5ನೇ ಚಿನ್ನ; ಕೃಷ್ಣಾ ನಾಗರ್ ಅಮೋಘ ಪ್ರದರ್ಶನ

Krishna Nagar wins gold- ಗುಜರಾತ್ ಮೂಲದ ಕೃಷ್ಣಾ ನಾಗರ್ ಅವರು ಪ್ಯಾರಾಲಿಂಪಿಕ್ಸ್​ನ ಎಸ್ಎಲ್4 ವಿಭಾಗದ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಹಾಂಕಾಂಗ್​ನ ಸ್ಪರ್ಧಿ ವಿರುದ್ಧ 21-17, 16-21, 21-17 ಗೇಮ್ಗಳಿಂದ ಜಯಿಸಿ ಚಿನ್ನ ಗೆದ್ದರು.

ಕೃಷ್ಣ ನಾಗರ್

ಕೃಷ್ಣ ನಾಗರ್

  • News18
  • Last Updated :
  • Share this:
    ಬೆಂಗಳೂರು, ಸೆ. 05: ಟೋಕಿಯೋ ಪ್ಯಾರಾಲಿಂಪಿಕ್ಸ್​ನ ಕೊನೆಯ ದಿನವಾದ ಇಂದು ಭಾರತ ಪದಕಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಗೆದ್ದ ಬೆನ್ನಲ್ಲೇ ಬ್ಯಾಡ್ಮಿಂಟನ್ ಆಟಗಾರ ಕೃಷ್ಣಾ ನಾಗರ್ ಚಿನ್ನದ ಪದಕ ಜಯಿಸಿದ್ಧಾರೆ. ಈ ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಸಿಕ್ಕ ಐದನೇ ಚಿನ್ನದ ಪದಕ ಇದು. ಇಂದು ನಡೆದ ಎಸ್​ಎಚ್6 ವಿಭಾಗದ ಪುರುಷರ ಸಿಂಗಲ್ಸ್ ಫೈನಲ್​ನಲ್ಲಿ ಹಾಂಕಾಂಗ್​ನ ಚು ಮಾನ್ ಕಯ್ ವಿರುದ್ಧ ಕೃಷ್ಣಾ ನಾಗರ್ 21-17, 16-21, 21-17 ಗೇಮ್​ಗಳಿಂದ ರೋಚಕ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 19ಕ್ಕೇರಿತು. ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಸಿಕ್ಕ ಎರಡನೇ ಚಿನ್ನ ಇದು. ಬ್ಯಾಡ್ಮಿಂಟನ್​ನಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚು ಹೀಗೆ ನಾಲ್ಕು ಪದಕಗಳನ್ನ ಬಾಚಿದೆ.

    ಇಂದು ನಡೆದ ಇತರ ಪಂದ್ಯಗಳಲ್ಲಿ ಸುಹಾಸ್ ಯತಿರಾಜ್ ಅವರು ಎಸ್​ಎಲ್4 ವಿಭಾಗದ ಬ್ಯಾಡ್ಮಿಂಟನ್ ಫೈನಲ್​ನಲ್ಲಿ ಫ್ರಾನ್ಸ್ ದೇಶದ ಲೂಕಾಸ್ ಮಜುರ್ ವಿರುದ್ಧ 2-1 ಗೇಮ್​ಗಳಿಂದ ವೀರೋಚಿತ ಸೋಲೊಪ್ಪಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಇದೇ ವಿಭಾಗದಲ್ಲಿ ತರುಣ್ ಧಿಲ್ಲೋನ್ ಅವರು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಇಂಡೋನೇಷ್ಯಾದ ಫ್ರೆಡಿ ಸೆಟಿವಾನ್ ವಿರುದ್ಧ ಸೋತರು. ಇನ್ನು, ಬ್ಯಾಡ್ಮಿಂಟನ್ ಎಸ್​ಎಲ್3 ವಿಭಾಗದ ಮಿಶ್ರ ಡಬಲ್ಸ್​ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪ್ರಮೋದ್ ಭಗತ್ ಮತ್ತು ಪಲಕ್ ಕೊಹ್ಲಿ ಅವರು 21-23, 19-21 ನೇರ ಗೇಮ್​ಗಳಿಂದ ಜಪಾನೀ ಜೋಡಿ ವಿರುದ್ಧ ಸೋಲುವ ಮುನ್ನ ವೀರೋಚಿತ ಹೋರಾಟ ತೋರಿದರು. ಪ್ರಮೋದ್ ಭಗತ್ ಅವರು ಪುರುಷರ ಸಿಂಗಲ್ಸ್​ನಲ್ಲಿ ಚಿನ್ನ ಜಯಿಸಿ ಹೊಸ ಇತಿಹಾಸ ಸೃಷ್ಟಿಸಿದ್ದರು.

    ಭಾರತ ಈ ಪ್ಯಾರಾಲಿಂಪಿಕ್ಸ್​ನಲ್ಲಿ ಕಳುಹಿಸಿದ್ದ 47 ಸ್ಪರ್ಧಿಗಳು 19 ಪದಕಗಳನ್ನ ಗೆದ್ದದ್ದು ಅದ್ಭುತ ಸಾಧನೆಯೇ ಆಗಿದೆ. ಚೀನಾದ ಪ್ಯಾರಾ ಕ್ರೀಡಾಪಟುಗಳು ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಈ ಕ್ರೀಡಾಕೂಟದ ಮೆಡಲ್ ಪಟ್ಟಿಯಲ್ಲಿ ಭಾರತ 24ನೇ ಸ್ಥಾನ ಪಡೆದಿದೆ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಇಷ್ಟು ಉಚ್ಚತಮ ಪ್ರದರ್ಶನ ಭಾರತದಿಂದ ಬಂದಿದ್ದು ಇದೇ ಮೊದಲು. ಈ ಒಲಿಂಪಿಕ್ಸ್​ಗೆ ಮೊದಲು ಭಾರತ ಒಟ್ಟಾರೆ ಗಳಿಸಿದ ಪದಕಗಳು ಕೇವಲ 12 ಮಾತ್ರ. ಇದರಲ್ಲಿ ನಾಲ್ಕು ಚಿನ್ನದ ಪದಕಗಳೂ ಇವೆ. ಆದರೆ, ಟೋಕಿಯೋ ಒಲಿಂಪಿಕ್ಸ್​ವೊಂದರಲ್ಲೇ ಭಾರತ 5 ಚಿನ್ನ ಸೇರಿ 19 ಪದಕಗಳನ್ನ ಗೆದ್ದದ್ದು ಗಮನಾರ್ಹ.

    ಇದನ್ನೂ ಓದಿ: Tokyo Paralympics- ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್​ಗೆ ಬೆಳ್ಳಿ ಸಾಧನೆ; ಭಾರತಕ್ಕೆ 18ನೇ ಪದಕ

    ಶೂಟಿಂಗ್ ಪಟುಗಳಾದ ಆವನಿ ಲೇಖರ ಮತ್ತು ಸಿಂಗರಾಜ್ ಅಧಾನ ಅವರಿಬ್ಬರೂ ಪದಕಗಳ ಡಬಲ್ ಸಾಧಿಸಿದ್ದು ವಿಶೇಷ. ಜಾವೆಲಿನ್, ಹೈಜಂಪ್, ಡಿಸ್ಕಸ್ ಥ್ರೋ ಇತ್ಯಾದಿ ಒಳಗೊಂಡ ಅಥ್ಲೆಟಿಕ್ಸ್​ನಲ್ಲಿ ಭಾರತ 8 ಪದಕ ಬಾಚಿಕೊಂಡಿದೆ. ಶೂಟಿಂಗ್​ನಲ್ಲಿ ಐದು ಪದಕಗಳು ಸಿಕ್ಕಿವೆ. ಅದು ಬಿಟ್ಟರೆ ಬ್ಯಾಡ್ಮಿಂಟನ್​ನಲ್ಲೇ ಅತಿ ಹೆಚ್ಚು ಪದಕಗಳು ಬಂದಿರುವುದು.

    ಭಾರತದ ಪದಕ ವಿಜೇತರು:

    ಚಿನ್ನ ಗೆದ್ದವರು:
    1) ಆವನಿ ಲೇಖರ, ಮಹಿಳಾ ಶೂಟಿಂಗ್
    2) ಸುಮಿತ್ ಅಂತಿಲ್, ಪುರುಷರ ಜಾವೆಲಿನ್ ಥ್ರೋ
    3) ಮನೀಶ್ ನರ್ವಾಲ್, ಪುರುಷರ ಶೂಟಿಂಗ್
    4) ಪ್ರಮೋದ್ ಭಗತ್, ಪುರುಷರ ಬ್ಯಾಡ್ಮಿಂಟನ್
    5) ಕೃಷ್ಣ ನಾಗರ್, ಪುರುಷರ ಬ್ಯಾಡ್ಮಿಂಟನ್

    ಬೆಳ್ಳಿ ಗೆದ್ದವರು:
    1) ಭಾವಿನಾ ಪಟೇಲ್, ಮಹಿಳಾ ಟೇಬಲ್ ಟೆನಿಸ್
    2) ನಿಶಾದ್ ಕುಮಾರ್, ಪುರುಷರ ಹೈಜಂಪ್
    3) ಯೋಗೇಶ್ ಕಠುನಿಯಾ, ಪುರುಷರ ಡಿಸ್ಕಸ್ ಥ್ರೋ
    4) ದೇವೇಂದ್ರ ಜಜಾರಿಯಾ, ಪುಉರಷರ ಜಾವೆಲಿನ್ ಥ್ರೋ
    5) ಮಾರಿಯಪ್ಪನ್ ತಂಗವೇಲು, ಪುರುಷರ ಹೈಜಂಪ್
    6) ಪ್ರವೀಣ್ ಕುಮಾರ್, ಪುರುಷರ ಹೈಜಂಪ್
    7) ಸಿಂಗರಾಜ್ ಅಧಾನ, ಪುರುಷರ ಶೂಟಿಂಗ್
    8) ಸುಹಾಸ್ ಎಲ್ ಯತಿರಾಜ್, ಪುರುಷರ ಬ್ಯಾಡ್ಮಿಂಟನ್

    ಕಂಚು ಗೆದ್ದವರು:
    1) ಸುಂದರ್ ಸಿಂಗ್ ಗುರ್ಜರ್, ಪುರುಷರ ಜಾವೆಲಿನ್ ಥ್ರೋ
    2) ಸಿಂಗರಾಜ್ ಅಧಾನ, ಪುರುಷರ ಶೂಟಿಂಗ್
    3) ಶರದ್ ಕುಮಾರ್, ಪುರುಷರ ಹೈಜಂಪ್
    4) ಆವನಿ ಲೇಖರ, ಮಹಿಳಾ ಶೂಟಿಂಗ್
    5) ಹರ್ವಿಂದರ್ ಸಿಂಗ್, ಪುರುಷರ ಆರ್ಚರಿ
    6) ಮನೋಜ್ ಸರ್ಕಾರ್, ಪುರುಷರ ಬ್ಯಾಡ್ಮಿಂಟನ್
    Published by:Vijayasarthy SN
    First published: