Tokyo Paralympics- ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ಗೆ ಬೆಳ್ಳಿ ಸಾಧನೆ; ಭಾರತಕ್ಕೆ 18ನೇ ಪದಕ
Suhas L Yathiraj silver medal- ಹಾಸನದ ಸುಹಾಸ್ ಯತಿರಾಜ್ ಅವರಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸ್ವಲ್ಪದರಲ್ಲಿ ಚಿನ್ನದ ಪದಕ ಕೈತಪ್ಪಿದೆ. ಇಂದು ನಡೆದ ಫೈನಲ್ನಲ್ಲಿ ಫ್ರಾನ್ಸ್ ಪ್ರತಿಸ್ಪರ್ಧಿ ಎದುರು ವೀರೋಚಿತ ಸೋಲುಂಡರು.
ಟೋಕಿಯೋ, ಸೆ. 05: ಜಪಾನ್ ರಾಜಧಾನಿ ಟೋಕಿಯೋದಲ್ಲಿ ವಿಶೇಷ ಚೇತನ ಕ್ರೀಡಾಪಟುಗಳಿಗಾಗಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯಾಗಿರುವ ಹಾಸನ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಎಲ್ ಯತಿರಾಜ್ ಅವರು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಇಂದು ನಡೆದ ಎಸ್ಎಲ್4 ವಿಭಾಗದ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್ನಲ್ಲಿ ಫ್ರಾನ್ಸ್ ದೇಶದ ಲುಕಾಸ್ ಮಜೂರ್ ವಿರುದ್ಧ ಸುಹಾಸ್ 21-15, 17-21, 15-21 ಸೆಟ್ಗಳಿಂದ ವೀರೋಚಿತ ಸೋಲುಂಡರು. ಮೊದಲ ಸೆಟ್ ಗೆದ್ದಾಗ ಸುಹಾಸ್ ಅವರು ಚಿನ್ನದ ಪದಕ ಗೆಲ್ಲುವುದು ನಿಶ್ಚಿತ ಎನಿಸಿತ್ತು. ಆದರೆ, ಗ್ರೂಪ್ ಹಂತದಲ್ಲಿ ಸುಹಾಸ್ರನ್ನ ಸೋಲಿಸಿದ್ದ ಲೂಕಾಸ್ ಮಜುರ್ ಅವರು ಫೈನಲ್ನಲ್ಲೂ ಕನ್ನಡಿಗನಿಗೆ ತಡೆಯಾಗಿ ನಿಂತರು.
ನಿನ್ನೆ ಭಾರತದ ಮತ್ತೊಬ್ಬ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಅವರು ಎಸ್ಎಲ್3 ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದರು. ಸುಹಾಸ್ ಯತಿರಾಜ್ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರನೆನಿಸಿದ್ದಾರೆ. ಇದೇ ಹೊತ್ತಿನಲ್ಲಿ ಎಸ್ಎಚ್6 ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಕೃಷ್ಣಾ ನಗರ್ ಅವರು ಫೈನಲ್ನಲ್ಲಿ ಹಾಂಕಾಂಗ್ನ ಚು ಮನ್ ಕಾಯ್ ಅವರನ್ನ ಎದುರಿಸಲಿದ್ದಾರೆ.
ಸುಹಾಸ್ ಅವರು ಇಂದು ಗೆದ್ದ ಬೆಳ್ಳಿ ಸೇರಿ ಭಾರತಕ್ಕೆ ಈ ಪ್ಯಾರಾಲಿಂಪಿಕ್ಸ್ನಲ್ಲಿ ಸಿಕ್ಕಿರುವ ಒಟ್ಟು ಪದಕಗಳ ಸಂಖ್ಯೆ 18ಕ್ಕೆ ಏರಿದೆ. 4 ಚಿನ್ನ, 7 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನ ಭಾರತೀಯ ಪ್ಯಾರಾ ಕ್ರೀಡಾಪಟುಗಳು ಗೆದ್ದಿದ್ದಾರೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 26ನೇ ಸ್ಥಾನದಲ್ಲಿದೆ. ಗಮನಿಸಬೇಕಾದ ಒಂದು ಅಂಶವೆಂದರೆ ಈ ಟೋಕಿಯೋ ಪ್ಯಾರಾಲಿಂಪಿಕ್ಸ್ಗೆ ಮುಂಚೆ ಭಾರತ ಆಡಿ ಬೇರೆಲ್ಲಾ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗಳಿಸಿದ್ದ ಒಟ್ಟಾರೆ ಪದಕಗಳು ಕೇವಲ 12 ಮಾತ್ರ. ಈಗ ಒಂದೇ ಕ್ರೀಡಾಕೂಟದಲ್ಲಿ ಭಾರತ ಅದಾಗಲೇ 18 ಪದಕಗಳನ್ನ ಗೆದ್ದಾಗಿದೆ. ಇನ್ನೂ ಕೆಲ ಪದಕಗಳು ಭಾರತದ ಬುಟ್ಟಿಗೆ ಬಂದುಬೀಳುವ ನಿರೀಕ್ಷೆ ಇದೆ.
ನಿನ್ನೆ ಚಿನ್ನ ಗೆದ್ದಿದ್ದ ಪ್ರಮೋದ್ ಭಗತ್ ಅವರು ಪಲಕ್ ಕೊಹ್ಲಿ ಜೊತೆಗೂ ಮಿಶ್ರ ಡಬಲ್ಸ್ ಫೈನಲ್ ಪಂದ್ಯವನ್ನ ಆಡಲಿದ್ಧಾರೆ. ಜಪಾನ್ ದೇಶದ ಅಟಗಾರರ ಸವಾಲು ಎದುರಿಸಲಿದ್ಧಾರೆ. ಹಾಗೆಯೇ, ಕೃಷ್ಣ ನಾಗರ್ ಅವರೂ ಇಂದು ಚಿನ್ನದ ಪದಕಕ್ಕಾಗಿ ಪ್ರಯತ್ನಿಸಲಿದ್ಧಾರೆ.
ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಆಗಿರುವ ಹಾಸನದ ಲಾಳನಕೆರೆಯ ಸುಹಾಸ್ ಅವರು ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಐಎಎಸ್ ಅಧಿಕಾರಿ ಎನಿಸಿದ್ದಾರೆ. ಇವರ ಕ್ರೀಡಾ ಸಾಧನೆ ಹಾಗೂ ಆಡಳಿತ ಸಾಧನೆ ಬಹಳಷ್ಟು ಪ್ರಶಂಸೆಗೆ ಒಳಗಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸುಹಾಸ್ ಅವರ ಬೆಳ್ಳಿ ಸಾಧನೆಯನ್ನ ಮೆಚ್ಚಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಸುಹಾಸ್ ಐಎಎಸ್ ಅಧಿಕಾರಿಯಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
A fantastic confluence of service and sports! @dmgbnagar Suhas Yathiraj has captured the imagination of our entire nation thanks to his exceptional sporting performance. Congratulations to him on winning the Silver medal in Badminton. Best wishes to him for his future endeavours. pic.twitter.com/bFM9707VhZ
आज टोक्यो #Paralympics में @dmgbnagar सुहास एल. वाई. ने बैडमिंटन स्पर्धा में रजत पदक जीतकर भारतवर्ष की खेल प्रतिभा को वैश्विक पटल पर प्रतिष्ठित किया है।
समूचे देश को हर्षाने वाली यह अविस्मरणीय उपलब्धि अनेकानेक खिलाड़ियों को प्रेरित करेगी।
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ